ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಎಮ್ಮೆಗೆ ದೊರಕಿತು ರಾಷ್ಟ್ರಮಟ್ಟದ ಸ್ಥಾನಮಾನ

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 10: ನಮ್ಮ ಉತ್ತರ ಕರ್ನಾಟಕದ ಕಡೆ ಯಾರನ್ನಾದರೂ ಬೈಯ್ಯುವಾಗ ಧಾರವಾಡ ಎಮ್ಮಿ ಇದ್ದಂಗೆ ಇದೆಯಲ್ಲ ಎಂದು ಹೇಳುವುದುಂಟು. ಆದರೆ, ಇದೀಗ ಈ ಧಾರವಾಡದ ಎಮ್ಮೆಗೆ ರಾಷ್ಟ್ರಮಟ್ಟದಲ್ಲಿ ದೇಸಿಯ ತಳಿ ಸ್ಥಾನಮಾನ ದೊರೆತಿದ್ದು, ಧಾರವಾಡಿ ಎಮ್ಮೆ ದೇಶದ 18ನೇ ತಳಿಯಾಗಿ ಘೋಷಣೆ ಮಾಡಲಾಗಿದೆ.

ಸಾಮಾನ್ಯವಾಗಿ ಧಾರವಾಡ ಎಂದಾಗ ಒಮ್ಮೆಲೇ ಪೇಢಾ ನೆನಪಿಗೆ ಬರುತ್ತದೆ. ಇನ್ನು ಮುಂದೆ ಧಾರವಾಡ ಪೇಢಾ ಮಾತ್ರ ಫೇಮಸ್ ಅಲ್ಲ, ಧಾರವಾಡ ಎಮ್ಮೆ ಕೂಡಾ ಅಷ್ಟೇ ಫೇಮಸ್ ಆಗಿದೆ. ಧಾರವಾಡದ ಪೇಡಾ ತಿಂದು ಅದರ ರುಚಿ ಇಷ್ಟಪಟ್ಟವರೇ ಜಾಸ್ತಿ. ಧಾರವಾಡ ಪೇಢೆಗೆ ಅಷ್ಟೊಂದು ರುಚಿ ಬರಲು ಇದೇ ಎಮ್ಮೆಯ ಹಾಲು ಕಾರಣವಾಗಿದೆ. ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ರಾಷ್ಟ್ರಮಟ್ಟದಲ್ಲಿ ದೇಸಿ ತಳಿಯ ಸ್ಥಾನಮಾನ ನೀಡಲಾಗಿದೆ.

ದೇಶದಲ್ಲಿ ಈವರೆಗೆ 17 ದೇಸಿ ಎಮ್ಮೆ ತಳಿಗಳನ್ನು ಗುರುತಿಸಲಾಗಿತ್ತು. ಇವೆಲ್ಲವೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ವಿಶ್ವಮಟ್ಟದಲ್ಲಿಯೂ ಹೆಸರು ಮಾಡಿದ್ದವು. ಇವುಗಳ ಪೈಕಿ ಕರ್ನಾಟಕದ ಒಂದೂ ತಳಿ ಇರಲಿಲ್ಲ. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸೂಚನೆ ಮೇರೆಗೆ ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಧಾನ ಬ್ಯೂರೋ ಕಳೆದ ಸೆ. 3ರಂದು ಧಾರವಾಡ ಎಮ್ಮೆ ತಳಿಗೆ ಇಂಡಿಯಾ ಬಫೆಲೊ 0800 ಧಾರವಾಡಿ ಎಮ್ಮೆ 01018 ಎಂಬ ನೋಂದಣಿ ಸಂಖ್ಯೆ ನೀಡಿದೆ.

Dharawad Buffalo Breed Has Gained National Recognition

ಈ ನೋಂದಣಿ ಸಂಖ್ಯೆಯ ಮೂಲಕ ಇನ್ನು ಮುಂದೆ ಧಾರವಾಡದ ಎಮ್ಮೆ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ವಿಶ್ವಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗಿದೆ. ಇದು ಧಾರವಾಡ ಎಮ್ಮೆ ತಳಿಯ ಅಭಿವೃದ್ಧಿ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ನಾಂದಿ ಆಗಲಿದೆ ಎಂದು ಪಶುವೈದ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

