ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇತಿಹಾಸದ ಪುಟ ಸೇರಿದ 117 ವರ್ಷ ಹಳೆ ಪಿಂಟೋ ವೈನ್‌ಲ್ಯಾಂಡ್

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜುಲೈ 03 : 'ಹುಬ್ಬಳ್ಳಿ' ಅಂದರೆ ಅದಕ್ಕೊಂದು ಭವ್ಯ ಇತಿಹಾಸ ಇದೆ. ಅದೇ ರೀತಿ ಈ ನಗರದಲ್ಲಿನ ವೈನ್‌ಶಾಪ್‌ವೊಂದಕ್ಕೆ 117 ವರ್ಷ ಇತಿಹಾಸವಿದೆ. ಇಲ್ಲಿನ ಕುಡುಕರಿಗೆ ತವರು ಮನೆಯಂತಿದ್ದ ಈ ಮಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೆರೆಗೆ ಜೂನ್ 30ರಿಂದ ಬಾಗಿಲು ಹಾಕಿದೆ.

ನಕಲಿ ಮದ್ಯ ತಯಾರಿಸುವ ಮೂಲಕ ನಗರದ ಕಮರಿಪೇಟೆಯ ಮದ್ಯದ ಉದ್ಯಮ ಒಂದು ಕಾಲದಲ್ಲಿ ಹೇಗೆ ಕುಖ್ಯಾತಿ ಪಡೆದಿತ್ತೋ, ಅದೇ ರೀತಿ ಗುಣಮಟ್ಟದ ಮದ್ಯ ಪೂರೈಸುವ ಮೂಲಕ ಜೂನ್ 30ರ ವರೆಗೂ ಪಿಂಟೊ ವೈನ್‌ಲ್ಯಾಂಡ್ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿದೆ.

ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ: ಸುಪ್ರೀಂಕೋರ್ಟ್ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ: ಸುಪ್ರೀಂಕೋರ್ಟ್

ನಗರದಲ್ಲಿ ಹಾದು ಹೋಗುವ ಗದಗ ಹೆದ್ದಾರಿಗೆ ಹೊಂದಿಕೊಂಡಿರುವ 'ಪಿಂಟೊ ವೈನ್‌ಲ್ಯಾಂಡ್' 1900ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರದ ಪರವಾನಗಿ ಪಡೆದುಕೊಂಡು ಆರಂಭಿಸಲಾಗಿತ್ತು. ಹೆದ್ದಾರಿಗೆ ಹೊಂದಿಕೊಂಡಿರುವ ವೈನ್‌ಶಾಪ್ ಹಾಗೂ ಬಾರ್‌ಗಳನ್ನು 500 ಮೀಟರ್ ಅಂತರವರೆಗೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶದಿಂದಾಗಿ ಪಿಂಟೊ ವೈನ್‌ಲ್ಯಾಂಡ್ ತನ್ನ ವಹಿವಾಟನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದೆ.

ಧಾರವಾಡ ಜಿಲ್ಲೆಯ 107 ಮದ್ಯದಂಗಡಿಗಳ ಎತ್ತಂಗಡಿಗೆ ಇಂದು ಕೊನೆಯ ದಿನಧಾರವಾಡ ಜಿಲ್ಲೆಯ 107 ಮದ್ಯದಂಗಡಿಗಳ ಎತ್ತಂಗಡಿಗೆ ಇಂದು ಕೊನೆಯ ದಿನ

ಕುಡಿತದ ದೃಷ್ಟಿಯಿಂದ ಅಲ್ಲದಿದ್ದರೂ ಇಂತಹ ಶತಮಾನಕ್ಕೂ ಹೆಚ್ಚು ಕಾಲ ಹುಬ್ಬಳ್ಳಿಯ ಹೆಗ್ಗುರುತಾಗಿದ್ದ ಐತಿಹಾಸಿಕ ಪಿಂಟೊ ವೈನ್ ಲ್ಯಾಂಡ್ ಕಣ್ಮುಚ್ಚುತ್ತಿರುವುದು ಇಲ್ಲಿನ ನಾಗರಿಕರಿಗೆ ಬೇಸರದ ಸಂಗತಿಯಾಗಿದೆ

