ಹುಬ್ಬಳ್ಳಿಯಲ್ಲಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ: ಸುಧಾಕರ್
ಹುಬ್ಬಳ್ಳಿ, ನ 22: ರಾಜ್ಯದಲ್ಲಿ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷತೆ ಹೊಂದಿರುವ ಕಿದ್ವಾಯಿ ಆಸ್ಪತ್ರೆಯ ವಿಭಾಗೀಯ ಕೇಂದ್ರಗಳನ್ನು ಬೆಳಗಾವಿ, ಮೈಸೂರು, ಗುಲ್ಗರ್ಗಾ ಮತ್ತು ಬೀದರ್ ನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಹುಬ್ಬಳ್ಳಿ ನಗರದಲ್ಲಿ ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ನೀಡುವ ಆಸ್ಪತ್ರೆಯೊಂದನ್ನು ನಿರ್ಮಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸೇರಿದಂತೆ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು. ನಂತರ ಮಾತನಾಡಿದ ಸುಧಾಕರ್, ಹುಬ್ಬಳ್ಳಿ ವಾಣಿಜ್ಯ ನಗರವಾಗಿದ್ದು, ಇದನ್ನು ಆರೋಗ್ಯ ನಗರವಾಗಿ ರೂಪಿಸಬೇಕಿದೆ. ಈ ಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕಿದೆ. ಕಿದ್ವಾಯಿಯ ಸಹಭಾಗಿತ್ವದಲ್ಲಿ, ಅದೇ ಗುಣಮಟ್ಟದ ಹೊಸ ಆಸ್ಪತ್ರೆ ನಿರ್ಮಿಸಬೇಕಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದರು.
ಮಹಿಳೆಯರು, ವಯೋವೃದ್ದರು ಸೇರಿದಂತೆ ಎಲ್ಲರು ದೈಹಿಕವಾಗಿ ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಚಟುವಟಿಕೆಯಲ್ಲಿ ಭಾಗಿಯಾದರೆ ಕ್ಯಾನ್ಸರ್ ನಿಂದ ದೂರವಾಗಬಹುದು. ದುಷ್ಚಟಗಳಿಂದ ಬಹಳಷ್ಟು ಜನರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಇವುಗಳನ್ನು ಬಹಳ ಬೇಗ ಪತ್ತೆ ಹಚ್ಚಿದರೆ ವಾಸಿ ಮಾಡುವುದು ಸಾಧ್ಯ. ಬಡತನ ರೇಖೆಗಿಂತ ಕೆಳಗೆ ಇರುವ ಜನರ ಕಷ್ಟವನ್ನು ನಾನು ಕಂಡಾರೆ ಕಂಡಿದ್ದೇನೆ. ಇಂತಹ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕು. ಕ್ಯಾನ್ಸರ್ ರೋಗಿಗಳ ಸಂಖ್ಯೆ ಕಡಿಮೆ ಆಗಲಿ ಎಂದು ಹೇಳಿದರು.
ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ
ರಾಜ್ಯದಲ್ಲಿ 1 ಕೋಟಿ ಕೋವಿಡ್ ಪರೀಕ್ಷೆಗಳು ನಡೆದಿದ್ದು, ಕೋವಿಡ್ ರೋಗಿಗಳ ಚಿಕಿತ್ಸೆಗೆ 300 ಕೋಟಿ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಶೇ.90 ರಷ್ಟು ಜನರು ಮಾಸ್ಕ್ ಧರಿಸಿದ್ದು, ಬಹುತೇಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಇಡೀ ರಾಜ್ಯದ ಜನರು ಈ ನಿಯಮಗಳನ್ನು ಪಾಲಿಸಬೇಕು ಎಂದರು. ಕಿಮ್ಸ್ ನಲ್ಲಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ ಎಂದು ಶ್ಲಾಘಿಸಿದರು.