ಧಾರವಾಡ ಎಮ್ಮೆ ವಿಶೇಷವೇನು?
ಇದು 140 ಸೆಂಟಿಮೀಟರ್ ಎತ್ತರ ಇರುತ್ತದೆ, ಇದರ ಕೋಡುಗಳು ಅರ್ಧ ಚಂದ್ರಾಕೃತಿಯಲ್ಲಿ ಇರುತ್ತವೆ. ಇದನ್ನೇ ನೋಡಿ ಇದಕ್ಕೆ 18ನೇ ತಳಿಯನ್ನಾಗಿ ಮಾನ್ಯತೆ ಕೊಡಲಾಗಿದೆ. ಅಲ್ಲದೇ ಈ ಎಮ್ಮೆ 17 ತಿಂಗಳಿಗೊಮ್ಮೆ ಕರು ಕೊಡುತ್ತದೆ. ಒಮ್ಮೆ ಕರು ಕೊಟ್ಟರೆ 10 ತಿಂಗಳವರೆಗೆ 1 ಸಾವಿರ ಲೀಟರ್ ಹಾಲನ್ನು ಕೊಡಬಲ್ಲದು. ಇದರ ಮಾನ್ಯತೆಗಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಸಂಶೋಧನೆ ಮಾಡಿಯೇ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಗೆ ಕಳಿಸಿಕೊಡಲಾಗಿತ್ತು. ಈ ಹಿನ್ನೆಲೆ ಈ ವರ್ಷ ಇದಕ್ಕೆ ಮಾನ್ಯತೆ ಸಿಕ್ಕಿದೆ.

ಧಾರವಾಡದ ಎಮ್ಮೆಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ಅವು ನೀಡುವ ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಸಾಕಷ್ಟು ಹೆಸರುವಾಸಿ. ಇದೇ ಕಾರಣಕ್ಕೆ ಧಾರವಾಡ ವಿಶ್ವವಿದ್ಯಾಲಯ 2014ರಿಂದ ಧಾರವಾಡ ಎಮ್ಮೆ ಬಗ್ಗೆ ಅಧ್ಯಯನ ಆರಂಭಿಸಿತು. ಕೃಷಿ ವಿವಿಯ ಪಶು ವಿಜ್ಞಾನ ವಿಭಾಗವು 2017ರ ಡಿಸೆಂಬರ್‌ ವರೆಗೆ ಅಧ್ಯಯನ ನಡೆಸಿತು. 'ಧಾರವಾಡ ಎಮ್ಮೆ ತಳಿಯ ಗುಣಲಕ್ಷಣಗಳ ಸಂಶೋಧನಾ ಯೋಜನೆ' ಅಡಿ ಸಂಶೋಧನೆ ಕೈಗೊಳ್ಳಲಾಯಿತು.

ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಈ ಎಮ್ಮೆ ತಳಿಗಳಿದ್ದು, ಈ ಪೈಕಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ದ ಒಟ್ಟು 64 ಹಳ್ಳಿಗಳಲ್ಲಿ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ವಿ.ಎಸ್‌. ಕುಲಕರ್ಣಿ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿತ್ತು. ಒಟ್ಟು 3937 ಜನ ರೈತರಲ್ಲಿನ 10,650 ಧಾರವಾಡ ಎಮ್ಮೆಗಳ ಬಗ್ಗೆ ಸತತ ಮೂರು ವರ್ಷಗಳ ಕಾಲ ಅಧ್ಯಯನ ಕೈಗೊಂಡು, ಅಂತಿಮ ವರದಿ ಸಿದ್ಧಪಡಿಸಲಾಗಿತ್ತು. ಬಳಿಕ 2020ರಲ್ಲಿ ತಳಿಯ ನೋಂದಣಿಯಾಗಿ ಕೃಷಿ ವಿವಿಯಿಂದ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಅಧ್ಯಯನದ ವರದಿ ಆಧರಿಸಿ ಧಾರವಾಡ ಎಮ್ಮೆಯ ತಳಿ ನೋಂದಣಿ ಆಗಿರುವ ಬಗ್ಗೆ ಅ​ಧಿಕೃತವಾಗಿ ಘೋಷಿಸಲಾಗಿದೆ.

ಧಾರವಾಡದ ಎಮ್ಮೆಗಳನ್ನು ಜವಾರಿ ಎಮ್ಮೆ ಅಂತಲೂ ಕರೆಯುತ್ತಾರೆ. ಇವುಗಳಿಗೆ ವಿವಿಧ ಕಡೆಗಳಲ್ಲಿ ಮುಂಡರಗಿ ಎಮ್ಮೆ, ಹೊಯ್ಸಳ ಎಮ್ಮೆ, ಬಾದಾಮಿ ಎಮ್ಮೆ ಎನ್ನುತ್ತಾರೆ. ಧಾರವಾಡ ಪೇಢಾ, ಬೆಳಗಾವಿಯ ಕುಂದಾ ಪ್ರಸಿದ್ಧಿಯಾಗಲು ಮೂಲ ಕಾರಣ ಈ ಎಮ್ಮೆಗಳ ಹಾಲು ಕಾರಣವಾಗಿದೆ. ಸುಮಾರು 150 ವರ್ಷಗಳಿಂದಲೂ ಈ ಎಮ್ಮೆಗಳ ಹಾಲನ್ನೇ ಬಳಸಿಕೊಂಡು ಧಾರವಾಡ ಪೇಢಾ, ಬೆಳಗಾವಿ ಕುಂದಾ ಸೇರಿದಂತೆ ಅನೇಕ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇತ್ತೀಚಿಗಷ್ಟೇ ಧಾರವಾಡದ ಪೇಢಾಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಸಹ ಸಿಕ್ಕಿತ್ತು. ಅದರ ಬೆನ್ನಲ್ಲೇ ಇದೀಗ ರಾಷ್ಟ್ರಮಟ್ಟದಲ್ಲಿ ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ ಸಿಕ್ಕಿದ್ದು ಸ್ಥಳೀಯರಿಗೆ ಅದರಲ್ಲೂ ಗೌಳಿ ಸಮುದಾಯಕ್ಕೆ ಅತೀವ ಸಂತಸ ತಂದಿದೆ.

