ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಗನಕ್ಕೇರುತ್ತಿದೆ ತರಕಾರಿ ಬೆಲೆ, ಗ್ರಾಹಕರ ಜೇಬಿಗೆ ಬೀಳುತ್ತಿದೆ ಕತ್ತರಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 23; ದಿನೇ ದಿನೇ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ರೈತರಿಗೆ ಲಾಭ ಸಿಗುತ್ತಿಲ್ಲ. ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ನಿಂತಿಲ್ಲ. ಈರುಳ್ಳಿ, ಟೊಮೊಟೋ, ಬೀನ್ಸ್, ಕ್ಯಾರೇಟ್, ಸೊಪ್ಪು ಸೇರಿದಂತೆ ಎಲ್ಲಾ ತರಕಾರಿ ಬೆಲೆ ಹೆಚ್ಚಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಅಗತ್ಯವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿದೆ. ಮಾರುಕಟ್ಟೆಗೆ ಹೋದರೆ ತರಕಾರಿ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ. ಈರುಳ್ಳಿ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲಾ ತರಕಾರಿ ಬೆಲೆ ನೂರು ರೂಪಾಯಿಯ ಗಡಿ ದಾಟಿದೆ. ಜನರು ಹಣ ಎಲ್ಲಿಂದ ತರಬೇಕು? ಎಂಬ ಮಾತು ಕೇಳಿ ಬರುತ್ತಿದೆ.

ಯಾವ ತರಕಾರಿ ಮಳಿಗೆಗಳಿಗೆ ಹೋದರೂ ಚೌಕಾಸಿಯ ಮಾತೇ ಇಲ್ಲ. ಮಾರುಕಟ್ಟೆಯಲ್ಲಿ ಇದಕ್ಕಿಂತ ಪರಿಸ್ಥಿತಿ ಭಿನ್ನ ಇಲ್ಲ. ಕೆಜಿಗೆ ಸ್ವಲ್ಪ ಹಣ ಕಡಿಮೆ ತೆಗೆದುಕೊಳ್ಳಿ ಎಂದರೆ ಮುಂದೆ ಹೋಗಿ, ಎಲ್ಲಿ ಕಡಿಮೆ ಬೆಲೆಗೆ ಸಿಗುತ್ತೋ ಅಲ್ಲೇ ಖರೀದಿಸಿ. ನಮ್ಮ ಅಭ್ಯಂತರವೇನಿಲ್ಲ. ನಷ್ಟ ಮಾಡಿಕೊಂಡು ವ್ಯಾಪಾರ ಮಾಡಲು ಆಗದು. ನಿಗದಿಪಡಿಸಿರುವ ಬೆಲೆಗಿಂತ ಒಂದು ರೂಪಾಯಿ ಕಡಿಮೆ ತೆಗೆದುಕೊಳ್ಳಲು ಆಗಲ್ಲ ಅಂತಾರೆ ವ್ಯಾಪಾರಿಗಳು.

ನೂರು ರೂಪಾಯಿಯಲ್ಲಿ ಎಲ್ಲಾ ತರಕಾರಿ ಖರೀದಿಸಿ ಬರುತ್ತಿದ್ದ ಜನರು ಈಗ ಐನೂರು ರೂಪಾಯಿ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಟೊಮೊಟೋ, ಚವಳಿಕಾಯಿ, ನುಗ್ಗೇಕಾಯಿ, ಕ್ಯಾಪ್ಸಿಕಮ್, ಕ್ಯಾರೇಟ್, ಬೀನ್ಸ್ ಸೇರಿದಂತೆ ಎಲ್ಲಾ ಬೆಲೆ ದುಪ್ಪಟ್ಟು ಅನ್ನೋಕ್ಕಿಂತ ಮೂರು ಪಟ್ಟು ಆಗಿದೆ. ಎಲ್ಲವೂ ನೂರು ರೂಪಾಯಿಯ ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಒಂದು ಲೀಟರ್ ಹಣಕ್ಕಿಂತ ಹೆಚ್ಚು ಒಂದು ಕೆಜಿಗೆ ಹಣ ನೀಡುವಂತ ಸ್ಥಿತಿ ನಿರ್ಮಾಣವಾಗಿದೆ. ಜನರಂತೂ ತರಕಾರಿ ಖರೀದಿಸಲು ಬಂದು ಅಯ್ಯೋ? ಏನ್ ರೇಟ್ ಆಗ್ಬಿಟ್ಟಿದೆ? ಹೀಗಾಂದ್ರೆ ಹೆಂಗೆ? ಎಂಬ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ.

