• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲ್ಯ ಕಳೆದುಕೊಂಡ ಬಾಲಕಾರ್ಮಿಕ ಪದ್ಧತಿ ದೇಶದ ಘನತೆಗೆ ಅಂಟಿದ ಕಪ್ಪುಚುಕ್ಕಿ!

By ಪೂರ್ಣಿಮ ಜಿ ಆರ್
|

ಜೂನ್ ತಿಂಗಳು ಬಂತೆಂದರೆ ಸಾಕು ಶಾಲೆಗೆ ಹೋಗುವ ಮಕ್ಕಳಿಗೆ ಎಲ್ಲಿಲ್ಲದ ಸಡಗರ, ಹೊಸ ಬ್ಯಾಗ್, ಪುಸ್ತಕ, ಹೊಸ ಸ್ನೇಹಿತರು, ಆಟಪಾಠದಲ್ಲಿ ಬಿಸಿಯಾಗಿರುವ ಮಕ್ಕಳನ್ನು ನೋಡಬಹುದು.

ಹಾಗೆಯೇ ಎಷ್ಟೇ ಡೊನೆಷನ್ ಇದ್ದರೂ ಸಹ ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಬೇಕು ಎನ್ನುವುದರಲ್ಲಿ ಮಗ್ನಗಾಗಿರುವ ಪೋಷಕರ ವರ್ಗ ಒಂದೆಡೆಯಾದರೆ, ಸರ್ಕಾರವು ಉಚಿತ ಶಿಕ್ಷಣ ಮತ್ತು ಹಲವು ಸೌಕರ್ಯವನ್ನು ಒದಗಿಸಿದ್ದರೂ ಸಹ ಮಕ್ಕಳನ್ನು ಶಾಲೆಗೆ ಕಳಿಸುವ ಬದಲು ಕೆಲಸಕ್ಕೆ ಕಳಿಸುವ ವರ್ಗ ಇನ್ನೊಂದೆಡೆ.

ಸ್ವಾವಲಂಬನೆಯ ಬದುಕು ಕಲಿಸಿಕೊಟ್ಟ ಗುರು ಸತ್ಯಾರ್ಥಿ

ಶಾಲೆಯ ಪರಿವೇ ಇಲ್ಲದೆ ಕೆಲಸದಲ್ಲಿ ಮಗ್ನರಾಗಿರುವ ಬಾಲಕಾರ್ಮಿಕರನ್ನು ನೆನಸಿಕೊಂಡರೆ ಮನಸ್ಸು ಮರುಗುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು(ಇಂಟರ್ನ್ಯಾಷ್ನಲ್ ಲೇಬರ್ ಆರ್ಗನೈಸಷನ್ -ಐಎಲ್ಓ) ಬಾಲಕಾರ್ಮಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದನ್ನು ತಡೆಯಲು ಕ್ರಿಯಾತ್ಮಕವಾಗಿ ಕೆಲಸಮಾಡುವ ಉದ್ದೇಶದಿಂದ 12ನೇ ಜೂನ್‍ರಂದು ಅಂತರರಾಷ್ಟ್ರೀಯ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ.

ಫಾತಿಮಾ ಎಂಬ ಮುಗ್ಧ ಬಾಲಕಿಯ ಹೃದಯ ಹಿಂಡುವ ಕಥೆ!

ಬಾಲ್ಯ ಮಾನವನ ಜೀವನದಲ್ಲಿ ಬರುವ ಬಹುಮುಖ್ಯ ಹಂತ. ಮಕ್ಕಳು ಮನುಕುಲದ ಬಹುದೊಡ್ಡ ಕೊಡುಗೆ. ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವುದಲ್ಲದೆ ಅವರ ಸಾಮರ್ಥ್ಯ ಮತ್ತು ಘನತೆಯನ್ನು ಕಸಿದುಕೊಳ್ಳುತ್ತದೆ. ಅವರ ದೈಹಿಕ ಮತ್ತು ಮಾನಸಿಕ, ನೈತಿಕ ಬೆಳವಣಿಗೆಯನ್ನು ಹಾನಿಮಾಡುತ್ತದೆ. ಇದರಿಂದ ದೇಶವು ಉತ್ತಮ ಉತ್ಪಾದಕವರ್ಗವನ್ನು ಕಳೆದುಕೊಳ್ಳುಬೇಕಾಗುತ್ತದೆ.

