• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ; ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 30; ಇಬ್ಬರು ಮಹಿಳೆಯಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ.

ದಾವಣಗೆರೆ ನಗರದ ಹೊರಭಾಗದ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾದ ಗೌರಮ್ಮ (34) ಹಾಗೂ ರಾಧಿಕಾ (32) ಎಂದು ಗುರುತಿಸಲಾಗಿದೆ.

ಆಂಜನೇಯ ಕಾಟನ್ ಮಿಲ್ ಬಡಾವಣೆಯ ಒಂದೇ ಮನೆಯಲ್ಲಿ ವಾಸವಾಗಿದ್ದ ಇಬ್ಬರೂ ಮೂರು ದಿನಗಳ ಹಿಂದೆ ಹತ್ಯೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮಹಿಳೆಯರು ಕೂಲಿ‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎರಡು ಮೂರು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಮನೆಯ ಹೊರಗೂ ಸಹ ಕಾಣಿಸಿಕೊಂಡಿರಲಿಲ್ಲ.

ಮಹಿಳೆಯರ ಸಂಬಂಧಿಯಾದ ಚಂದ್ರಮ್ಮ ಹಲವು ಬಾರಿ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್‌ ಆಗಿತ್ತು. ಹೀಗಾಗಿ ಮನೆಯ ಬಳಿ ಬಂದಿದ್ದಾರೆ. ಮನೆಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ ಮತ್ತು ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ವಿದ್ಯಾನಗರ ಪೋಲೀಸರು ಬಾಗಿಲು ತೆರೆದು ನೋಡಿದಾಗ ಗೌರಮ್ಮ ಹಾಗೂ ರಾಧಿಕಾ ಕೊಲೆಯಾಗಿರುವುದು ಕಂಡುಬಂದಿದೆ. ಗೌರಮ್ಮ ಪತಿ ಮಂಜುನಾಥ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಚಂದ್ರಮ್ಮ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಮಂಜುನಾಥ ಮನೆಗೆ ಬಂದು ಹೋಗಿದ್ದು, ಅಂದು ರಾತ್ರಿ ಇಬ್ಬರು ಜಗಳ ಮಾಡಿಕೊಂಡಿದ್ದರು. ಈ‌ ಹಿನ್ನೆಲೆಯಲ್ಲಿ ಆತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಪರಾರಿಯಾಗಿರುವ ಆತನನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇಬ್ಬರು ಮಹಿಳೆಯರ ಹತ್ಯೆ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸಿರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

   ವಿಜೇತ ಟ್ವೀಟ್ ಗೆ ಸ್ವಾಗತ ಕೋರಿದ HDK | Oneindia Kannada

   ಘಟನೆಯ ವಿವರ

   ಸಹೋದರಿಯರಾದ ಗೌರಮ್ಮ ಮತ್ತು ರಾಧಿಕಾ ಇಬ್ಬರಿಗೂ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದ ಕಾರಣ ವಿಚ್ಚೇಧನವನ್ನು ಪಡೆದಿದ್ದರು. ಒಂದೇ ಮನೆಯಲ್ಲಿ ವಾಸ ಮಾಡುತ್ತಾ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಗೌರಮ್ಮ ಹಾಗೂ ರಾಧಕ್ಕ ಸ್ವಂತ ಅಕ್ಕ ತಂಗಿಯರಾಗಿದ್ದು, ತಂದೆ ಲೋಕಪ್ಪ ಹಾಗೂ ಹಂಪಮ್ಮ ದಂಪತಿಯ ಐವರು ಪುತ್ರಿಯರಲ್ಲಿ ಇವರು ಇಬ್ಬರು. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಗೌರಮ್ಮ ಹಾಗೂ ರಾಧಕ್ಕ ಇಬ್ಬರು ದಾವಣಗೆರೆಯ ಆಂಜನೇಯ ಕಾಟನ್ ಮಿಲ್‌ನಲ್ಲಿ‌ ಕೂಲಿ ಕೆಲಸ ಮಾಡುತ್ತಾ ಇಲ್ಲೇ ವಾಸವಾಗಿದ್ದರು. ಆದರೆ ಕಳೆದ ಆರು ದಿನಗಳ ಹಿಂದೆ ಇವರಿಬ್ಬರನ್ನು ಹತ್ಯೆ ಮಾಡಲಾಗಿದೆ. ಮೃತದೇಹಗಳು ಸಂಪೂರ್ಣವಾಗಿ ಕೊಳೆತು ಹೋಗಿರುವ ಕಾರಣ ಯಾವ ರೀತಿಯಲ್ಲಿ ಕೊಲೆ ಮಾಡಿರಬಹುದು ಎಂಬುದು ಇನ್ನು ಗೊತ್ತಾಗಿಲ್ಲ. ಪೊಲೀಸರು ಸಹ ಫೋರೆನ್ಸಿಕ್ ರಿಪೋರ್ಟ್‌ಗೆ ಕಾಯುತ್ತಿದ್ದಾರೆ.

