• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈಗ ಜನರು ಬಿಜೆಪಿಗೆ ಟೋಪಿ ಹಾಕುವ ಸಮಯ: ಡಿಕೆ ಶಿವಕುಮಾರ್

|
Google Oneindia Kannada News

ಹಾವೇರಿ, ಅಕ್ಟೋಬರ್ 20: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಗೆ ಬಿರುಸಿನ ಪ್ರಚಾರ ನಡೆದಿದೆ.ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಭರ್ಜರಿ ಪ್ರಚಾರ ನಡೆಸುತ್ತಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ಎರಡು ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಬುಧವಾರ ನಡೆದ ಚುನಾವಣೆ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಭರ್ಜರಿ ಮತಪ್ರಚಾರ ಆರಂಭಿಸಿದ್ದಾರೆ. ಹಾನಗಲ್‌ನ ಕೊಪ್ಪರಸಿಕೊಪ್ಪ, ಬೆಳಗಾಲಪೇಟ ಪ್ರಚಾರದಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು. ಕಳೆದ 2 ವರ್ಷದಿಂದ ಜನರಿಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈ ಜನರೇ ಟೋಪಿ ಹಾಕಬೇಕು ಎಂದು ಅವರು ಹೇಳಿದರು.

ಬಿಜೆಪಿಯವರು ಯಾವ ಕಾರಣಕ್ಕೆ ತಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕೆ ಮತ ಹಾಕಬೇಕು ಎಂದು ಅವರೇ ಹೇಳಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು. ಎರಡು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ ಅವರು ಹೇಳಿದ್ದಂತೆ ಅಚ್ಚೇ ದಿನ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಬೆಲೆ ಏರಿಕೆಗೆ ಡಿಕೆಶಿ ಗರಂ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಲೆ ಏರಿಕೆ ಜೊತೆಗೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗದ ಬಗ್ಗೆ ಡಿಕೆ ಶಿವಕುಮಾರ್ ಕೆಂಡಕಾರಿದರು. 2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಎಂದು ಮತಭೇಟೆ ಶುರುಮಾಡಿದ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ದಿನನಿತ್ಯ ನಿಮ್ಮ ಜೇಬನ್ನು ಬಿಜೆಪಿ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೂ ತಲಾ 15 ಲಕ್ಷ ರು. ಹಣ ಹಾಕುತ್ತೇವೆ ಎಂದಿದ್ದರು. ಅದಕ್ಕಾಗಿ ನಿಮ್ಮ ಖಾತೆ ತೆರೆಯಿರಿ ಎಂದರು. ಅವರು ಹಣ ಹಾಕಿದರಾ? ಯಾರಿಗಾದರೂ ಹಣ ಬಂತಾ? ಯುವಕರಿಗೆ ಕೆಲಸ ಸಿಕ್ಕಿತಾ? ಯಾವುದಾದದರರೂ ಫ್ಯಾಕ್ಟರಿ ನಿರ್ಮಾಣ ಮಾಡಿದರಾ? ಎಂದು ಪ್ರಶ್ನೆ ಮಾಡಿದರು. ಒಂದೂವರೆ ವರ್ಷದಿಂದ ಔಷಧಿ ಬೆಲೆ ಗಗನಕ್ಕೇರಿಸಿದರು. ಔಷಧಿ ಮತ್ತು ರಸಗೊಬ್ಬರ ಮಂತ್ರಿಯಾಗಿ ನಮ್ಮ ರಾಜ್ಯದವರೇ ಇದ್ದಾರೆ. ಅವರು ಬೆಲೆ ಕಡಿಮೆ ಮಾಡಲಿಲ್ಲ. ಗೊಬ್ಬರದ ಬೆಲೆ ಇಳಿಸಲಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಚಪ್ಪಾಳೆ ಹೊಡೆದರೆ ಕೊರೊನಾ ಹೋಯ್ತಾ?

ಚಪ್ಪಾಳೆ ಹೊಡೆದರೆ ಕೊರೊನಾ ಹೋಯ್ತಾ?