ಮಗುವಿನ ಹಕ್ಕು ಕಾಪಾಡಿ

ಮಗುವಿನ ಹಕ್ಕು ಕಾಪಾಡಿ

ಪ್ರತಿಯೊಂದು ಮಗುವು ಉತ್ತಮ ಕೌಟುಂಬಿಕ ವಾತವರಣದಲ್ಲಿ ಬದುಕುವ ಮತ್ತು ಬೆಳೆಯುವ ಹಕ್ಕನ್ನು ಪಡೆದಿದೆ, ಅಂದರೆ ಹಿಂಸೆಯಿಂದ ಮುಕ್ತವಾದ, ಉಲ್ಲಾಸದಾಯಕ ಮತ್ತು ವಾತ್ಸಲ್ಯಪೂರ್ಣ ಕುಟುಂಬದಲ್ಲಿ ಬೆಳೆಯುವ ಹಕ್ಕು. ಆದ್ದರಿಂದ ಮಕ್ಕಳ ಜೀವನದಲ್ಲಿ ಬಾಲ್ಯ, ಶಿಕ್ಷಣ ಆರೋಗ್ಯ, ಉತ್ತಮ ಪರಿಸರ, ರಕ್ಷಣೆ ಮತ್ತು ಭದ್ರತೆ, ಬಹಳ ಮುಖ್ಯ. ಇವುಗಳಲ್ಲಿ ಯಾವುದೇ ಕೊರತೆಯಾದರೂ ಅವರ ಸರ್ವತೋಮುಖ ಅಭಿವೃದ್ಧಿ ಕಡಿಮೆಯಾಗುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಬಿಂಬಿಸುವ ನಾವು ಇವರಿಗೆ ಸರಿಯಾದ ರಕ್ಷಣೆ ಮತ್ತು ಭದ್ರತೆ ನೀಡದಿದ್ದಲ್ಲಿ ದೇಶದ ಬೆಳವಣಿಗೆ ಕುಟಿಂತವಾಗುತ್ತದಲ್ಲದೆ ವಿಶ್ವದಲ್ಲಿ ನಮ್ಮ ದೇಶದ ಘನತೆ ಕುಗ್ಗುತ್ತದೆ. ವಿಶ್ವದ ಹಲವು ಸಮಸ್ಯೆಗಳಲ್ಲಿ ಬಾಲಕಾರ್ಮಿಕತೆಯು ಒಂದು, ಕೆಳಗಿನ ಅಂಕಿಅಂಶಗಳು ಇದರ ತೀವ್ರತೆಯನ್ನು ತೋರಿಸುತ್ತದೆ.

ಭಾರತದಲ್ಲಿ ಬಾಲಕಾರ್ಮಿಕರು

ಭಾರತದಲ್ಲಿ ಬಾಲಕಾರ್ಮಿಕರು

2011ರ ಜನಗಣತಿಯ ಪ್ರಕಾರ 5 ರಿಂದ 18 ವಯಸ್ಸಿನ 33 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಇವರಲ್ಲಿ 15 ರಿಂದ 18 ವಯಸ್ಸಿನ 22,871,908 ಹಾಗೂ 5 ರಿಂದ 14 ವಯಸ್ಸಿನ 10,128,663 ಮಕ್ಕಳು ಬಾಲಕಾರ್ಮಿಕರು, ಇವರಲ್ಲಿ ಶೇ.62ರಷ್ಟು ಹುಡುಗರು. ಶೇ.60ರಷ್ಟು ಬಾಲಕಾರ್ಮಿಕರು ಕೃಷಿಕ್ಷೇತ್ರದಲ್ಲಿ (ಕೃಷಿ ಮತ್ತು ವ್ಯವಸಾಯ) ಕೆಲಸಮಾಡುತ್ತಿದ್ದಾರೆ. ಕೃಷಿಯೇ ದೇಶದ ಬೆನ್ನೆಲುಬು ಎಂದು ಹೇಳುವ ನಾವು ಈ ಕಾರ್ಯಕ್ಕೆ ಮಕ್ಕಳನ್ನು ಬಳಸುವುದೆಷ್ಟು ಸರಿ ಎಂಬುದನ್ನು ವಿರ್ಮಶಿಸಬೇಕು.

