ಟೈಮ್ಸ್ ಆಫ್ ಇಂಡಿಯಾ ವಿರುದ್ಧ ತಿರುಗಿ ಬಿದ್ದ ಮಲ್ಲು ಸ್ಟಾರ್
ಕೊಚ್ಚಿ, ಜ.5: ಜನಪ್ರಿಯ ದಿನ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ವಿರುದ್ಧ ಕೇರಳದ ಸೂಪರ್ ಸ್ಟಾರ್ ದಿಲೀಪ್ ತಿರುಗಿ ಬಿದ್ದಿದ್ದಾರೆ. ದಿನಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, 50 ಕೋಟಿ ಪರಿಹಾರ ಕೇಳಿದ್ದಾರೆ.
'ಕೊಚ್ಚಿನ್ ಮಹಾರಾಜರ ಸ್ವತ್ತನ್ನು ನಟ ದಿಲೀಪ್ ಕಬಳಿಸಿದ್ದಾರೆ' ಎಂದು ಜನವರಿ 1 ರಂದು ಟೈಮ್ಸ್ ಆಫ್ ಇಂಡಿಯಾದ ಕೇರಳ ಅವೃತ್ತಿಯಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ ದಿಲೀಪ್ ಸ್ಪಷ್ಟನೆ ನೀಡಿದರೂ ದಿನಪತ್ರಿಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಬೇಸತ್ತ ನಟ ದಿಲೀಪ್ ಅವರು ಸುಳ್ಳು ಸುದ್ದಿ ಪ್ರಕಟಿಸಿ ಮಾನ ಹರಾಜು ಹಾಕುತ್ತಿರುವ ದಿನಪತ್ರಿಕೆಯ ಕ್ರಮವನ್ನು ಖಂಡಿಸಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.
2006ರಲ್ಲಿ ಅಗಸ್ಟಿನ್ ಪಾಲ್ ಹಾಗೂ ಶಾಬಿ ಎಂಬುವರಿಂದ ಶೇ92.9 ರಷ್ಟು ಭಾಗದ ಸ್ವತ್ತನ್ನು ಪಡೆದುಕೊಂಡಿರುವ ಬಗ್ಗೆ ದಿಲೀಪ್ ದಾಖಲೆ ಒದಗಿಸಿದ್ದಾರೆ. ತ್ರಿಸ್ಸೂರು ಜಿಲ್ಲಾಧಿಕಾರಿಗಳಿಗೆ 2013ರಲ್ಲೇ ಈ ಬಗ್ಗೆ ದಾಖಲೆ ಒದಗಿಸಿರುವುದಾಗಿ ದಿಲೀಪ್ ಹೇಳಿದ್ದಾರೆ. ಈ ಸ್ವತ್ತಿನಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನು ಪಡೆದುಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಕಳಿಸಿರುವ ನೋಟಿಸ್ ಗೆ ಉತ್ತರಿಸಲು 10 ದಿನಗಳ ಕಾಲಾವಕಾಶವಿದೆ. ಇಲ್ಲದಿದ್ದರೆ ಕಾನೂನು ರೀತಿ ಹೋರಾಟ ಮುಂದುವರೆಸುವುದಾಗಿ ದಿಲೀಪ್ ಹೇಳಿದ್ದಾರೆ. ದಿನಪತ್ರಿಕೆಯ ವರದಿಯಿಂದ ನನ್ನ ಕಕ್ಷಿದಾರ ದಿಲೀಪ್ ಅವರ ಮಾನನಷ್ಟವಾಗಿದೆ. ವ್ಯವಹಾರಗಳು ಕುಂಠಿತವಾಗಿವೆ ಎಂದು ಕೇರಳ ಹೈಕೋರ್ಟಿನ ಹಿರಿಯ ವಕೀಲ ಕೆ ರಾಮ್ ಕುಮಾರ್ ಹೇಳಿದ್ದಾರೆ. (ಫಿಲ್ಮಿಬೀಟ್)