ಇಲ್ಲಿದೆ ಉತ್ತರ: ಕೊರೊನಾ ಲಸಿಕೆ ಮತ್ತು ನಾಲ್ಕು ಸಾವಿನ ಹಿಂದಿನ ಸತ್ಯವೇನು?
ನವದೆಹಲಿ, ಜನವರಿ.21: ಕೊರೊನಾವೈರಸ್ ಲಸಿಕೆ ತೆಗೆದುಕೊಳ್ಳುವುದಕ್ಕೆ ಆರೋಗ್ಯ ಕಾರ್ಯಕರ್ತರೆ ಹಿಂದೇಟು ಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬುಧವಾರ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ 42 ವರ್ಷದ ವೈದ್ಯಕೀಯ ಸಿಬ್ಬಂದಿಯೊಬ್ಬರು ಲಸಿಕೆ ಹಾಕಿಸಿಕೊಂಡ ನಂತರ ಮೃತಪಟ್ಟಿದ್ದಾರೆ. ಇದರಿಂದ ಲಸಿಕೆ ಕುರಿತು ಆತಂಕ ಮತ್ತಷ್ಟು ಹೆಚ್ಚಿದೆ.
ದೇಶದಲ್ಲಿ ಈವರೆಗೂ ನಾಲ್ವರು ವೈದ್ಯಕೀಯ ಸಿಬ್ಬಂದಿಯು ಕೊರೊನಾ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಪ್ರಾಣ ಬಿಟ್ಟಿರುವುದು ವರದಿಯಾಗಿದೆ. ಕರ್ನಾಟಕದಲ್ಲಿ ಎರಡು, ಉತ್ತರ ಪ್ರದೇಶ ಒಂದು ಹಾಗೂ ತೆಲಂಗಾಣದಲ್ಲಿ ಒಂದು ಸೇರಿದಂತೆ ನಾಲ್ಕು ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಈ ನಾಲ್ಕು ಸಾವಿನ ಪ್ರಕರಣಗಳ ಪೈಕಿ ಮೂವರ ಸಾವು ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.
ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?
ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಮೃತಪಟ್ಟಿರುವ ವೈದ್ಯಕೀಯ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಸಾವಿಗೆ ನಿಜವಾದ ಕಾರಣವೇನು ಎಂಬುದು ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ ಎಂದು ಸರ್ಕಾರ ತಿಳಿಸಿದೆ.

ವೈದ್ಯಕೀಯ ಸಿಬ್ಬಂದಿ ಸಾವಿನ ಬಗ್ಗೆ ಸಿಕ್ಕಿರುವ ಮಾಹಿತಿ
"ಕಳೆದ ಮಂಗಳವಾರ ಬೆಳಗ್ಗೆ 11.30ರ ವೇಳೆಗೆ ವೈದ್ಯಕೀಯ ಸಿಬ್ಬಂದಿಗೆ ನಿರ್ಮಲ್ ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ನೀಡಲಾಗಿತ್ತು. ಮಧ್ಯರಾತ್ರಿ 2.30ರ ಹೊತ್ತಿನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಎದೆನೋವು ಕಾಣಿಸಿಕೊಂಡಿದೆ. ಬೆಳಗಿನಜಾವ 5.30ಕ್ಕೆ ಜಿಲ್ಲಾ ಆಸ್ಪತ್ರೆಗೆ ವ್ಯಕ್ತಿಯನ್ನು ಕರೆದುಕೊಂಡು ಹೋಗುವ ವೇಳೆಗೆ ಅವರು ಮೃತಪಟ್ಟಿದ್ದರು" ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

