• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಿರಾರು ಮಕ್ಕಳ ಬದುಕು ಕಟ್ಟಿಕೊಟ್ಟ 'ಸಂತ ಶಿಕ್ಷಕ' ಬಿಜಿ ಅಣ್ಣಿಗೇರಿ ಇನ್ನಿಲ್ಲ

|

ಗದಗ, ಸೆಪ್ಟೆಂಬರ್ 6: ಇಡೀ ದೇಶದ ಶಿಕ್ಷಣ ವಲಯ ಗುರುವಾರ ಶಿಕ್ಷಕರ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ರಾಜ್ಯದ ಗದಗಿನ ಜನತೆ ಆಘಾತಕ್ಕೆ ಒಳಗಾಗಿದ್ದರು. ಗುರು ಎಂದರೆ ಹೇಗಿರಬೇಕು ಎಂಬುದನ್ನು ತಮ್ಮ ಕಾರ್ಯದ ಮೂಲಕ ತೊರಿಸಿಕೊಟ್ಟು, ಇಡೀ ಸಮಾಜಕ್ಕೆ ಮಾದರಿಯಾದ ಜೀವವೊಂದು ಶಿಕ್ಷಕರ ದಿನದಂದೇ ಕಣ್ಮರೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಜನ್ಮದಿನವನ್ನೇ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತಿದೆ. ಹಾಗೆಯೇ ಗದಗದಲ್ಲಿ ಸಾವಿರಾರು ಮಕ್ಕಳಿಗೆ ತಮ್ಮ ಹಣದಿಂದ ಬದುಕು ಕಟ್ಟಿಕೊಟ್ಟವರು ಬಿ.ಜಿ. ಅಣ್ಣಿಗೇರಿ. ಈ ಕಾರಣಕ್ಕಾಗಿಯೇ ಅವರನ್ನು ಗದಗಿನ ಸರ್ವಪಲ್ಲಿ ರಾಧಾಕೃಷ್ಣನ್ ಎಂದೇ ಕರೆಯಲಾಗುತ್ತಿತ್ತು. ವಿಚಿತ್ರ ಮತ್ತು ದುಃಖದ ಸಂಗತಿಯೆಂದರೆ 'ಗದಗಿನ ಸರ್ವಪಲ್ಲಿ ರಾಧಾಕೃಷ್ಣನ್' ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದೇ ನಮ್ಮನ್ನು ಅಗಲಿದ್ದಾರೆ.

ಶಿಕ್ಷಕ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದವರು ಬಿಜಿ ಅಣ್ಣಿಗೇರಿ ಮೇಷ್ಟ್ರು. ಅವರಿಂದ ವಿದ್ಯೆಯ ಜತೆಗೆ ಆಶ್ರಯ-ಆಹಾರ ಕೊಟ್ಟ ಮಹಾನ್ ಚೇತನ ಅವರು. ಅವರ ಅಗಲುವಿಕೆಗೆ ಶಿಕ್ಷಣ ಕ್ಷೇತ್ರವೇ ಕಂಬನಿ ಮಿಡಿಯುವ ಗಳಿಗೆಯಿದು.

ಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕ

'ಸಂತ ಶಿಕ್ಷಕ' ಎಂದೇ ಖ್ಯಾತರಾಗಿದ್ದ ಬಸವಂತಪ್ಪ ಗುರಪ್ಪ ಅಣ್ಣಿಗೇರಿ (89) ಅವರು ಅನಾರೋಗ್ಯದಿಂದ ಗುರುವಾರ ಸಂಜೆ 5.30ರ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು. ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಉಚಿತವಾಗಿ ಮನೆಪಾಠ ಮಾಡುವ ಮೂಲಕ ಅವರು ಸಾವಿರಾರು ಮಕ್ಕಳ ಬದುಕಿಗೆ ದಾರಿದೀಪವಾಗಿದ್ದರು. ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಆಶ್ರಮದ ಆವರಣದಲ್ಲಿ ನಡೆಯಲಿದೆ.

ಸಂಪಾದಿಸಿದ ಹಣವೆಲ್ಲ ಮಕ್ಕಳ ಶಿಕ್ಷಣಕ್ಕೆ

ಸಂಪಾದಿಸಿದ ಹಣವೆಲ್ಲ ಮಕ್ಕಳ ಶಿಕ್ಷಣಕ್ಕೆ

ಬಿ.ಜಿ. ಅಣ್ಣಿಗೇರಿ ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮುದೇನಗುಡಿ ಎಂಬ ಗ್ರಾಮದಲ್ಲಿ 1930ರ ಜುಲೈ 23ರಂದು ಜನಿಸಿದ್ದರು. ಅವರು 1954ರಲ್ಲಿ ಗದಗದ ಮಾಡೆಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದರು. ಆಗಿನಿಂದಲೇ ಅವರು ಬಡಮಕ್ಕಳಿಗೆ ಉಚಿತ ಮನೆಪಾಠ ಹೇಳಿಕೊಡಲು ಆರಂಭಿಸಿದ್ದರು. ಬಳಿಕ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಅವಿವಾಹಿತರಾಗಿದ್ದ ಅವರು 1988ರಲ್ಲಿ ನಿವೃತ್ತರಾದ ಬಳಿಕವೂ ತಮ್ಮ ವೃತ್ತಿಯ ಮಹತ್ವವನ್ನು ಮರೆತಿರಲಿಲ್ಲ. ಮೂರೂವರೆ ದಶಕಗಳ ಕಾಲ ಅವರು ಪಿಂಚಣಿ ಹಣವನ್ನು ಮಕ್ಕಳಿಗೆ ಮನೆಪಾಠ ಹೇಳಲು ವಿನಿಯೋಗಿಸಿದ್ದರು.

