• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರಾವಣದ ಊರಲ್ಲಿ ಗೋಕಾಕರ ನಿರರ್ಥಕ ಹುಟ್ಟುಹಬ್ಬ

By ಸುಬ್ರಮಣ್ಯ, ಸವಣೂರ
|

ಸವಣೂರ, ಆ. 9 : 'ಕಾಲಕ್ಕೂ ಕೊನೆಯೊಂದಿದೆ ಉಳಿಸಿರಿ ಉಸಿರನ್ನು ಉದ್ಧತರೊಲು ಕೆಡಿಸುವದೇ 'ಪ್ರಗತಿ'ಯ ಹೆಸರನ್ನು?

ವರಕವಿ ದ.ರಾ. ಬೇಂದ್ರೆಯವರ ಈ ಕಿಡಿನುಡಿಯನ್ನು ಧಾರವಾಡದಲ್ಲಿ ಶನಿವಾರ ಲೋಕಾರ್ಪಣೆಗೊಂಡ 'ಸಾಹಿತ್ಯ ದಿಗ್ಗಜ ವಿನಾಯಕ ಕೃಷ್ಣ ಗೋಕಾಕ ' ಎಂಬ ಕೃತಿಯ ಆರಂಭಿಕ ಪುಟಗಳಲ್ಲಿ ಬಳಸಿಕೊಳ್ಳಲಾಗಿದೆ. ಅಂದಹಾಗೆ ಶನಿವಾರ, 9ರಂದು ಗೋಕಾಕರ 105ನೇ ಜನ್ಮದಿನಾಚರಣೆಯನ್ನೂ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬೇಂದ್ರೆಯವರ ಈ ಕವನದ ಅರ್ಥ ವಿಸ್ತಾರ ಹೆಚ್ಚಿದೆ.

ಶ್ರಾವಣದ ಊರು ಎಂಬ ಐತಿಹಾಸಿಕ ಹೆಸರನ್ನು ಹೊಂದಿದ ಸವಣೂರಿನಲ್ಲಿ, ಶ್ರಾವಣ ಮಾಸದಲ್ಲಿಯೇ ಜನಿಸಿದ್ದ (ಆಗಸ್ಟ್ 9, 1909) ಗೋಕಾಕರು, ವಿದ್ವತ್ ಮೂಲಕ ವಿಖ್ಯಾತರಾಗಿದ್ದು, 'ಭಾರತ ಸಿಂಧು ರಶ್ಮಿ' ಕೃತಿಗಾಗಿ 1990ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು, ಕನ್ನಡಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟಿದ್ದಾರೆ.

ಅದರಂತೆ, ಗೋಕಾಕರಿಗೆ ಗೌರವ ನೀಡುವ ವಿಷಯದಲ್ಲಿಯೂ ಸರಕಾರ ನಿರಂತರವಾಗಿ ತಾರತಮ್ಯ ಮಾಡುತ್ತಿದೆ. ಗೋಕಾಕರ ಹೆಸರಿನಲ್ಲಿಯೇ ಆರಂಭಗೊಂಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಕಾಲ ವೃದ್ಧಾಪ್ಯದಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಜನ್ಮ ನೀಡಿದ ನೆಲದಲ್ಲಿಯೆ ಗೋಕಾಕರ ಅಭಿಮಾನಿಗಳು ಕ್ಷೀಣಿಸಿದ್ದು, ಕಲಿತ ಶಾಲೆಯಲ್ಲಿನ ಗೋಕಾಕರ ಪುತ್ಥಳಿಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದು ಅವರಿಗೆ ಮಾಡಿರುವ ಅವಮಾನವಾಗಿದೆ.

ಗೋಕಾಕರ ಜನ್ಮಶತಮಾನೋತ್ಸಕ್ಕೆ ಒಂದು ವರ್ಷ ಮೊದಲು ರೂಪಗೊಂಡ ಡಾ. ವಿ.ಕೃ ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (2008)ಗೆ ಈಗ ಆರರ ಬಾಲ್ಯ. ಹತ್ತಾರು ಸದಾಶಯಗಳನ್ನು ಹೊಂದಿದ್ದ ಟ್ರಸ್ಟ್ ತನ್ನ ಉದ್ದೇಶ ಈಡೇರಿಸಿಕೊಳ್ಳುವದೇ? ಅಪೂರ್ಣ ಹಂತದಲ್ಲಿರುವ ಸವಣೂರಿನ ಗೋಕಾಕ ಸ್ಮಾರಕ ಭವನ ಪೂರ್ಣಗೊಳ್ಳುವದೇ? ಸವಣೂರಿನೊಂದಿಗೆ ಗೋಕಾಕರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆಯೇ ಎಂಬ ಭವಿಷ್ಯ ದ ಪ್ರಶ್ನೆಗಳು ಮಾತ್ರ ವರ್ಷಗಳು ಕಳೆದರೂ ಹಾಗೇ ಉಳಿದುಕೊಂಡಿವೆ.