2001ರ ಜನಗಣತಿ ಪ್ರಕಾರ 5 ರಿಂದ 14ವರ್ಷದ ಮಕ್ಕಳು 11.4 ಮಿಲಿಯನ್ ಗ್ರಾಮೀಣ ಹಾಗು 1.3 ಮಿಲಿಯನ್ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, 2011ರ ಗ್ರಾಮೀಣ 8.1 ಮಿಲಿಯನ್ ಮತ್ತು 2.0 ಮೀಲಿಯನ್ ಮಕ್ಕಳು ನಗರ ಪ್ರದೇಶದಲ್ಲಿ ಕೆಲಸಮಾಡುತ್ತಿರುವುದು ಕಂಡುಬಂದಿದೆ. ಇದನ್ನು 1991ರ ಜನಗಣತಿಗೆ ಹೋಲಿಸಿದರೆ ನಗರಪ್ರದೇಶದಲ್ಲಿ ಕೆಲಸಮಾಡುವ ಮಕ್ಕಳ ಸಂಖ್ಯೆ 1.3 ದಶಲಕ್ಷದಿಂದ 2 ಮಿಲಿಯನ್ ಗೆ ಏರಿದೆ ಆದರೆ ಇದು ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣವು 11 ಮೀಲಿಯನ್ ನಿಂದ 8 ಮಿಲಿಯನ್ ಗೆ ಇಳಿದಿದೆ.

2001 ಮತ್ತು 2011ರ ನಡುವಿನ ಅವಧಿಯಲ್ಲಿ ಬಾಲ ಕಾರ್ಮಿಕ ಸಂಖ್ಯೆಯಲ್ಲಿ 2.6 ಮಿಲಿಯನ್ ಇಳಿಕೆಯಾಗಿದೆ.

ಭದ್ರತೆಗಾಗಿ ಭಾರತದಲ್ಲಿರುವ ಕಾಯ್ದೆ ಕಾನೂನುಗಳು

ಭದ್ರತೆಗಾಗಿ ಭಾರತದಲ್ಲಿರುವ ಕಾಯ್ದೆ ಕಾನೂನುಗಳು

1986 ಬಾಲ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ)ಕಾಯ್ದೆಗೆ 2016ರಲ್ಲಿ ತಿದ್ದುಪಡಿ ಮಾಡುವ ಮೂಲಕ 'ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಬದಲಾವಣೆ ತಂದಿದ್ದು, ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹಾಗೂ ಹದಿನೆಂಟು ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.

ಕಾಯ್ದೆ ಉಲ್ಲಂಘಿಸಿದ್ದಲ್ಲಿ, ಮಾಲೀಕರಿಗೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 20,000/- ರಿಂದ ರೂ. 50,000/-ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.ಪುನರಾವರ್ತಿತ ಅಪರಾಧಕ್ಕೆ ಒಂದು ವರ್ಷದಿಂದ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ.

ಪೋಷಕರಾಗಿದ್ದಲ್ಲಿ ಪುನರಾವರ್ತಿತ ಅಪರಾಧಕ್ಕೆ ರೂ.10,000/-ಗಳ ದಂಡವನ್ನು ವಿಧಿಸಲಾಗುತ್ತದೆ.

ಮಕ್ಕಳು ಕೆಲಸ ಮಾಡಲೇ ಬಾರದೆ?

ಮಕ್ಕಳು ಕೆಲಸ ಮಾಡಲೇ ಬಾರದೆ?

