ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಲಂಪಿಕ್ ಆಯ್ಕೆಗೆ ಹೊರಟ ಹಳ್ಳಿಯ ಅಥ್ಲಿಟ್‌ನ ಕಷ್ಟದ ಹಾದಿಯ ರೋಚಕ ಸ್ಟೋರಿ

By ಯೋಗರಾಜ್ ಜಿ. ಹೆಚ್.
|
Google Oneindia Kannada News

ದಾವಣಗೆರೆ, ಜೂನ್ 19: ಆತ ಕಡು ಬಡ ಕುಟುಂಬದಿಂದ ಬಂದಾತ. ಕೂಲಿ ಕೆಲಸ ಮಾಡಿಕೊಂಡು ಈಗ ದೇಶವೇ ಮೆಚ್ಚುವಂಥ ಸಾಧನೆ ಮಾಡಿರುವ ಅಪ್ಪಟ ಹಳ್ಳಿ ಸೊಗಡಿನ ಕ್ರೀಡಾಪಟು. ಗುಡ್ಡಗಾಡು ಪ್ರದೇಶದಲ್ಲಿ ಕಠಿಣ ಪರಿಶ್ರಮಪಟ್ಟು, ಬಡತನದಲ್ಲಿ ಬೆಂದು ಸಾಧನೆ ಮೆಟ್ಟಿಲು ಹತ್ತಲು ಹೊರಟಿರುವ ಈ ಯುವಕನ ಸಾಧನೆ ಕೇಳಿದರೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುವುದು ಖಚಿತ‌.

ದಿನಕ್ಕೆ ಎಂಟು ಗಂಟೆ ಕಾಲ ಕಲ್ಲು, ಮಣ್ಣು ಲೆಕ್ಕಿಸದೇ ಅಭ್ಯಾಸ ಮಾಡುವ ಅಪ್ಪಟ ಹಳ್ಳಿಗಾಡಿನ ಅಪ್ರತಿಮ ಓಟಗಾರ. ಈಗ ಈತ ವಿಶ್ವದ ಗಮನ ಸೆಳೆಯುವ ಒಲಂಪಿಕ್ ಆಯ್ಕೆ ಪ್ರಕ್ರಿಯೆಗೆ ಹೋಗಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಪ್ರತಿಭೆ ಹಾಲೇಶ್.

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ ಸಾಧಿಸಲೇಬೇಕೆಂಬ ಹಠ ತೊಟ್ಟ ಯುವಕ ಗುಡ್ಡಗಾಡು ಪ್ರದೇಶದಲ್ಲಿ ಕಲ್ಲು, ಮಣ್ಣು ಲೆಕ್ಕಿಸದೇ ದಿನಕ್ಕೆ ಎಂಟು ಗಂಟೆ ಅಭ್ಯಾಸ ಮಾಡಿ ಈಗ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಹಾಲೇಶ್ ಪಂಜಾಬ್‌ನ ಪಟಿಯಾಲದಲ್ಲಿ ಜೂನ್ 21ರಂದು ನಡೆಯಲಿರುವ 1500 ಮೀಟರ್ ಓಟದ ಸ್ಪರ್ಧೆಯ ಒಲಂಪಿಕ್ ಆಯ್ಕೆಗೆ ಸೆಲೆಕ್ಟ್ ಆಗಿದ್ದಾರೆ.

 ಒಲಂಪಿಕ್‌ಗೆ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸ

ಒಲಂಪಿಕ್‌ಗೆ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸ

ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದಿಂದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 1500 ಮೀಟರ್ ಓಟ ಆಯೋಜನೆ ಮಾಡಿದ್ದು, ದಾವಣಗೆರೆಯಿಂದ ಪಂಜಾಬ್‌ಗೆ ತೆರಳಿದ್ದಾರೆ. ಈ ಪಂದ್ಯಾವಳಿಯಲ್ಲಿ ಆಯ್ಕೆಯಾದರೆ ಒಲಂಪಿಕ್‌ಗೆ ಅರ್ಹತೆ ನೀಡಲಾಗುತ್ತದೆ. ಹಾಗಾಗಿ ಕಠಿಣ ಅಭ್ಯಾಸ ಮಾಡಿರುವ ಹಾಲೇಶ್, ಒಲಂಪಿಕ್‌ಗೆ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸ ಹೊಂದಿರುವ ಈತ, ಇದಕ್ಕಾಗಿ ತುಂಬಾ ಶ್ರಮ ಹಾಕಿದ್ದಾನೆ.

 ಕೂಲಿ ಮಾಡಿ ಜೀವನ ನಿರ್ವಹಣೆ

ಕೂಲಿ ಮಾಡಿ ಜೀವನ ನಿರ್ವಹಣೆ

ಹಾಲೇಶ್ ಅವರ ತಂದೆ ಕುಂಟಬಳ್ಳೆರ ಭೀಮಣ್ಣ ಈಗಾಗಲೇ ತೀರಿಕೊಂಡಿದ್ದು, ತಾಯಿ ಚೌಡಮ್ಮ ಈಗಲೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಹಾಲೇಶ್ ಸಹ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.‌ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡು ಎಲ್ಲಿಯೂ ಪದಕ ಇಲ್ಲದೇ ವಾಪಸ್ ಆಗದಿರುವುದು ಹಾಲೇಶ್ ಹೆಗ್ಗಳಿಕೆ. ರಾಜ್ಯ ಮತ್ತು ಅಂತಾರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪದಕ ಗೆದ್ದಿರುವ ಹಾಲೇಶ್ ಸಾಧನೆಯನ್ನು ಮೆಚ್ಚದವರಿಲ್ಲ.