69 ವರ್ಷ ಉಚಿತ ಮನೆಪಾಠ

69 ವರ್ಷ ಉಚಿತ ಮನೆಪಾಠ

ತಮ್ಮ ಸೇವಾವಧಿಯಲ್ಲಿ ಸಂಪಾದಿಸಿದ ಹಣವನ್ನೆಲ್ಲ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಬಳಸಿದ್ದರು. ನಿವೃತ್ತಿ ನಂತರ ಕೂಡ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. ಸುಮಾರು 69 ವರ್ಷ ಈ ಸೇವೆಯನ್ನು ಅವರು ನಡೆಸಿದ್ದರು. ಗದಗದ ವಕಾರ ಸಾಲಿನ ಆಶ್ರಮವೊಂದರಲ್ಲಿ ಬಡಮಕ್ಕಳಿಗೆ ಮನೆಪಾಠ ಹೇಳಿಕೊಡುವ ಮೂಲಕ ಮಾದರಿಯ ಸೇವೆ ಸಲ್ಲಿಸಿದ್ದರು. ಅವರ ಸಾವಿನ ಸುದ್ದಿಕೇಳಿ ಅವರ ಆಶ್ರಯದಲ್ಲಿದ್ದ ಮಕ್ಕಳು ಕಣ್ಣೀರಿಟ್ಟರು. ದೇಶ ವಿದೇಶಗಳಲ್ಲಿರುವ ಅವರ ಶಿಷ್ಯಂದಿರೂ ತಮಗೆ ಬದುಕಿನ ದಾರಿ ತೋರಿಸಿದ ನಿಸ್ವಾರ್ಥಿ ಗುರುವಿನ ಅಗಲುವಿಕೆಯಿಂದ ದುಃಖತಪ್ತರಾದರು.

ಎಲ್ಲ ವಿಷಯಗಳಲ್ಲೂ ಬೋಧನೆ

ಎಲ್ಲ ವಿಷಯಗಳಲ್ಲೂ ಬೋಧನೆ

ಈ ಆದರ್ಶ ಮಹನೀಯರ ಕಾರ್ಯ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಜನರ ಪಾಲಿಗೆ ಅವರು ಕೇವಲ ಶಿಕ್ಷಕರಾಗಿರಲಿಲ್ಲ. ಬಿ.ಜಿ. ಅಣ್ಣಿಗೇರಿ ಅವರ ಹೆಸರಿನಲ್ಲಿ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮಿ ಅವರು ಟ್ರಸ್ಟ್ ಒಂದನ್ನು ಸ್ಥಾಪಿಸಿ ಅವರ ಶಿಷ್ಯರ ಬಳಗದಿಂದಲೇ ದೇಣಿಗೆ ಸಂಗ್ರಹಿಸಿ ಬಡ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಯೋಜನೆ ಆರಂಭಿಸಿದ್ದು ಇದಕ್ಕೆ ಸಾಕ್ಷಿ. ಅವರ ಮನೆಯಲ್ಲಿಯೇ ಮಕ್ಕಳು ವಾಸಿಸುತ್ತಾ ವಿದ್ಯೆ ಕಲಿಯುತ್ತಿದ್ದರು. ಆರಂಭದಲ್ಲಿ 80-100 ವಿದ್ಯಾರ್ಥಿಗಳು ಅವರ ಆಶ್ರಯದಲ್ಲಿದ್ದರು. ಪ್ರಸ್ತುತ 30 ಮಕ್ಕಳು ಅಲ್ಲಿದ್ದಾರೆ. ಗಣಿತ, ಸಂಸ್ಕೃತ, ಇಂಗ್ಲಿಷ್, ಸಮಾಜ- ಹೀಗೆ ಎಲ್ಲ ವಿಷಯಗಳನ್ನೂ ಅವರು ಕಲಿಸುತ್ತಿದ್ದರು.

ಗೌರವ, ಪ್ರಚಾರದಿಂದ ದೂರ

ಗೌರವ, ಪ್ರಚಾರದಿಂದ ದೂರ

ಬಿ.ಜಿ. ಅಣ್ಣಿಗೇರಿ ಮಾಸ್ತರ ಕಾರ್ಯವನ್ನು ಸರ್ಕಾರ ಕೂಡ ಗುರುತಿಸಿತ್ತು. 2000ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2015ರಲ್ಲಿ ನರೇಗಲ್‌ನಲ್ಲಿ ನಡೆದಿದ್ದ ರೋಣ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಸೇವೆಗೆ ಗೌರವ, ಸನ್ಮಾನಗಳು ಸಂದರೂ ಮಾಸ್ತರು ಅವುಗಳಿಂದ ದೂರವೇ ಉಳಿಯುತ್ತಿದ್ದರು. ತಾವು ಸಂಪಾದಿಸಿದ್ದೆಲ್ಲವನ್ನು ಸಮಾಜದ ಏಳಿಗೆಗಾಗಿಯೇ ವಿನಿಯೋಗಿಸಿದರೂ ಅದಕ್ಕೆ ಪ್ರತಿಫಲವನ್ನು ನಿರೀಕ್ಷಿಸಿರಲಿಲ್ಲ. ತಮ್ಮ ಕಾರ್ಯಕ್ಕೆ ಪ್ರಚಾರವನ್ನೂ ಬಯಸಲಿಲ್ಲ. ಅವರಂತಹ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡ ಶಿಕ್ಷಣ ಕ್ಷೇತ್ರ ಬಡವಾಗಿರುವುದು ಸತ್ಯ.

English summary
BG Annigeri, a role model to the society by giving free tution to thousands of students was died on Thursday in Gadag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X