2013ರ ಅಗಸ್ಟ್ ತಿಂಗಳಿನಲ್ಲಿಯೆ ಪೂರ್ಣಗೊಳ್ಳಬೇಕಿದ್ದ ಮೂರು ಕೋಟಿ ರೂ ವೆಚ್ಚದ ಗೋಕಾಕ ಭವನ ಇಂದಿಗೂ ಅತಂತ್ರವಾಗಿದೆ. ಅಪೂರ್ಣ ಕಟ್ಟಡಕ್ಕೆ ಒಂದು ಕೋಟಿ ವೆಚ್ಚವಾಗಿದ್ದು, ಸರಕಾರ ಕೇವಲ 73.50 ಲಕ್ಷ ರೂ ಬಿಡುಗಡೆ ಮಾಡಿದೆ. 177 ಲಕ್ಷ ರೂಗಳ ಅನುದಾನ ಬಿಡುಗಡೆಯಾಗದ ಕಾರಣ ಸ್ಮಾರಕ ಭವನ ತ್ರಿಶಂಕು ಸ್ಥಿತಿಯನ್ನು ತಲುಪಿದೆ. ಅಲ್ಪ ಅನುದಾನ ತಳವಿಲ್ಲದ ಮಡಿಕೆಗೆ ಹಾಕಿದ ಮೂರು ಅಕ್ಕಿ ಕಾಳಿನಂತಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಸಭೆಗಳನ್ನು ನಡೆಸುತ್ತಾ ಠರಾವು ಪ್ರತಿಗಳನ್ನು ಬರೆಯುತ್ತಿರುವ ಟ್ರಸ್ಟ್, ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸುತ್ತಲೇ ಇದೆ. ಸವಣೂರಿನಲ್ಲಿ ಗೋಕಾಕರ ಎರಡು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಬೆನ್ನು ತಟ್ಟಿಕೊಂಡಿದೆ. ಗೋಕಾಕರು ಜನಿಸಿದ್ದ ಮನೆಯನ್ನು ಉಳಿಸಿಕೊಳ್ಳುಲು ಅನುದಾನದ ಕೊರತೆಯ ನೆಪ ಮಾಡಿ ಹಿಂದೆ ಸರಿದಿದೆ. ಸವಣೂರಿನಲ್ಲಿ ಗೋಕಾಕರ ಪುತ್ಥಳಿಯನ್ನು ವಿರೂಪಗೊಳಿಸಲಾಗಿದ್ದರೂ ಸ್ಪಂದಿಸದೆ, ಹೊಸ ಪುತ್ಥಳಿಯ ಸ್ಥಾಪನೆಗೆ ಉತ್ಸಾಹ ತೋರಿದೆ.

ವಾಸ್ತವದಲ್ಲಿ ಸಾಹಿತ್ಯಿಕವಾಗಿ ಬರಡುತನಕ್ಕೆ ಒಳಗಾಗಿರುವ ಸವಣೂರಿನಲ್ಲಿ ಸಾಂಸ್ಕೃತಿಕ ನೆಲೆಗಟ್ಟನ್ನು ಮೊದಲು ಗಟ್ಟಿಗೊಳಿಸದೆ, ರಾಷ್ಟ್ರವ್ಯಾಪಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಸವಣೂರಿನಲ್ಲಿ ಗೋಕಾಕರ ಛಾಯಾ ಚಿತ್ರಗಳ ಗ್ಯಾಲರಿ, ವಾಚನಾಲಯಗಳ ಸ್ಥಾಪನೆಯ ಸದುದ್ದೇಶ ಇದ್ದರೂ, ಅದು ಈಡೇರುವ ಬಗ್ಗೆ ಟ್ರಸ್ಟ್ ನ ಸದಸ್ಯರಲ್ಲಿಯೇ ಸಂದೇಹಗಳಿವೆ. ಹೊಸ ತಲೆಮಾರಿನ ಯುವಕರಿಗೆ ಗೋಕಾಕರ ಸಾಹಿತ್ಯವನ್ನು ಪರಿಚಯಿಸುವ, ಗೋಕಾಕರೊಂದಿಗೆ ಸವಣೂರಿನ ಹೆಸರನ್ನೂ ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಇಲ್ಲದಂತಾಗಿದೆ.

