ಹಾಸನಾಂಬೆಯ ದರ್ಶನೋತ್ಸವಕ್ಕೆ ತೆರೆ
ಹಾಸನ, ನವೆಂಬರ್ 16: ಹಾಸನ ನಗರದ ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವಕ್ಕೆ ಸೋಮವಾರ ಮಧ್ಯಾಹ್ನ ತೆರೆ ಬೀಳಲಿದೆ.
ಹಾಸನಾಂಬೆಯ ದೇಗುಲದ ಬಾಗಿಲನ್ನು ಇದೇ ನವೆಂಬರ್ 5ರಿಂದ ತೆರೆಯಲಾಗಿತ್ತು. ವರ್ಷಕ್ಕೊಮ್ಮೆ ಬಾಗಿಲು ತೆರೆದು 12 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯದೊಂದಿಗೆ ತಾಯಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು.
ಹಾಸನದಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಕೊರೊನಾ ಅಡ್ಡಿ!
ಆದರೆ ಈ ಬಾರಿ ಕೊರೊನಾದಿಂದಾಗಿ ಅದಕ್ಕೆ ಅವಕಾಶವಿಲ್ಲದಾಗಿದೆ. ಕೊರೊನಾ ಸೋಂಕಿನ ಕಾರಣವಾಗಿ ಈ ಬಾರಿ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆನ್ ಲೈನ್ ನಲ್ಲಷ್ಟೇ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಸನ ನಗರದ 10 ಕಡೆ ಎಲ್ಇಡಿ ಪರದೆ ಅಳವಡಿಕೆ ಮಾಡಿದ್ದು, ಅಲ್ಲಿ ಭಕ್ತರು ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಬಾಗಿಲು ತೆರೆದ ಮೊದಲ ದಿನ ಹಾಗೂ ಕೊನೆ ದಿನ ಜನಪ್ರತಿನಿಧಿಗಳು, ವಿಶೇಷ ಗಣ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದಕ್ಕೆ ಸಾರ್ವಜನಿಕರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
ಆದರೆ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಶನಿವಾರ ಹಾಗೂ ಭಾನುವಾರ ಸಾರ್ವಜನಿಕರಿಗೂ ಅವಕಾಶವನ್ನು ನೀಡಲಾಯಿತು. ನ.16ರ ಸೋಮವಾರ ಮಧ್ಯಾಹ್ನ ಉತ್ಸವಕ್ಕೆ ತೆರೆಬೀಳಲಿದ್ದು, ಮಂಗಳವಾರ ಗರ್ಭಗುಡಿಯ ಬಾಗಿಲನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಮುಚ್ಚಲಾಗುತ್ತದೆ.