ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ

ಸರಕಾರಿ ಕೆಲಸ ಕೊಡುತ್ತೇನೆಂದು ಭರವಸೆ ನೀಡಿದ್ದೇ ರಾಜ್ಯ ಸರಕಾರ. ಆ ಮಾತನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇನಷ್ಟೇ ನಾನು. ಭಿಕ್ಷೆ ಬೇಡುವುದನ್ನು ನನ್ನ ಗಂಡ ನನಗೆ ಕಲಿಸಿಕೊಟ್ಟಿಲ್ಲ. ನಾನು ಯಾರಲ್ಲೂ ಭಿಕ್ಷೆ ಬೇಡುವುದೂ ಇಲ್ಲ.

By Prasad
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 22 : 'ಕಂಗಳು ತುಂಬಿರಲು ಕಂಬನಿ ಧಾರೆಯಲಿ, ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ, ಮೇಣದ ದೀಪದಂತೆ ನೊಂದು ನೊಂದು ನೀರಾದೇ..' ಚಂದನದ ಗೊಂಬೆಯ ಈ ಹಾಡನ್ನು ವೀರ ಯೋಧ ಹನುಮಂತಪ್ಪನ ಹೆಂಡತಿ ಮಹಾದೇವಿಗಾಗಿಯೇ ಬರೆಯಲಾಗಿದೆಯಾ?

ಒಂದೆಡೆ ದೇಶಸೇವೆ ಮಾಡುತ್ತಿದ್ದ ಗಂಡ ಹನುಮಂತಪ್ಪನನ್ನು ಕಳೆದುಕೊಂಡಾಗಿದೆ, ಕರುಳಬಳ್ಳಿ ನೇತ್ರಾಳ ಭವಿಷ್ಯತ್ತಿನ ಬಗ್ಗೆ ಚಿಂತಿಸಬೇಕಾಗಿದೆ. ಮತ್ತೊಂದೆಡೆ ಈಡೇರದ ಸರಕಾರದ ಭರವಸೆಗಳು, ಅದಕ್ಕಾಗಿ ಕಚೇರಿಕಚೇರಿಗಳಿಗೆ ಅಲೆದಾಟ. ಸಾಲದೆಂಬಂತೆ ಸುಳ್ಳುಸುದ್ದಿಗಳ ಹರಿದಾಟ.

ಹನುಮಂತಪ್ಪ ಮಣ್ಣಾದ ದಿನವೇ ಸಿದ್ದರಾಮಯ್ಯನವರು ಮಹಾದೇವಿಗೆ ರಾಜ್ಯ ಸರಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಮಹಾದೇವಿಗೆ 25 ಲಕ್ಷ ರುಪಾಯಿ ಮತ್ತು ನಾಲ್ಕೆಕರೆ ಜಮೀನನ್ನು ನೀಡಲಾಗಿದೆಯಾದರೂ ಉದ್ಯೋಗದ ಭರವಸೆ ಇನ್ನೂ ಮರೀಚಿಕೆಯಾಗಿದೆ. [ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ]

I will never beg for job : Hanumanthappa's wife Mahadevi

ಕೆಲಸದ ಭಿಕ್ಷೆ ಬೇಡಲಾರೆ : ಸರಕಾರಿ ಕೆಲಸ ಕೊಡುತ್ತೇನೆಂದು ಭರವಸೆ ನೀಡಿದ್ದೇ ರಾಜ್ಯ ಸರಕಾರ. ಆ ಮಾತನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇನಷ್ಟೇ ನಾನು. ಭಿಕ್ಷೆ ಬೇಡುವುದನ್ನು ನನ್ನ ಗಂಡ ನನಗೆ ಕಲಿಸಿಕೊಟ್ಟಿಲ್ಲ. ನಾನು ಯಾರಲ್ಲೂ ಭಿಕ್ಷೆ ಬೇಡುವುದೂ ಇಲ್ಲ ಎಂದು ಸ್ವಾಭಿಮಾನದ ಮಾತನ್ನು ಒನ್ಇಂಡಿಯಾ ಕನ್ನಡದ ಜೊತೆ ಮಹಾದೇವಿ ಆಡಿದರು.