ನುಗ್ಗೇಕಾಯಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ನುಗ್ಗೇಕಾಯಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ನುಗ್ಗೇಕಾಯಿಯಂತೂ ಕೇಳುವ ಹಾಗೆಯೇ ಇಲ್ಲ. ಬೆಲೆ ಜಾಸ್ತಿಯಾಗಿದೆ. ಗುಣಮಟ್ಟದ್ದು ಇದ್ದರಂತೂ ಮುಗಿದೇ ಹೋಯ್ತು, ಅವರು ಹೇಳಿದ್ದೇ ರೇಟು. ಕಾಯಿ ಕಾಯಿ ನುಗ್ಗೇಕಾಯಿ ಎಂದುಕೊಂಡು ಬಂದವರು ದರ ಕೇಳಿ ದಂಗಾಗಿ ಹೋಗುತ್ತಿದ್ದಾರೆ. ಕೆಲವರಂತೂ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಖರೀದಿಸಲು ಬಂದು ಕೆಜಿಗೆ ಎಷ್ಟು ಹಣ ಎಂದು ಕೇಳುತ್ತಿದ್ದಂತೆಯೇ ವಾಪಸ್ ಹೋಗುತ್ತಿದ್ದಾರೆ. ನುಗ್ಗೇಕಾಯಿ ಪೂರೈಕೆ ಜಾಸ್ತಿಯಿಲ್ಲದ ಕಾರಣ ಈ ರೀತಿಯ ದರ ಹೆಚ್ಚಳವಾಗಿದೆ.

ಕಳೆದ ವಾರದ ಹಿಂದೆ ಒಂದು ಕೆಜಿಗೆ ನುಗ್ಗೇಕಾಯಿಗೆ 300 ರಿಂದ 400 ರೂಪಾಯಿಯವರೆಗೆ ಪಡೆಯಲಾಗುತ್ತಿತ್ತು. ಮತ್ತೆ ಕೆಲವೆಡೆ ನುಗ್ಗೇಕಾಯಿಯೇ ಸಿಗುತ್ತಿಲ್ಲ. ಇದರಿಂದಾಗಿ ದರ ಜನರ ಕೈಗೆ ಸಿಗದಂತಾಗಿದೆ. ಕೆಲವೊಂದು ತರಕಾರಿ ಮಳಿಗೆಗಳಿಲ್ಲಿ ಮುಂಗಡವಾಗಿ ಅರ್ಧ ಹಣ ಕೊಟ್ಟು ಮಾರನೇ ದಿನ ಬಂದು ತೆಗೆದುಕೊಂಡು ಹೋಗುವಂತೆ ವ್ಯಾಪಾರಿಗಳು ಹೇಳುತ್ತಿದ್ದಾರೆ. ಆದರೆ, ಅದು ಸಿಕ್ಕರೆ ಸಿಕ್ತು, ಇಲ್ಲಾಂದ್ರೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಈರುಳ್ಳಿ ದರ ಪರವಾಗಿಲ್ಲ

ಈರುಳ್ಳಿ ದರ ಪರವಾಗಿಲ್ಲ

ಈಗ ಮಾರುಕಟ್ಟೆಯಲ್ಲಿ ಪರವಾಗಿಲ್ಲ ಎಂದರೆ ಅದು ಈರುಳ್ಳಿ ರೇಟ್. ಪ್ರತಿ ಕೆಜಿಗೆ 30 ರಿಂದ 40 ರೂಪಾಯಿಯವರೆಗೆ ಉಳ್ಳಾಗಡ್ಡಿ ಸಿಗುತ್ತಿದೆ. ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ಬಳ್ಳಾರಿ, ಹಾವೇರಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಈರುಳ್ಳಿ ಬೆಳೆಗಾರರು ಹೆಚ್ಚಾಗಿ ತರುತ್ತಿರುವುದರಿಂದ ದರ ಕಡಿಮೆಯಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಇದ್ದ ದರಕ್ಕಿಂತ ಈಗ ಕಡಿಮೆಯಾಗಿದೆ.

