ಹಾಸನದಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಕೊರೊನಾ ಅಡ್ಡಿ!
ಹಾಸನ, ನವೆಂಬರ್ 5: ಪ್ರತಿ ವರ್ಷದಂತೆ ಈ ಬಾರಿಯೂ ಹಾಸನದ ಹಾಸನಾಂಬ ದೇವಿಯ ದೇಗುಲದ ಬಾಗಿಲು ಗುರುವಾರ (ನ.5) ದಿಂದ ತೆರೆಯಲಾಗಿದೆ. ವರ್ಷಕ್ಕೊಮ್ಮೆ ಬಾಗಿಲು ತೆರೆದು 12 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯದೊಂದಿಗೆ ತಾಯಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಅದಕ್ಕೆ ಅವಕಾಶವಿಲ್ಲದಾಗಿದೆ.
ಆದರೂ ಆದಿದೇವಿ ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ಹಾಸನ ನಗರದ ಪ್ರಮುಖ ರಸ್ತೆಗಳೆಲ್ಲಾ ವಿದ್ಯುತ್ ದೀಪಗಳೊಂದಿಗೆ ರಾರಾಜಿಸುತ್ತಿದ್ದರೆ, ದೇವಾಲಯದ ಆವರಣದಲ್ಲಿ ದೇವರ ಚಿತ್ರಗಳು, ಆನೆ, ಕಾಮಧೇನು ಹಾಗೂ ಹೂವಿನ ಅಲಂಕಾರ ಮಾಡಿರುವುದು ನಗರಕ್ಕೆ ಕಳೆಗಟ್ಟಿದೆ.
ನ.5ಕ್ಕೆ ಹಾಸನಾಂಬ ದೇಗುಲ ಓಪನ್; ದೇವಾಲಯಕ್ಕೆ ಒಡವೆ ರವಾನೆ

ಆಹ್ವಾನಿತರಿಗೆ ಮಾತ್ರ ಹಾಸನಾಂಬೆ ದರ್ಶನ
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಆಹ್ವಾನಿತರಿಗೆ ಮಾತ್ರ ದೇವಾಲಯ ಪ್ರವೇಶ ನೀಡಿ, ಸಾರ್ವಜನಿಕರಿಗೆ ನಿಷೇಧ ಮಾಡಲಾಗಿದೆ. ದೇವರ ದರ್ಶನ ಪೂಜಾ ಕೈಂಕರ್ಯಗಳನ್ನು ನಗರದ ಮುಖ್ಯ ಸ್ಥಳಗಳಲ್ಲಿ ಪರದೆಯಲ್ಲಿ ತೋರಿಸುವ ಕಾರ್ಯವಾಗುತ್ತಿದೆ. ಇದು ಹನ್ನೆರಡು ದಿನಗಳ ಕಾಲವೂ ನಡೆಯಲಿದೆ. ಜತೆಗೆ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕವೂ ನೇರಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇನ್ನು ಮೊದಲ ಹಾಗೂ ಕಡೆಯ ದಿನ ಕೇವಲ ಜನಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಇರಲಿದೆ.

ವರ್ಷಕ್ಕೊಮ್ಮೆ ದೇವಿಯ ನೋಡಲು ಅವಕಾಶ
ಹಾಗೆ ನೋಡಿದರೆ ಹಾಸನಾಂಬ ದೇವಿಯ ದರ್ಶನ ವರ್ಷಕ್ಕೊಮ್ಮೆ ಮಾತ್ರ ಸಿಗುತ್ತದೆ. ದೇಗುಲದ ಬಾಗಿಲನ್ನು ಪ್ರತಿವರ್ಷ ಆಶ್ವೀಜ ಮಾಸ ಪೂರ್ಣಿಮೆಯ ನಂತರ ಬರುವ ಗುರುವಾರದಂದು ತೆಗೆದು ದೀಪಾವಳಿಯ ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲನ್ನು ಮುಚ್ಚಲಾಗುತ್ತದೆ. ದೇವಸ್ಥಾನದ ಬಾಗಿಲನ್ನು ಮುಚ್ಚುವಾಗ ಹಚ್ಚಿದ್ದ ದೀಪ ಮತ್ತೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೆ ಗರ್ಭಗುಡಿಯಲ್ಲಿ ಆರದೆ ಉರಿಯುತ್ತಿರುತ್ತದೆ ಎಂಬ ನಂಬಿಕೆ ಈಗಲೂ ಇದೆ.