ಇನ್ನೊಂದು ತಿಂಗಳಲ್ಲಿ ಕೆಲಸ ಕೊಡುತ್ತೇವೆಂದು ರಾಜ್ಯ ಸರಕಾರ ಭರವಸೆ ನೀಡಿದೆ. ಅದಕ್ಕಾಗಿ ನಾನು ರಾಜ್ಯ ಸರಕಾರಕ್ಕೆ ಆಭಾರಿಯಾಗಿದ್ದೇನೆ. ನನಗೀಗ ಕೆಲಸದ ಅಗತ್ಯವಿರಲಿಕ್ಕಿಲ್ಲ. ಆದರೆ, ಮಗಳ ಭವಿಷ್ಯದ ದೃಷ್ಟಿಯಿಂದ ಕೆಲಸ ಬೇಕೇಬೇಕು. ನನಗೆ ರಾಜ್ಯ ಸರಕಾರ ಹಣ ಕೊಟ್ಟಿದೆ ನಿಜ. ಆದರೆ, ಕೂತು ತಿಂದರೆ ಕುಡಿಕೆ ಹೊನ್ನೂ ಸಾಲುವುದಿಲ್ಲ ಎಂಬ ನುಡಿಯನ್ನು ಎಂದೂ ಮರೆಯುವುದಿಲ್ಲ ಎಂದು ಅವರು ಹೇಳಿದರು. [ದೇಶ ಕಾದ ಯೋಧನ ಪತ್ನಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲವೆ?]

ರಾಜಕೀಯ ಸೇರಲಾರೆ : ವೀರಯೋಧನ ಪತ್ನಿ ಎಂಬ ಸಂಗತಿಯನ್ನೇ ಬಂಡವಾಳ ಮಾಡಿಕೊಂಡು ನಾನು ಯಾವ ರಾಜಕೀಯ ಚಟುವಟಿಕೆಯಲ್ಲೂ ಪಾಲ್ಗೊಂಡಿಲ್ಲ. ಗೌರವಯುತವಾಗಿ ಬದುಕುವುದು ಹೇಗೆ ಅಂತ ನನಗೆ ಗೊತ್ತು. ಯಾವುದೋ ರಾಜಕೀಯ ಪಕ್ಷದೊಡನೆ ಅಡ್ಡಾಡುತ್ತಿದ್ದೇನೆ ಎಂಬ ಸುದ್ದಿ ಶುದ್ಧ ಸುಳ್ಳು ಎನ್ನುತ್ತಾರೆ ಮಹಾದೇವಿ.

ಹೌದು, ರಾಜಕೀಯ ಸೇರಿ, ಗ್ರಾಮ ಪಂಚಾಯತಿ ಚುನಾವಣೆ ಸ್ಪರ್ಧಿಸಿ ಎಂಬ ಆಗ್ರಹ ಬಂದಿದ್ದು ನಿಜ. ನನ್ನ ಕೆಲ ಹಿತೈಷಿಗಳೇ ಈ ಸಲಹೆ ನೀಡಿದ್ದರು. ಆದರೆ, ನನಗೆ ಜೀವನ ಮಾಡಲು ರಾಜಕೀಯ ಸೇರುವ ಅಗತ್ಯವಿಲ್ಲ. ನನ್ನ ಗಂಡ ಯಾವ ಪಕ್ಷಕ್ಕೂ ಸೇರಿದವರಾಗಿರಲಿಲ್ಲ. ಅವರ ನೆರಳಿನಲ್ಲಿಯೇ ನಾನು ಸಾಗಬಯಸುತ್ತೇನೆ ಎಂದು ಮಹಾದೇವಿ ಹೆಮ್ಮೆಯಿಂದ ಹೇಳಿದರು.

English summary
My brave husband has never taught me to beg for anything. So, I will never beg for job to state of central government. These are the words of Mahadevi, wife of Siachen braveheart Hanumanthappa Koppad. Karnataka government has assured her job in state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X