ಹಾಸನ: ಪ್ರೀತಂ ಗೌಡ vs ಎಚ್.ಡಿ. ರೇವಣ್ಣ ಜಟಾಪಟಿ; ರಾತ್ರೋರಾತ್ರಿ ಹಳೇ ತಾಲೂಕು ಕಚೇರಿ ಉಡೀಸ್
ಹಾಸನ, ಮೇ 02: ಹಾಸನದಲ್ಲಿ ರಾಜಕೀಯ ಕಿತ್ತಾಟ ದಿನೇದಿನೇ ಹೆಚ್ಚಾಗುತ್ತಿದೆ. ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗೂ ಮಾಜಿ ಸಚಿವ ಎಚ್. ಡಿ.ರೇವಣ್ಣ ನಡುವೆ ವಾಕ್ಸಮರ ಜೋರಾಗುತ್ತಿದೆ. ಇದರ ನಡುವೆ ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಕೈಗೊಂಡ ಹಲವು ಕಾಮಗಾರಿಗಳಲ್ಲಿ ಹಾಸನದಲ್ಲಿ ಹಳೇ ತಾಲೂಕು ಕಚೇರಿ ಕೆಡವಿ ನೂತನವಾಗಿ ನಿರ್ಮಿಸುವುದು ಮತ್ತು ಟ್ರಕ್ ಟರ್ಮಿನಲ್ ಕೂಡ ಸೇರಿದ್ದವು.
ಆದರೆ ಇವೆರೆಡು ಕಾಮಗಾರಿಗಳನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರೋಧಿಸುತ್ತಲೇ ಬಂದಿದ್ದರು. ಒಂದು ಕಡೆ ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ರೇವಣ್ಣ ಯಶಸ್ವಿಯಾಗಿದ್ದರು. ಆದರೆ ರೇವಣ್ಣ ಅವರನ್ನೇ ಯಾಮಾರಿಸಿ ಇದೀಗ ರಾತ್ರೋರಾತ್ರಿ ಹಾಸನದ ಹಳೇ ತಾಲೂಕು ಕಚೇರಿ ಕೆಡವಿದ್ದು, ಹಾಸನದಲ್ಲಿ ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದಂತಾಗಿದೆ.
ನನ್ನ ವಿರುದ್ಧ ಚುನಾವಣೆಗೆ ನಿಲ್ಲಿ; ರೇವಣ್ಣ ಕುಟುಂಬಕ್ಕೆ ಪ್ರೀತಂ ಗೌಡ ಸವಾಲು!
ಟ್ರಕ್ ಟರ್ಮಿನಲ್ ವಿರೋಧಿಸಿ ಎಚ್.ಡಿ. ರೇವಣ್ಣ ಅ್ಯಂಡ್ ಸನ್ಸ್ ಹೋರಾಟಕ್ಕಿಳಿದ ಪರಿಣಾಮ ಇದೀಗ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. ಅವರಿಗೆ ಎಚ್.ಡಿ. ರೇವಣ್ಣ ಬೆಂಬಲ ಸೂಚಿಸಿದ್ದರು.
ಆದರೆ ಯಾವುದೇ ಕಾರಣಕ್ಕೂ ಟ್ರಕ್ ಟರ್ಮಿನಲ್ ನಿಲ್ಲಿಸಲ್ಲ ಎಂದು ಪ್ರೀತಂ ಗೌಡ ಸವಾಲು ಹಾಕಿದ್ದರು. ಇದಾದ ನಂತರ ಮೊನ್ನೆ ರೇವಣ್ಣ ಮತ್ತು ಅವರ ಪುತ್ರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಮಗಾರಿ ತಡೆದು, ಕಾಂಪೌಂಡ್ ಗೋಡೆ ಕೆಡವಲಾಗಿತ್ತು. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಾಮಗಾರಿ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹಾಸನ : ಹಾಸನದಲ್ಲಿ ರಾತ್ರೋ ರಾತ್ರಿ ಘರ್ಜಿಸಿದ ಜೆಸಿಬಿ
— oneindiakannada (@OneindiaKannada) May 2, 2022
ತಾಲ್ಲೂಕು ಕಚೇರಿ ನೆಲಸಮಗೊಳಿಸಿದ ಜೆಸಿಬಿ
ಹಾಸನದ ಬಿ.ಎಂ. ರಸ್ತೆಯಲ್ಲಿದ್ದ ತಾಲ್ಲೂಕು ಕಚೇರಿ
ನೂತನ ತಾಲ್ಲೂಕು ಕಚೇರಿ ನಿರ್ಮಾಣಕ್ಕಾಗಿ ಹಳೇ ಕಟ್ಟಡ ತೆರವು#Hassan #HassanNews #Talukoffice #HassanTalukOffice pic.twitter.com/GqkoFMuHq3
