ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಷಕ್ಕೊಮ್ಮೆ ದೇಗುಲ ಬಾಗಿಲು ತೆರೆವ ಹಾಸನಾಂಬೆ ದರ್ಶನಕ್ಕೆ ಜನಸಾಗರ

ಗುರುವಾರ(ಅ.20)ದಿಂದ ನವೆಂಬರ್ 1ರವರೆಗೆ ಅಂದರೆ ದೀಪಾವಳಿ ಹಬ್ಬದ ಬಲಿಪಾಡ್ಯಮಿ ಮಾರನೆ ದಿನದವರೆಗೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡುವುದರಿಂದ ಜನರು ದೇವಾಲಯದತ್ತ ಆಗಮಿಸುತ್ತಿದ್ದಾರೆ.

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಅಕ್ಟೋಬರ್ 21: ವರುಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುತ್ತಾ ಬರುತ್ತಿರುವ ಹಾಸನದ ಹಾಸನಾಂಬೆ ದರ್ಶನಕ್ಕೆ ಗುರುವಾರದಿಂದ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಮುಗಿ ಬೀಳುತ್ತಿದ್ದಾರೆ. ಸಕಲ ವಿಧಿ ವಿಧಾನಗಳನ್ನು ನೆರವೇರಿಸಿ, ಬಳಿಕ ದೇವಸ್ಥಾನದ ಮುಂದೆ ನೆಡಲಾಗಿದ್ದ ಬಾಳೆಕಂದನ್ನು ಕಡಿಯುವ ಮೂಲಕ ಬಾಗಿಲನ್ನು ತೆರೆದು, ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಸಚಿವ ಎ.ಮಂಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ವಿಧಾನ ಪರಿಷತ್ ಸದಸ್ಯ ಗೋಪಾಲಕೃಷ್ಣ, ಜಿಲ್ಲಾ ನ್ಯಾಯಾಧೀಶ ಆರ್.ಜೆ.ಸತೀಶ್ ಸಿಂಗ್, ಜಿಲ್ಲಾಧಿಕಾರಿ ವಿ.ಚೈತ್ರಾ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ಸೇರಿ ಹಲವರು ಈ ಸಂದರ್ಭದಲ್ಲಿದ್ದರು.

Hasanambe

ಗುರುವಾರ(ಅ.20)ದಿಂದ ನವೆಂಬರ್ 1ರವರೆಗೆ ಅಂದರೆ ದೀಪಾವಳಿ ಹಬ್ಬದ ಬಲಿಪಾಡ್ಯಮಿ ಮಾರನೆ ದಿನದವರೆಗೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡುವುದರಿಂದ ಜನರು ದೇವಾಲಯದತ್ತ ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.[ಅಕ್ಟೋಬರ್ 21ರಿಂದ ಭಕ್ತರಿಗೆ ಹಾಸನಾಂಬೆ ದರ್ಶನ ಭಾಗ್ಯ]

ಹೀಗೆ ಬಾಗಿಲು ತೆರೆದ ಬಳಿಕ ದೇವಾಲಯದಲ್ಲಿ ದೇವಿಗೆ ನಿತ್ಯ ಪೂಜೆ ನಡೆಯುತ್ತದೆ. ಬಳಿಕ ಬಲಿಪಾಡ್ಯಮಿ ಮಾರನೇ ದಿನ ಪೂಜಾ ಕೈಂಕರ್ಯವನ್ನು ನೆರವೇರಿಸಿ ದೇವರಿಗೆ ದೀಪ ಹಚ್ಚಿ, ದೇವಾಲಯ ಬಾಗಿಲನ್ನು ಹಾಕಲಾಗುತ್ತದೆ. ಮತ್ತೆ ಬಾಗಿಲನ್ನು ತೆರೆಯುವುದು ಮುಂದಿನ ವರ್ಷವೇ ಅಲ್ಲಿವರೆಗೂ ಗರ್ಭಗುಡಿಯಲ್ಲಿ ಹಚ್ಚಿದ ದೀಪ ಆರದೆ ಉರಿಯುತ್ತಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ, ಈ ಕುಂಭಗಳಿಗೆ ಹೆಣ್ಣು ದೇವತೆ ಮುಖವಾಡಗಳಿಂದ ಅಲಂಕರಿಸಿ, ಪೂಜಿಸುವುದನ್ನು ಕಾಣಬಹುದು. ಇನ್ನು ಹಾಸನದಲ್ಲಿ ನಿರ್ಮಾಣಗೊಂಡಿರುವ ದೇಗುಲ, ಜತೆಗೆ ಹಾಸನಾಂಬೆ ಹೇಗೆ ಪ್ರತಿಷ್ಠಾಪನೆಗೊಂಡಳು ಎಂಬುದನ್ನು ಇತಿಹಾಸದ ಪುಟಗಳಲ್ಲಿ ತಿರುವಿ ಹಾಕಿದರೆ, 12ನೇ ಶತಮಾನದಲ್ಲಿ ದೇವಾಲಯ ನಿರ್ಮಾಣವಾಗಿದ್ದು ಎಂದು ತಿಳಿದುಬರುತ್ತದೆ.

