ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವನೋಲ್ಲಾಸದ ಖನಿ ನರ್ಮದಾ ವೈನಿ ಇನ್ನಿಲ್ಲ, ಆ ಮಕ್ಕಳಿಗೆ ಇನ್ನ್ಯಾರು 'ದಿಕ್ಕು?'

|
Google Oneindia Kannada News

ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಮೂಲಕ 'ದಿಕ್ಕು' ಎಂಬ ಯೋಜನೆ ರೂಪಿಸಿ ನೂರಾರು ಬಡಮಕ್ಕಳ ಬದುಕಿಗೆ ಹೊಸ ದಿಕ್ಕು ತೋರಿದ ನರ್ಮದಾ ವೈನಿ ಇನ್ನಿಲ್ಲ!

ಹಾಗೊಂದು ಮೆಸೇಜ್ ಬಂದಾಗ, ಇದು ಸತ್ಯವೋ, ಸುಳ್ಳೋ ನಂಬಲಿಕ್ಕಾಗಲಿಲ್ಲ.

ಕಳೆದ ಜನವರಿ ತಿಂಗಳಿನಲ್ಲಿ 'ಒನ್ ಇಂಡಿಯಾ ಕನ್ನಡ'ದ 'ಮಹಿಳಾ ಸಾಧಕಿಯರು' ಅಂಕಣಕ್ಕೆ ಅವರ ಸಂದರ್ಶನ ಪಡೆಯಲೆಂದು ಫೋನ್ ಮಾಡಿದ್ದಾಗ ಅವರಾಡಿದ್ದ ಮಾತುಗಳು ನೆನಪಿಗೆ ಬಂದವು. ಕೊಳಗೇರಿ ಮಕ್ಕಳ ಬದುಕನ್ನು ಬೆಳಗುವ ಉದಾತ್ತ ಉದ್ದೇಶ ಹೊತ್ತ 'ದಿಕ್ಕು' ಯೋಜನೆಯ ಬಗ್ಗೆ ಅವರಿಗಿದ್ದ ಕಾಳಜಿ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು. 'ಓಹ್ ನೀವೂ ಶಿರಸಿಯವರಾ?' ಎನ್ನುತ್ತ ಆತ್ಮೀಯತೆಯ ಖನಿಯಾಗಿ ಮಾತನಾಡಿದ ಅವರು ಇನ್ನೊಂದು ವರ್ಷದ ನಂತರ ಇಹಲೋಕ ತ್ಯಜಿಸುತ್ತಾರೆ ಎಂಬ ಊಹೆಯಾದರೂ ಯಾರಿಗಿತ್ತು?!

(ಒನ್ ಇಂಡಿಯಾ ಕನ್ನಡದಲ್ಲಿ 2018 ರ ಜನವರಿಯಲ್ಲಿ ಪ್ರಕಟವಾಗಿದ್ದ ನರ್ಮದಾ ಕುರ್ತಕೋಟಿ ಅವರ ಸಂದರ್ಶನ ಇಲ್ಲಿದೆ. )

Narmada Kurtkoti, who showed a new path to slum children in Dharwad is no more

ವಯಸ್ಸು ಐವತ್ತರ ಆಸುಪಾಸು ಅಷ್ಟೆ! ಕಳೆದ ಹದಿನೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಹುಅಂಗಾಂಗ ವೈಫಲ್ಯದಿಂದ ಸೋಮವಾರ ನಿಧನರಾದರು. ಅದುವರೆಗೂ ಯಾವುದೇ ಆರೋಗ್ಯ ಸಂಬಂಧೀ ಸಮಸ್ಯೆ ಇಲ್ಲದೆ ಇದ್ದ ಅವರ ಅಕಾಲಿಕ, ಅನಿರೀಕ್ಷಿತ ಮರಣಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಕನ್ನಡದ ಪ್ರಸಿದ್ಧ ಸಾಹಿತಿ, ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಸೊಸೆ, ನರ್ಮದಾ ಕುರ್ತಕೋಟಿ ಅವರು, ಮಾವನವರ ಸಾಮಾಜಿಕ ಆಶಯಗಳನ್ನು ಜೀವಂತವಾಗಿರಿಸುವ ಸಲುವಾಗಿ, ತಮ್ಮ ಕುಟುಂಬದೊಟ್ಟಿಗೆ ಸೇರಿ 'ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್' ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಈ ಟ್ರಸ್ಟ್ ಮೂಲಕ ವಿವಿಧ ಪುಸ್ತಕಗಳನ್ನು ಹೊರತಂದು ಅದರಿಂದ ಬಂದ ಹಣವನ್ನು ಕೊಳಗೇರಿ ಮಕ್ಕಳ ಬದುಕಿಗೆ ನೆರವಾಗಲು ವಿನಿಯೋಗಿಸುವ 'ದಿಕ್ಕು' ಯೋಜನೆಯನ್ನು ಜಾರಿಗೆ ತಂದಿದ್ದರು.