ಅಂದಹಾಗೆ ಮಕ್ಕಳು ಕೆಲಸದಲ್ಲಿ ತೊಡಗಬಾರದು ಎಂದು ಈ ಕಾಯ್ದೆಯ ಅರ್ಥವಲ್ಲ. ಒಂದು ಮಗುವು ಕುಟುಂಬದ ಸಹಾಯಕ್ಕಾಗಿ, ಕುಟುಂಬ ಉದ್ಯಮದಲ್ಲಿ ಶಾಲಾ ಸಮಯದ ನಂತರ ಅಥವಾ ರಜಾದಿನಗಳಲ್ಲಿ ಮಕ್ಕಳು ಕಲಾಕಾರರಾಗಿ ಕೆಲಸ ಮಾಡಲು ಮಾತ್ರ ಅವಕಾಶ ಕಲ್ಪಿಸಿದೆ. ಸರ್ಕಾರವು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಅನುಕೂಲವಾಗುವಂತೆ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ'ಯಡಿಯಲ್ಲಿ ಎಲ್ಲಾ ಮಕ್ಕಳಿಗೂ ಕಲಿಕೆಗೆ ಅವಕಾಶ ಕಲ್ಪಿಸಿದೆ, ಆದರೆ 2011ರ ಜನಗಣತಿಯನ್ನು ಗಮನಿಸಿದರೆ 42.7ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಸಮಸ್ಯೆಗೆ ಕಾರಣ

ಸಮಸ್ಯೆಗೆ ಕಾರಣ

ಮಕ್ಕಳು ಕಾರ್ಮಿಕರಾಗಲು ಸಾಮಾಜಿಕ, ಆರ್ಥಿಕ, ನೈಸರ್ಗಿಕ ವಿಕೋಪ, ಕಾನೂನು ಸಂಘರ್ಷ, ಮಕ್ಕಳ ಕಳ್ಳಸಾಗಣೆ, ಅನಕ್ಷರತೆ, ಕೌಶಲ್ಯ ಮತ್ತು ಶೈಕ್ಷಣಿಕ ಕೊರತೆ ಮುಂತಾದ ಅಂಶಗಳು ಕಾರಣವಾಗುತ್ತದೆ. ಈ ಸಮಸ್ಯೆಗಳಿಂದ ಬಳಲುತ್ತಿರುವ ಪೋಷಕರ ಮಕ್ಕಳೇ ಹೆಚ್ಚಾಗಿ ಬಾಲಕಾರ್ಮಿಕರಾಗುವ ಕಾರಣ ಇವರುಗಳಿಗೆ ಈ ಕಾಯ್ದೆಕಾನೂನುಗಳ ಅರಿವಿರುವುದಿಲ್ಲ, ಕೆಲವರಿಗೆ ಇದರ ಅರಿವಿದ್ದರೂ ಸಹ ಆರ್ಥಿಕ ಸಂಕಷ್ಟದ ಕಾರಣ ಮಕ್ಕಳನ್ನು ಕೆಲಸಕ್ಕೆ ಕಳಿಸುವ ಅನಿವಾರ್ಯತೆ ಇರುತ್ತದೆ. ಪೋಷಕರನ್ನೇ ಹೊಂದಿರದ ಅನಾಥ ಮಕ್ಕಳು, ಬೀದಿಮಕ್ಕಳು, ನೈಸರ್ಗಿಕ ವಿಕೋಪ ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾಗಿ ತಂದೆತಾಯಿಯನ್ನು ಕಳೆದುಕೊಂಡ ಮಕ್ಕಳು ಬದುಕುವ ಅನಿವಾರ್ಯತತೆಯಿಂದ ಬಲವಂತವಾಗಿ ಕಾರ್ಮಿಕರಾಗುತ್ತಾರೆ.

ಪರಿಹಾರ ಹೇಗೆ?

ಪರಿಹಾರ ಹೇಗೆ?

1. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯು ಪರಿಣಾಮಕಾರಿಯಾಗಿ ಅನುಷ್ಠಾನವಾಗುವ ಹಾಗೆ ನೋಡಿಕೊಳ್ಳಬೇಕು. ಶಿಕ್ಷಣದಿಂದ ಯಾರು ವಂಚಿತರಾಗದ ಹಾಗೆ ನೋಡಿಕೊಳ್ಳಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಪಂಚಾಯಿತಿ ಸದಸ್ಯರು, ನಾಗರಿಕರು ಶಾಲೆಬಿಟ್ಟ ಮಕ್ಕಳನ್ನು ಪೋಷಕರ ಮನವೊಲಿಸಿ ಶಾಲೆಗೆ ಕರೆತರುವುದರ ಜೊತೆಗೆ ಮಕ್ಕಳ ಕಳ್ಳಸಾಗಣೆ ಮತ್ತು ಬಾಲಕಾರ್ಮಿಕರ ಮೇಲೆ ಕಣ್ಣಿಡಬೇಕು.

