ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಜೆಡಿಎಸ್ ನಡೆಗೆ ರಾಷ್ಟ್ರೀಯ ಪಕ್ಷಗಳು ಸುಸ್ತು!

|
Google Oneindia Kannada News

ಹಾಸನ, ಡಿಸೆಂಬರ್ 3: ವಿಧಾನ ಪರಿಷತ್ ಚುನಾವಣೆ ಹಾಸನದಲ್ಲಿ ಜಿದ್ದಾಜಿದ್ದಿಯನ್ನು ಹುಟ್ಟು ಹಾಕಿದೆ. ದೇವೇಗೌಡರ ಕುಟುಂಬದ ಕುಡಿ, ಮಾಜಿ ಸಚಿವ ಎಚ್.ಡಿ. ರೇವಣ್ಣರವರ ಪುತ್ರ ಸೂರಜ್ ರೇವಣ್ಣ ಜೆಡಿಎಸ್‌ನಿಂದ ಆಯ್ಕೆ ಬಯಸಿ ಸ್ಪರ್ಧಿಸಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹಾಸನದಲ್ಲಿ ಎಚ್.ಡಿ. ರೇವಣ್ಣರವರ ಪ್ರಾಬಲ್ಯ ತುಸು ಹೆಚ್ಚು ಇರುವುದರಿಂದ ಮತ್ತು ಜೆಡಿಎಸ್ ಗ್ರಾಮ ಪಂಚಾಯತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಪುತ್ರ ಸೂರಜ್ ರೇವಣ್ಣನನ್ನು ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು. ಆ ಮೂಲಕ ತಮ್ಮ ಕುಟುಂಬ ರಾಜಕೀಯವಾಗಿ ಹಾಸನದಲ್ಲಿ ಹಿಡಿತ ಸಾಧಿಸಬಹುದೆಂಬ ಉದ್ದೇಶದಿಂದಲೇ ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಸೂರಜ್ ರೇವಣ್ಣರನ್ನು ಕಣಕ್ಕಿಳಿಸಿರುವುದು ಗುಟ್ಟಾಗಿ ಉಳಿದಿಲ್ಲ.

ಹಾಸನದಲ್ಲಿ ತಮ್ಮ ಹಿಡಿತ ಸಾಧಿಸುವ ಸಲುವಾಗಿ ಕಾಂಗ್ರೆಸ್ ಸರ್ವ ಪ್ರಯತ್ನ ನಡೆಸುತ್ತಿದ್ದರೂ ದೇವೇಗೌಡರ ಕುಟುಂಬದ ಮುಂದೆ ಮಂಡಿಯೂರುವಂತಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಎಚ್.ಡಿ. ರೇವಣ್ಣ ಕುಟುಂಬದಲ್ಲಿ ಪತ್ನಿ ಭವಾನಿ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ ಎಲ್ಲರೂ ರಾಜಕೀಯದಲ್ಲಿ ಅಧಿಕಾರ ಅನುಭವಿಸುತ್ತಲೇ ಇದ್ದಾರೆ. ಇದೀಗ ಸೂರಜ್‌ರನ್ನು ಕಣಕ್ಕಿಳಿಸಲಾಗಿದೆ.

 ಜೆಡಿಎಸ್ ವಿರುದ್ಧ ರಾಜಕೀಯ ವಿರೋಧಿಗಳ ಟೀಕೆ

ಜೆಡಿಎಸ್ ವಿರುದ್ಧ ರಾಜಕೀಯ ವಿರೋಧಿಗಳ ಟೀಕೆ

ಕುಟುಂಬ ರಾಜಕಾರಣದ ಬಗ್ಗೆ ದೇವೇಗೌಡರ ಕುಟುಂಬದ ಮೇಲೆ ಹಿಂದಿನಿಂದಲೂ ಟೀಕೆ ಆರೋಪಗಳು ಬರುತ್ತಲೇ ಇವೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತಲೇ ಬರುತ್ತಿದ್ದಾರೆ. ಹೀಗಾಗಿಯೇ ಜೆಡಿಎಸ್‌ನ್ನು ಅಪ್ಪ- ಮಕ್ಕಳ ಪಕ್ಷ ಎಂದು ರಾಜಕೀಯ ವಿರೋಧಿಗಳು ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಆದರೀಗ ಮೊಮ್ಮಕ್ಕಳು ರಾಜಕೀಯಕ್ಕೆ ಬಂದಿರುವುದರಿಂದ ಜೆಡಿಎಸ್ ಕುಟುಂಬದ ಪಕ್ಷವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಸದ್ಯಕ್ಕೆ ಕುಟುಂಬದ ನಾಯಕರನ್ನು ಹೊರತುಪಡಿಸಿ ಉಳಿದಂತೆ ಘಟಾನುಘಟಿ ನಾಯಕನೆಂದು ಗುರುತಿಸಿಕೊಳ್ಳುವುದಕ್ಕೆ ಒಬ್ಬನೇ ಒಬ್ಬ ನಾಯಕನು ಪಕ್ಷದಲ್ಲಿ ಕಾಣಿಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ದರೂ ಎಚ್.ಡಿ. ದೇವೇಗೌಡರು ಬಿಟ್ಟರೆ ಎಚ್.ಡಿ. ಕುಮಾರಸ್ವಾಮಿ ಅವರೇ ಮುಂದಾಳತ್ವ ವಹಿಸಿಕೊಳ್ಳಬೇಕಾಗುತ್ತದೆ. ಇನ್ನು ದೇವೇಗೌಡರ ಕುಟುಂಬದ ನಾಯಕರನ್ನು ಹೊರತುಪಡಿಸಿದರೆ ಮುಂದೆ ನಿಂತು ಪಕ್ಷವನ್ನು ಸಂಘಟಿಸುವ ನಾಯಕರು ಇಲ್ಲವೆಂದೇ ಹೇಳಬೇಕು.

ಹೀಗಾಗಿಯೇ ದೇವೇಗೌಡರು ಮೊಮ್ಮಕ್ಕಳನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಅಭ್ಯರ್ಥಿ ಸೂರಜ್ ರೇವಣ್ಣ ಪ್ರಚಾರ ನಡೆಸುತ್ತಿದ್ದಾರೆ. ಎಚ್.ಡಿ. ರೇವಣ್ಣನವರು ಹಾಸನಕ್ಕೆ ಸೀಮಿತರಾಗಿ ತನ್ನ ಮಗನನ್ನು ಗೆಲ್ಲಿಸಿಯೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದು, ಗೆಲುವಿಗೆ ಬೇಕಾದ ತಂತ್ರಗಳನ್ನು ಮಾಡುತ್ತಿದ್ದಾರೆ.

 ಕಾಂಗ್ರೆಸ್‌ನ್ನು ಕೆರಳಿಸಿದ ರೇವಣ್ಣರ ನಡೆ

ಕಾಂಗ್ರೆಸ್‌ನ್ನು ಕೆರಳಿಸಿದ ರೇವಣ್ಣರ ನಡೆ

ಆದರೆ, ರೇವಣ್ಣನವರ ತಂತ್ರಗಳು ಕಾಂಗ್ರೆಸ್ ಪಕ್ಷದ ನಾಯಕರನ್ನು ಕೆರಳಿಸುತ್ತಿದೆ. ಒಂದು ವೇಳೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆದ್ದು ಬಿಟ್ಟರೆ, ಮುಂದಿನ ದಿನಗಳಲ್ಲಿ ಹಾಸನದಲ್ಲಿ ಜೆಡಿಎಸ್ ಇನ್ನಷ್ಟು ಭದ್ರವಾಗಲಿದ್ದು, ಇದರಿಂದ ತಮಗೆ ತೊಂದರೆಯಾಗಲಿದೆ ಎಂಬ ಚಿಂತೆ ಕಾಂಗ್ರೆಸ್‌ನ್ನು ಕಾಡುತ್ತಿದೆ. ಹೀಗಾಗಿಯೇ ಒಂದಷ್ಟು ನಾಯಕರು ಹಾಸನಕ್ಕೆ ಆಗಮಿಸಿ ತಮ್ಮ ಅಭ್ಯರ್ಥಿ ಎಂ. ಶಂಕರ ಪರ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಪರ ಒಂದಷ್ಟು ನಾಯಕರು ಪ್ರಚಾರ ನಡೆಸುತ್ತಿದ್ದರೂ, ಜೆಡಿಎಸ್‌ನ ಎಚ್.ಡಿ. ರೇವಣ್ಣ ಅವರ ಪ್ರಚಾರ ಶೈಲಿ ರಾಷ್ಟ್ರೀಯ ಪಕ್ಷಗಳನ್ನು ಮಂಕು ಮಾಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುವ ಬದಲು ರೇವಣ್ಣ ವಿರುದ್ಧ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಿದೆ.

