ಪಿಎಸ್ಐ ಅಕ್ರಮ: ಸಿಐಡಿ ವಶದಲ್ಲಿರುವ ಅಭ್ಯರ್ಥಿಯ ಸಹೋದರ ಆತ್ಮಹತ್ಯೆ
ಹಾಸನ, ಮೆ 11: ಪಿಎಸ್ಐ ನೇಮಕಾತಿ ಹಗರಣದಲ್ಲಿ ಇತ್ತೀಚಿಗೆ ಸಿಐಡಿ ವಶಕ್ಕೆ ಪಡೆದಿದ್ದ ಅಭ್ಯರ್ಥಿಯ ಸಹೋದರರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಒಗ್ಗರಣೆ ಬೀದಿಯಲ್ಲಿ ನಡೆದಿದೆ.
ವಾಸು (36) ಎಂಬುವರು ಮನೆಯಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮೃತ ವಾಸು ತಮ್ಮ ಮನುಕುಮಾರ್ ಜಿ.ಆರ್ ಎಂಬುವರು ಪಿಎಸ್ಐ ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ಮೃತ ವಾಸು ಸಹ ಗುತ್ತಿಗೆ ಆಧಾರದ ಮೇಲೆ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದರು.
ಮೃತ ವಾಸು ತಾಯಿ ಹೇಳಿಕೆ:
ಗುತ್ತಿಗೆ ಆಧಾರದ ಮೇಲೆ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸುನನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಇದರ ಜೊತೆಗೆ ಪಿಎಸ್ಐ ನೇಮಕಾತಿ ಸಂಬಂಧಪಟ್ಟಂತೆ ವಾಸು ತಮ್ಮ ಮನುಕುಮಾರ್ ನನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವಾಗಲೇ ವಾಸು (36) ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ಸಂಬಂಧಘಟನಾ ಸ್ಥಳಕ್ಕೆ ಭೇಟಿನೀಡಿರುವ ಪೊಲೀಸರು ದೂರು ದಾಖಲಿಸಕೊಂಡು ಪರಿಶೀಲನೆ ನಡೆಸಿದ್ದಾರೆ.
ಮತ್ತೋರ್ವ ಮಗ ಮನು ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವುದು ನಿಜ. ನಮ್ಮ ಮನೆಗೆ ಮಹಜರ್ಗೆ ಮನುಕುಮಾರ್ ಅನ್ನು ಕರೆದುಕೊಂಡು ಬಂದಿದ್ದರು. ನಮ್ಮ ಪರಿಸ್ಥಿತಿ ನೋಡಿ ಇವರು ಲಕ್ಷ ಲಕ್ಷ ದುಡ್ಡು ಕೊಡೊ ಸ್ಥಿತಿಯಲ್ಲಿಲ್ಲ ಅಂದು ಪೊಲೀಸರೇ ಹೇಳಿ ಹೋದರು. ಮನು ಸಿಐಡಿ ಪೊಲೀಸರು ವಶಪಡಿರುವುದಕ್ಕೂ, ವಾಸು ಆತ್ಮಹತ್ಯೆ ಗೂ ಸಂಬಂಧವಿಲ್ಲ. ನನ್ನ ಮಗ ವಾಸು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ, ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮನನೊಂದಿದ್ದ. ಮನೆ ನಿರ್ವಾಹಣೆಗೆ, ಜೀವನದ ಬಗ್ಗೆ ಜಿಗುಪ್ಸೆಗೊಂಡು ಕೆಲಸದಿಂದ ತೆಗೆದಿದ್ದಕ್ಕೆ ಈ ರೀತಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಗೋಳಾಡಿದರು.
ಪಿಎಸ್ ಐ ಕೆಲಸಕ್ಕೆ 40 ಲಕ್ಷ ಹಣ ಕೊಟ್ಟಿರುವ ಅನುಮಾನ..!
ಮನುಕುಮಾರ್ನನ್ನು ತಮ್ಮನನ್ನು ಸಿಐಡಿ ಪೊಲಿಸರು ತನಿಖೆ ನಡೆಸುತ್ತಿರುವಾಗಲೇ ಆತನ ಸಹೋದರ ವಾಸು ನೇಣಿಗೆ ಶರಣಾಗಿದ್ದಾರೆ. ಇದರ ಮದ್ಯೆಯೇ ತಮ್ಮನ ಪಿಎಸ್ ಐ ಕೆಲಸಕ್ಕೆ 40 ಲಕ್ಷ ಹಣ ಕೊಟ್ಟಿರುವ ಬಗ್ಗೆ ಮಾತು ಕೇಳಿಬರುತ್ತಿದ್ದು , ಮುಂಚಿತವಾಗಿ ತಮ್ಮನ ಕೆಲಸಕ್ಕೆ 10 ಲಕ್ಷ ಹಣ ಹೊಂದಿಸಿಕೊಟ್ಟಿದ್ದರು ಎಂಬ ಮಾತು ಕೇಳಿಬರುತ್ತಿದೆ. ಹಣವೂ ಹೋಯ್ತು, ತಮ್ಮನ ಕೆಲಸವೂ ಹೋಯ್ತು ಅಂತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ಅನುಮಾನ ಮೂಡಿದ್ದು ಪೊಲೀಸರ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777