ಹೈದರಾಬಾದ್ ಪಾಲಿಕೆ ಚುನಾವಣೆಗೆ ಪವನ್ ಕಲ್ಯಾಣ್ ಪಕ್ಷ ಎಂಟ್ರಿ
ಹೈದರಾಬಾದ್, ನ.18: ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪಕ್ಷ ಕೂಡಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ನಮ್ಮ ಪಕ್ಷ ಜಿಎಚ್ಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಕ್ಷದ ಯುವ ಜನ ಸೈನಿಕರಿಗೆ ಇದು ಉತ್ತಮ ಅವಕಾಶ ಎಂದಿದ್ದಾರೆ. ಚುನಾವಣೆಗೆ ಸಿದ್ಧರಾಗುವಂತೆ ಗ್ರೇಟರ್ ಹೈದರಾಬಾದ್ ಪ್ರದೇಶದ ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಲಾಗಿದೆ ಎಂದಿದ್ದಾರೆ.
ಡಾ.ಸುಧಾಕರ್ ಗೆ ಹೊಸ ಜವಾಬ್ದಾರಿ: ರಾಜ್ಯ ಬಿಜೆಪಿ ಮುಖಂಡರಿಗೆ ವರಿಷ್ಠರ ಸ್ಪಷ್ಟ ಸಂದೇಶ
ಡಿಸೆಂಬರ್ 1ರಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ನವೆಂಬರ್ 20ರಂದು ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದೆ. ನವೆಂಬರ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಎಂದು ಚುನಾವಣಾ ಆಯುಕ್ತ ಸಿ ಪಾರ್ಥಸಾರಥಿ ಹೇಳಿದರು.

ಇವಿಎಂ ಬಳಕೆ ಇಲ್ಲ
ಬ್ಯಾಲೆಟ್ ಪೇಪರ್ ಬಳಸಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಕೊವಿಡ್ 19 ಹಿನ್ನೆಲೆಯಲ್ಲಿ ಇವಿಎಂ ಬಳಕೆ ನಿರ್ಬಂಧ ಕುರಿತಂತೆ ಪ್ರಮುಖ ಪಕ್ಷಗಳು ಹಾಗೂ ಆರೋಗ್ಯ ಇಲಾಖೆ ಜೊತೆ ಮಾತುಕತೆ ನಡೆಸಿ, ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಆಯುಕ್ತರಾದ ಪಾರ್ಥಸಾರಥಿ ಹೇಳಿದರು.

ಚುನಾವಣೆ ದಿನಾಂಕ
* 150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ.
* ನಾಮಪತ್ರ ಸಲ್ಲಿಸಲು ನವೆಂಬರ್ 20 ಕೊನೆ ದಿನಾಂಕ
* ನಾಮಪತ್ರ ಹಿಂಪಡೆಯಲು ನವೆಂಬರ್ 22 ಕೊನೆ ದಿನಾಂಕ
* ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಗೆ ಗೆಲುವು
2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ. ಹೀಗಾಗಿ, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಡಲಿವೆ.

ಸುಧಾಕರ್ ಸಹ ಉಸ್ತುವಾರಿ
ಬಿಜೆಪಿ ಕೇಂದ್ರ ನಾಯಕರ ವಿಶ್ವಾಸ ಗಳಿಸಿರುವ ಕರ್ನಾಟಕ ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಗ್ರೇಟರ್ ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಗೆ ಡಾ.ಸುಧಾಕರ್ ಅವರನ್ನು ಸಹ ಉಸ್ತುವಾರಿಯನ್ನಾಗಿ ರಾಷ್ಟ್ರಾಧ್ಯಕ್ಷ ಜೆ.ಪಿ,ನಡ್ಡಾ ನೇಮಿಸಿದ್ದಾರೆ.ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಭಾರಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ನೇಮಿಸಲಾಗಿದೆ.
ತೆಲಂಗಾಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವ ಬಿಜೆಪಿ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಗುರಿ ಹೊಂದಿದೆ.