• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನ: ಈವರೆಗೆ ಒಂದೂ ಕೊರೊನಾ ಕೇಸ್ ಪತ್ತೆಯಾಗಿಲ್ಲ; ಗ್ರಾಮದೇವರ ಶ್ರೀರಕ್ಷೆ ಎಂದ ಗ್ರಾಮಸ್ಥರು

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜನವರಿ 22: ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲಗೊಳಿಸಿದೆ. ಜನ ಕಿಲ್ಲರ್ ಕೋವಿಡ್ ಹೊಡೆತಕ್ಕೆ ನಲುಗಿ ಹೋಗಿದ್ದಾರೆ. ಅದೆಷ್ಟೋ ಮನೆಗಳು ಅನಾಥವಾಗಿವೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಇಲ್ಲಿಯವರೆಗೂ ಯಾರೊಬ್ಬರಿಗೂ ಕೊರೊನಾ ಕಾಣಿಸಿಕೊಂಡಿಲ್ಲ. ಇದಕ್ಕೆಲ್ಲ ನಮ್ಮ ಗ್ರಾಮ ದೇವರೇ ಕಾರಣ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಚಿಕ್ಕ ಎರಗನಾಳು ಗ್ರಾಮದಲ್ಲಿ ಮೊದಲ ಕೋವಿಡ್ ಅಲೆಯಿಂದ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿಲ್ಲ. ಗ್ರಾಮದಲ್ಲಿ ಸುಮಾರು 150 ಕುಟುಂಬ ಮತ್ತು 750 ಜನ ವಾಸವಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಗ್ರಾಮದ ಯಾರಿಗೂ ಕೊರೊನಾ ಭಯ ಎಂಬುದೇ ಇಲ್ಲ.

ಇಲ್ಲಿರುವ ಅನೇಕರು ಹೊರಗಡೆಗೆ ವ್ಯಾಪಾರ ವಹಿವಾಟಿಗೆ ಹೋಗಿ ಬರುತ್ತಾರೆ. ಮಕ್ಕಳೂ ಕೂಡ ಶಾಲಾ, ಕಾಲೇಜಿಗೆ ಹೋಗಿ ಬರುತ್ತಾರೆ. ಇದರ ಜೊತೆಯಲ್ಲೇ ಇಲ್ಲಿರುವ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಶನಿವಾರ ಹೊರಗಿನಿಂದಲೂ ದೇವರ ಪೂಜೆಗೆ ಜನರು ಬರುತ್ತಾರೆ. ನಿತ್ಯವೂ ನಾಲ್ಕೈದು ಸಾರಿಗೆ ಬಸ್‌ಗಳು ಓಡಾಡುತ್ತವೆ. ಆದರೂ ಯಾರಿಗೂ ಏನೂ ಆಗಿಲ್ಲ.

ಇಡೀ ಊರ ಮಂದಿ ಆರೋಗ್ಯವಾಗಿದ್ದಾರೆ. ಎಲ್ಲೆಡೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂಬ ಮಾತು ಮೊಳಗುತ್ತಿದೆ. ಆದರೆ ಈ ಊರಿನ ಬಹುತೇಕ ಮಂದಿ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಬಿಟ್ಟರೆ ಊರಿನಲ್ಲಿದ್ದಾಗ ಯಾರೂ ಮಾಸ್ಕ್ ಧರಿಸುವುದೇ ಇಲ್ಲ.

ಇಲ್ಲಿನ ಸರ್ಕಾರಿ ಶಾಲೆಯೂ ಚೆನ್ನಾಗಿ ನಡೆಯುತ್ತಿದೆ. ಈ ಬಗ್ಗೆ ಕೇಳಿದರೆ ನೋ ಮಾಸ್ಕ್, ನೋ ಕೊರೊನಾ ಎನ್ನುವ ಸ್ಥಳೀಯರು, ಮೊದಲೆರಡು ಅಲೆ ನಮ್ಮನ್ನು ಬಾಧಿಸಿಲ್ಲ, ಮೂರನೇ ಅಲೆ ಭಯವಿಲ್ಲ, ಡೆಲ್ಟಾ ಸೋಂಕಿಗೂ ಡೋಂಟ್ ಕೇರ್ ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ.

