ಭಾರತದಲ್ಲಿ ಒಂದೇ ದಿನ 54069 ಮಂದಿಗೆ ಕೊರೊನಾವೈರಸ್
ನವದೆಹಲಿ, ಜೂನ್ 24: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಭೀತಿ ಕೊಂಚ ತಗ್ಗಿದೆ. ಪ್ರತಿನಿತ್ಯ 50,000 ಆಸು-ಪಾಸಿನಲ್ಲಿ ಹೊಸ ಕೊವಿಡ್-19 ಪ್ರಕರಣಗಳು ವರದಿಯಾಗುತ್ತಿವೆ.
ಕಳೆದ 24 ಗಂಟೆಗಳಲ್ಲಿ 54,069 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 68,885 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮಹಾಮಾರಿಗೆ 1,321 ಮಂದಿ ಪ್ರಾಣ ಬಿಟ್ಟಿದ್ದಾರೆ.
ಡೆಲ್ಟಾಗಿಂತ ಡೆಲ್ಟಾ ಪ್ಲಸ್ ರೂಪಾಂತರ ಅಪಾಯಕಾರಿಯೇ? ಇಲ್ಲಿದೆ ಎರಡರ ನಡುವಣ ವ್ಯತ್ಯಾಸ
ಭಾರತದಲ್ಲಿ ಒಟ್ಟು 3,00,82,778 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,90,63,740 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,91,981 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 6,27,057 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ತಗ್ಗಿದ ಕೊರೊನಾವೈರಸ್ ತಪಾಸಣೆ:
ಭಾರತದಲ್ಲಿ ಕೊರೊನಾವೈರಸ್ ಸೋಂಕು ಪರೀಕ್ಷೆ ಪ್ರಮಾಣದಲ್ಲೂ ಇಳಿಕೆ ಕಂಡು ಬಂದಿದೆ. 20 ಲಕ್ಷಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸುತ್ತಿದ್ದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,59,469 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗೂ 39,78,32,667 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ಎಷ್ಟು ಹಂತಗಳಲ್ಲಿ ಕೊವಿಡ್-19 ಲಸಿಕೆ ವಿತರಣೆ
ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ವೇಗಕ್ಕೆ ಕಡಿವಾಣ ಹಾಕಲು ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಗಿತು.
ಏಪ್ರಿಲ್ 1ರಂದು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಮೂರನೇ ಹಂತದಲ್ಲಿ ಮೇ 1ರಿಂದ 18-44 ವಯೋಮಾನದವರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಜೂನ್ 21ರ ಸೋಮವಾರದಿಂದ ದೇಶದಲ್ಲಿ ನಾಲ್ಕನೇ ಹಂತದ ಲಸಿಕೆ ವಿತರಣೆ ಆರಂಭಿಸಲಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಇದುವರೆಗೂ 30,16,26,028 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ.