ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡ್ತೀನಿ; ಎಚ್.ಡಿ. ರೇವಣ್ಣ

|
Google Oneindia Kannada News

ಹಾಸನ, ಜನವರಿ 18: ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಎಚ್.ಡಿ. ರೇವಣ್ಣರನ್ನು ಫೋನ್ ಮೂಲಕ ಸಂಪರ್ಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಭಟನೆ ಕೈ ಬಿಡುವಂತೆ ಹೇಳಿದರು. ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ರೇವಣ್ಣ ಪ್ರತಿಭಟನೆ ಕೈಬಿಟ್ಟರು.

ಹೊಳೆನರಸೀಪುರ ತಾಲ್ಲೂಕಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳು ಬೇಕು ಎಂದು ರೇವಣ್ಣ ಅವರು ಪ್ರತಿಭಟನೆ ಮಾಡಿದರು. ಮಂಗಳವಾರ ಬೆಳಗ್ಗೆಯೇ ಗೃಹ ಕಚೇರಿಯಲ್ಲಿ ರೇವಣ್ಣ ಏಕಾಂಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಕೈ ಬಿಟ್ಟ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ. ರೇವಣ್ಣ, ಕುಮಾರಸ್ವಾಮಿ ಅವರಿದ್ದ ಕಾಲದಲ್ಲಿ ಹೊಳೆನರಸೀಪುರ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್ ( M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ) ಗೆ ಮೈಸೂರು ವಿವಿಯಿಂದ ಅನುಮತಿ ಕೊಡಲಾಗಿತ್ತು. ಆದರೆ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ್ ಇದನ್ನು ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲಾ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದರು.

HD Revanna Protest Against Karnataka Govt Discrimination over Post Graduate Courses in Holenarisipura

ಓದುವ ಕಾಲೇಜಿಗೆ ರಾಜಕೀಯ ಏಕೆ?
ಕಾಮಗಾರಿಗಳು ನಿಂತುಕೊಳ್ಳಲಿ, ಆದರೆ ಬಡವರು ಓದುವ ಕಾಲೇಜು ಏಕೆ ನಿಲ್ಲಿಸಬೇಕು? ಸರ್ಕಾರ ಮೂಲಭೂತ ಸೌಕರ್ಯಗಳನ್ನು ಕೊಡದಿದ್ದರೂ ನಾವು ಕಾಲೇಜುಗಳ ಅಭಿವೃದ್ಧಿ ಮಾಡಿದ್ದೇವೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಏಕೆ ರಾಜಕೀಯ ಮಾಡಬೇಕು? ಎಂದು ಆಕ್ರೋಶ ಹೊರ ವ್ಯಕ್ತಪಡಿಸಿದರು.

ಉಪನ್ಯಾಸಕರಿಗೆ ನಾನೇ ಸಂಬಳ ಕೊಡ್ತೀನಿ
ಉದ್ದೇಶ ಪೂರ್ವಕವಾಗಿ ನೀಡಿರುವ ಅನುಮತಿಯನ್ನು ಉನ್ನತ ಶಿಕ್ಷಣ ಸಚಿವರು ತಿರಸ್ಕಾರ ಮಾಡಿದ್ದಾರೆ. ನಮ್ಮ ‌ಮಕ್ಕಳು ಈ ಕಾಲೇಜಿನಲ್ಲಿ ಓದುವುದಿಲ್ಲ. ಸರ್ಕಾರ ಪಾಪರ್ ಬಿದ್ದದ್ದರೆ ನಾನೇ ಉಪನ್ಯಾಸಕರಿಗೆ ಸಂಬಳ ಕೊಡ್ತೀನಿ. ಮೈಸೂರು ವಿವಿ‌ ಮತ್ತು ಪ್ರಧಾನ ಕಾರ್ಯದರ್ಶಿಗಳು ಒಪ್ಪಿಗೆ ಕೊಟ್ಟು ಸಚಿವರು ಯಾಕೆ ಅನುಮತಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಖಾಸಗಿ ಕಾಲೇಜಿಗೆ ಅನುಮತಿ ಕೊಡಲು ಆಗುತ್ತದೆ. ಆದರೆ ಬಡವರ ಮಕ್ಕಳ ಕಾಲೇಜಿಗೆ ಅನುಮತಿ ಏಕೆ ಕೊಡುತ್ತಿಲ್ಲ? ನಾನೇ ಶಿಕ್ಷಕರಿಗೆ ಸಂಬಳ ಕೊಡುತ್ತೇನೆ. ಕೆಲವರಿಗೆ 300- 400 ಕೋಟಿ ನಿಯಮ ಮೀರಿ ಕೊಟ್ಟಿದ್ದಾರೆ. ನಾನು ಮಾತಾಡಿದರೆ ಎಲ್ಲೋ ಹೋಗುತ್ತೆ ಎಂದು ಗಂಭೀರ ಆರೋಪ ಮಾಡಿದರು.

