ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ
ಹಾಸನ, ಫೆಬ್ರವರಿ 23: ಆನೆ, ಹುಲಿ, ಚಿರತೆ ದಾಳಿ ಸುದ್ದಿಗಳು ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನಶಿಸುತ್ತಿರುವ ಕಾಡು ಮಾನವ ಪ್ರಾಣಿಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಚಿರತೆ ನಾಯಿ ಹಿಡಿಯಲು ಬಂದು ಶೌಚಾಲಯದಲ್ಲಿ ಸಿಕ್ಕಿಕೊಂಡಿತ್ತು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಗದೆ ಅದು ಪರಾರಿಯಾಗಿತ್ತು.
ಚಿರತೆ ಜೊತೆ ವ್ಯಕ್ತಿಯ ಹೋರಾಟ; ಸೋಮವಾರ ಹಾಸನ ತಾಲೂಕಿನ ಅರಸೀಕೆರೆಯಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ಮಾಡಿತ್ತು. ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಚಿರತೆಗೂ ಗಂಭೀರ ಗಾಯಗಳಾಗಿದ್ದು, ಅದು ಮೃತಪಟ್ಟಿತ್ತು.
ಶೌಚಾಲಯದಿಂದ ಚಿರತೆ ಪರಾರಿ, ಜೀವ ಉಳಿಸಿಕೊಂಡ ನಾಯಿ!
ಬೆಂಡೇಕೆರೆ ತಾಂಡ್ಯದಲ್ಲಿ ಚಿರತೆ ಮೃತಪಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ದಯಾನಂದ್ ಮಾಹಿತಿ ನೀಡಿದ್ದಾರೆ. ತಾಯಿ, ಮಗ ಸೇರಿದಂತೆ ನಾಲ್ವರ ಮೇಲೆ ಈ ಚಿರತೆ ದಾಳಿ ಮಾಡಿತ್ತು. ಬೈರಗೊಂಡನಹಳ್ಳಿ ಬೋವಿ ಕಾಲೋನಿಯಲ್ಲಿ ಮಹಿಳೆ ಮತ್ತು ಆಕೆಯ ಪುತ್ರನ ಮೇಲೆ 2 ವರ್ಷದ ಹೆಣ್ಣು ಚಿರತೆ ದಾಳಿ ಮಾಡಿತ್ತು.
ಚಾಮರಾಜನಗರ; ಆನೆ ದಂತ ಹಿಡಿದು ಆಟವಾಡಿದ ಹಾಡಿಯ ಮಕ್ಕಳು
ಬೆಳಗ್ಗೆ ಜನರ ಮೇಲೆ ದಾಳಿ ಮಾಡಿದ್ದ ಚಿರತೆ ಪರಾರಿಯಾಗಿತ್ತು. ಸಂಜೆ ಪುನಃ ಬೆಂಡೇಕರೆ ತಾಂಡ್ಯ ಸಮೀಪ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿತ್ತು. ಈ ಸಮಯದಲ್ಲಿ ಚಿರತೆಯ ತಲೆಗೂ ಗಂಭೀರವಾದ ಪೆಟ್ಟಾಗಿತ್ತು. ಆದ್ದರಿಂದ, ಚಿರತೆ ಮೃತಪಟ್ಟಿದೆ.
ಚಿರತೆ ಗಣತಿ; 2018ರಲ್ಲಿ ಭಾರತದಲ್ಲಿ ಚಿರತೆ ಗಣತಿಯನ್ನು ಮಾಡಲಾಗಿದೆ. ದೇಶದಲ್ಲಿ 12,852 ಚಿರತೆಗಳಿವೆ. 3,421 ಚಿರತೆಗಳಿರುವ ಮಧ್ಯಪ್ರದೇಶ ರಾಜ್ಯ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಕರ್ನಾಟಕವಿದ್ದು, ರಾಜ್ಯದಲ್ಲಿ 1,783 ಚಿರತೆಗಳಿವೆ.
ಮಡಿಕೇರಿ; ನರಭಕ್ಷಕ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ
ಕಾಡಾನೆಗಳ ದಾಳಿ; ಮಡಿಕೇರಿಯಲ್ಲಿ ಶನಿವಾರ, ಭಾನುವಾರ ಹುಲಿ ಆತಂಕ ಮೂಡಿಸಿತ್ತು. ಇಬ್ಬರನ್ನು ಕೊಂದು ಹಾಕಿದ ನರಭಕ್ಷಕ ಹುಲಿಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಹುಲಿ ಸೆರೆ ಹಿಡಿಯಲಾಯಿತು. ಆದರೆ, ಅದೇ ನರಭಕ್ಷಕ ಹುಲಿ ಎಂಬುದು ಇನ್ನೂ ಖಚಿತವಾಗಿಲ್ಲ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಆನೆಗಳ ಹಾವಳಿ ವಿಪರೀತವಾಗಿದೆ. ಕಾಡಾನೆ ದಾಳಿಯಿಂದಾಗಿ ರೈತ ವೆಂಕಟೇಶಪ್ಪ(54) ಎಂಬುವವರು ಇಂದು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ-ಕರ್ನಾಟಕ ಗಡಿ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ.
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿಯೂ ಆನೆ ದಾಳಿಯಿಂದಾಗಿ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದ. ಎರಡು ದಿನದ ಹಿಂದೆ ಮೈಸೂರಿನಲ್ಲಿ ಆನೆ ರೈಲು ಕಂಬಿ ಬೇಲಿಯನ್ನು ದಾಟಲು ಪ್ರಯತ್ನ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಮಾನವ ಪ್ರಾಣಿ ಸಂಘರ್ಷ; ಕಾಡಿನಲ್ಲಿ ನೀರು, ಆಹಾರದ ಕೊರತೆ ಉಂಟಾಗಿರುವುದರಿಂದ ಪ್ರಾಣಿಗಳು ಜನವಸತಿ ಪ್ರದೇಶದತ್ತ ಆಗಮಿಸುತ್ತಿವೆ. ಇನ್ನು ಬೇಸಿಗೆ ಆರಂಭವಾದಾಗ ನೀರಿಗಾಗಿ ಅಲೆದಾಡುತ್ತಾ ಪ್ರಾಣಿಗಳು ನಾಡಿಗೆ ಬರುತ್ತವೆ.
ಗಣಿಗಾರಿಕೆ, ಅರಣ್ಯ ನಾಶ, ವಿವಿಧ ಪೈಪ್ ಲೈನ್ ಮಾರ್ಗಗಳು ಮುಂತಾದ ಯೋಜನೆಗಳಿಂದ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಕಾಡಿನಲ್ಲಿ ನಿರಾತಂಕವಾಗಿದ್ದ ಪ್ರಾಣಿಗಳ ವಾಸಸ್ಥಾನಕ್ಕೆ ಅಪಾಯ ಎದುರಾಗಿದೆ. ಇದರಿಂದಾಗಿ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ.