ಈ ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ; ಉಮಾಶ್ರೀ
ಹುಬ್ಬಳ್ಳಿ, ನವೆಂಬರ್ 21: ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಮಾಶ್ರೀ ಅವರು, "ನನ್ನ ವಾಹನ ಜಖಂಗೊಂಡಿರುವುದಕ್ಕೆ ಬೇಸರವಿಲ್ಲ. ಈ ಅಪಘಾತದಲ್ಲಿ ಇಬ್ಬರ ಪ್ರಾಣಗಳು ಹೋದವಲ್ಲಾ, ಅದರಿಂದ ತುಂಬಾ ನೋವಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಇಂತಹ ಕಾರುಗಳು ಬರಬಹುದು, ಹೋಗಬಹುದು ಆದರೆ ಜೀವ ಹಾಗಲ್ಲ" ಎಂದು ನೋವಿನಲ್ಲಿ ನುಡಿದರು.
ಹುಬ್ಬಳ್ಳಿಯಲ್ಲಿ ನಟಿ ಉಮಾಶ್ರೀ ಕಾರು ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು
ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ಶುಕ್ರವಾರ ರಾತ್ರಿ ರಸ್ತೆ ಅಪಘಾತದಲ್ಲಿ ವಿಜಯಪುರ ಜಿಲ್ಲಾ ಸರ್ಜನ್ ಡಾ.ಶರಣಪ್ಪ ಕಟ್ಟಿ ಅವರ ಪತ್ನಿ ಶೋಭಾ (ಶಾರದಾ) ಕಟ್ಟಿ ಹಾಗೂ ಹಾಗೂ ಚಾಲಕ ಸಂದೀಪ ವಿಭೂತಿಮಠ ಸಾವಿಗೀಡಾಗಿದ್ದಾರೆ. ಶರಣಪ್ಪ ಕಟ್ಟಿ ಅವರ ಪುತ್ರಿ ಡಾ.ಸ್ಮಿತಾ ಕಟ್ಟಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಮಾಶ್ರೀಯವರ ಇನೊವಾ ಕಾರು ಚಾಲಕ ಶಿವಕುಮಾರ ಬಿಡನಾಳ ಗಾಯಗೊಂಡಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ತೇರದಾಳಕ್ಕೆ ಹೋಗಲು ಆಗಮಿಸಿದ್ದ ಉಮಾಶ್ರೀ ಮಾತನಾಡಿ ಘಟನೆಯ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದರು. ಕೊಪ್ಪಳ ಮೂಲದ ಚಾಲಕ ಇಲ್ಲಿಗೆ ಬಂದಿದ್ದು ಯಾಕೆ ಎಂಬುದು ಗೊತ್ತಿಲ್ಲ. ಆತನನ್ನು ನನ್ನ ಕಾರ್ಯಕರ್ತರೇ ಪರಿಚಯಿಸಿ ಕಳಿಸಿದ್ದರು. ಇಡೀ ಘಟನೆಯಿಂದ ನಾನು ನೊಂದಿದ್ದೇನೆ ಎಂದರು.
ಅಪಘಾತದ ಬಗ್ಗೆ ಹಾಗೂ ಮುಂದಿನ ಕಾನೂನು ಕ್ರಮದ ಕುರಿತು ಉಮಾಶ್ರೀಯವರು ಗ್ರಾಮೀಣ ಠಾಣೆಯ ಇನ್ಸ್ ಪೆಕ್ಟರ್ ರಮೇಶ ಗೋಕಾಕ ಅವರಿಂದ ಮಾಹಿತಿ ಪಡೆದರು.