ಸಂಜೀವ ಕೃಷ್ಣಪ್ಪನಾಯಕ ಎಂಬ ಪಾಳೇಗಾರ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಒಮ್ಮೆ ಆತ ತೆರಳುತ್ತಿದ್ದಾಗ ದಾರಿಗೆ ಅಡ್ಡಲಾಗಿ ಮೊಲವೊಂದು ಬಂದು ಪಟ್ಟಣ ಪ್ರವೇಶಿಸಿತಂತೆ. ಇದು ಅಪಶಕುನವಿರಬಹುದೇ ಎಂಬ ಖಿನ್ನತೆ ಕಾಡತೊಡಗಿತು. ಆಗ ಆತನ ಕನಸಲ್ಲಿ ದೇವಿ ಕಾಣಿಸಿಕೊಂಡು, ಮೊಲ ಕಾಣಿಸಿದ ಜಾಗದಲ್ಲಿ ಕೋಟೆ ಕಟ್ಟುವಂತೆ ಆಜ್ಞೆ ಮಾಡಿದಳಂತೆ. ಅದರಂತೆ ಕೃಷ್ಣಪ್ಪನಾಯಕ ಅಲ್ಲಿ ಕೋಟೆ ಕಟ್ಟಿ, ಹಾಸನಾಂಬೆ ಎಂದು ಕರೆದು ದೇವಿಯನ್ನು ಪ್ರತಿಷ್ಠಾಪಿಸಿದನಂತೆ.

Hasanambe

ದಂತಕಥೆಯ ಪ್ರಕಾರ ದೈವಿಭಕ್ತೆಯಾಗಿದ್ದ ಸೊಸೆ ಧ್ಯಾನದಲ್ಲಿ ಮಗ್ನಳಾಗಿದ್ದ ಸಂದರ್ಭದಲ್ಲಿ ಅತ್ತೆ ಆಕೆಯ ತಲೆಗೆ ಚಂದ್ರಬಟ್ಟಲಿನಿಂದ ಕುಕ್ಕಿದ ಸಂದರ್ಭದಲ್ಲಿ ನೋವು ತಡೆಯಲಾರದ ಆಕೆ ತಾಯಿ ಹಾಸನಾಂಬೆ ಎಂದು ಕೂಗಿದಳಂತೆ. ಆಗ ತಾಯಿ ಪ್ರತ್ಯಕ್ಷಳಾಗಿ ನಿನ್ನ ಕಾವಲಿಗಾಗಿ ಈ ಸನ್ನಿಧಾನದಲ್ಲಿ ಕಾವಲಿರುತ್ತೇನೆ ಎಂದು ಕಲ್ಲಾಗಿ ನೆಲೆಸುವ ಮೂಲಕ ಅಭಯ ನೀಡಿದಳೆಂದೂ ಹೇಳಲಾಗುತ್ತದೆ.

ದೇವಸ್ಥಾನದ ಬಾಗಿಲು ತೆರೆದ ಬಳಿಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ರೀತಿ ಒಗ್ಗರಣೆ ಹಾಕುವಂತಿಲ್ಲ. ಇನ್ನು ಹಾಸನಾಂಬೆ ಸನ್ನಿಧಾನದಲ್ಲಿ ಸಪ್ತಮಾತೃಕೆಯರ ಪೈಕಿ ಕೌಮಾರಿ, ಮಹೇಶ್ವರಿಯರು ಹುತ್ತದ ರೂಪದಲ್ಲಿ ನೆಲೆಸಿದ್ದಾರೆ ಎಂಬ ಪ್ರತೀತಿಯೂ ಇದೆ.

ಹಾಸನಾಂಬಾ ದೇವಾಲಯದ ಆವರಣದಲ್ಲಿ ಸಿದ್ದೇಶ್ವರ ದೇವಾಲಯವಿದೆ. ದೇವಾಲಯದ ಪ್ರಾಂಗಣದಲ್ಲಿ ಕಳ್ಳಪ್ಪನ ಗುಡಿಯಿದೆ. ದೇವಿಯ ಒಡವೆ ಕದಿಯಲು ಬಂದ ಕಳ್ಳರು ಇಲ್ಲಿ ಕಲ್ಲಾದರಂತೆ. ಹೀಗೆ ಹಲವರು ಕಥೆಗಳು ಶಕ್ತಿದೇವತೆ ಹಾಸನಾಂಬೆ ಸುತ್ತ ಹುಟ್ಟಿಕೊಂಡಿರುವುದನ್ನು ಕೇಳಬಹುದು.

English summary
The Hasanamba temple opened on Thursday(October 20). Minister A.Manj, ZP president Shwetha Devaraj and others visited temple. This year temple festival held between October 20 and November 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X