ದಾವಣಗೆರೆ: 'ಪುನೀತ ಆನಂದಗೂಡು' ಅನಾವರಣ; ಅಪ್ಪು ಸೇವೆ ಸ್ಮರಿಸಿದ ಶಿವಶಂಕರಪ್ಪ
ದಾವಣಗೆರೆ, ಮಾರ್ಚ್ 17: ಕನ್ನಡದ ಖ್ಯಾತ ನಟ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ನ ಈಜುಕೊಳ ಪಕ್ಕದ ಪಾರ್ಕ್ನಲ್ಲಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿದ್ದು, ಇದು ಸ್ಪೆಷಲ್ ಆಗಿ ರೂಪಿಸಲಾಗಿರುವ ಪ್ರತಿಮೆ.
ಪುನೀತ್ ರಾಜಕುಮಾರ್ ಮತ್ತು ಜಿ.ಎಸ್. ಮಂಜುನಾಥ್ ಅಭಿಮಾನಿಗಳ ಬಳಗದಿಂದ ದಾವಣಗೆರೆ ನಗರದ 38ನೇ ವಾರ್ಡ್ನ ಎಂ.ಸಿ.ಸಿ. 'ಬಿ' ಬ್ಲಾಕ್ನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ನಿರ್ಮಿಸಿರುವ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ಕಾಂಗ್ರೆಸ್ ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅನಾವರಣಗೊಳಿಸಿದರು.
ಶಿವಮೊಗ್ಗದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಭ್ರಮ
ನಂತರ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಪುನೀತ್ ರಾಜಕುಮಾರ್ ಅತಿಚಿಕ್ಕ ವಯಸ್ಸಿನಲ್ಲಿ ಮಹೋನ್ನತ ಸಾಧನೆ ಮಾಡಿ ಕೇವಲ ಕರ್ನಾಟಕ ರಾಜ್ಯವಲ್ಲ, ದೇಶ-ವಿದೇಶದ ಜನರಲ್ಲಿ ಗೌರವ, ಅಭಿಮಾನವನ್ನು ಹೊಂದಿದ್ದಾರೆ. ಪುನೀತ್ ನಿಧನರಾದ ವೇಳೆ ಅವರ ಅಭಿಮಾನಿಗಳ ಯಾವುದೇ ಅಹಿತಕರ ಘಟನೆ ಆಗದಂತೆ ಅಭಿಮಾನ ತೋರ್ಪಡಿಸಿದ್ದಾರೆ. ಇಂದು ಪುನೀತ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ಆಗಿದ್ದು, ಅವರ ಅಭಿಮಾನಿಗಳು ಚಿತ್ರಮಂದಿರದ ಬಳಿ ಹಬ್ಬದಂತೆ ವಾತಾವರಣ ಸೃಷ್ಟಿಸಿರುವುದನ್ನು ಶ್ಲಾಘಿಸಿದರು.
ಇದೇ ವೇಳೆ ಮಾತನಾಡಿದ ದಾವಣಗೆರೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, "ಪುನೀತ್ ರಾಜಕುಮಾರ್ರವರ ಅಭಿಮಾನಿಗಳು ಈ ವಾರ್ಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾತ್ರವಲ್ಲ ಕರ್ನಾಟಕ, ದೇಶದಲ್ಲಿಯೇ ಅಭಿಮಾನಿ ಬಳಗ ದೊಡ್ಡದಿದೆ. ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆ ಇಲ್ಲಿ ಪ್ರತಿಷ್ಠಾಪಿಸಲು ಇದೇ ಪ್ರಮುಖ ಕಾರಣ," ಎಂದರು.
ಶಾಮನೂರು ಶಿವಶಂಕರಪ್ಪ ಹಾಗೂ ಡಾ. ರಾಜಕುಮಾರ್ ಅವರಿಗೆ ಮೊದಲಿನಿಂದಲೂ ನಂಟಿದೆ. ಈ ವಾರ್ಡ್ನಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಿರುವುದರಿಂದ ಇಲ್ಲಿಗೆ ಬರುವ ವಾಯುವಿಹಾರಿಗಳು, ಜನರು, ಪುಟ್ಟಮಕ್ಕಳು ಅಪ್ಪು ಅವರನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಸದುದ್ದೇಶದಿಂದ ಈ ಪ್ರತಿಮೆ ಇಲ್ಲಿ ಪ್ರತಿಷ್ಠಾಪಿಸಿದ್ದೇವೆ. ನಟನೆ, ಸಾಮಾಜಿಕ ಸೇವೆ, ಬಡವರಿಗೆ ನೆರವು ಸೇರಿದಂತೆ ಪುನೀತ್ರವರು ಮಾಡಿರುವ ಸೇವೆ ಅನನ್ಯ. ಈ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ 60ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಲಾಯಿತು.
ಪುತ್ಥಳಿ ವಿಶೇಷ ಏನು?
ಅಖಿಲ ಭಾರತ ವೀರಶೈವ ಸಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ವರನಟ ಡಾ. ರಾಜಕುಮಾರ್ ಕುಟುಂಬಕ್ಕೆ ಮೊದಲಿನಿಂದಲೂ ನಂಟು. ಪುನೀತ್ ರಾಜಕುಮಾರ್ ಜೊತೆಗೂ ಶಾಮನೂರು ಶಿವಶಂಕರಪ್ಪರಿಗೆ ಮೊದಲಿನಿಂದಲೂ ಒಡನಾಟ ಇತ್ತು. ಪುಟ್ಟ ಮಗುವಿದ್ದಾಗಲಿಂದಲೂ ನೋಡಿದ್ದರು. ಇನ್ನು ಪುನೀತ್ ಅಂದರೆ ಶಾಮನೂರು ಶಿವಶಂಕರಪ್ಪರಿಗೆ ಅಚ್ಚುಮೆಚ್ಚು.
ಎಂಸಿಸಿ ಬಿ ಬ್ಲಾಕ್ನಲ್ಲಿಯೇ ಶಾಮನೂರು ಶಿವಶಂಕರಪ್ಪರ ನಿವಾಸ ಇದೆ. ಇದೇ ವಾರ್ಡ್ನಲ್ಲಿ ಬರುವ ಈಜುಕೊಳ ಪಕ್ಕದಲ್ಲಿನ ಪಾರ್ಕ್ನಲ್ಲಿ 'ಪುನೀತ ಆನಂದಗೂಡು' ಎಂಬ ಹೆಸರನ್ನಿಟ್ಟು ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿದೆ. ಈ ಪ್ರತಿಮೆಯನ್ನು ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಈ ಕಾರ್ಯ ನೆರವೇರಿಸಿದರು.

ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದಲ್ಲಿನ ಪಾರಿವಾಳ ಕುಳಿತ ಫೋಟೋದಲ್ಲಿರುವಂತೆ ನಿರ್ಮಾಣ ಮಾಡಲಾಗಿದೆ. ಈ ಪುತ್ಥಳಿ ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುವಂತಿದೆ. ಇನ್ನು ಈ ಪ್ರತಿಮೆ ಎದುರು ಅಪ್ಪು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಹಿರಿಯರೂ ಸಹ ಹಿಂದೆ ಬೀಳಲಿಲ್ಲ.
ಇನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ, ಲೈಫ್ ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಎಂಸಿಸಿ ಬಿ ಬ್ಲಾಕ್ನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ನಡೆಸಲಾಯಿತು. ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ 60 ಮಂದಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.