ಬಾಳೆ ಕಂದು ಕಡಿದು ದೇಗುಲ ಪ್ರವೇಶ
ಇನ್ನು ದೇವಿಯ ಬಾಗಿಲನ್ನು ತೆರೆಯುವಾಗ ಮತ್ತು ಮುಚ್ಚುವ ದಿನ ವಿಧಿ ವಿಧಾನದಂತೆ ಪೂಜಾ ಕೈಂಕರ್ಯಗಳು ನಡೆಯುವುದನ್ನು ನಾವು ಕಾಣಬಹುದಾಗಿದೆ. ದೇವಾಲಯದ ಬಾಗಿಲು ತೆರೆಯುವ ದಿನದಂದು ಮೊದಲಿಗೆ ತಳವಾರ ಮನೆತನದವರು ದೇಗುಲದ ಬಳಿ ನೆರೆಯುತ್ತಾರೆ. ನಂತರ ದೇವಿಯ ಗರ್ಭಗುಡಿಯ ಮುಂದೆ ಬಾಳೆಕಂದನ್ನು ಅರಸು ಮನೆತನದವರು ನೆಟ್ಟು ಹಾಸನಾಂಬೆಯನ್ನು ಪ್ರಾರ್ಥಿಸಿ ಬಳಿಕ ಬಾಳೆಕಂದನ್ನು ಕತ್ತರಿಸುವುದರೊಂದಿಗೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ.
ಹಾಸನಾಂಬೆ ದೇಗುಲದ ಬಾಗಿಲು ತೆರೆದ ನಂತರ ಮೊದಲ ದಿನದಂದು ತಾಯಿ ಹಾಸನಾಂಬೆಗೆ ಯಾವುದೇ ರೀತಿಯ ಆಭರಣಗಳನ್ನು ಧರಿಸುವ ಸಂಪ್ರದಾಯವಿಲ್ಲ. ಆದರೆ ಎರಡನೆಯ ದಿನ ಜಿಲ್ಲಾ ಖಜಾನೆಯಿಂದ ದೇವಿಯ ಆಭರಣ, ವಸ್ತ್ರಗಳನ್ನು ಪಲ್ಲಕಿಯಲ್ಲಿ ತಂದು ಅಲಂಕರಿಸಿ ಪೂಜೆ ಮಾಡಿ ನೈವೇದ್ಯ ಅರ್ಪಿಸಲಾಗುವುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಈ ಕುಂಭಗಳಿಗೆ ಹೆಣ್ಣು ದೇವತೆಯಂತೆ ಮುಖವಾಡಗಳನ್ನು ಮಾಡಿ ಅಲಂಕರಿಸುವುದು ಇಲ್ಲಿನ ವಿಶೇಷತೆಯಾಗಿದೆ.

ಹಾಸನಾಂಬೆ ಪ್ರತಿಷ್ಠಾಪನೆಯಾಗಿದ್ದು ಹೇಗೆ?
ಸಾಮಾನ್ಯವಾಗಿ ಎಲ್ಲ ದೇಗುಲ ಮತ್ತು ಅಲ್ಲಿ ಪ್ರತಿಷ್ಠಾಪನೆಯಾಗಿರುವ ದೇವರ ಕುರಿತಂತೆ ಕಥೆಗಳು ಪ್ರಚಲಿತದಲ್ಲಿರುತ್ತವೆ. ಅದರಂತೆ ಹಾಸನಾಂಬೆ ಕುರಿತಂತೆ ದಂತಕಥೆಯೊಂದು ಇದೆ. ಅದು ಏನೆಂದರೆ ಸದಾ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದ ಸೊಸೆ ದೇವಿಯ ಮುಂದೆ ಮಂಡಿಯೂರಿ ತನ್ನ ನೋವನ್ನು ತೋಡಿಕೊಳ್ಳುತ್ತಾ ದೇವಿಯನ್ನು ಪ್ರಾರ್ಥಿಸುತ್ತಿದ್ದಳಂತೆ. ಒಮ್ಮೆ ಪ್ರತಿದಿನವೂ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಸೊಸೆಯ ಮೇಲೆ ಅನುಮಾನಗೊಂಡ ಅತ್ತೆ ಸೊಸೆಯನ್ನು ಹಿಂಬಾಲಿಸಿ ಬಂದಳಂತೆ.
ಈ ವೇಳೆ ಸೊಸೆ, ದೇವಿಯ ಮುಂದೆ ಪ್ರಾರ್ಥಿಸುತ್ತಿದ್ದದ್ದು ಕಂಡು ಬಂದಿತಂತೆ. ಇದರಿಂದ ಕೋಪಗೊಂಡ ಅತ್ತೆ ನಿನಗೆ ಮನೆಯ ಕೆಲಸಕ್ಕಿಂತ ಈ ದೇವಿಯ ಪ್ರಾರ್ಥನೆ ಜಾಸ್ತಿ ಆಯಿತಾ ಎಂದು ಕೋಪದಿಂದ ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದು ಧ್ಯಾನದಲ್ಲಿದ್ದ ಸೊಸೆಯ ಮೇಲೆ ಕುಕ್ಕಿದಳಂತೆ. ಈ ವೇಳೆ ಸೊಸೆ ನೋವು ತಾಳಲಾರದೆ ಹಾಸನಾಂಬೆ ಎಂದು ಚೀರಿದಳಂತೆ. ಸೊಸೆಯ ಕಷ್ಟ ನೋಡಲಾರದೆ ಮತ್ತು ಆಕೆಯ ಭಕ್ತಿಗೆ ಮೆಚ್ಚಿ ದೇವಿಯೇ ಪ್ರತ್ಯಕ್ಷಳಾಗಿ ನಿನ್ನ ಕಾವಲಿಗೆ ನಾನಿರುವುದಾಗಿ ವಾಗ್ದಾನ ಮಾಡಿ ಕಲ್ಲಾಗಿ ನೆಲೆಸಿದಳೆಂಬ ಕಥೆಯೂ ಪ್ರಚಲಿತದಲ್ಲಿದೆ.