• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ಯಾಸ್, ಅಡುಗೆ ಎಣ್ಣೆ ಇಳಿಸದಿದ್ದರೆ 2023ರ ಚುನಾವಣೆಯಲ್ಲಿ ಇದೇ ಉತ್ತರ; ಡಿಕೆಶಿ

|
Google Oneindia Kannada News

ಹುಬ್ಬಳ್ಳಿ, ನವೆಂಬರ್ 5: ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದು ಕ್ಷೇತ್ರವನ್ನು ಗೆದ್ದುಕೊಂಡಿವೆ. ಆದರೆ ಇನ್ನೂ ರಾಜಕೀಯ ನಾಯಕರ ಹೇಳಿಕೆ- ಪ್ರತಿಕ್ರಿಯೆಗಳು ಮುಂದುವರೆದಿವೆ.

ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, "ಹಾನಗಲ್ ಕ್ಷೇತ್ರದ ಮತದಾರರ ಬಗ್ಗೆ ನನಗೆ ಮೊದಲೇ ನಂಬಿಕೆಯಿತ್ತು," ಎಂದು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿರುವ ಡಿಕೆಶಿ, "ಕೋವಿಡ್​ ವೇಳೆ ರೈತರು, ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿರಲಿಲ್ಲ. ಸಹಾಯ ಮಾಡುವ ಬದಲು ಜನರ ಪಿಕ್​ಪ್ಯಾಕೆಟ್ ಮಾಡುತ್ತಿತ್ತು. ಇದರಿಂದ ಬೇಸತ್ತು ಹಾನಗಲ್ ಜನರು ಉತ್ತರ ಕೊಟ್ಟಿದ್ದಾರೆ," ಎಂದು ತಿಳಿಸಿದ್ದಾರೆ.

"ಉಪ ಚುನಾವಣೆಯಲ್ಲಿ ಸೋಲು ಎದುರಾಗಿರುವುದರಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂಧನ ಬೆಲೆ ಇಳಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಉಪ ಚುನಾವಣೆ​ ಬಳಿಕ ಬಿಜೆಪಿ ನಾಯಕರಿಗೆ ತಿಳಿವಳಿಕೆ ಬಂದಿದೆ. ಆದರೆ ಇನ್ನೂ ಗ್ಯಾಸ್, ಅಡುಗೆ ಎಣ್ಣೆ ದರ ಕಡಿಮೆ ಮಾಡಿಲ್ಲ. ದರ ಇಳಿಸದಿದ್ದರೆ 2023ರ ಚುನಾವಣೆಯಲ್ಲಿ ಇದೇ ಉತ್ತರ ಸಿಗಲಿದೆ," ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

ಹಾನಗಲ್​ನಲ್ಲಿ ಫಲಿತಾಂಶ ಬರುವುದಕ್ಕೂ ಮೊದಲೇ ಸಿಎಂ ಬಸವರಾಜ ಬೊಮ್ಮಾಯಿ ಸೋಲೊಪ್ಪಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಜೆಡಿಎಸ್​ ಗೆದ್ದಿತ್ತು. ಹಾನಗಲ್​ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಹಾನಗಲ್​ ನನ್ನ ಮನೆ ಎಂದು ನಾವು ಎಲ್ಲೂ ಹೇಳಿರಲಿಲ್ಲ. ಹಾನಗಲ್ ಅಳಿಯ, ಹಾನಗಲ್ ಮೊಮ್ಮಗನೆಂದು ಹೇಳಿರಲಿಲ್ಲ. ಸಿಎಂ ಬೊಮ್ಮಾಯಿ ಹೇಳಿದ್ದನ್ನು ನೆನಪಿಸಲು ಬಯಸುತ್ತೇನೆ. ಜೊತೆಗೆ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರೆಲ್ಲ ಅಲ್ಲೇ ಬೀಡುಬಿಟ್ಟಿದ್ದರು. ನಮ್ಮ ಗೌರವ ಉಳಿಸಿ ಎಂದು ಕೇಳಿಕೊಂಡಿದ್ದರು. ಆದರೆ ಫಲಿತಾಂಶ ಬರುವ ಮುನ್ನವೇ ಸಿಎಂ ಸೋಲೊಪ್ಪಿಕೊಂಡಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಉಪ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ, ಮತದಾರನ ತೀರ್ಪಿನಿಂದ ಬೆಳಕು ಬರಲಿದೆ ಎಂದು ನಾನು ನಿನ್ನೆಯೇ ಹೇಳಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಈ ಉಪ ಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಾಖ್ಯಾನಿಸಿದ್ದರು.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಡಿಮೆ ಮಾಡಿವೆ. ದೇಶಾದ್ಯಂತ ನಡೆದ ಉಪ ಚುನಾವಣೆಯಲ್ಲಿ ಬಹುತೇಕ ಕಡೆ ಸರ್ಕಾರದ ವಿರುದ್ಧ ಜನ ಮತದಾನ ಮಾಡಿದ್ದಾರೆ.