Narmada Kurtkoti, who showed a new path to slum children in Dharwad is no more

ಸದಾ ಹಸನ್ಮುಖಿ ನರ್ಮದಾ ರಾಮಣ್ಣ ಕುರ್ತಕೋಟಿ ಅವರ ಲವಲವಿಕೆಯ ಮಾತು, ಜೀವನೋಲ್ಲಾಸ ಸ್ಫುರಿಸುವ ಕಣ್ಣುಗಳು, ಕೊಳಗೇರಿ ಮಕ್ಕಳಿಗಾಗಿ ಬಿಸಿಲು, ಮಳೆ ಎನ್ನದೆ ಜೋಳಿಗೆ ಹಾಕಿ ಓಡಾಡುತ್ತಿದ್ದ ಸಾಮಾಜಿಕ ಕಾಳಜಿ ಎಲ್ಲವೂ ಇನ್ನು ನೆನಪು ಮಾತ್ರ!

ಅವರು ಮಾಡಬೇಕಿದ್ದ ಕೆಲಸ ಇನ್ನೆಷ್ಟೋ ಬಾಕಿ ಇತ್ತು. ಧಾರವಾಡದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರಾಗಿರುವ ನರ್ಮದಾ ಅವರು 'ವೈನಿ'ಯಾಗಿಯೇ ಎಲ್ಲರಿಗೂ ಆಪ್ತರಾದವರು. ಅವರ ಅಗಲಿಕೆ ಇಂದು, 'ದಿಕ್ಕು' ಸಂಸ್ಥೆಯಲ್ಲಿ ನಿರ್ವಾತ ಸೃಷ್ಟಿಸಿದೆ. ಅವರ ನಿಧನಕ್ಕೆ ನಮ್ಮ ಶ್ರದ್ಧಾಂಜಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ...

ನರ್ಮದಾ ಕುರ್ತಕೋಟಿ ಅವರ ಅಗಲಿಕೆಯ ನಂತರ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಕೆಲವರು ಫೇಸ್ ಬುಕ್ ನಲ್ಲಿ ಮೆಲುಕು ಹಾಕಿದ್ದಾರೆ, ಆಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸರಳತೆ ಎಂದರೆ ನರ್ಮದಾ ಆಂಟಿ

ಸರಳತೆ ಅಂದ್ರೆ ಏನು ಎಂದು ನಮ್ಮಮ್ಮ ಕೇಳಿದಾಗೆಲ್ಲ ನಾನು ನರ್ಮದಾ ಆಂಟಿ ಎನ್ನುತ್ತಿದ್ದೆ. ವಿಧೇಯತೆ, ಸರಳತೆ ಎಂದಾಗ ನಮಗೆ ನೆನಪಾಗುತ್ತಿದ್ದುದು ನಿಮ್ಮದೇ ಹೆಸರು. ಆದರೆ ಈಗ ಅವರು ಈ ಜಗತ್ತನ್ನು ಬಿಟ್ಟು ಹೋಗಿದ್ದಾರೆ. ಸರಳತೆ, ವಿಧೇಯತೆಯೊಂದಿಗೆ ಎಷ್ಟೋ ಕೊಳಗೇರಿ ಮಕ್ಕಳಿಗೆ ಮಾತೃತ್ವದ ಅಕ್ಕರೆ ನೀಡಿದವರು ನರ್ಮದಾ ಕುರ್ತಕೋಟಿ. ಮಿಸ್ ಯೂ ಆಂಟಿ - ಪೀಟರ್ ಸನ್ನಿ

