• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ಡೆಂಗ್ಯೂಗೆ ವಿದ್ಯಾರ್ಥಿನಿ ಬಲಿ: ಆತಂಕ ಸೃಷ್ಟಿಸುತ್ತಿದೆ ಮಕ್ಕಳಲ್ಲಿನ ವೈರಲ್ ಫೀವರ್!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 22: ಕೊರೊನಾ ಸೋಂಕಿನಿಂದ ತತ್ತರಿಸಿದ್ದ ಬೆಣ್ಣೆನಗರಿ ಜನರು ಶಾಕ್ ಆಗುವಂತಹ ಮಾಹಿತಿ ಹೊರಬಿದ್ದಿದೆ. ದಾವಣಗೆರೆ ಜಿಲ್ಲೆಯಲ್ಲಿ ಡೆಂಗ್ಯೂ, ಮಕ್ಕಳಲ್ಲಿ ಶೀತ, ಜ್ವರ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಬೇಬಿ ಸುಮಯ ಕೌಸರ್ ಎಂಬಾಕೆ ಡೆಂಗ್ಯೂಗೆ ಬಲಿಯಾಗಿರುವುದು ದುಗುಡ ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಈ ವರ್ಷ ಡೆಂಗ್ಯೂಗೆ ತುತ್ತಾಗಿ ಸಾವನ್ನಪ್ಪಿದ ಮೊದಲ ವಿದ್ಯಾರ್ಥಿನಿ ಈಕೆ.

ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಜ್ವರ, ಶೀತ, ಕೆಮ್ಮು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬಳಲುತ್ತಿರುವ ಮಕ್ಕಳನ್ನು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

 ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ

ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ

ಈ ವೇಳೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾತಾವರಣ ಬದಲಾಗುತ್ತದೆ. ಸಾಮಾನ್ಯವಾಗಿ ವೈರಲ್ ಜ್ವರ ಹಾಗೂ ಡೆಂಗ್ಯೂ ಜ್ವರ ಹೆಚ್ಚಾಗಿ ಹರಡುತ್ತಿದ್ದು, ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ವೈದ್ಯರು ಹಾಗೂ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಘಟಕ, ಜನರೇಟರ್, ಎಂಆರ್ಐ, ಪಿಐಸಿಯು., ಮಕ್ಕಳ ವಾರ್ಡ್, ಮಕ್ಕಳ ತೀವ್ರ ನಿಗಾ ಚಿಕಿತ್ಸಾ ಘಟಕ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ವಾತಾವರಣ ಏರುಪೇರು ಆಗುವುದರಿಂದ ವೈರಲ್ ಫೀವರ್ ಮಕ್ಕಳಲ್ಲಿ ಬರುವುದು ಸಾಮಾನ್ಯ ಎಂದು ಅಭಿಪ್ರಾಯಪಟ್ಟರು.
 ಎಷ್ಟು ಬೆಡ್ ಖಾಲಿ ಇದೆ?

ಎಷ್ಟು ಬೆಡ್ ಖಾಲಿ ಇದೆ?

"ಮಕ್ಕಳ ಆಸ್ಪತ್ರೆಯಲ್ಲಿ 65 ಬೆಡ್ ಇದ್ದು, 12 ಪಿಐಸಿಯು ಬೆಡ್ ಇದೆ. ಇದರಲ್ಲಿ 40 ಬೆಡ್ ಭರ್ತಿ ಆಗಿದ್ದು, ಉಳಿದ 25 ಬೆಡ್ ಖಾಲಿ ಇವೆ. ವೈರಲ್ ಜ್ವರ 5 ದಿನದೊಳಗೆ ಹಾಗೂ ಡೆಂಗ್ಯೂ ಲೈಕ್ ಇಲ್‍ನೆಸ್ 10 ದಿನದೊಳಗೆ ಕಡಿಮೆ ಆಗುತ್ತದೆ.

