ಹಾವೇರಿ: ಕಸಾಪ ವಿಶೇಷ ಮಹಾಸಭೆಯಲ್ಲಿ ಮಹೇಶ್ ಜೋಶಿ ವಿರುದ್ಧ ಧಿಕ್ಕಾರದ ಕೂಗು
ಹಾವೇರಿ, ಮೇ 02: ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ನ ವಿಶೇಷ ಸರ್ವ ಸದಸ್ಯರ ಸಭೆ ಮತ್ತು ಮಹಾಸಭೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಧಿಕ್ಕಾರದ ಕೂಗು ಕೇಳಿಬಂದಿದೆ.
ಕನ್ನಡ ಸಾಹಿತ್ಯ ಪರಿಷತ್ನ ನಿಬಂಧನೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆಂದು ಕೆಲವರು ಆರೋಪಿಸಿದ ಹಿನ್ನಲೆ ಸಭೆಯಲ್ಲಿ ಕೋಲಾಹಲ ನಡೆಯಿತು. ಇಷ್ಟೇ ಅಲ್ಲದೇ ಪರಸ್ಪರ ವಾಗ್ವಾದಗಳು ನಡೆದವು.
ಈ ವೇಳೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧ ಧಿಕ್ಕಾರ ಕೂಗಿದ್ದು, ಕೆಲವರ ಮೇಲೆ ಕೈ ಮಾಡುವ ಪ್ರಯತ್ನವು ಸಹ ನಡೆಯಿತು. ಇನ್ನು ಕೆಲವರು ಸಭಾಂಗಣದ ಮುಂಭಾಗದಲ್ಲಿ ಧರಣಿ ನಡೆಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.
ಕಸಾಪ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಕಸಾಪ ಅಧ್ಯಕ್ಷರು ತಮ್ಮ ಸ್ವಹಿತಾಸಕ್ತಿಯಿಂದ ಪರಿಷತ್ತಿನ ನಿಬಂಧನೆಗಳಿಗೆ ವಿರುದ್ಧವಾಗಿ ವಿಶೇಷ ಸಭೆ ಕರೆದಿದ್ದಾರೆ. ಅದಕ್ಕೆ ಕಾರ್ಯಕಾರಿ ಸಮಿತಿಯ ಅನುಮೋದನೆಯಿಲ್ಲ. ವಿಶೇಷ ಸಭೆಯ ಕಾರ್ಯಸೂಚಿಯನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಲು ಅವಕಾಶವಿದ್ದಾಗಲೂ ವಿನಾಕಾರಣ ವಿಶೇಷ ಸಭೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಗಲಾಟೆ ಮಾಡುತ್ತಿದ್ದ ಕೆಲವರನ್ನು ಸಭೆಯಿಂದ ಹೊರಕ್ಕೆ ಕಳಿಸುವ ಪ್ರಯತ್ನಗಳು ನಡೆದವು. ಈ ವೇಳೆ ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಕಸಪಾ ಪದಾಧಿಕಾರಿಗಳು ಹಾಜರಿದ್ದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಸೇರಿದಂತೆ ಹಾವೇರಿ ಜಿಲ್ಲೆಯ ಕಸಾಪ ಪದಾಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ಏನು ಮಾತಾಡ್ತೀನಿ ಅಂತ ಕೇಳದೇ ಪ್ರಶ್ನೆ ಹಾಕಿದರು
ಕಸಾಪ ಸರ್ವ ಸದಸ್ಯರ ಸಭೆ ಬಳಿಕ ಹಾವೇರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಸಾಪ ಅಧ್ಯಕ್ಷ ಮಹೇಶ್ ಜೋಷಿ, "ಇಂದು ವಾರ್ಷಿಕ ಸಭೆ, ವಿಶೇಷ ಸಭೆ ಮಾಡಿದೆವು. ವಾರ್ಷಿಕ ಸಭೆಯಲ್ಲಿ ಲೆಕ್ಕ ಪತ್ರಗಳ ಮಂಡನೆ ಆಯಿತು. ನಿರೀಕ್ಷೆಗೂ ಮೀರಿ ಸಾಹಿತ್ಯ ಪರಿಷತ್ತಿನ ಸದಸ್ಯರು ಸಭೆಗೆ ಬಂದಿದ್ದರು. ವಿಶೇಷ ಸಭೆ ಹಾಗೂ ಸರ್ವ ಸದಸ್ಯರ ಸಭೆ ಎರಡೂ ಯಶಸ್ವಿಯಾಗಿ ನಡೆದವು," ಎಂದರು.