HD Revanna Protest Against Karnataka Govt Discrimination over Post Graduate Courses in Holenarisipura

ಕಾನೂನು ಬಾಹಿರವಾಗಿ ಹಣ ಕೊಟ್ಟಿದ್ದಾರೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸಮಸ್ಯೆ ಸರಿ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಸಮಸ್ಯೆ ಪರಿಹಾರ ಮಾಡುವ ಭರವಸೆ ಇದೆ. ಸರಕಾರಕ್ಕೆ ಸಂಬಳ ಕೊಡಲು ಸಾಧ್ಯವೇ ಇಲ್ಲ ಅಂದರೆ, ನನ್ನ ಸ್ವಂತ ಹಣದಲ್ಲಿ ಸಂಬಳ ಕೊಡ್ತೀವಿ. ಬಡವರ ಮಕ್ಕಳು ಓದಲಿ ಬಿಡಿ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ. ಆದರೆ ನಾನು ಅ ಬಗ್ಗೆ ಮಾತಾಡಲ್ಲ. ನಮ್ಮ ಭಾಗಕ್ಕೆ ಅ ಕೋರ್ಸ್‌ಗೆ ಅನುಮತಿ ಕೊಡಬೇಕು ಎಂದು ರೇವಣ್ಣ ಆಗ್ರಹಿಸಿದರು.

ಸಿಎಂ ದೂರವಾಣಿ ಕರೆ ಮಾಡಿ ಶುಕ್ರವಾರ ಸಮಸ್ಯೆ ಪರಿಹಾರ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ಇವತ್ತು ವಾಪಸ್ ಹೋಗುತ್ತಿದ್ದೇನೆ. ಸಿಎಂ ಮೇಲೆ ನನಗೆ ನಂಬಿಕೆ ಇದೆ ಎಂದರು. ಜನವರಿ 14ರಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಸ್ನಾತಕೋತ್ತರ ಪದವಿ ಕೋರ್ಸ್‌ಗಾಗಿ ಮಂಗಳವಾರ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.

ರಾಜಕೀಯ ಬಣ್ಣ ಸರಿಯಲ್ಲ:

ರಾಜ್ಯದ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕಬೇಕೆನ್ನುವುದೇ ಸರಕಾರದ ಸಂಕಲ್ಪವಾಗಿದೆ. ಈ ವಿಷಯದಲ್ಲಿ ವ್ಯವಸ್ಥೆಯ ಸುಧಾರಣೆಯ ಕಡೆಗೆ ಆದ್ಯತೆ ಕೊಡಬೇಕೇ ವಿನಾ ವೈಯಕ್ತಿಕ ಪ್ರತಿಷ್ಠೆಯಿಂದ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಧರಣಿಗೆ ಮುಂದಾಗಿದ್ದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತ್ಯುತ್ತರ ಕೊಟ್ಟಿದ್ದಾರೆ.

ತಾವು ಪ್ರತಿನಿಧಿಸುತ್ತಿರುವ ಹೊಳೆನರಸೀಪುರದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಫುಡ್ & ನ್ಯೂಟ್ರಿಷನ್ ವಿಷಯಗಳಲ್ಲಿ ಎಂ.ಎಸ್ಸಿ ಪದವಿ ಆರಂಭಿಸಲು ಉನ್ನತ ಶಿಕ್ಷಣ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆಂದು ಆರೋಪಿಸಿ ರೇವಣ್ಣ ಅವರು ಮುಖ್ಯಮಂತ್ರಿಗಳ ಗೃಹಕಚೇರಿ ಎದುರು ಧರಣಿ ನಡೆಸಲು ಮಂಗಳವಾರ ಮುಂದಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಸಚಿವರು ಮೇಲ್ಕಂಡಂತೆ ಮಾರುತ್ತರ ಕೊಟ್ಟರು.