ಐದು ತಲೆ ಮಾರುಗಳ ಭವ್ಯ ಇತಿಹಾಸ

ಐದು ತಲೆ ಮಾರುಗಳ ಭವ್ಯ ಇತಿಹಾಸ

ಪಿಂಟೊ ಕುಟುಂಬದ ಐದನೇ ತಲೆಮಾರಿನ ಮೋಹನ್ ಪಿಂಟೊ ಈ ವೈನ್‌ಶಾಪ್‌ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 1899ರಲ್ಲಿ ಹುಬ್ಬಳ್ಳಿಯಲ್ಲಿ ಎಫಿಸಿಯಾ ವೈನ್‌ಶಾಪ್ ಆರಂಭಿಸಿದರು. ಇದಕ್ಕೆ ಅಂದಿನ ಬ್ರಿಟಿಷ್ ಸರ್ಕಾರ 1900ರಲ್ಲಿ ಅಧಿಕೃತವಾಗಿ ಪರವಾನಗಿ ನೀಡಿತು. 1925ರಲ್ಲಿ ಅವರ ಅಳಿಯ ಲಾರೆನ್ಸ್ ಪಿಂಟೊ ವೈನ್‌ಲ್ಯಾಂಡಿನ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು. ಅವರ ನಂತರ ಲಾರೆನ್ಸ್ ಅವರ ಪುತ್ರ ಅಲ್ಬುಕರ್ಕ್ ಜೊಸೆಫ್ ಪಿಂಟೊ 1939ರಿಂದ ಇದರ ಉಸ್ತುವಾರಿ ವಹಿಸಿದ್ದರು. 1968ರಿಂದ ಅಲ್ಬುಕರ್ಕ್ ಅವರ ಮಗ ಮಾಲ್ಕಮ್ 2000ದವರೆಗೂ ನಡೆಸಿಕೊಂಡು ಬಂದರು. ಅಲ್ಲಿಂದ ಮಾಲ್ಕಮ್ ಅವರ ಪುತ್ರ ಮೋಹನ್ ಪಿಂಟೊ ಇದರ ಮಾಲೀಕರಾಗಿದ್ದಾರೆ.

ಪಿಂಟೊ ಸರ್ಕಲ್ ಎಂದೇ ಜನಜನಿತ

ಪಿಂಟೊ ಸರ್ಕಲ್ ಎಂದೇ ಜನಜನಿತ

ಹುಬ್ಬಳ್ಳಿ ಜನರಿಗೆ ಮನೆ ಮಾತನಾಗಿದ್ದ ಪಿಂಟೊ ವೈನ್‌ಲ್ಯಾಂಡ್ ಹುಬ್ಬಳ್ಳಿಯ ರೈಲು ನಿಲ್ದಾಣದ ಪಕ್ಕದಲ್ಲಿನ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿದ್ದರೂ ಜನರು ಮಾತ್ರ ಈ ವೃತ್ತಕ್ಕೆ 'ಪಿಂಟೊ ಸರ್ಕಲ್' ಎಂದೇ ಕರೆಯುತ್ತಿದ್ದಿದ್ದು ಇದರ ಜನಪ್ರಿಯತೆಗೆ ಸಾಕ್ಷಿ. ಮೂಲತಃ ಆಂಗ್ಲೋ ಇಂಡಿಯನ್ ಪಂಗಡಕ್ಕೆ ಸೇರಿದ ಪಿಂಟೊ ಕುಟುಂಬದ ಪೂರ್ವಜರು ಬ್ರಿಟಿಷ್ ಸೈನ್ಯದಲ್ಲಿದ್ದವರು. ಇವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದವರು ಮೂಲತಃ ಗೋವಾದ ಸಾರಸತ್ವ ಗೌಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು

ಗುಣಮಟ್ಟದ ವೈನ್ ನೀಡುತ್ತಿದ್ದ ಪಿಂಟೊ

ಗುಣಮಟ್ಟದ ವೈನ್ ನೀಡುತ್ತಿದ್ದ ಪಿಂಟೊ

ಹುಬ್ಬಳ್ಳಿಯ ಇತಿಹಾಸದಲ್ಲಿ ಈವರೆಗೂ ವೈನ್ ಹಾಗೂ ಮದ್ಯ ಪೂರೈಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ವಿಷಯದಲ್ಲಿ ಪಿಂಟೊ ವೈನ್‌ಲ್ಯಾಂಡ್ ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಹಿರಿಯ ಪತ್ರಕರ್ತ ಗೋಪಾಲ ಕೃಷ್ಣ ಹೆಗಡೆ ಹೇಳುತ್ತಾರೆ. ಕೇವಲ ಲಾಭದ ದೃಷ್ಟಿಯಿಂದ ಮಾತ್ರ ವ್ಯಾಪಾರ ಮಾಡದೇ ಗುಣಮಟ್ಟಕ್ಕೂ ಆದ್ಯತೆ ನೀಡಿತ್ತು. ಈಗ ಸ್ಥಗಿತಗೊಂಡಿರುವುದರಿಂದ ಬೇಸರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂಥ ವೈನ್ ಲ್ಯಾಂಡ್ ಇನ್ನೊಂದಿಲ್ಲ

