• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

39 ಮಂಗಗಳ ಮಾರಣಹೋಮ ಪ್ರಕರಣಕ್ಕೆ ಟ್ವಿಸ್ಟ್: ಐವರು ಪೊಲೀಸ್ ವಶಕ್ಕೆ

|
Google Oneindia Kannada News

ಹಾಸನ, ಆಗಸ್ಟ್ 02: ಪ್ರಾಣಿಗಳ ಮೇಲೆ ಮನುಷ್ಯನ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದ್ದ ಹಾಸನ ಜಿಲ್ಲೆಯ 39 ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವು ಪಡೆದುಕೊಂಡಿದೆ.

39 ಮಂಗಗಳ ಮಾರಣಹೋಮ ಮಾಡಿ ನಂತರ ಚೀಲದಲ್ಲಿ ತುಂಬಿ ನಡು ರಸ್ತೆಯಲ್ಲಿ ಬೀಸಾಡಿದ್ದ ಪ್ರಕರಣವನ್ನು ಮೂರೇ ದಿನದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಹಳ್ಳಿ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಹಾಸನ ತಾಲೂಕಿನ ಉಗನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು ಹಾಗೂ ಮಂಗಗಳನ್ನು ಸೆರೆ ಹಿಡಿದಿದ್ದ ಯಶೋಧ ಮತ್ತು ರಾಮು ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಯಶೋಧ ಮತ್ತು ರಾಮು ದಂಪತಿ, "ಬೆಳೆ ಹಾನಿ ಮಾಡುತ್ತಿವೆ ಎಂದು ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ ಕೋತಿಗಳ ಸೆರೆಗೆ 40 ಸಾವಿರ ರೂ.ಗೆ ಗುತ್ತಿಗೆ ನೀಡಿದ್ದರು,'' ಎಂದು ತಿಳಿಸಿದ್ದಾರೆ.

"ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಆಹಾರದ ಆಸೆ ತೋರಿಸಿ ಜುಲೈ 28 ರಂದು 50ಕ್ಕೂ ಹೆಚ್ಚು ಕೋತಿಗಳನ್ನು ಚೀಲದಲ್ಲಿ ಬಂಧಿಸಿಟ್ಟಿದ್ದ ಯಶೋಧ ಹಾಗೂ ರಾಮು, ನಂತರ ಅವುಗಳನ್ನು ಸ್ಥಳಾಂತರ ಮಾಡುವಾಗ 39 ಮಂಗಗಳು ಉಸಿರುಗಟ್ಟಿ ಮೃತಪಟ್ಟಿವೆ,'' ಎಂದು ತಿಳಿಸಿದ್ದಾರೆ.

ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 39 ಕೋತಿಗಳನ್ನು ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಮನವಿ ಮಾಡಿದ್ದ ಜಮೀನಿನ ಮಾಲೀಕರು, ಕೋತಿ ಸೆರೆಹಿಡಿದ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ ಸೇರಿ, ಒಟ್ಟು 5 ಜನರನ್ನು ಹಾಸನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಳೆ(ಮಂಗಳವಾರ) ಹೈಕೋರ್ಟ್‌ಗೆ ವರದಿ ನೀಡಬೇಕಿದ್ದ ಹಿನ್ನೆಲೆಯಲ್ಲಿ ತ್ವರಿತ ತನಿಖೆ ನಡೆಸಿದ್ದ ಪೊಲೀಸರು ವಶಕ್ಕೆ ಪಡೆದ ಎಲ್ಲರನ್ನು ಬಂಧಿಸಿ ಇಂದು (ಸೋಮವಾರ) ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

39 ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಮಾನ ಕೈಗೊಂಡು, ಪ್ರಕರಣದ ವಿಚಾರಣೆಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಹಾಸನದ ಚೌಡನಹಳ್ಳಿಯಲ್ಲಿ ಮಂಗಗಳ ಮಾರಣಹೋಮ ನಡೆದಿರುವ ಕುರಿತು ಇಂತಹ ಅಮಾನವೀಯ ಕೃತ್ಯಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

Hassan 39 Monkeys Killing Case; Police Arrest 5 Accused

ಮಂಗಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ, ಎಸ್​ಪಿ, ಆರ್​ಎಫ್ಒರನ್ನು ಪ್ರತಿವಾದಿಯಾಗಿಸಲು ಹೈಕೋರ್ಟ್ ಸೂಚನೆ ನೀಡಿತ್ತು. ""ಕಾಡಿನ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಮಂಗಗಳನ್ನು ಬರ್ಬರವಾಗಿ ಹತ್ಯೆಗೈದಿರುವುದು ಆಘಾತಕಾರಿ. ಇಲ್ಲಿ ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದೆ ಸ್ಪಷ್ಟ ಉಲ್ಲಂಘನೆ ಆಗಿದೆ. ಮಂಗಗಳ ಹಾವಳಿಯನ್ನೂ ಘನತೆಯಿಂದ ನಿಯಂತ್ರಿಸಬೇಕು,'' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಅಲ್ಲದೆ, ಮಂಗಗಳನ್ನು ಕೊಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಿ, ಆಗಸ್ಟ್ 4ರ ಒಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓಕಾ, ನ್ಯಾಯಮೂರ್ತಿ ಸಂಜಯ್ ಗೌಡರವರ ಪೀಠ ಆದೇಶ ಹೊರಡಿಸಿತ್ತು.