ರಾಜಕೀಯ ಸ್ಥಿತ್ಯಂತರಗಳೂ ಟ್ರಸ್ಟ್ ನ ಚಟುವಟಿಕೆಗಳಿಗೆ ಹಿನ್ನಡೆ ಮಾಡುತ್ತಿದೆ. ಇಲ್ಲಿ ಪ್ರಭಲ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಕ್ಷೇತ್ರದ ಆಡಳಿತ ಪ್ರಭಾವಿ ರಾಜಕಾರಣಿಯ ಬಳಿ ಇದ್ದರೂ, ಸ್ಮಾರಕ ಭವನದ ಅಪೂರ್ಣತೆ, ಆಡಳಿತದ ಅಪಕ್ವತೆಗೆ ಉದಾಹರಣೆಯಾಗುತ್ತಿದೆ.

ವಿನಾಯಕ ಚಿಂತನ ಬಳಗ ಎಂಬ ಸುಂದರ ಹೆಸರಿನೊಂದಿಗೆ ಸರಳವಾಗಿ ಗೋಕಾಕರ ಸ್ಮರಣೆಯನ್ನು ಪ್ರತಿವರ್ಷ ಮಾಡುತ್ತಿದ್ದ ಸ್ಥಳೀಯ ಸಾಹಿತ್ಯಾಸಕ್ತರು ಕಣ್ಮರೆಯಾಗಿದ್ದಾರೆ. ಅಧಿಕಾರ, ಅನುದಾನದ ಒಳ ಹರಿವು ಹೊಸ ಬೆಳವಣಿಗೆಗೆ ಕಾರಣವಾಗುತ್ತಿದೆ. ಸಾಹಿತಿಗಳನ್ನು, ಸಮಾಜ ಸುಧಾರಕರನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ನೋಡುವ ಇತ್ತಿಚಿನ ಪ್ರವೃತ್ತಿ ಗೋಕಾಕರ ಬೆನ್ನನ್ನೂ ಹತ್ತಿದೆ.

ಗೋಕಾಕ ಚಳವಳಿಯ ಕಾಲಕ್ಕೆ 'ಗೋ ಬ್ಯಾಕ್ ' ಎನಿಸಿಕೊಂಡಿದ್ದ ಗೋಕಾಕರು ತಮ್ಮ ಜೀವನದಲ್ಲಿ ಸಾಧಿಸಿದ ಸಾಧನೆಗಳು, ಅವರ ಪಾಂಡಿತ್ಯ, ರಚಿಸಿದ ಸಾಹಿತ್ಯಗಳು ಹಿನ್ನೆಲೆಗೆ ಸರಿದಿದ್ದು, ಗೋಕಾಕರ ಹೆಸರಿನಲ್ಲಿ ವಯಕ್ತಿಕ ಪ್ರತಿಷ್ಠೆ, ಅಧಿಕಾರದ ಮೋಹ, ಬೇಜವಾಬ್ದಾರಿತನ ಮೊದಲಾದ ಅನಿಷ್ಟಗಳು ವೇದಿಕೆಯನ್ನೇರಿ ಕುಣಿದಾಡುತ್ತಿವೆ. ಗಾಣಕ್ಕೆ ಕಟ್ಟಿದ ಕೋಣದಂತೆ ವರ್ಷಕ್ಕೊಂದು ಬಾರಿ ಗೋಕಾಕರ ಜನ್ಮದಿನಾಚರಣೆ ಎಂಬ ಪ್ರಕ್ರಿಯೆ ನಿರರ್ಥಕವಾಗಿ ಸುತ್ತುತ್ತಿದೆ.

English summary
Jnanpith awardee from Karnataka Vinayak Krishna Gokak's birthday is being celebrated on August 9 in Savanur. But the celebration has lost the sheen as many have lost interest, and govt is celebrating it just for the sake of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X