 ಪದಕ ಗೆದ್ದು ಅಪ್ರತಿಮ ಸಾಧನೆ

ಪದಕ ಗೆದ್ದು ಅಪ್ರತಿಮ ಸಾಧನೆ

ಕುರಿ‌ ಕಾಯುತ್ತಿದ್ದ ಹಾಲೇಶ್ ಈಗ ಬಿಡುವಿನ ವೇಳೆಯಲ್ಲಿ‌ ಕೂಲಿ‌ ಕೆಲಸಕ್ಕೆ ಹೋಗುತ್ತಾರೆ. ಇದ್ದ ಅಣ್ಣಂದಿರು ಮದುವೆಯಾದ ಮೇಲೆ ಹಾಲೇಶ್ ಹಾಗೂ ತಾಯಿಯ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಆದರೂ ದೇಶಕ್ಕೆ ಒಲಂಪಿಕ್‌ನಲ್ಲಿ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತರಬೇಕೆಂಬ ಹೆಬ್ಬಯಕೆ ಹಾಲೇಶ್ ಅವರದ್ದು.
ಸೊಕ್ಕೆಯ ಹೊರವಲಯದಲ್ಲಿ ಇರುವ ಹಾಲೇಶ್ ಕುಟುಂಬ ಈಗಲೂ ಗುಡಿಸಲಿನಲ್ಲಿ ವಾಸವಾಗಿದ್ದಾರೆ. 15.26 ನಿಮಿಷದಲ್ಲಿ ಐದು ಸಾವಿರ ಮೀಟರ್ ಓಡಿದ ಸಾಧನೆ ಮಾಡಿರುವ ಹಾಲೇಶ್ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಅಪ್ರತಿಮ ಸಾಧನೆ ಮಾಡಿದ ಅಪ್ಪಟ ಹಳ್ಳಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಇದೆ‌.

Recommended Video

ಫ್ಲೈಯಿಂಗ್ ಸಿಖ್ Milka Singh ಕೊರೊನಾಗೆ ಬಲಿ | Oneindia Kannada
 ಬೇಕಿದೆ ನೆರವಿನ ಹಸ್ತ

ಬೇಕಿದೆ ನೆರವಿನ ಹಸ್ತ

ಹಾಲೇಶ್ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕೆಂದರೆ ಸಾಲ ಮಾಡಿ ಹೋಗುತ್ತಾರೆ. ಮ್ಯಾರಥಾನ್ ಓಟದಲ್ಲಿ ಹಾಲೇಶ್ ಅವರದ್ದು ಚಿರಪರಿಚಿತ ಹೆಸರು. ತನ್ನ ಗ್ರಾಮದಲ್ಲಿ ಕನಿಷ್ಟ ಟ್ರ್ಯಾಕ್ ಇಲ್ಲದಿದ್ದರೂ ಗುಡ್ಡಗಾಡು ಪ್ರದೇಶದಲ್ಲೇ ಓಡಿ ಪ್ರಾಕ್ಟೀಸ್ ಮಾಡಿ ರಾಜ್ಯ ಹಾಗೂ ದೇಶ ಮೆಚ್ಚುವಂಥ ಸಾಧನೆ ಮಾಡುತ್ತಿರುವ ಹಾಲೇಶ್‌ಗೆ ಆರ್ಥಿಕ ಸಹಾಯ ಬೇಕಿದೆ.

"ಒಲಂಪಿಕ್ ಆಯ್ಕೆಗೆ ಹೋಗುತ್ತಿದ್ದೇನೆ. ಕಷ್ಟಪಟ್ಟು ಅಭ್ಯಾಸ ಮಾಡಿದ್ದೇನೆ. ನಾನು ಒಲಂಪಿಕ್‌ನಲ್ಲಿ ದೇಶ ಪ್ರತಿನಿಧಿಸಲು ಕಾತರದಿಂದ ಕಾಯುತ್ತಿದ್ದೇನೆ. ದೇಶವೇ ಮೆಚ್ಚುವಂತಹ ಸಾಧನೆ ಮಾಡಬೇಕೆಂಬ ಹಂಬಲ ಇದೆ. ಬಡತನ, ಆರ್ಥಿಕ ಸಮಸ್ಯೆ ಇದಕ್ಕೆ ಅಡ್ಡಿಯಾಗದು. ನಮ್ಮಂಥ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಸಿಕ್ಕರೆ ಅನುಕೂಲವಾಗುತ್ತದೆ'' ಎಂದು ಹಾಲೇಶ್ ಹೇಳಿದ್ದಾರೆ.

English summary
Here is the story of Halesh based on Sokke Jagaluru taluk, davanagere district who went for Olympic selection process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X