ನಮ್ಮ ಗೌಳಿ ಸಮುದಾಯದವರು ಅನೇಕ ವರ್ಷಗಳಿಂದ ಈ ತಳಿಯ ಎಮ್ಮೆಯನ್ನು ಸಾಕಿಕೊಂಡು ಬಂದಿದ್ದಾರೆ. ಈಗಲೂ ಅನೇಕರು ಇದೇ ಎಮ್ಮೆಗಳ ಮೇಲೆ ಅವಲಂಬಿತರಾಗಿದ್ದಾರೆ. ಧಾರವಾಡದಲ್ಲಿ ಗೌಳಿ ಗಲ್ಲಿಯೂ ಇದೆ. ದಡ್ಡಿ ಕಮಲಾಪುರ, ಹುಣಸೀಕುಮರಿ ಇಡೀ ಊರೇ ಗೌಳಿಗರು. ಈ ತಳಿಯ ಎಮ್ಮೆಗಳನ್ನು ಸಾಕಲು ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇಲ್ಲ. ಆದರೆ ಅವುಗಳು ನಮಗೆ ಮಾಡುವ ಉಪಕಾರ ಮಾತ್ರ ದೊಡ್ಡದು. ಇಂಥ ನಮ್ಮೂರಿನ ಎಮ್ಮೆಗಳಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದ್ದು ಸಂತಸದ ಸಂಗತಿ ಎನ್ನುತ್ತಾರೆ ಗೌಳಿ ಗಲ್ಲಿಯ ವಿಶಾಲ ಗೌಳಿ.

"ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಎಮ್ಮೆಗಳಿವೆ. ಆದರೆ, ಇದುವರೆಗೂ ಯಾವುದೇ ತಳಿಗೆ ಈ ಸ್ಥಾನಮಾನ ಸಿಕ್ಕಿರಲಿಲ್ಲ. ಇದೀಗ ದೇಶದ 18ನೇ ಎಮ್ಮೆ ತಳಿಯಾಗಿ ಧಾರವಾಡ ಎಮ್ಮೆ ಘೋಷಣೆಯಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಎಮ್ಮೆ ತಳಿಯಾಗಿದೆ. ಇದೊಂದು ಐತಿಹಾಸಿಕ ಸಾಧನೆ ಆಗಿದ್ದು, ಈ ತಳಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ," ಎಂದು ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ವಿಶ್ವನಾಥ ಕುಲಕರ್ಣಿ ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, "ಈ ತಳಿಗೆ ರಾಷ್ಟ್ರೀಯ ಮಾನ್ಯತೆ ಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳ ಹಿಂದೆಯೇ ಇದಕ್ಕೆ ಮಾನ್ಯತೆ ಸಿಗಬೇಕಿತ್ತು ಎಂದಿರುವ ಅವರು, ಮೂರ್ರಾ ಎಮ್ಮೆಯೆಂತೆಯೇ ನಮ್ಮ ಎಮ್ಮೆ ಕೂಡಾ ಈಗ ಪ್ರಸಿದ್ಧಿ ಪಡೆದಿದ್ದು, ಬಹಳ ಸಂತೋಷದ ವಿಷಯ," ಎಂದಿದ್ದಾರೆ. ಬಸವರಾಜ ಹೊರಟ್ಟಿಯವರು ಹತ್ತಾರು ಎಮ್ಮೆಗಳನ್ನು ತಮ್ಮ ಫಾರ್ಮ್‌ನಲ್ಲಿ ಸಾಕುತ್ತಿದ್ದಾರೆ.

Recommended Video

ಪಾಕಿಸ್ತಾನ ಚೀನಾಗೆ ನಡುಕ ಹುಟ್ಟಿಸಲು ಬಲಿಷ್ಠವಾಯ್ತು ಭಾರತೀಯ ವಾಯುಸೇನೆ | Oneindia Kannada

English summary
Dharawad buffalo gets recognition by the Indian Council of Agricultural Research (ICAR) as a distinct breed. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X