"ಸಭೆ ಅಂದ ಮೇಲೆ ಸಹಜವಾಗಿ ಎಲ್ಲಾ ಚರ್ಚೆ ಆಗುತ್ತವೆ. ಚರ್ಚೆ ನಡೆಯುವ ಸಂದರ್ಭದಲ್ಲಿ ಕೆಲವು ಗಡಿಗಳನ್ನು ದಾಟಬಾರದು ಎಂದು ನಿಬಂಧನೆಗಳಿದೆ. ಪರಿಷತ್ನ ಗೌರವಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳಬಾರದು ಎಂದು ಪರಿಷತ್ತಿನ ನಿಬಂಧನೆ ಇದೆ. ಆದರೆ ನಾನು ಭಾಷಣ ಮಾಡುವಾಗ ಏನು ಮಾತಾಡ್ತೀನಿ ಅಂತ ಕೇಳದೇ ಕೆಲವರು ಪ್ರಶ್ನೆ ಹಾಕಿದರು," ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯತ್ವಕ್ಕೆ ಕನಿಷ್ಠ ವಿದ್ಯಾರ್ಹತೆ ಇರಬೇಕು
"ಅಧ್ಯಕ್ಷರ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಗಾಲು ಹಾಕಿದರು ಎಂದು ಕೆಲ ಸದಸ್ಯರ ವಿರುದ್ದ ಅಸಮಾಧಾನವನ್ನು ಹೊರ ಹಾಕಿದ ಮಹೇಶ್ ಜೋಶಿ, ಇನ್ನು ಇಂದಿನ ಸರ್ವ ಸದಸ್ಯರ ಸಭೆಯಲ್ಲಿ 18 ವರ್ಷ ದಾಟಿದ ಕನ್ನಡ ಓದು ಬರಹ ಬಲ್ಲವರಿಗೆ ಸದಸ್ಯತ್ವ ಕೊಡಬೇಕು ಎಂದು ತೀರ್ಮಾನಿಸಲಾಗಿದೆ," ಎಂದು ತಿಳಿಸಿದರು.
"ಮೊದಲು ಹೆಬ್ಬೆಟ್ಟು ಒತ್ತೋರಿಗೂ ಕಸಾಪ ಸದಸ್ಯತ್ವ ಇತ್ತು. ಈಗ ಕನಿಷ್ಠ ವಿದ್ಯಾರ್ಹತೆ ಇರಬೇಕು ಅಂತ ನಿಯಮ ತಿದ್ದುಪಡಿ ಮಾಡಿದ್ದೇವೆ. ಆದರೆ ರಂಗ ಕಲಾವಿದರಿಗೆ, ಕುಶಲ ಕಾರ್ಮಿಕರಿಗೆ, ನಾಡು ನುಡಿಗೆ ಹೋರಾಡಿದವರಿಗೆ ಈ ನಿಯಮದಿಂದ ವಿನಾಯಿತಿ ನೀಡಿ ಸದಸ್ಯತ್ವ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಅಪರಾಧಿತ ಹಿನ್ನಲೆ ಇಲ್ಲದವರಿಗೆ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ಅಪರಾಧಿತ ಹಿನ್ನೆಲೆ ಇದ್ದರೆ ಕಸಾಪ ಸದಸ್ಯತ್ವ ನೀಡಲಾಗಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ," ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಮಾಹಿತಿ ನೀಡಿದರು.