HD Revanna Protest Against Karnataka Govt Discrimination over Post Graduate Courses in Holenarisipura

ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇನ್ನೂ 8-10 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಕಾಲೇಜೂ ಇಲ್ಲ. ಈಗಿರುವ ಕಾಲೇಜುಗಳಲ್ಲೇ ಮೂಲಸೌಲಭ್ಯ, ಪ್ರಯೋಗಾಲಯ ಮತ್ತು ಸಿಬ್ಬಂದಿ ಕೊರತೆ ತೀವ್ರವಾಗಿದೆ. ಮೂಲಸೌಲಭ್ಯ ಸುಧಾರಣೆಗೆ 3,000 ಕೋಟಿ ರೂ. ಅಗತ್ಯವಿದೆ. ಜತೆಗೆ, ಈಗಿರುವ ಸ್ನಾತಕೋತ್ತರ ಕೇಂದ್ರಗಳನ್ನೇ ಸುಧಾರಿಸಬೇಕಾದ ತುರ್ತಿದೆ. ಹೀಗಾಗಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎರಡು ವರ್ಷಗಳಿಂದ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ಅನುಮತಿ ನೀಡುತ್ತಿಲ್ಲ. ಸ್ವತಃ ಸಚಿವರಾಗಿ ಅನುಭವವಿರುವ ರೇವಣ್ಣನವರಿಗೆ ಇದು ಗೊತ್ತಿಲ್ಲವೇ?' ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಹೊಳೆನರಸೀಪುರ ಕ್ಷೇತ್ರವೊಂದರಲ್ಲೇ 8 ಸರಕಾರಿ ಪ್ರಥಮ ದರ್ಜೆ, 6 ಸ್ನಾತಕೋತ್ತರ, 3 ಪಾಲಿಟೆಕ್ನಿಕ್, 1 ಸರಕಾರಿ ಎಂಜಿನಿಯರಿಂಗ್ ಮತ್ತು ಐದು‌ ಐಟಿಐ ಕಾಲೇಜುಗಳಿವೆ. ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳಿಗೆ 65.40 ಕೋಟಿ ರೂ. ಮತ್ತು ಸಾಧನ-ಸಲಕರಣೆಗಳ ಖರೀದಿಗೆ 93.26 ಲಕ್ಷ ರೂ.ಗಿಂತ ಹಣ ಕೊಡಲಾಗಿದೆ. ಇಲ್ಲಿನ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಗೆ 84 ಕೋಟಿ ರೂ. ಹಾಗೂ ಸಾಧನ-ಸಲಕರಣೆಗಳಿಗೆಂದು 1.80 ಕೋಟಿ ರೂ. ಕೊಡಲಾಗಿದೆ. ಅಂದಮೇಲೆ, ತಾರತಮ್ಯದ ಪ್ರಶ್ನೆ ಎಲ್ಲಿ ಬಂತು?' ಎಂದು ಅವರು ಅಂಕಿಅಂಶಗಳ ಸಮೇತ ಉತ್ತರಿಸಿದರು.

ಸ್ನಾತಕೋತ್ತರ ಕೋರ್ಸುಗಳು ವಿಶ್ವವಿದ್ಯಾಲಯದ ಮಟ್ಟದಲ್ಲೇ ಇರುವುದು ಶೈಕ್ಷಣಿಕವಾಗಿ ಒಳ್ಳೆಯದು. ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟಗಳಲ್ಲಿ ಒಬ್ಬರೇ ಬೋಧಕರಿದ್ದರೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಸಚಿವರು ಪ್ರತಿಪಾದಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇರುವ 9 ಸಾವಿರ ತರಗತಿಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮಾಡಲಾಗಿದೆ. ಉಳಿದ 6,500 ಕೊಠಡಿಗಳನ್ನೂ ಸ್ಮಾರ್ಟ್ ಕ್ಲಾಸ್ ರೂಮ್ ಮಾಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ' ಎಂದು ಅವರು ಹೇಳಿದರು.

English summary
Former Ministrer HD Revanna Protest Against Karnataka govt discrimination over Post Graduate Courses in Holenarisipura taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X