ಅಸನಿ ಚಂಡಮಾರುತ; ಹಾಸನದಲ್ಲಿ ತುಂತುರು ಮಳೆ
ಹಾಸನ ಮೇ 11; ಅಸನಿ ಚಂಡಮಾರುತ ಪರಿಣಾಮ ಹಾಸನ ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗುತ್ತಿದೆ. ಕಳೆದ ರಾತ್ರಿಯಿಂದ ಬಿಟ್ಟು ಬಿಟ್ಟು ಬರುತ್ತಿರುವ ಜಿಟಿ ಜಿಟಿ ಮಳೆಗೆ ಜನರು ಪರಿತಪಿಸುತ್ತಿದ್ದಾರೆ.
ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಮಂಗಳವಾರ ತಡರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ತೆರಳುವವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ.
ಹಾಸನ ಪಟ್ಟಣ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಬುಧವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಮನೆಯಿಂದ ಹೊರಗೆ ಬರಲು ಛತ್ರಿಯ ಮೊರೆ ಹೋಗುವುದು ಅನಿವಾರ್ಯವಾಗಿದೆ. ಬುಧವಾರ ಬೆಳಗ್ಗೆಯಿಂದ ಮಳೆ ಬಿರುಸಾಗಿ ಸುರಿದ ಪರಿಣಾಮ ಹಾಲು, ಪೇಪರ್, ತರಕಾರಿ, ದಿನಸಿ ಖರೀದಿಸಲು ಹೊರಟ ಜನರು ಛತ್ರಿಯ ಹುಡುಕಾಟದಲ್ಲಿ ತೊಡಗಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಮಳೆಯ ಪ್ರಭಾವದಿಂದ ಕೂಲಿ ಕೆಲಸಕ್ಕೆ ಹೊರಟಿದ್ದ ಜನರು ಕಾದು ಕೂರುವಂತಾಗಿದೆ. ಮುಂಜಾನೆ 5.45ರ ಸುಮಾರಿಗೆ ಸದ್ದು ಗದ್ದಲ ಇಲ್ಲದೇ ಮಳೆ ಶುರುವಾಗಿದ್ದು, ಜನರು ಮನೆಯಲ್ಲೇ ಉಳಿಯುವಂತಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುವಾರ ಕುಸಿತದಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಹಾಸನ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮಳೆಯಿಂದಾಗಿ ವಿದ್ಯುತ್ ಸರಬರಾಜು ಕೂಡ ಸ್ಥಗಿತವಾಗಿದ್ದು, ಜನರು ಪರದಾಡಿದರು.
ರೈತರಲ್ಲಿ ಆತಂಕ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಕಳೆದ 24 ಗಂಟೆಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಸಕಲೇಶಪುರ, ಆಲೂರು, ಹಾಸನ, ಬೇಲೂರು, ಅರಕಲಗೂಡಿನಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಕಂಡು ಬಂದಿದೆ.
ಭಾರೀ ಮಳೆಯಿಂದಾಗಿ ಬೆಳೆದು ನಿಂತ ಬೆಳೆಗಳಿಗೆ ಹಾನಿ ಉಂಟಾಗಿದೆ. ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ತಗ್ಗು ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.