ಇನ್ನು ಅಷ್ಟೇನೂ ಗುಣಮಟ್ಟವಿಲ್ಲದ ಮುಳುಗಾಯಿಗೆ 80 ರೂಪಾಯಿ ಪಡೆಯಲಾಗುತ್ತಿದೆ. ಚೆನ್ನಾಗಿರುವುದಕ್ಕೆ 100 ರೂಪಾಯಿ ತನಕ ಪಡೆಯಲಾಗುತ್ತಿದೆ. ಇನ್ನು ಹೂಕೋಸು ದರ ಏನೂ ಇದಕ್ಕಿಂತ ಭಿನ್ನವಿಲ್ಲ. ಸೊಪ್ಪಿನ ರೇಟ್ ಹೆಚ್ಚಾಗಿಯೇ ಇದೆ. ಬಟಾಣಿ 80 ರೂಪಾಯಿ ಇದೆ. ಮೆಣಸಿನ ಕಾಯಿ ಬಾಯಿ ರುಚಿಸುವ ಬದಲು ಗ್ರಾಹಕರಿಗೆ ಖಾರವಾಗಿದೆ. ಕೊತಂಬರಿ ಒಂದು ಕಟ್ ಗೆ 5 ರೂಪಾಯಿ, ಪಾಲಾಕ್, ಪುದಿನ ಒಂದು ಕಟ್ ಗೆ 10 ರೂಪಾಯಿ, ಎಳ್ ಅರವೆ 5 ರೂಪಾಯಿ ಹೀಗೆ ಎಲ್ಲಾ ತರಕಾರಿಯೂ ದುಬಾರಿಯಾಗಿದೆ.

ಪೆಟ್ರೋಲ್‌ಗಿಂತ ತರಕಾರಿ ದುಬಾರಿ

ಪೆಟ್ರೋಲ್‌ಗಿಂತ ತರಕಾರಿ ದುಬಾರಿ

ತೈಲ ಬೆಲೆಯನ್ನೂ ಮೀರಿ ನಿಂತಿರುವ ತರಕಾರಿಗಳು ಅದರಲ್ಲೂ ಎಲ್ಲಾ ಖಾದ್ಯಕ್ಕೂ ಅಗತ್ಯವಾಗಿದ್ದ ಟೊಮ್ಯಾಟೊ ಸಹ ಶತಕದ ಗಡಿ ದಾಟಿದೆ. ಗ್ರಾಹಕರು ಟೊಮ್ಯಾಟೊ ಬಿಟ್ಟು ಪರ್ಯಾಯ ಮಾರ್ಗದತ್ತ ಚಿತ್ತ ಹರಿಸಿದ್ದಾರೆ. ಯಾಕೆಂದರೆ ಅಷ್ಟೊಂದು ಹಣ ಕೊಟ್ಟು ಟೊಮೊಟೋ ಖರೀದಿಸಿದರೆ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬೆಲೆ ಕುಸಿದಾಗ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುವ ರೈತರಿಗೆ ಟೊಮಾಟೊ ಒಳ್ಳೆಯ ಬೆಲೆ ಸಿಕ್ಕರೂ ಪ್ರಯೋಜನ ಮಾತ್ರ ಇಲ್ಲ.

ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಟೊಮೇಟೊ ಕೆ.ಜಿಗೆ 40 ರೂ.ಗೆ ಮಾರಟವಾಗುತ್ತಿದೆ. ನಮ್ಮಲ್ಲಿ 70ರಿಂದ 80 ರೂ. ವರೆಗೂ ಇದೆ. ನೆರೆ ರಾಜ್ಯ, ಆಂದ್ರ, ತಮಿಳುನಾಡಿನಿಂದ ಆಮದು ಮಾಡಿಕೊಂಡರೆ ಗ್ರಾಹಕರಿಗೆ ಕೈಗೆಟುಕುವಂತಾಗಲಿದೆ. ಇಲ್ಲವಾದರೆ ಒಂದುವರೆ ತಿಂಗಳು ನಮ್ಮ ರಾಜ್ಯದ ರೈತರ ಟೊಮ್ಯಾಟೊ ಬೆಳೆ ಬರುವವರೆಗೂ ಕಾಯಬೇಕು ಎಂಬ ಮಾತು ಕೇಳಿ ಬರುತ್ತಿದೆ.

ಯಾಕಾಗಿ ದರ ಹೆಚ್ಚಳ?

ಯಾಕಾಗಿ ದರ ಹೆಚ್ಚಳ?

ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ತರಕಾರಿ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವೇನು? ಎಂಬುದು. ಈ ಬಾರಿ ಭಾರೀ ಮಳೆ ಸುರಿದ ಕಾರಣ ತರಕಾರಿ ಫಸಲಿಗೆ ಬರುವ ಹೊತ್ತಿಗೆ ನೀರು ನಿಂತು ಹಾಳಾಗಿ ಹೋಗಿದ್ದರಿಂದ ಹೆಚ್ಚಾಗಿ ಬೆಳೆ ಬಂದಿಲ್ಲ. ಬೆಳೆದಿದ್ದ ಬೆಳೆಯೆಲ್ಲಾ ನೀರು ಪಾಲಾಗಿದೆ. ಅಸಲಿರಲಿ, ಮಾಡಿದ ಖರ್ಚು ಬಾರದೇ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಪೂರೈಕೆಯು ಕಡಿಮೆಯಾಗಿದೆ. ಎಲ್ಲಿಯೂ ಸಿಗುತ್ತಿಲ್ಲ. ಇದರಿಂದಾಗಿ ಬೆಲೆ ಗಗನಕ್ಕೇರಿದೆ. ರೈತರ ಬಳಿ ಹೋದರೆ ಅಲ್ಲಿ ನಾವು ನಿರೀಕ್ಷಿಸಿದಷ್ಟು ತರಕಾರಿ ಸಿಗುತ್ತಿಲ್ಲ. ಹಾಗಾಗಿ, ಬೆಲೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಎಂದು ದಾವಣಗೆರೆಯ ತರಕಾರಿ ಮಾರಾಟಗಾರರು.

ಮದುವೆ ಸೀಸನ್ನೂ ಕಾರಣ

ಮದುವೆ ಸೀಸನ್ನೂ ಕಾರಣ

ಈಗಾಗಲೇ ಮದುವೆ, ಸಭೆ, ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಇದ್ದ ಕಾರಣ ಮದುವೆ ಹಾಗೂ ದೊಡ್ಡ ದೊಡ್ಡ ಸಮಾರಂಭಗಳು ಹೆಚ್ಚಾಗಿ ನಡೆಯಲಿಲ್ಲ. ಆದರೆ ರಾಜ್ಯ ಸರ್ಕಾರ ಮದುವೆಗೆ 500 ಜನರಿಗೆ ಅನುಮತಿ ನೀಡಿರುವ ಕಾರಣ ಮದುವೆಗಳು ವಿಜೃಂಭಣೆಯಿಂದ ನೆರವೇರುತ್ತಿವೆ. ಯಾವುದೇ ಮದುವೆ ಇರಲಿ, ಅಲ್ಲಿ ಸಸ್ಯಹಾರ ಊಟ ಇದ್ದೇ ಇರುತ್ತದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ತರಕಾರಿ ಬೇಕು. ಹಾಗಾಗಿ, ಹೆಚ್ಚಿನ ಹಣ ಕೊಟ್ಟಾದರೂ ಮದುವೆ ಮಾಡುವವರು ಖರೀದಿಸುತ್ತಿದ್ದಾರೆ. ಈ ಕಾರಣದಿಂದಲೂ ದರಗಳು ಕೈಗೆ ಎಟುಕದ ರೀತಿಯಲ್ಲಿ ಹೋಗಿವೆ ಅಂತಾರೆ ಗ್ರಾಹಕರು.

ಒಟ್ಟಿನಲ್ಲಿ ಬೆಳೆದ ಅನ್ನದಾತನಿಗೂ ಲಾಭ ಉಣ್ಣುವಂತಿಲ್ಲ. ಖರೀದಿಸಿದ ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ದಲ್ಲಾಳಿಗಳು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಭಾವ ಇದ್ದರೂ ಇಷ್ಟೊಂದು ಪ್ರಮಾಣದಲ್ಲಿ ತರಕಾರಿ ದರ ಹೆಚ್ಚಾಗಿರುವುದು ಇಲ್ಲ. ಎಲ್ಲೋ ಒಂದೋ ಎರಡೋ ಬೆಳೆಗಳ ದರ ಜಾಸ್ತಿಯಾಗುತಿತ್ತು. ಆದರೆ, ಈಗ ಎಲ್ಲಾ ತರಕಾರಿಗಳ ಬೆಲೆ ಜಾಸ್ತಿಯಾಗಿರುವುದು ಗ್ರಾಹಕರ ನಿದ್ದೆಕೆಡಿಸಿದೆ.

Recommended Video

IPL 2022 Mega Auction ಬಗ್ಗೆ ಕಂಪ್ಲೀಟ್ ಮಾಹಿತಿ | Oneindia Kannada

English summary
Vegetable prices touching sky in these days due to increased diesel prices and untimely rain. But farmers not getting profits from this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X