ಭಾವುಕ ಶ್ರದ್ಧಾಂಜಲಿ

ಶ್ರೀಮತಿ ನರ್ಮದಾ ರಾಮಣ್ಣ ಕುರ್ತಕೋಟಿ, ನಮ್ಮ ವೈನಿ ಇನ್ನಿಲ್ಲ..‌

ದಿಕ್ಕು ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ಮೂಲಕ ಮೂಲಕ ನೂರಾರು ಬಡ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ್ದ ತಾಯಿ ಅವರು.‌
ಮಕ್ಕಳಿಗಾಗಿ ಓದಿಟ್ಟ ಪುಸ್ತಕ, ಬಳಸಿದ ಸೈಕಲ್, ದಾನಿಗಳ ನೆರವು .. ಹಳೆಯ-ಹೊಸ ಬೇಧವಿಲ್ಲದೇ ಜೋಳಿಗೆ ಹಿಡಿದು ಸಂಗ್ರಹಿಸಿದವರು. ಸದಾ ಚಟುವಟಿಕೆ, ಲವಲವಿಕೆಯಿಂದ ಇದ್ದು, ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಲು ದುಡಿದ ಈ ಖಣಿಯ ಪರಿ ಪ್ರೇರಣಾದಾಯಿ. ಬಡವರು, ದೀನರ ಬಗ್ಗೆ ಅಪಾರ ಕಾಳಜಿ ಹೊಂದಿ, ಅವರ ಬಡಾವಣೆ, ಬದುಕು ಗುಣಮಟ್ಟದ್ದಾಗಿಸಲು ವೈನಿ ಪಟ್ಟಪಾಡು ದೇವರಿಗೇ ಪ್ರೀತಿ..
ಇನ್ನೂ ಅವರಂದುಕೊಂಡ ಸಾಕಷ್ಟು ಕೆಲಸ ಬಾಕಿ ಇತ್ತು. ಮುಂದಿನ ಹತ್ತು ವರ್ಷದ ಯೋಜನೆ ಅವರಲ್ಲಿತ್ತು. ಆದರೆ, ನರ್ಮದಾ ವೈನಿ.. ಇದ್ದಕ್ಕಿದ್ದಂತೆ ಎದ್ದು ಹೊರಟರು. ‌ವಿಧಿ. ಒಳ್ಳೆಯವರು ಅಲ್ಪಾಯು ಅಂತೆ- ಹರ್ಷವರ್ಧನ ಶೀಲವಂತ್

ಅಂತಃಕರಣದ ಆತಿಥ್ಯ ಇನ್ನೆಲ್ಲಿ?

ಅಂತಃಕರಣದ ಆತಿಥ್ಯ ಇನ್ನೆಲ್ಲಿ?