ಕನಿಷ್ಠ ಮಾನವೀತೆಯನ್ನೂ ಮರೆತು ಮೂಕ ಪ್ರಾಣಿಗಳನ್ನು ಕೊಂದು, ಕ್ರೂರವಾಗಿ ವರ್ತಿಸಿದ್ದರು. 39 ಮಂಗಗಳನ್ನು ಕೊಂದು ಚೀಲದಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ ನಡೆದಿತ್ತು. ಸ್ಥಳೀಯರು ರಾತ್ರಿ 10 ಗಂಟೆ ಸಮಯದಲ್ಲಿ ಓಡಾಡುತ್ತಿರುವಾಗ ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಚೀಲವೊಂದು ಬಿದ್ದಿರುವುದು ಗಮನಕ್ಕೆ ಬಂದಿತ್ತು. ಪ್ರಾಣಿಗಳ ಕಿರುಚಾಟವೂ ಕೇಳತೊಡಗಿತ್ತು.

ಹಾಸನ ಜಿಲ್ಲೆಯಲ್ಲಿ ಮಂಗಗಳ ಮಾರಣಹೋಮ ಪ್ರಕರಣದಲ್ಲಿ ಎಂತಹ ಪ್ರಭಾವಿಗಳಿದ್ದರೂ ಬಿಡಬೇಡಿ, ಶೀಘ್ರವಾಗಿ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂದು ತನಿಖಾಧಿಕಾರಿ ಎಸ್‌ಐಗೆ ಹಾಸನ ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದರು. ಎಲ್ಲಿ? ಹೇಗೆ? ಮತ್ತು ಯಾರು? ಮಂಗಗಳ ಹತ್ಯೆ ಮಾಡಿರಬಹುದು ಎಂಬುದನ್ನು ಬೇಗನೆ ಪತ್ತೆ ಮಾಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ತನಿಖಾಧಿಕಾರಿಗೆ ನಿರ್ದೇಶನ ನೀಡಿದ್ದರು.

   Weather Forecast : ಹವಾಮಾನ ಇಲಾಖೆಯಿಂದ ಭಾರಿ ಮಳೆ ಸೂಚನೆ! | Oneindia Kannada

   39 ಕೋತಿಗಳ ಮಾರಣಹೋಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕರ್ನಾಟಕ ಹೈಕೋರ್ಟ್, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್. ಗಿರೀಶ್ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ತಾಕೀತು ಮಾಡಿದ್ದರು. ಸ್ಥಳೀಯರಿಂದ ಮಾಹಿತಿ ಪಡೆಯಬೇಕು, ಕೋತಿಗಳ ಹಾವಳಿ ಇದ್ದ ಕಡೆ ಖುದ್ದು ಹೋಗಿ ತನಖೆ ನಡೆಸಬೇಕು ಎಂದು ಸೂಚನೆ ನೀಡಿದ್ದ ಜಿಲ್ಲಾಧಿಕಾರಿ, ಘಟನೆ ಹಿಂದೆ ಯಾರೇ ಇದ್ದರೂ ಬಿಡಬಾರದು ಎಂದು ಹೇಳಿದ್ದರು.

   ರಾತ್ರೋರಾತ್ರಿ ಕಾರಿನಲ್ಲಿ ತುಂಬಿಕೊಂಡು ರಸ್ತೆಯಲ್ಲಿ ಮಂಗಗಳನ್ನು ತುಂಬಿ ಬಿಸಾಡಿದಾಗ ಚೀಲದ ಗಂಟು ಬಿಚ್ಚಿ ನೋಡುವಷ್ಟರಲ್ಲಿ 30ಕ್ಕೂ ಹೆಚ್ಚು ಮಂಗಗಳು ಬಲಿಯಾಗಿದ್ದವು. ಇನ್ನು ಕೆಲವು ಗಂಭೀರ ಸ್ಥಿತಿಯಲ್ಲಿದ್ದು ಕಿರುಚಾಡುತ್ತಿದ್ದವು. 15ಕ್ಕೂ ಹೆಚ್ಚು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. 30 ಮಂಗಗಳ ಹತ್ಯೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

   English summary
   39 Monkeys Killing Case In Hassan; Police Arrest 5 Accused.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X