 ನೀತಿ ಸಂಹಿತೆ ಉಲ್ಲಂಘನೆ ಆರೋಪ

ನೀತಿ ಸಂಹಿತೆ ಉಲ್ಲಂಘನೆ ಆರೋಪ

ಹಾಸನ ಜಿಲ್ಲೆಯಲ್ಲಿ ಎಚ್.ಡಿ. ರೇವಣ್ಣ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ, ಸಂಸದ ಡಿ.ಕೆ. ಸುರೇಶ್ ತಮ್ಮ ನೇತೃತ್ವದಲ್ಲಿಯೇ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸ್ಥಾನಿಕ ಸಹಾಯಕ ಅಧಿಕಾರಿ ರೇಖಾರವರಿಗೆ ಮನವಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕರು ಇಷ್ಟಕ್ಕೆ ಸುಮ್ಮನಾಗುವಂತೆ ಕಾಣುತ್ತಿಲ್ಲ. ಮುಂದುವರೆದು ಎಚ್.ಡಿ. ರೇವಣ್ಣ ವಿರುದ್ಧ ರಣತಂತ್ರ ರೂಪಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೇಗಾದರೂ ಮಾಡಿ ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮುರಿಯಲೇಬೇಕೆಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅದಕ್ಕೊಸ್ಕರ ಬಿಜೆಪಿ ಶಾಸಕ ಪ್ರೀತಂಗೌಡರ ಬೆಂಬಲ ಪಡೆದರೂ ಅಚ್ಚರಿ ಪಡಬೇಕಾಗಿಲ್ಲ.

 ಜೆಡಿಎಸ್ ಸೋಲಿಸಲು ಡಿಕೆಎಸ್ ಕರೆ

ಜೆಡಿಎಸ್ ಸೋಲಿಸಲು ಡಿಕೆಎಸ್ ಕರೆ

ಮೊದಲಿನಿಂದಲೂ ದೇವೇಗೌಡರ ಕುಟುಂಬವನ್ನು ವಿರೋಧಿಸುತ್ತಲೇ ಬಂದಿರುವ ಪ್ರೀತಂ ಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೇವೇಗೌಡರ ಮನೆಗೆ ಭೇಟಿ ನೀಡಿದ್ದನ್ನು ಬಲವಾಗಿ ಖಂಡಿಸಿದ್ದರು. ಹೀಗಾಗಿ ಅವರ ಬೆಂಬಲವನ್ನು ಬಹಿರಂಗವಾಗಿಯೇ ಡಿ.ಕೆ. ಸುರೇಶ್ ಕೇಳಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ ಸ್ವತಃ ಜೆಡಿಎಸ್ ಶಾಸಕರಿಗೂ ಕಾಂಗ್ರೆಸ್‌ನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.

ಅತ್ತ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಗುಂಗಿನಲ್ಲಿದ್ದು, ಪಕ್ಷದ ಘಟಾನುಘಟಿ ನಾಯಕರನ್ನು ಕರೆಯಿಸಿಕೊಂಡು ಪ್ರಚಾರ ನಡೆಸಿದೆ. ಆದರೆ ಎಚ್.ಡಿ. ರೇವಣ್ಣ ಅವರ ಪ್ರಚಾರ ಕಾರ್ಯವೈಖರಿ ಮಾತ್ರ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಿದ್ದೆಗೆಡಿಸುವಂತೆ ಮಾಡಿದ್ದಂತು ನಿಜ.

Recommended Video

ಸಂಬಳ ಸಿಗದ ರಾಯಭಾರಿ ಮಾಡಿದ ಟ್ವೀಟ್ ನಿಂದ ಪಾಕಿಸ್ತಾನದ ಮಾನ‌ ಹರಾಜು | Oneindia Kannada

English summary
HD Revanna is devising strategies to win JDS candidate Suraj Revanna in the MLC elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X