   ಮೃತರ ಅಕ್ಕನ ಪುತ್ರಿ ಚಂದ್ರಮ್ಮ ಹೇಳುವ ಪ್ರಕಾರ, "ಕಳೆದ ಶನಿವಾರದಿಂದ ಕಂಡಿರಲಿಲ್ಲ. ಎಲ್ಲೋ ಹೊರಗೆ ಹೋಗಿರಬೇಕೆಂದುಕೊಂಡು ಸುಮ್ಮನಾಗಿದ್ದೆ. ಭಾನುವಾರವೂ ಕೆಲಸಕ್ಕೆ ಬಂದಿರಲಿಲ್ಲ. ಮತ್ತೆ ಬುಧವಾರ ಆಂಜನೇಯ ಕಾಟನ್ ಮಿಲ್‌ ಬಡಾವಣೆಗೆ ಬಂದು ಬಾಗಿಲು ಬಡಿದೆ. ಕಿಟಕಿ ಹಾಗೂ ಮನೆ ಬಾಗಿಲು ಸಂಪೂರ್ಣವಾಗಿ ಮುಚ್ಚಿದ್ದರಿಂದ ವಾಪಾಸ್ ಬಂದಿದ್ದೆ. ಆದರೆ ನಿನ್ನೆ ಹೋದಾಗ ಕೆಟ್ಟ ವಾಸನೆ ಬರುತಿತ್ತು. ಅಕ್ಕಪಕ್ಕದವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಗೌರಮ್ಮ ಹಾಗೂ ರಾಧಕ್ಕ ಶವ ಪತ್ತೆಯಾಗಿದ್ದು, ಚಿಕ್ಕಪ್ಪ ಇದ್ದರು ಎಂದಷ್ಟೇ ಗೊತ್ತು," ಎಂದಿದ್ದಾರೆ.

   ಇನ್ನು ಮೃತರ ತಾಯಿ ಹಂಪಮ್ಮ ಮಾತನಾಡಿ, "ನನ್ನ ಒಬ್ಬ ಮಗಳು ಈ ಹಿಂದೆ ಕೊಲೆಯಾಗಿ ಹೋಗಿದ್ದಳು. ಈಗ ಇನ್ನಿಬ್ಬರು ಹೆಣ್ಣು ಮಕ್ಕಳು ಹತ್ಯೆಯಾಗಿದ್ದು, ಈ ಮೂವರು ಹೆಣ್ಣುಮಕ್ಕಳ ಈ ದುರಂತ ನೋಡಿ ಬದುಕೇ ಸಾಕಾಗಿದೆ. ಸಂಬಂಧದಲ್ಲೇ ಮದುವೆ ಮಾಡಿಕೊಟ್ಟಿದ್ದೆವು. ವಾರಕ್ಕೊಮ್ಮೆ ಮಗಳು ಕರೆ ಮಾಡಿ ಮಾತನಾಡುತ್ತಿದ್ದಳು. ಎಲ್ಲರೂ ಚೆನ್ನಾಗಿದ್ದೇವೆ ಎಂದಷ್ಟೇ ಹೇಳುತ್ತಿದ್ದಳು," ಎನ್ನುತ್ತಾರೆ.

   ಎಸ್ಪಿ ಹೇಳಿದ್ದೇನು?
   ಇನ್ನು ದಾವಣಗೆರೆ ಎಸ್ಪಿ ಸಿ.ಬಿ. ರಿಷ್ಯಂತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕಳೆದ ಆರು ದಿನಗಳ ಹಿಂದೆ ಈ ಕೃತ್ಯ ನಡೆದಿರಬಹುದು. ಮೇಲ್ನೋಟಕ್ಕೆ ಕೊಲೆ ಎಂಬಂತೆ ಕಂಡು ಬಂದಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಫೋರೆನ್ಸಿಕ್ ರಿಪೋರ್ಟ್‌ಗೆ ಕಾಯುತ್ತಿದ್ದು, ವರದಿ ಬಂದ ಬಳಿಕ ಗೊತ್ತಾಗಲಿದೆ. ಗೌರಮ್ಮ ಎಂಬಾಕೆ ಮಂಜುನಾಥ್ ಜೊತೆ ವಿವಾಹವಾಗಿತ್ತು. ಈತ ಮನೆಗೆ ಬಂದಿದ್ದ ಎನ್ನುತ್ತಾರೆ, ಮತ್ತೆ ಬೇರೆ ಯಾರೋ ಬಂದಿದ್ದರು ಎಂಬ ಮಾಹಿತಿಯೂ ಇದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ‌ ನಡೆಸುತ್ತಿದ್ದೇವೆ," ಎಂದಿದ್ದಾರೆ.

   ರಾಧಕ್ಕಳದ್ದು ಹತ್ತು ವರ್ಷಗಳ ಹಿಂದೆಯೇ ಡೈವೋರ್ಸ್ ಆಗಿದೆ. ಅಂದಿನಿಂದ ಗೌರಮ್ಮಳ ಜೊತೆ ಇರುತ್ತಿದ್ದಳು. ಆದರೆ ಈಗ ಸಹೋದರಿಯರ ಹತ್ಯೆ ಯಾರು ಮಾಡಿರಬಹುದು ಎಂಬ ಕುರಿತಂತೆ ಪೊಲೀಸರಿಗೆ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದ್ದು, ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರಬರಲಿದೆ.‌ ಐವರು ಹೆಣ್ಣು ಮಕ್ಕಳ ಪೈಕಿ ಮೂವರು ಕೊಲೆಗೀಡಾಗಿದ್ದು, ಇನ್ನಿಬ್ಬರು ಇದ್ದಾರೆ. ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತರ ಸಂಬಂಧಿಕರು ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

   English summary
   Davanagere Vidya Nagar police found that two women were found murdered in their home. Police suspect that they killed 3 days back and investigating case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X