"ಕೊವಿಡ್-19 ಲಸಿಕೆ ಸಿಬ್ಬಂದಿ ಸಾವಿಗೆ ಕಾರಣವಲ್ಲ"
ದೇಶದಲ್ಲಿ ಈಗಾಗಲೇ ಮೃತಪಟ್ಟಿರುವ ಇಬ್ಬರು ವೈದ್ಯಕೀಯ ಸಿಬ್ಬಂದಿ ಸಾವಿಗೆ ಕೊರೊನಾವೈರಸ್ ಲಸಿಕೆಯಿಂದಾದ ಅಡ್ಡ ಪರಿಣಾಮಗಳೇ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. "ಕರ್ನಾಟಕದ ಬಳ್ಳಾರಿಯಲ್ಲಿ ಮೃತಪಟ್ಟ ವೈದ್ಯಕೀಯ ಸಿಬ್ಬಂದಿಯ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿಗೆ ಹೃದಯ ಸಂಬಂಧಿ ಕಾಯಿಲೆಯೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶಿವಮೊಗ್ಗದಲ್ಲಿ ಮೃತಪಟ್ಟ ಮತ್ತೊಬ್ಬ ವೈದ್ಯಕೀಯ ಸಿಬ್ಬಂದಿ ಸಾವಿಗೂ ಕೂಡಾ ಹೃದಯ ಸಂಬಂಧಿ ಕಾಯಿಲೆಯೇ ಕಾರಣವೇ ಹೊರತಾಗಿ ಲಸಿಕೆಗೂ ಈ ಸಾವಿನ ಪ್ರಕರಣಗಳಿಗೂ ಸಂಬಂಧವಿಲ್ಲ" ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಲಸಿಕೆ ಪಡೆದ ನಂತರದಲ್ಲಿ ವೈದ್ಯಕೀಯ ಸಿಬ್ಬಂದಿ ಸಾವು
ಕೊರೊನಾವೈರಸ್ ಲಸಿಕೆಯನ್ನು ಪಡೆದ 24 ಗಂಟೆಗಳಲ್ಲೇ ಉತ್ತರ ಪ್ರದೇಶದ ಮೊರದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46 ವರ್ಷದ ಮಣಿಪಾಲ್ ಸಿಂಗ್ ಅವರು ಎದೆನೋವು ಮತ್ತು ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಕೊವಿಡ್-19 ಲಸಿಕೆಗೂ ಮಣಿಪಾಲ್ ಸಿಂಗ್ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದರು. ಮಣಿಪಾಲ್ ಸಿಂಗ್ ಅವರ ಸಾವಿನಲ್ಲಿ ಲಸಿಕೆಯ ಅಡ್ಡಪರಿಣಾಮದಿಂದ ಆಗಿರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಕೊವಿಡ್-19 ಲಸಿಕೆ ಪಡೆದ ನಂತರದಲ್ಲಿ ಶನಿವಾರ ಕೂಡಾ ಅವರು ರಾತ್ರಿ ಪಹರೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆಗ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ ಎಂದು ಮೊರದಾಬಾದ್ ಮುಖ್ಯ ವೈದ್ಯಾಧಿಕಾರಿ ಎಂ.ಸಿ. ಗಾರ್ಗ್ ತಿಳಿಸಿದ್ದರು.

ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಮತ್ತು ಅಡ್ಡಪರಿಣಾಮ ಪ್ರಕರಣ
ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾಗಿ ಐದು ದಿನಗಳಲ್ಲಿ ದೇಶಾದ್ಯಂತ 7.86 ಲಕ್ಷ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಬುಧವಾರ ಒಂದೇ ದಿನ ದೇಶಾದ್ಯಂತ 82 ಅಡ್ಡಪರಿಣಾಮದ ಪ್ರಕರಣಗಳು (ಲಸಿಕೆ ಹಾಕಿಸಿಕೊಂಡವರ ಆರೋಗ್ಯದಲ್ಲಿ ವ್ಯತ್ಯಾಸ) ಪತ್ತೆಯಾಗಿವೆ. ದೆಹಲಿಯಲ್ಲಿ 4, ಕರ್ನಾಟಕದಲ್ಲಿ 2, ಉತ್ತರಾಖಂಡ್, ರಾಜಸ್ಥಾನ್, ಛತ್ತೀಸ್ ಗಢ, ಪಶ್ಚಿಮ ಬಂಗಾಳದಲ್ಲಿ ಲಸಿಕೆ ಅಡ್ಡಪರಿಣಾಮಗಳಿಂದ ಒಬ್ಬೊಬ್ಬ ವೈದ್ಯಕೀಯ ಸಿಬ್ಬಂದಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.