ಜಿಲ್ಲಾಸ್ಪತ್ರೆಯಲ್ಲಿ 40 ಮಕ್ಕಳು ವೈರಲ್ ಜ್ವರದ ಕಾರಣದಿಂದ ದಾಖಲಾಗಿದ್ದು, ಅದರಲ್ಲಿ 7 ಮಕ್ಕಳು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಇವರನ್ನು Rapid ಟೆಸ್ಟ್ ಮಾಡಿಸಿದ್ದು, ಡೆಂಗ್ಯೂ ಸಂಬಂಧಿತ ಎಲಿಸಾ ಟೆಸ್ಟ್ ಮಾಡಬೇಕಿದೆ. ಬಾಪೂಜಿ ಆಸ್ಪತ್ರೆಯಲ್ಲಿ 21 ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದು, ಅದರಲ್ಲಿ 10 ಮಕ್ಕಳು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 110 ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದು, ಅದರಲ್ಲಿ 28 ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಯಾವುದೇ ತೊಂದರೆಯಿಲ್ಲ."

 ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಭೀತಿ

ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆ ಭೀತಿ

"ಕೋವಿಡ್ 3ನೇ ಅಲೆ ಸಂಭವ ಹೆಚ್ಚಿದ್ದು, ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ. ಇದಕ್ಕೆ ಬೇಕಾದ ಹಾಸಿಗೆ, ವೆಂಟಿಲೇಟರ್ಸ್, ಪಾಟ್ಸ್, ಮಾನಿಟರ್ಸ್ ಸೇರಿದಂತೆ ಮಾನವ ಸಂಪನ್ಮೂಲಗಳನ್ನು ಸಿದ್ಧತೆ ಮಾಡಿಕೊಂಡಿದ್ದು, ಅವರಿಗೆ ಬೇಕಾದ ಎಲ್ಲಾ ತರಬೇತಿಗಳನ್ನು ನೀಡಲಾಗಿದೆ. ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಬಾಪೂಜಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಭಯ ಬೀಳುವ ವಾತಾವರಣ ನಿರ್ಮಾಣವಾಗಿಲ್ಲ. ಆದ್ದರಿಂದ ಜನರು ಆತಂಕಪಡುವ ಅಗತ್ಯವಿಲ್ಲ," ಎಂದು ದಾವಣಗೆರೆ ಜಿಲ್ಲಾಧಿಕಾರಿ ಅಭಯ ನೀಡಿದ್ದಾರೆ.

 ಎಂಆರ್ಐ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣ

ಎಂಆರ್ಐ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣ

"ಮಕ್ಕಳಿಗಾಗಿಯೇ ಮೀಸಲಾಗಿರುವ ವಾರ್ಡ್ ನಂಬರ್ 65 ಹಾಗೂ 66ಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ ಮಹಾಂತೇಶ್ ಬೀಳಗಿ, ಮಕ್ಕಳ ಆಸ್ಪತ್ರೆಗೆ ಬೇಕಾದ ಮಾನಿಟರ್ ಸ್ಟ್ಯಾಂಡ್, ಮಲ್ಟಿಪ್ಯಾರ ಮಾನಿಟರ್, ಐಸಿಯು ಕಾಟ್ಸ್, ವೆಂಟಿಲೆಟರ್ಸ್‌ಗಳನ್ನು ಸೆ. 29ರೊಳಗಾಗಿ ಸಿದ್ಧತೆ ಮಾಡಿಕೊಂಡಿರಬೇಕು. ಆಸ್ಪತ್ರೆಗೆ ಬೇಕಾದ ಆಕ್ಸಿಜನ್ ಬೆಡ್, ಐಸಿಯು ಕಾಟ್ಸ್‌ಗಳನ್ನು ಶನಿವಾರದೊಳಗಾಗಿ ತರಿಸಬೇಕು. ಇಲ್ಲದಿದ್ದರೆ ಗುತ್ತಿಗೆ ರದ್ದುಪಡಿಸಲಾಗುವುದು," ಎಂದಿದ್ದಾರೆ.

"ಜಿಲ್ಲಾಸ್ಪತ್ರೆಯಲ್ಲಿ 30- 40 ಅಡಿ ಸ್ಥಳಾವಕಾಶದಲ್ಲಿ ಹೊಸದಾಗಿ ಎಂಆರ್ಐ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ವೈದ್ಯಕೀಯ ಅಧ್ಯಯನ ಮಾಡುತ್ತಿರುವ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಕ್ಕಳ ಚಿಕಿತ್ಸೆ ಕುರಿತಂತೆ ತರಬೇತಿ ನೀಡಲು ಕ್ರಮ ವಹಿಸಲಾಗಿದೆ," ಎಂದು ಜಿಲ್ಲಾಧಿಕಾರಿ ತಿಳಿಸಿದರು.
 ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್

ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್

"ಜಿಲ್ಲಾಸ್ಪತ್ರೆಯಲ್ಲಿ 1000 ಲೀಟರ್ ಸಾಮರ್ಥ್ಯದ ಪ್ರತ್ಯೇಕ 3 ಆಕ್ಸಿಜನ್ ಪ್ಲಾಂಟ್‍ಗಳ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಕೋವಿಡ್‍ನ ಸಂಭಾವ್ಯ 3ನೇ ಅಲೆಯನ್ನು ತಡೆಗಟ್ಟಲು ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಕ್ಸಿಜನ್ ಸಮಸ್ಯೆಯಾಗಿತ್ತು. ಹೀಗಾಗಿ ಸಂಭಾವ್ಯ 3ನೇ ಅಲೆಯಲ್ಲಿ ಆಕ್ಸಿಜನ್, ಮಾನವ ಸಂಪನ್ಮೂಲಗಳ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಮೂರು ಆಕ್ಸಿಜನ್ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಇದಕ್ಕೆ 500 ಕೆವಿ ಜನರೇಟರ್ ವಿದ್ಯುತ್ ಸಂಪರ್ಕ ವ್ಯವಸ್ಥೆ, ಪವರ್ ಬ್ಯಾಕಪ್ ಜನರೇಟರ್ ಹಾಗೂ ಡಿಸೇಲ್ ವ್ಯವಸ್ಥೆಯನ್ನು ಅಳವಡಿಸಿ ಕೆಲವೇ ದಿನಗಳಲ್ಲಿ ಇದರ ಉಪಯೋಗ ಸಾರ್ವಜನಿಕರು ಪಡೆದುಕೊಳ್ಳುವಂತೆ ಮಾಡಲಾಗುವುದು," ಎಂದು ಜಿಲ್ಲಾಧಿಕಾರಿಗಳು ಹೇಳಿದರು.

 ಉಚಿತವಾಗಿ ಚಿಕಿತ್ಸೆ ಪಡೆಯಬಹುದು

ಉಚಿತವಾಗಿ ಚಿಕಿತ್ಸೆ ಪಡೆಯಬಹುದು

"ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿನ 65, 66ನೇ ಮಕ್ಕಳ ತೀವ್ರ ನಿಗಾ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಬೆಡ್ ಬಳಿ ತೆರಳಿ, ಅಲ್ಲಿನ ಮಕ್ಕಳ ಖಾಯಿಲೆ ಹಾಗೂ ಅದರ ಚಿಕಿತ್ಸೆಗಳ ಬಗ್ಗೆ ವೈದ್ಯರು ಹಾಗೂ ಪೋಷಕರನ್ನು ಮಾತನಾಡಿಸಿ, ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ ಅವರ ಶುಶ್ರೂಷೆ ಮತ್ತು ಆರೈಕೆ ಉತ್ತಮ ರೀತಿಯಲ್ಲಿ ಆಗಬೇಕು," ಎಂದು ವೈದ್ಯರಿಗೆ ಸೂಚನೆ ನೀಡಿದರು.

"ಆಸ್ಪತ್ರೆಯಲ್ಲಿ ಬೆಡ್‌ಗಳ ಯಾವುದೇ ಕೊರತೆಯಿಲ್ಲ ಸಾರ್ವಜನಿಕರು ಬಂದು ಉಚಿತವಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯಬಹುದು ಹಾಗೂ ವೈದ್ಯರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಪರೀಕ್ಷೆಗಳಿಗೆ ಸೂಚಿಸುವಂತಿಲ್ಲ. ಅನಾವಶ್ಯಕವಾಗಿ ಸೂಚಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಎಂಆರ್ಐ ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆ ಆವರಣದಲ್ಲಿ 30-40 ಜಾಗವನ್ನು ನಿಗದಿಪಡಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಮಾಡಲು," ಸೂಚನೆ ನೀಡಿದರು.
   ಮೆಟ್ರೋ ಸುರಂಗ ಮಾರ್ಗ ಕೊರೆದು 13 ತಿಂಗಳ ನಂತರ ಹೊರ ಬಂದ ಊರ್ಜಾ ಯಂತ್ರ | Oneindia Kannada
   English summary
   A girl of government school in Kerebilachi village of Channagiri taluk in Davanagere district has died due to dengue, causing anxiety among children.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X