ಕೋವಿಡ್ ವಿಚಾರದಲ್ಲಿ ಜನರನ್ನ ಮೂರ್ಖರನ್ನಾಗಿ ಮಾಡಿದೆ ಎಂದು ಡಿಕೆ ಶಿವಕುಮಾರ್ ಗುಡುಗಿದರು. ಕೋವಿಡ್ ರೋಗ ತಂದು ಹಬ್ಬಿಸಿದರು. ನಂತರ ಕೋವಿಡ್ ವಿರುದ್ಧದ ಹೋರಾಟದಲ್ಲಿ 21 ದಿನ ನೀವು ಸುಮ್ಮನಿರಿ, ಮಹಾಭಾರತ ಯುದ್ಧ 18 ದಿನದಲ್ಲಿ ಮುಗಿದಿತ್ತು. ನೀವು ಗಂಟೆ, ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು ದೀಪ ಹಚ್ಚಿ ಎಂದರು. ಅದನ್ನು ನಾವೆಲ್ಲ ಮಾಡಿದ್ದೇವೆ. ಕೊರೋನಾ ಹೋಯಿತೇ? ಎಂದು ಕೇಳಿದರು.

ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ

ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ

ಕೊರೊನಾ ಸಂದರ್ಭದಲ್ಲಿ ದೇಶದ ಬೆನ್ನೆಲುಬು ಅನ್ನತಾದರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ, ವ್ಯಾಪಾರಿಗಳು, ವೃತ್ತಿಪರರಿಗೆ ಪರಿಹಾರ ನೀಡುವುದಾಗಿ ಹೇಳಿದರು. ನಿಮಗೆ ಯಾರಿಗಾದರೂ ಹಣ ಬಂತಾ? ಯಾರಿಗೂ ಇಲ್ಲ. ನಮ್ಮ ಪಕ್ಷದಲ್ಲಿ ಗೆದ್ದು ಬಿಜೆಪಿಗೆ ಹೋದ ಸಚಿವ ಬಿ.ಸಿ ಪಾಟೀಲ್ ಎಲ್ಲ ರೈತರ ಖಾತೆಗೆ ಹಣ ಹಾಕುವುದಾಗಿ ಹೇಳಿದರು. ಯಾರಿಗಾದರೂ ಸರಿಯಾಗಿ ಪರಿಹಾರ ಸಿಕ್ಕಿದ್ದರೆ ಹೇಳಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ರೈತನಿಗೆ ಹೆಕ್ಟೇರ್ ಪ್ರದೇಶಕ್ಕೆ 10 ಸಾವಿರ ಪರಿಹಾರ ಘೋಷಿಸಿದರು. ಅಂದರೆ ಎಕರೆಗೆ 4 ಸಾವಿರ, ಕುಂಟೆಗೆ 100 ರೂ. ಮಾತ್ರ. ಇದನ್ನು ಪಡೆಯಲು ರೈತರು ಕಂಪ್ಯೂಟರ್ ನಲ್ಲಿ ಅರ್ಜಿ ಹಾಕಬೇಕಂತೆ. ಅವರು ಕೊಡುವ ಈ ಪರಿಹಾರಕ್ಕೆ ಯಾರು ತಾನೇ ಅರ್ಜಿ ಹಾಕುತ್ತಾರೆ? ಈ ಸರ್ಕಾರ ರೈತನಿಗೆ ಸಹಾಯ ಮಾಡಲಿಲ್ಲ, ಚಾಲಕರಿಗೆ, ಸವಿತಾ ಸಮಾಜದವರಿಗೆ, ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ 10 ಸಾವಿರ ನೀಡುವಂತೆ ಆಗ್ರಹಿಸಿದೆವು. 5 ಸಾವಿರ ನೀಡುವುದಾಗಿ ಘೋಷಿಸಿದ ಯಡಿಯೂರಪ್ಪನವರು1900 ಕೋಟಿ ರು. ಪ್ಯಾಕೇಜ್ ಘೋಷಿಸಿದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿ, ನಷ್ಟ ಅನುಭವಿಸಿದ ಎಲ್ಲರಿಗೂ ಪರಿಹಾರ ಎಂದರು. ಆದರೆ ಯಾರಿಗಾದರೂ ಪರಿಹಾರ ಬಂತಾ? ಇಲ್ಲ. ಇದನ್ನು ಕೊಡುವ ಅಧಿಕಾರ ಯಡಿಯೂರಪ್ಪ, ಬೊಮ್ಮಾಯಿ, ಶಿವಕುಮಾರ್ ಉದಾಸಿ ಅವರಿಗೆ ಇತ್ತು. ಆದರೆ ನೀಡಲಿಲ್ಲ. ನಾವು ಅಧಿಕಾರದಲ್ಲಿ ಇದ್ದಿದ್ದರೆ, ಪ್ರತಿ ಅಂಗಡಿ ಮುಂದೆ ಹೋಗಿ, ಚೆಕ್ ಬರೆದು ಕೊಡುತ್ತಿದ್ದೆವು. ರೈತರು, ಕಾರ್ಮಿಕರಿಗೆ ಮೋಸ ಮಾಡಲು ಮನಸ್ಸಾದರೂ ಹೇಗೆ ಬಂತು? ಇಷ್ಟಾದರೂ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ.

