ಭಾರತವೇ ನಂ.1: ಕೊರೊನಾ ಲಸಿಕೆ ವಿತರಿಸುವಲ್ಲಿ ದೇಶಕ್ಕೆ ಅಗ್ರಸ್ಥಾನ
ನವದೆಹಲಿ, ಏಪ್ರಿಲ್ 08: ಜಗತ್ತಿನಲ್ಲೇ ಪ್ರತಿನಿತ್ಯ ಅತಿಹೆಚ್ಚು ಕೊರೊನಾವೈರಸ್ ಲಸಿಕೆ ವಿತರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ದೇಶಾದ್ಯಂತ ಪ್ರತಿನಿತ್ಯ 34 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗುತ್ತಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. 82 ದಿನಗಳಲ್ಲಿ 9,01,98,673 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಲಾಕ್ಡೌನ್ ಜಾರಿ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ದೇಶದಲ್ಲಿ 89,68,151 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 54,18,084 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 97,67,538 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 44,11,609 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 2,36,94,487 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 4,66,662 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 3,63,32,851 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 11,39,291 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಕೊರೊನಾವೈರಸ್ ಲಸಿಕೆ ವಿತರಣೆ ಮತ್ತು ಸೋಂಕಿತ ಪ್ರಕರಣಗಳ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಶೇ.60ರಷ್ಟು ಲಸಿಕೆ ವಿತರಿಸಿದ 8 ರಾಜ್ಯಗಳು
ಭಾರತದಲ್ಲಿ ಇದುವರೆಗೂ 9,01,98,673 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ ಶೇ.60ರಷ್ಟು ಲಸಿಕೆಯನ್ನು ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳ ರಾಜ್ಯಗಳಲ್ಲೇ ವಿತರಣೆ ಮಾಡಲಾಗಿದೆ. ಅದರ ಕುರಿತು ಅಂಕಿ-ಅಂಶಗಳ ಜೊತೆಗಿನ ಮಾಹಿತಿ ಚಿತ್ರದಲ್ಲಿದೆ.

ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಪ್ರತಿನಿತ್ಯ ಕೊರೊನಾವೈರಸ್ ಲಸಿಕೆ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ದೇಶದಲ್ಲಿ ಸರಾಸರಿ 34 ಲಕ್ಷಕ್ಕಿಂತ ಅಧಿಕ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಲಾಗುತ್ತಿದೆ. ಭಾರತ, ಯುಎಸ್ಎ, ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಟರ್ಕಿ ಮತ್ತು ಇಟಲಿ ರಾಷ್ಟ್ರಗಳು ಸರದಿಯಲ್ಲಿ ಗುರುತಿಸಿಕೊಂಡಿವೆ.

ಭಾರತದ 10 ರಾಜ್ಯಗಳಲ್ಲಿ ಶೇ.84ರಷ್ಟು ಕೊರೊನಾವೈರಸ್
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,26,789 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಪೈಕಿ ಶೇ.84ರಷ್ಟು ಸೋಂಕಿತ ಪ್ರಕರಣಗಳು 10 ರಾಜ್ಯಗಳಲ್ಲೇ ವರದಿಯಾಗಿವೆ. ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಕೇರಳ, ಪಂಜಾಬ್ ರಾಜ್ಯಗಳಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಈ 10 ರಾಜ್ಯಗಳಲ್ಲೇ ಶೇ.88ರಷ್ಟು ಕೊವಿಡ್-19 ಸಾವಿನ ಕೇಸ್
ದೇಶದಲ್ಲಿ ಒಂದೇ ದಿನ 685 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,66,862ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮೃತಪಟ್ಟ 685 ಜನರಲ್ಲಿ ಶೇ.88ರಷ್ಟು ಜನರು 10 ರಾಜ್ಯಗಳಿಗೆ ಸೇರಿದವರೇ ಆಗಿದ್ದಾರೆ. ಮಹಾರಾಷ್ಟ್ರ - 322, ಪಂಜಾಬ್ -62, ಛತ್ತೀಸ್ ಗಢ - 53, ಉತ್ತರ ಪ್ರದೇಶ - 40, ಕರ್ನಾಟಕ - 35, ಗುಜರಾತ್ - 22, ದೆಹಲಿ - 20, ಕೇರಳ - 16 ಮತ್ತು ಮಧ್ಯಪ್ರದೇಶ - 13 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.