Hassan: No Covid Cases Reported in Chikka Eraganaalu Village

ನಮ್ಮೂರಿಗೆ ಕೊರೊನಾ ಸುಳಿಯದಿರಲು ಗ್ರಾಮ ದೇವರ ಮಹಿಮೆಯೇ ಕಾರಣ ಎಂಬುದು ಸ್ಥಳೀಯರ ಅಚಲವಾದ ನುಡಿ. ಶ್ರೀರಾಮಚಂದ್ರಸ್ವಾಮಿ ಬಸವನಪುರದಿಂದ ಇಲ್ಲಿಗೆ ಆಗಮಿಸಿದರು. ದೇವರ ಕೈ ಬರಹದಂತೆ 21 ಅಡಿ ಉದ್ದ, 19 ಅಡಿ ಅಗಲದ ದೇವಸ್ಥಾನ ನಿರ್ಮಿಸಲಾಗಿದೆ.

"ನಾಗರತ್ನಮ್ಮ ಎಂಬುವರು ಕಳೆದ ಎರಡು ವರ್ಷಗಳ ಹಿಂದೆ ದೇವಾಲಯ ಕಟ್ಟಿಸಿಕೊಟ್ಟರು. ರಾಮಚಂದ್ರಸ್ವಾಮಿ ಮಹಿಮೆ ನಿಜಕ್ಕೂ ವಿಶೇಷವಾದುದು. ಎಂಥಾ ಕಷ್ಟ ಕಾರ್ಪಣ್ಯಗಳು ಇಲ್ಲಿ ನಿವಾರಣೆಯಾಗುತ್ತವೆ. ಶ್ರೀರಾಮಚಂದ್ರನ ಜೊತೆಗೆ ಶನಿದೇವರು, ಮುತ್ತರಾಯಪ್ಪ ದೇವರೂ ಇಲ್ಲಿ ನೆಲೆಸಿವೆ. ಈ ದೇವರ ಕೃಪಾಕಟಾಕ್ಷದಿಂದಲೇ ನಮ್ಮೂರಿಗೆ ಕೊರೊನಾ ಸುಳಿದೇ ಇಲ್ಲ," ಎನ್ನುತ್ತಿದ್ದಾರೆ ಸ್ಥಳೀಯರು.


ಕೊರೊನಾ ಸೋಂಕಿನಿಂದ ಈವರೆಗೆ ಒಂದೇ ಒಂದು ಸಾವು ಸಂಭವಿಸಿಲ್ಲ. ಊರ ಮಂದಿಯೆಲ್ಲಾ ಆರೋಗ್ಯ, ನೆಮ್ಮದಿಯಿಂದ ಇದ್ದೇವೆ. ದೇವರ ದಯೆಯಿಂದ ಮಳೆ ಬೆಳೆಯೂ ಚೆನ್ನಾಗಿ ಆಗುತ್ತಿದೆ ಎಂದು ಸ್ಥಳೀಯರೊಬ್ಬರು ಭಕ್ತಿ, ಭಾವ ಪ್ರದರ್ಶಿಸುತ್ತಿದ್ದಾರೆ.

ಒಟ್ಟಾರೆ, ಜಗತ್ತೇ ಒಂದನೇ ಕೋವಿಡ್ ಅಲೆ, ಎರಡನೇ ಅಲೆ ಮತ್ತು ಮೂರನೇ ಅಲೆ ಎಂಬ ಭೀತಿಯಲ್ಲಿದೆ. ಆದರೆ ಹಾಸನ ಜಿಲ್ಲೆಯ ಎರಗನಾಳು ಗ್ರಾಮದಲ್ಲಿ ದೇವರಿದ್ದಾನೆ ಎಂಬ ನಂಬಿಕೆಯೋ, ಮೂಢನಂಬಿಕೆಯೋ ಅಥವಾ ದೇವರ ಆಶೀರ್ವಾದವೋ ಜನರನ್ನು ಕಾಯುತ್ತಿದೆ. ಇದೇ ನಂಬಿಕೆಯಲ್ಲೇ ನಮಗೇನು ಆಗುವುದಿಲ್ಲ ಎಂಬ ಆತ್ಮವಿಶ್ವಾಸವೂ ಇಲ್ಲಿಯವರೆಗೆ ಗ್ರಾಮಸ್ಥರನ್ನು ಕಾಪಾಡಿದೆ ಎನ್ನುವುದು ಮಾತ್ರ ನಿಜ.

English summary
No one Covid-19 cases reported in Chikka Eraganaalu Village of Hassan district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X