ಇಂಥ ವೈನ್ ಲ್ಯಾಂಡ್ ಇನ್ನೊಂದಿಲ್ಲ

'ವ್ಯಾಪಾರಿ ದೃಷ್ಟಿಯಿಂದಷ್ಟೇ ಅಲ್ಲದೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದ ಪಿಂಟೊ ವೈನ್‌ಲ್ಯಾಂಡ್ ಹುಬ್ಬಳ್ಳಿ ಜನರಿಗೆ ವೈನ್ ರುಚಿ ತೋರಿಸಿತ್ತು. 117 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪಿಂಟೊ ವೈನ್‌ಲ್ಯಾಂಡ್ ಅನ್ನು ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಬೇಕು' ಎಂದು ಇನ್ನೊಬ್ಬ ಹಿರಿಯ ಪತ್ರಕರ್ತ ಲೋಚನೇಶ್ ಹೂಗಾರ ಅಭಿಪ್ರಾಯಪಡುತ್ತಾರೆ.

'ಶತಮಾನ ಪೂರೈಸಿದ ವೈನ್‌ಲ್ಯಾಂಡ್‌ವೊಂದಕ್ಕೆ ಬಾಗಿಲು ಹಾಕಿರುವುದು ದೌರ್ಭಾಗ್ಯ. ಹುಬ್ಬಳ್ಳಿಯಲ್ಲಿ ಇಂತಹ ಭವ್ಯ ಇತಿಹಾಸ ಹೊಂದಿರುವ ಹಾಗೂ ಗುಣಮಟ್ಟದಲ್ಲಿ ಹೆಸರು ಮಾಡಿರುವ ವೈನ್‌ಲ್ಯಾಂಡ್ ಇನ್ನೊಂದಿಲ್ಲ' ಎನ್ನುತ್ತಾರೆ ಉದ್ಯಮಿ ಸುನೀಲ್ ನಲವಡೆ.

ನಗರಕ್ಕೆ ವಿನಾಯಿತಿ ನೀಡಬೇಕಿತ್ತು : ಪಿಂಟೊ

ನಗರಕ್ಕೆ ವಿನಾಯಿತಿ ನೀಡಬೇಕಿತ್ತು : ಪಿಂಟೊ

ಪಿಂಟೊ ವೈನ್‌ಲ್ಯಾಂಡ್ ಸ್ಥಗಿತಗೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಲೀಕ ಮೋಹನ್ ಪಿಂಟೊ, ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸಲೇಬೇಕು. ಆದರೆ, ನಗರ ಪ್ರದೇಶದಲ್ಲಿ ಹಾದು ಹೋಗಿರುವ ಹೆದ್ದಾರಿ ಪಕ್ಕದಲ್ಲಿರುವ ಬಾರ್ ಮತ್ತು ವೈನ್‌ಶಾಪ್‌ಗಳಿಗೆ ಕೋರ್ಟ್ ವಿನಾಯಿತಿ ನೀಡಬೇಕಿತ್ತು. ಈ ತೀರ್ಪಿನಿಂದ ಇನ್ನಷ್ಟು ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆ ಇದ್ದು, ಸುಲಭವಾಗಿ ಸಿಗದಿರುವ ವಸ್ತುವನ್ನು ಸಂಗ್ರಹಿಸಿಡುವುದು ಮನುಷ್ಯ ಸಹಜ ಗುಣ. ಹಾಗೆಯೇ ಹೆದ್ದಾರಿಯಲ್ಲಿ ಸಿಗದಿದ್ದರೆ ಎಲ್ಲಿ ಸಿಗುತ್ತೊ ಅಲ್ಲಿಂದ ಸಂಗ್ರಹಿಸುವ ಕೆಲಸವನ್ನು ಜನರು ಮಾಡುತ್ತಾರೆ. ಇದರಿಂದ ಸಮಸ್ಯೆ ಸಹಜ ಎನುತ್ತಾರೆ ಮೋಹನ್.

English summary
A century old spirit shop in Karnataka ' Pinto Wine Land' in Hubballi closed its door following Supreme Court of India order. The wine store was located near Railway Station. SC orders ban on sale of liquor at shops within 500 metres of highways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X