ಹಣ ಹಂಚಿಕೆ

ಹಣ ಹಂಚಿಕೆ

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವರದಿ ಹೋಗಿದ್ದೆ ತಡ ಎಲ್ಲ ಮಂತ್ರಿಗಳನ್ನು ಈ ಕ್ಷೇತ್ರಗಳಿಗೆ ದುಡ್ಡು ಕೊಟ್ಟು ಕಳಿಸಿ, ಹಂಚಲು ಹೇಳಿದ್ದಾರೆ. ಪ್ರತಿ ಮತಕ್ಕೆ 2 ಸಾವಿರ ರು. ಹಂಚುತ್ತಿದ್ದಾರೆ. ಅವರು ನಿಮಗೂ ನೀಡುತ್ತಾರೆ. ಅವರ ನೋಟು ತೆಗೆದುಕೊಳ್ಳಿ. ಅದು ನಿಮ್ಮ ಹಣ. ಆ ನೋಟು ತೆಗೆದುಕೊಂಡು ನೀವು ಏನು ಮಾಡಬೇಕು? ಕಾಂಗ್ರೆಸ್‌ಗೆ ಮತ ಹಾಕಬೇಕು.

ಮಾನೆ ಅವರು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ ನೀವು ಈ ಬಾರಿ ಅವರನ್ನು 25 ಸಾವಿರ ಅಂತರದಲ್ಲಿ ಗೆಲ್ಲಿಸಬೇಕು. ಅದಕ್ಕಾಗಿ ನೀವು ಕಾಂಗ್ರೆಸ್‌ಗೆ ಮತ ಹಾಕುವುದರ ಜತೆಗೆ ಇನ್ನು ಐದು ಜನ ಕಾಂಗ್ರೆಸ್‌ಗೆ ಮತಹಾಕುವಂತೆ ಮಾಡಬೇಕು.

 ಹಾನಗಲ್‌ನ ಪ್ರಜ್ಞಾವಂತ ಮತದಾರರಲ್ಲಿ ಮನವಿ

ಹಾನಗಲ್‌ನ ಪ್ರಜ್ಞಾವಂತ ಮತದಾರರಲ್ಲಿ ಮನವಿ

ಈ ದೇಶಕ್ಕೆ ಬುದ್ದಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಪ್ರಜ್ಞಾವಂತರು ಇರಬೇಕು. ಹೀಗಾಗಿ ಹಾನಗಲ್‌ನ ಪ್ರಜ್ಞಾವಂತ ಮತದಾರ ತಮ್ಮ ಮತವನ್ನು ಕಾಂಗ್ರೆಸ್ ಹಾಕಬೇಕು. ನಿಮ್ಮ ತೀರ್ಪನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಇಡೀ ದೇಶ ಕುತೂಹಲದಿಂದ ನೋಡುತ್ತಿದೆ. ನಿಮ್ಮ ಜತೆ ಇದ್ದೇವೆ ಎಂದು ಹೇಳಿ, ನಿಮ್ಮ ಆಶೀರ್ವಾದ ಕೇಳಲು ನಾವಿಲ್ಲಿಗೆ ಬಂದಿದ್ದೇವೆ. ನಿಮ್ಮ ಸೇವೆ ಮಾಡಲು ನಮಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಈ ಹಾನಗಲ್ ವಿಧಾನಸಭೆ ಕ್ಷೇತ್ರದ ಕೊಪ್ಪರಸಿಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಬುಧವಾರ ನಡೆದ ಚುನಾವಣೆ ಪ್ರಚಾರಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವರಾದ ಎಚ್ಕೆ ಪಾಟೀಲ್, ಮನೋಹರ್ ತಹಶೀಲ್ದಾರ್, ಮಾಜಿ ಶಾಸಕ ಮಧು ಬಂಗಾರಪ್ಪ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದರು. ಮಾಜಿ ಸಚಿವಾದ ಎ.ಎಂ. ಹಿಂಡಸಗೇರಿ, ರಮಾನಾಥ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಪಾಲ್ಗೊಂಡಿದ್ದರು.

English summary
DK Shivakumar participated in by-election campaign for Congress candidate Srinivas Mane in Hangal today and said Voters fed up with BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X