ನಾವು ಕೂಡ ಈ ಚುನಾವಣೆ ಮೂಲಕ ಸಂದೇಶ ರವಾನಿಸಬೇಕು, ಎಚ್ಚರಿಕೆ ನೀಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡಿದ್ದೆವು. ಅದರಂತೆ ಪ್ರಬುದ್ಧ ಮತದಾರರು ಮತ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಮಾಲೀಕರು ಅನ್ನುವುದು ಮತ್ತೆ ಸಾಬೀತಾಗಿದೆ. ಹೀಗಾಗಿಯೇ ಇಂಧನ ದರ ಕಡಿಮೆ ಆಗಿದೆ ಎಂದಿದ್ದರು.

ಹಾನಗಲ್ ಗ್ರಾಮದೇವತೆ ದೇಗುಲಕ್ಕೆ ತೆರಳಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಹಾನಗಲ್ ಉಪ ಚುನಾವಣೆ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬರಮಾಡಿಕೊಂಡು ಸನ್ಮಾನ ಮಾಡಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ್, ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮತ್ತಿತರರು ಹಾಜರಿದ್ದರು.

ಬಿಟ್​ ಕಾಯಿನ್ ದಂಧೆ ಬಗ್ಗೆ ಪ್ರತಿಕ್ರಿಯೆ
ಬಿಟ್​ ಕಾಯಿನ್ ದಂಧೆಯಲ್ಲಿ ರಾಜಕಾರಣಿಗಳು ಭಾಗಿ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಡಿ, ಸಿಬಿಐ ತನಿಖೆಗೆ ಕೊಟ್ಟಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಬಿಟ್ ಕಾಯಿನ್ ದಂಧೆ ಬಗ್ಗೆ ಸರ್ಕಾರ ವಿವರಿಸಲಿ. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತನಾಡಿಲ್ಲ. ಬಿಟ್ ಕಾಯಿನ್ ದಂಧೆ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ. ಮಾಹಿತಿ ಹಕ್ಕು ಕಾಯ್ದೆಯಡಿ ನಾವು ಸಹ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ಹೇಳಿದ್ದೇನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಹೇಳಿಕೆ ನೀಡುತ್ತಾ ಕಾಂಗ್ರೆಸ್ ಪಕ್ಷದ ವ್ಯಂಗ್ಯವಾಡಿದ್ದರು. ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಾರೆಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡುತ್ತಾ, ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಹೋಳಾಗುವ ಸ್ಥಿತಿ ಇದೆ. ಕಾಂಗ್ರೆಸ್‌ನವರು ಮೊದಲು ಅವರ ಬಗ್ಗೆ ನೋಡಿಕೊಳ್ಳಲಿ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದರು.

   ರವೀಂದ್ರ ಜಡೇಜಾ ಕೊಟ್ಟ ಉತ್ತರಕ್ಕೆ ಫುಲ್‌ ಕಕ್ಕಾಬಿಕ್ಕಿಯಾದ ಪತ್ರಕರ್ತ | Oneindia Kannada
   English summary
   The government did not responded to the plight of farmers and workers in Covid time, KPCC president DK Shivakumar said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X