ಅವರ ಸದಾ ನಗುಮೊಗ, ಹಿತಮಿತವಾದ ಮಾತು, ಸರಳ ನಡೆ, ಅಂತಃಕರಣದ ಆತಿಥ್ಯ ಇನ್ನೆಲ್ಲಿ? ನಾವು ಮತ್ತಷ್ಟು ಬಡವಾದೆವು. ಮಗ ವರುಣ್ ಈಗ ನಮಗೆಲ್ಲ ಆಶಾಕಿರಣ. ಅಮ್ಮನ ಎಲ್ಲ ಸಂಕಲ್ಪಗಳಿಗೆ ಅವನೇ ಇನ್ನು ಸೂತ್ರಧಾರ.. ಪಾತ್ರಧಾರ.. ನಾವಿದ್ದೇವೆ ಎಂಬ ಮಾತು ಔಪಚಾರಿಕವಲ್ಲ. ನಡೆದು ನೋಡಬೇಕಾದ್ದು.
ವೈನಿ ಹೇಳಿದಂತೆ, ಲಕ್ಷ್ಮೀ ಸಿಂಗನ ಕೆರೆಯ ಗೋಸಾವಿ, ಸಿಖ್ ಸಮುದಾಯದ ಬಡ ಮಕ್ಕಳಿಗೆ ಏನಾದರೂ ಮಾಡುವ ಪ್ರಯತ್ನ ಜಾರಿಯಲ್ಲಿತ್ತು.. ಅಲ್ಪಕಾಲಿಕ ಅಸೌಖ್ಯ ಅವರನ್ನೇ ನಮ್ಮಿಂದ ಕಿತ್ತುಕೊಳ್ಳಬಹುದು ಎಂಬ ಸಣ್ಣ ಸೂಚನೆಯೂ ಇರಲಿಲ್ಲ..
ಸತ್ತೂರಿನ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸೋಮವಾರ, ವೈನಿ ಇಹದ ಸಂಬಂಧ ತೊರೆದರು. ಧಾರವಾಡದ ಸಾಮಾಜಿಕ ಜೀವನದ ಬಹುದೊಡ್ಡ ಕೊಂಡಿ ಕಳಚಿದಂತಾಯಿತು -ಹರ್ಷವರ್ಧನ್ ಶೀಲವಂತ್

ವೈನಿ ಹೋಗಿ ಮತ್ತೆ ಬೇಗ ಬನ್ನಿ..

ವೈನಿ ಹೋಗಿ ಮತ್ತೆ ಬೇಗ ಬನ್ನಿ..

ಮಂಗಳವಾರ, ಮಾರ್ಚ್ 19ರ ಮಧ್ಯಾಹ್ನ 2 ಗಂಟೆಗೆ ಶ್ರೀನಗರ ವೃತ್ತದಲ್ಲಿರುವ (ಪ್ರೊ. ಕೀರ್ತಿನಾಥ ಕುರ್ತಕೋಟಿ) ಅವರ ಮನೆಯಲ್ಲಿ (ನಿಜಾರ್ಥದಲ್ಲಿ ಅವರ ಸೊಸೆ) ಅಂತಿಮ‌ ದರ್ಶನದ ವ್ಯವಸ್ಥೆ. ಮಧ್ಯಾಹ್ನ ೩.೩೦ರ ಸುಮಾರಿಗೆ ಅಂತಿಮ‌ ಯಾತ್ರೆ ಸ್ವಗೃಹದಿಂದ ಹೊರಟು, ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜರುಗಲಿದೆ.
ವಿನಾ ದೈನ್ಯೇನ ಜೀವನಂ; ಅನಾಯಾಸೇನ ಮರಣಂ.. ವೈನಿ ಸಾಧಿಸಿದರು.‌ ನಮ್ಮ ಬಾಳ ಪುಟದ ಮಹತ್ವದ ಅಧ್ಯಾಯವೊಂದು ಮುಗಿಯಿತು.. ಮುಗಿಸುವ ಮುನ್ನವೇ. ನಮ್ಮ ಮಧ್ಯೆಯೇ ಬದುಕಿದ್ದರೂ, ಹೀಗೆಯೂ ಯೋಚಿಸುವ ಓರ್ವ ತಾಯಿ ಇದ್ದರು..
ವೈನಿ‌ ಕೊನೆ ನಮಸ್ಕಾರ.. ಹೋಗಿ ಮತ್ತೆ ಬೇಗ ಬನ್ನಿ..
ನೀವು ಅಂದುಕೊಂಡ ಕೆಲಸ ಮುಗಿಸಬೇಕಲ್ಲ- -ಹರ್ಷವರ್ಧನ್ ಶೀಲವಂತ್

English summary
Narmada Kurtkoti, who was involved her to social service through Kurtkoti Memorial Trust in Dharwad is no more. She passed away due to multiple organ failure on Monday. Oneindia Kannada had published her interview in Women achievers column in Jan 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X