2. ಅರಿವಿನ ಕಾರ್ಯಕ್ರಮವನ್ನು ಪೋಷಕರಿಗೆ, ಸಾರ್ವಜನಿಕರಿಗೆ, ಉದ್ಯೋಗದಾತರಿಗೆ ಹಮ್ಮಿಕೊಳ್ಳಬೇಕು. ಮಕ್ಕಳನ್ನು ದುಡಿಸಿಕೊಂಡರೆ ಇರುವ ಶಿಕ್ಷೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

3. ಬಾಲಕಾರ್ಮಿಕರ ಸಮೀಕ್ಷೆಯನ್ನು ಕನಿಷ್ಠ 2 ವರ್ಷಕ್ಕೊಮ್ಮೆಯಾದರು ನಡೆಸಬೇಕು, ಇದರಿಂದ ಬಾಲಕಾರ್ಮಿಕರ ನಿಖರ ಅಂಕಿಸಂಖ್ಯೆಗಳು ಲಭ್ಯವಾಗುತ್ತದೆ.

4. ಸರ್ಕಾರೇತರ ಸಂಸ್ಥೆಗಳು ಬಾಲಕಾರ್ಮಿಕರಿಗಾಗಿ ಒಳಿತಿಗಾಗಿ ಕೆಲಸಮಾಡುವುದರ ಜೊತೆ ಸರ್ಕಾರ ಅನುಷ್ಠಾನಗೊಳಿಸಿರುವ ಕಾರ್ಯ ಮತ್ತು ಯೋಜನೆಗಳ ಸಮೀಕ್ಷೆ ಮತ್ತು ಮೌಲ್ಯಮಾಪನ ಮಾಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ತಿಳಿಸಬೇಕು.

5. ಬಾಲಕಾರ್ಮಿಕ ಪದ್ಧತಿಗೆ ಪ್ರಮುಖ ಕಾರಣ ಬಡತನ, ಇದನ್ನು ಹೊಗಲಾಡಿಸಲು ಸರ್ಕಾರ ತಂದಿರುವ ಆರ್ಥಿಕ ಸಹಾಯಕ ಯೋಜನೆಯನ್ನು ನಿರ್ಧಿಷ್ಟ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು.

6. ಬಡತನ ನಿರ್ಮೂಲನೆ, ಕೌಶಲ್ಯಾದಾರಿತ ಉದ್ಯೋಗ, ಸಾರ್ವತ್ರಿಕ ಶಿಕ್ಷಣ, ಸಾರ್ವಜನಿಕರಲ್ಲಿ ಅರಿವು, ಪೋಷಕರ ಮನಪರಿರ್ವನೆ, ಮಕ್ಕಳ ಅಗತ್ಯತೆಗಳು ಮತ್ತು ಹಕ್ಕುಗಳನ್ನು ಗುರುತಿಸುವ ಕಾರ್ಯಗಳನ್ನು ಆಗಿಂದಾಗ್ಗೆ ಸರ್ಕಾರ ಹಮ್ಮಿಕೊಳ್ಳಬೇಕು.

7. ಯಾವುದೇ ಕೆಲಸದಲ್ಲಿ ತೊಡಗಿರುವ ಬಾಲಕಾರ್ಮಿಕರು, ಮಕ್ಕಳ ಕಳ್ಳಸಾಗಣೆಯನ್ನು ಕಂಡಕೊಡಲೇ ಸಾರ್ವಜನಿಕರು 1098 ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Every year on June 12 the World Day Against Child Labor is observed to raise awareness of the plight of child laborers world-wide. Hundreds of millions of girls and boys around the world are affected. Child labor is especially rampant in many developing countries - but even in industrialized nations many children are forced to work
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more