ಜೆಇಇ ಪರೀಕ್ಷೆಯಲ್ಲಿ ಶೇ.99.80ರಷ್ಟು ಅಂಕ ಪಡೆದವರು ಪೊಲೀಸ್ ವಶಕ್ಕೆ
ಗುವಾಹಟಿ, ಅಕ್ಟೋಬರ್.29: ಅಸ್ಸಾಂನಲ್ಲಿ ಜೆಇಇ ಪರೀಕ್ಷೆ ಬರೆಯುವುದಕ್ಕೆ ತನ್ನ ಬದಲಿಗೆ ಬೇರೊಬ್ಬ ಅಭ್ಯರ್ಥಿಯನ್ನು ಕಳುಹಿಸುವ ಮೂಲಕ ವಂಚಿಸಿದ ಆರೋಪಿ ನೀಲ ನಕ್ಷತ್ರ ದಾಸ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಗುವಾಹಟಿಯ ಅಜರ್ ಪೊಲೀಸ್ ಠಾಣೆಯಲ್ಲಿ ಮಿತ್ರದೇವ್ ಶರ್ಮಾ ಎಂಬುವವರು ಅಭ್ಯರ್ಥಿ ನೀಲ ನಕ್ಷತ್ರ ದಾಸ್ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನನ್ವಯ ಮುಖ್ಯ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದರು.
ರಾಜ್ಯಕ್ಕೆ ಫಸ್ಟ್ ಬಂದವನ ಕಥೆ: ಜೆಇಇ ಬರೆದಿದ್ಯಾರೋ, ಪಾಸ್ ಆಗಿದ್ಯಾರೋ?
ಬಂಧಿತ ಆರೋಪಿಗಳನ್ನು ಗುರುವಾರ ಗುವಾಹಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡರು. ಪೊಲೀಸರ ಮನವಿಗೆ ಸಮ್ಮತಿಸಿದ ಕೋರ್ಟ್, ಮುಂದಿನ ಐದು ದಿನಗಳ ಕಾಲ ಎಲ್ಲ ಐದೂ ಮಂದಿ ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ.
ಜೆಇಇ ಪರೀಕ್ಷೆಗೇ ಹಾಜರಾಗಿಲ್ಲ ಅಭ್ಯರ್ಥಿ:
ಜೆಇಇ ಪರೀಕ್ಷೆಯಲ್ಲಿ ಶೇ.99.80ರಷ್ಟು ಅಂಕ ಗಳಿಸಿದ ಅಸ್ಸಾಂ ಮೂಲದ ಅಭ್ಯರ್ಥಿ ನೀಲ ನಕ್ಷತ್ರ ದಾಸ್ ಮುಖ್ಯ ಪರೀಕ್ಷೆಗೆ ಹಾಜರಾಗಿರಲಿಲ್ಲ. ಕಳೆದ ಸಪ್ಟೆಂಬರ್.05ರಂದು ನಡೆದ ಜೆಇಇ ಮುಖ್ಯ ಪರೀಕ್ಷೆ ಸಂದರ್ಭದಲ್ಲಿ ತಮ್ಮ ಬದಲಿಗೆ ಬೇರೊಬ್ಬರನ್ನು ಕೂರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ಆರೋಪಿಸಲಾಗಿದೆ.
ಕಳೆದ ಅಕ್ಟೋಬರ್.23ರಂದು ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅಭ್ಯರ್ಥಿಯು ಭಾರಿ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಮುಖ್ಯ ಪರೀಕ್ಷೆಗೆ ತಮ್ಮ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕೂರಿಸಿದ ಬಗ್ಗೆ ಮುಖ್ಯ ಅಭ್ಯರ್ಥಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಗುವಾಹಟಿ ಪಶ್ಚಿಮ ವಿಭಾಗದ ಹೆಚ್ಚುವರಿ ಡಿಸಿಪಿ ಸುಪ್ರೋತಿವ್ ಲಾಲ್ ಬರುಹಾ ತಿಳಿಸಿದ್ದಾರೆ.
ನಕಲಿ ಅಭ್ಯರ್ಥಿಗಾಗಿ 15 ರಿಂದ 20 ಲಕ್ಷ ಖರ್ಚು:
ಜೆಇಇ ಪರೀಕ್ಷೆಯಲ್ಲಿ ತನ್ನ ಮಗ ಉತ್ತೀರ್ಣರಾಗಬೇಕು ಎಂಬ ಕಾರಣಕ್ಕೆ ವೈದ್ಯರಾಗಿರುವ ಅವರ ತಂದೆಯು 15 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಅಭ್ಯರ್ಥಿಯ ತಂದೆ, ಅವರಿಗೆ ಸಹಾಯ ಮಾಡಿದ ಮೂವರು ವ್ಯಕ್ತಿಗಳು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿತ್ತು.