ಅಸ್ಸಾಂ: 22 ವರ್ಷಗಳ ಹೋರಾಟದ ನಂತರ ಭಾರತೀಯ ಪ್ರಜೆ ಎಂದು ಘೋಷಣೆ
ಗುವಾಹಟಿ ಮೇ 12: ತಾನು ಭಾರತೀಯ ಪ್ರಜೆ ಎಂಬುದನ್ನು ಸಾಬೀತುಪಡಿಸಲು 83 ವರ್ಷದ ವೃದ್ಧೆಯೊಬ್ಬರು ನಡೆಸಿದ ಸುಧೀರ್ಘ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ.
ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ನಿವಾಸಿಯಾಗಿರುವ ಅಕೋಲ್ ರಾಣಿ ನಾಮಸಮುದ್ರ ಅವರನ್ನು ಸಿಲ್ಚಾರ್ನ ಫಾರಿನರ್ಸ್ ಟ್ರಿಬುನಲ್ ಬುಧವಾರದಂದು ಭಾರತೀಯ ಪ್ರಜೆ ಎಂದು ಘೋಷಿಸಿದೆ.
ದಾಖಲೆಗಳ ನೀಡಿದ ಹೊರತಾಗಿಯೂ ಅಕೋಲ್ ರಾಣಿ ಅವರ ಪುತ್ರ ಅರ್ಜುನ್ ನಾಮಸಮದ್ರನನ್ನು ಫಾರಿನರ್ಸ್ ಟ್ರಿಬುನಲ್ ವಿದೇಶಿ ಪ್ರಜೆ ಎಂದು ಘೋಷಿಸಿತು. ಈ ಹಿನ್ನೆಲೆಯಲ್ಲಿ ಇದರಿಂದ ನೊಂದು 2012ರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ತನ್ನ ಪುತ್ರ ಯಾವ ದಾಖಲೆಗಳನ್ನು ಸಲ್ಲಿಸಿದ್ದರೋ ಅದೇ ದಾಖಲೆಯನ್ನು ಸಲ್ಲಿಸಿರುವ ತಾಯಿಯನ್ನು ಇದೀಗ ಭಾರತೀಯ ಪ್ರಜೆ ಎಂದು ಘೋಷಿಸಲಾಗಿದೆ.
2014ರ ಲೋಕಸಭಾ ಚುನಾವಣೆ ಸಂದರ್ಭದ ಪ್ರಚಾರ ಅಭಿಯಾನದಲ್ಲಿ ಅಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಅರ್ಜುನ್ ನಾಮಸಮದ್ರ ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪಿಸಿದ್ದರು.
ಅಸ್ಸಾಂನ ಕ್ಯಾಚಾರ್ನಲ್ಲಿ2014ರ ಫೆಬ್ರವರಿ 23ರಂದು ನಡೆದ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, "ಅರ್ಜುನ್ ತನಗಾಗಿ ತಾನು ಮರಣ ಹೊಂದಿಲ್ಲ. ಬದಲಾಗಿ ನಿರಾಶ್ರಿತರ ಕ್ಯಾಂಪ್ಗಳಲ್ಲಿ ಇರುವ ಲಕ್ಷಾಂತರ ನಾಗರಿಕರ ಹಕ್ಕಿಗಾಗಿ ಮಡಿದಿದ್ದಾರೆ. ಅವರಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ,'' ಎಂದು ಹೇಳಿದ್ದರು.
ಇದಾದ ನಂತರ ಅನೇಕ ಬಿಜೆಪಿ ನಾಯಕರು ಅಕೋಲ್ ರಾಣಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
"ಅಕೋಲ್ ರಾಣಿ ನಾಮಸಮುದ್ರ ಅವರು ಸಮರ್ಥ, ವಿಶ್ವಾಸರ್ಹ ಮತ್ತು ಸ್ವೀಕಾರಾರ್ಹ ಪುರಾವೆಗಳನ್ನು ಸಲ್ಲಿಸುವ ಮೂಲಕ ತಾವು ಭಾರತೀಯ ಪ್ರಜೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾನೂನಿಕ ಪ್ರಕಾರ 01.01.1996ರ ಮೊದಲಿನಿಂದಲೇ ತಾವು ಭಾರತೀಯ ನೆಲದಲ್ಲಿ ಮತ್ತು ಅಸ್ಸಾಂ ರಾಜ್ಯದಲ್ಲಿ ನೆಲಸಿದ್ದ ಬಗ್ಗೆ ಪುರಾವೆಗಳನ್ನು ಒಗದಿಸುವ ಮೂಲಕ ಯಶಸ್ವಿಯಾಗಿ ಸಾಬೀತುಪಡಿಸಿದ್ದಾರೆ. ಹಾಗಾಗಿ ನಾವು ಅಕೋಲ್ ರಾಣಿ ನಾಮಸಮುದ್ರ ಅವರನ್ನು ಭಾರತೀಯ ಪ್ರಜೆ ಎಂದು ಘೋಷಿಸಿದ್ದೇವೆ,'' ಎಂದು ಫಾರಿನರ್ಸ್ ಟ್ರಿಬುನಲ್ನ ಸದಸ್ಯ ಧರ್ಮೇಂದ್ರ ದೇಬ್ ತಿಳಿಸಿದ್ದಾರೆ.
22 ವರ್ಷಗಳ ಹಿಂದೆ ಮೊದಲ ಬಾರಿಗೆ ಅಸ್ಸಾಂ ಗಡಿ ರಕ್ಷಾಣಾ ಪಡೆಯ ಪೊಲೀಸರು, ಅಕೋಲ್ ರಾಣಿ ಅವರ ನಾಗರೀಕತ್ವದ ಬಗ್ಗೆ ಪ್ರಶ್ನಿಸಿದ್ದರು. ನಂತರ 2013ರಲ್ಲಿ ಇದೇ ರೀತಿಯ ಪ್ರಕರಣದಲ್ಲಿಆಕೆಯ ಪುತ್ರಿ ಅಂಜಲಿ ರಾಯ್ ಪುರಾವೆಗಳನ್ನು ಒದಗಿಸುವ ಮೂಲಕ ತಾನು ಭಾರತೀಯ ಪ್ರಜೆ ಎಂಬುದನ್ನು ಸಾಬೀತುಪಡಿಸಿದ್ದರು.
2022ರ ಫೆಬ್ರವರಿ 23ರಂದು, ತನ್ನ ಗುರುತನ್ನು ಸಾಬೀತುಪಡಿಸುವಂತೆ ಅಕೋಲ್ ರಾಣಿ ಅವರಿಗೆ ಸಿಲ್ಚಾರ್ ಫಾರಿನರ್ಸ್ ಟ್ರಿಬುನಲ್ ನೋಟಿಸ್ ಜಾರಿಗೊಳಿಸಿತು. 1965, 1970 ಸೇರಿದಂತೆ ಚುನಾವಣೆ ನಡೆದ ವರ್ಷಗಳಲ್ಲಿ ತನ್ನ ಹೆಸರು ಇರುವ ಅಸ್ಸಾಂ ಮತದಾರರ ಪಟ್ಟಿಯ ದಾಖಲೆಗಳನ್ನು ಸಲ್ಲಿಸಿದ್ದರು.