• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀವೂ ಒಮ್ಮೆ ಹೋಗಿ: ಬಿಸಿಲೆ ಘಾಟ್ ನಲ್ಲಿ ಧರೆಗಿಳಿದಿದೆ ನಿಸರ್ಗದ ಸ್ವರ್ಗ

|

ಹಾಸನ, ಜೂನ್ 25: ಜಿಟಿ ಜಿಟಿ ಮಳೆ ಹನಿಯೊಂದಿಗೆ, ಹಚ್ಚ ಹಸಿರಿನ ನಡುವಿನ ಹಿಮ ಸಿಂಚನದಲ್ಲಿ, ಭುವಿ ಮತ್ತು ಆಗಸವನ್ನು ಒಂದಾಗಿಸುವ ಬಿಳಿ ಮೋಡಗಳೊಂದಿಗೆ, ಕಾಫಿಯ ಘಮವನ್ನು ಆಸ್ವಾದಿಸುತ್ತಾ ಮಲೆನಾಡಿನ ನಿಸರ್ಗ ಸೌಂದರ್ಯವನ್ನು ಎರಡು ಕಣ್ಣಲ್ಲಿ ಸವಿಯುವ ಮಜಾವೇ ವಿಭಿನ್ನವಾಗಿರುತ್ತದೆ.

ಈ ವೇಳೆಯಲ್ಲಿ ಬಿಸಿಲೆಘಾಟ್ ನತ್ತ ಪ್ರಯಾಣ ಬೆಳೆಸಿದ್ದೇ ಆದರೆ ಅಲ್ಲಿನ ಪ್ರಾಕೃತಿಕ ಸೌಂದರ್ಯ ನಮ್ಮನ್ನು ನಿಸರ್ಗದ ಸ್ವರ್ಗಕ್ಕೆ ಕರೆದೊಯ್ದು ಬಿಡುತ್ತದೆ. ಅಷ್ಟೇ ಅಲ್ಲ, ಅಲ್ಲಿನ ಒಂದೊಂದು ಕ್ಷಣವೂ ಮರೆಯಲಾರದ ಸುಖಾನುಭವವನ್ನು ನೀಡುತ್ತದೆ. ದಟ್ಟಕಾಡು, ಮುಗಿಲೆತ್ತರದ ಪರ್ವತ ಶ್ರೇಣಿಗಳು, ಅದರ ನಡುವಿನ ಕಂದಕದಲ್ಲಿ ಒತ್ತೋತ್ತಾಗಿ ಬೆಳೆದ ವೃಕ್ಷ ಸಂಕುಲಗಳು, ಮುಗಿಲು ಮತ್ತು ಗಿರಿಶಿಖರಗಳನ್ನು ಒಂದು ಮಾಡಿ ಕೇಕೆ ಹಾಕುವ ಬೆಳ್ಳಿ ಮೋಡಗಳು ಹೀಗೆ ಒಂದೇ ಎರಡೇ, ಹತ್ತಾರು ಸುಂದರ ನೋಟಗಳು ನೋಡುಗರ ಮನವನ್ನು ತಣಿಸುತ್ತವೆ.

ಹಾಸನದ ಪರಿಸರ ಪ್ರೇಮಿಗಳಿಗೆ ಜಯ; ನೀಲಗಿರಿ ತೋಪು ತೆರವು

ಹಾಗೆ ನೋಡಿದರೆ ಬಿಸಿಲೆಘಾಟ್ ಎಲ್ಲರಿಗೂ ತಿಳಿದಿರುವ ತಾಣವೇ. ಆದರೆ ನಗರದ ಗೌಜು ಗದ್ದಲದಿಂದ ದೂರವಾಗಿ ಅರಣ್ಯದಲ್ಲಿರುವ ಕಾರಣ ಅಷ್ಟು ಸುಲಭವಾಗಿ ಯಾರೂ ಹೋಗುವಂತಿಲ್ಲ. ಆದರೆ ಇಲ್ಲಿಗೆ ಹೋದರೆ ಪ್ರಕೃತಿಯ ಸುಂದರ ನೋಟ, ನಮ್ಮ ನಿತ್ಯ ಜಂಜಾಟಗಳನ್ನು ಮರೆಸಿ ನಿಸರ್ಗದ ಒಡನಾಟದಲ್ಲಿ ಲೀನವಾಗಿಸಿ ಬಿಡುತ್ತದೆ.

ಕೇಕೆ ಹಾಕುವ ಬೆಳ್ಳಿ ಮೋಡಗಳು

ಕೇಕೆ ಹಾಕುವ ಬೆಳ್ಳಿ ಮೋಡಗಳು

ಬಿಸಿಲೆಘಾಟ್ ನಲ್ಲಿ ಬೇಸಿಗೆಯ ದಿನಗಳಲ್ಲಿ ಸಿಗುವ ಮಜಾಕ್ಕಿಂತ ಮಳೆಗಾಲದ ಆರಂಭದ ದಿನಗಳಲ್ಲಿ ಸಿಗುವ ಮಜಾವೇ ಭಿನ್ನವಾಗಿರುತ್ತದೆ. ಇಲ್ಲಿನ ವೀಕ್ಷಣಾ ತಾಣದಿಂದ ನಿಂತು ಒಂದು ಕ್ಷಣ ಕಣ್ಣು ಹಾಯಿಸಿದರೆ ಸಾಲಾಗಿ ಜೋಡಿಸಿಟ್ಟಂತೆ ಭಾಸವಾಗುವ ಪರ್ವತಶ್ರೇಣಿಗಳು, ಅದರ ಮೇಲೆ ಹಸಿರನ್ನೊದ್ದ ಕಾನನ, ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ದಟ್ಟ ಕಾಡು, ಹಕ್ಕಿಗಳ ಚಿಲಿಪಿಲಿ ಇಂಚರ, ಸುಯ್ಯೆಂದು ಬೀಸುವ ಗಾಳಿ ಮೈನವಿರೇಳಿಸುತ್ತದೆ.