ಕೇವಲ ಟ್ರಕ್ ಟರ್ಮಿನಲ್ ವಿಚಾರವಲ್ಲ. ಹಾಸನದಲ್ಲಿ ಈಗಿರುವ ತಾಲೂಕು ಕಚೇರಿ ಕೆಡವಿ, ನೂತನವಾಗಿ ತಾಲೂಕು ಕಚೇರಿ ನಿರ್ಮಿಸಲು ಪ್ರೀತಂ ಗೌಡ ಯೋಜನೆ ರೂಪಿಸಿದ್ದರು. ಆದರೆ ಅದಕ್ಕೂ ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ. ಈಗಿರುವ ಹಳೆಯ ಕಟ್ಟಡವೇ ಇರಬೇಕೆಂದು ರೇವಣ್ಣ ಪಟ್ಟುಹಿಡಿದಿದ್ದರು. ಯಾವಾಗ ಟ್ರಕ್ ಟರ್ಮಿನಲ್ ಕೆಲಸವನ್ನು ರೇವಣ್ಣ & ಸನ್ಸ್ ತಡೆಹಿಡಿದರೋ, ಇದೀಗ ರಾತ್ರೋರಾತ್ರಿ ಹಾಸನ ತಾಲೂಕು ಕಚೇರಿಯನ್ನು, ಕಿಟಕಿ ಬಾಗಿಲುಗಳ ಸಮೇತವೇ ನೆಲಕ್ಕುರುಳಿಸುವ ಕೆಲಸ ಮಾಡಿಸಿರುವ ಪ್ರೀತಂಗೌಡ, ಎಚ್.ಡಿ. ರೇವಣ್ಣನಿಗೆ ಟಾಂಗ್ ನೀಡಿದ್ದಾರೆ.

ತಿರುಗಿ ಬೀಳ್ತಾರಾ ಜೆಡಿಎಸ್ ನಾಯಕರು
ತಾಲೂಕು ಕಚೇರಿಯನ್ನು ತೆರವುಗೊಳಿಸಿದ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ನಾಯಕರು ತಿರುಗಿ ಬೀಳುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಗೋಲಿಬಾರ್ ಆದರೂ ಕಟ್ಟಡ ಕೆಡವಲು ಬಿಡಲ್ಲ ಅಂತ ರೇವಣ್ಣ ಹೇಳಿದ್ದರು, ಆದರೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆ ಕಟ್ಟಡ ನೆಲಸಮ ಮಾಡಲಾಗಿದೆ. ವಿರೋಧ ನಡುವೆಯೂ ಶಾಸಕ ಪ್ರೀತಂಗೌಡ ಕಟ್ಟಡ ತೆರವುಗೊಳಿಸಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಮತ್ತೊಂದು ಅಸ್ತ್ರ ಪ್ರಯೋಗಿಸಿದ ಬಿಜೆಪಿ
ಜೆಡಿಎಸ್ ವಿರುದ್ಧ ಬಿಜೆಪಿ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ. ಎಚ್.ಡಿ. ರೇವಣ್ಣ ಮಾಲೀಕತ್ವದ ಕಲ್ಯಾಣ ಮಂಟಪದಿಂದ ರಾಜಕಾಲುವೆ ಪ್ರದೇಶ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ. ರಾಜಕಾಲುವೆ ಮೇಲ್ಛಾವಣಿ ಹಾಕಿ ಪಾರ್ಕಿಂಗ್ಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಓಡಾಡದಂತೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಬಿಜೆಪಿ ಶಾಸಕ ಪ್ರೀತಂಗೌಡಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗೆ ದೂರು ನೀಡಲು ಶಾಸಕರು ಸಲಹೆ ನೀಡಿದ್ದಾರೆ. ಮ್ಯೂಸಿಯಂ ಮಾಡುವುದಾಗಿ ಟ್ರಸ್ಟ್ ಹೆಸರಿಗೆ ಜಾಗ ಪಡೆದಿದ್ದರು, ಆದರೆ ಅದೇ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಒಟ್ಟಾರೆ ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ಹಾಸನದಲ್ಲಿ ಅಭಿವೃದ್ಧಿ ಹೆಸರಲ್ಲಿ ಪ್ರೀತಂ ಗೌಡ ಮತ್ತು ಎಚ್.ಡಿ. ರೇವಣ್ಣ ನಡುವಿನ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ನನ್ನ ಅಭಿವೃದ್ಧಿ ಕೆಲಸಕ್ಕೆ ರೇವಣ್ಣ ಬೇಕಂತಲೇ ಸಮಸ್ಯೆ ಮಾಡುತ್ತಿದ್ದಾರೆ ಅನ್ನುವುದು ಪ್ರೀತಂ ಗೌಡ ಆರೋಪವಾದರೆ, ಇದೆಲ್ಲ ಕೇವಲ ಹಣ ಮಾಡುವ ಕಾಮಗಾರಿ ಅನ್ನುವುದು ರೇವಣ್ಣ ಆರೋಪವಾಗಿದೆ.