ಹಾಸನ ಜಿಲ್ಲೆಗೆ ಸೇರಿದ ಬಿಸಿಲೆಘಾಟ್

ಹಾಸನ ಜಿಲ್ಲೆಗೆ ಸೇರಿದ ಬಿಸಿಲೆಘಾಟ್

ಬಿಸಿಲೆಘಾಟ್ ಹಾಸನ ಜಿಲ್ಲೆಗೆ ಸೇರಿದ್ದು, ಸಕಲೇಶಪುರಕ್ಕೆ ತೆರಳಿದರೆ ಅಲ್ಲಿಂದ 50 ಕಿ.ಮೀ ದೂರ ಕ್ರಮಿಸಿದರೆ ಬಿಸಿಲೆಘಾಟ್ ತಲುಪಬಹುದು. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅಲ್ಲಿಂದ ಸುಮಾರು 20 ಕಿ.ಮೀ ಸಾಗಿದರೆ ಸಾಕು. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ತಾಲೂಕು ಕೇಂದ್ರದಲ್ಲೊಂದಾದ ಸೋಮವಾರಪೇಟೆಗೆ ತೆರಳಿ ಅಲ್ಲಿಂದ 40 ಕಿ.ಮೀ ದೂರವನ್ನು ಶಾಂತಳ್ಳಿ, ಕುಂದಳ್ಳಿ ರಸ್ತೆಯಲ್ಲಿ ವಣಗೂರು ಮೂಲಕ ಸಾಗಿದರೆ ಕೂಡುರಸ್ತೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಬಿಸಿಲೆಘಾಟ್ ನ್ನು ತಲುಪಬಹುದು.

ನರೇಗಾದಿಂದ ಪುನಶ್ಚೇತನದತ್ತ ಹಾಸನದ ಸಂತೇಕೊಪ್ಪಲು ಐತಿಹಾಸಿಕ ಕಲ್ಯಾಣಿ

ಸುಬ್ರಹ್ಮಣ್ಯ-ಸಕಲೇಶಪುರ ರಸ್ತೆಯಲ್ಲಿ ಸಾಗಬೇಕು

ಸುಬ್ರಹ್ಮಣ್ಯ-ಸಕಲೇಶಪುರ ರಸ್ತೆಯಲ್ಲಿ ಸಾಗಬೇಕು

ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ರಸ್ತೆಯಲ್ಲಿ ಸಾಗಿದರೆ ಬಿಸಿಲೆಘಾಟ್ ನ ಪ್ರವೇಶ ದ್ವಾರ ಎದುರಾಗುತ್ತದೆ. ಈ ಪ್ರವೇಶದ್ವಾರವನ್ನು ಹೊಕ್ಕು ಮುನ್ನಡೆಯುತ್ತಿದ್ದರೆ, ಆಹ್ಲಾದಕರ ವಾತಾವರಣ. ಮುಂದೆ ಹೆಜ್ಜೆ ಹಾಕಲು ಹುರುಪು ತುಂಬುತ್ತದೆ. ನಿಸರ್ಗದ ರಮಣೀಯ ದೃಶ್ಯವನ್ನು ಸವಿಯುತ್ತಾ ಅರಣ್ಯದ ಗುಡ್ಡದ ಮೇಲಿನ ಕಡಿದಾದ ದಾರಿಯಲ್ಲಿ ಸಾಗುತ್ತಿದ್ದರೆ, ಎಡಭಾಗದಲ್ಲಿ ಕಣ್ಣು ಹಾಯಿಸಿದಷ್ಟೂ ಕಾಣುವ ನೂರಾರು ಅಡಿಯ ಪ್ರಪಾತ ಎದೆಯನ್ನು ಢವ ಢವ ಬಡಿದುಕೊಳ್ಳುವಂತೆ ಮಾಡುತ್ತದೆ.

ಎರಡಂತಸ್ತಿನ ವೀಕ್ಷಣಾ ಗೋಪುರ

ಎರಡಂತಸ್ತಿನ ವೀಕ್ಷಣಾ ಗೋಪುರ

ಇಲ್ಲಿ ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ. ಬೆಟ್ಟ ಸಾಲುಗಳ ನಡುವೆ ಗಗನಚುಂಬಿಯಾಗಿ ಕಣ್ಮನ ಸೆಳೆಯುವ ಹಾಸನ ಜಿಲ್ಲೆಗೆ ಸೇರಿದ ಪಟ್ಟಬೆಟ್ಟ, ಇನ್ನಿಕಲ್ಲು ಬೆಟ್ಟ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಕುಮಾರ ಪರ್ವತ, ಕೊಡಗಿಗೆ ಸೇರಿದ ದೊಡ್ಡಬೆಟ್ಟ ಹಾಗೂ ಪುಷ್ಪಗಿರಿ ಪರ್ವತಗಳ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಮಳೆಗಾಲದಲ್ಲಿ ಕಂದಕವನ್ನೆಲ್ಲ ತುಂಬುವ ಹಿಮ, ಸಾಗರವನ್ನೇ ಸೃಷ್ಟಿ ಮಾಡಿಬಿಡುತ್ತದೆ. ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದೆ.

English summary
Bisle ghat belongs to the Hassan district and Its about 50 km away from Sakleshpura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more