• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ತಿ ತೆರಿಗೆ ಹೆಚ್ಚಿಸಿದ ಸರ್ಕಾರ; ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜನವರಿ 08: ಆಸ್ತಿ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಾವಣಗೆರೆ ನಗರದಲ್ಲಿಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ಪಾಲಿಕೆ ಎದುರು ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ಸಂದರ್ಭದಲ್ಲೂ ಆಸ್ತಿ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ವಕ್ತಾರ ಡಿ.ಬಸವರಾಜ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

"ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ ವಿಧಿಸಿದ್ದ ಲಾಕ್‍ಡೌನ್, ಸಿಲ್‍ಡೌನ್ ಪರಿಣಾಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಂದ್ ಆಗಿ, ಸಾಕಷ್ಟು ಜನರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಸ್ತಿ ತೆರಿಗೆ ಹೆಚ್ಚಿಸುವ ಮೂಲಕ ಜನರ ಗಾಯದ ಮೇಲೆ ಬರೆ ಎಳೆದಿದೆ" ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, "ಪಾಲಿಕೆಯಲ್ಲಿ ಹಿಂದೆ ಕಾಂಗ್ರೆಸ್ ಆಡಳಿತ ಇದ್ದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ರಾಜ್ಯ ಸರ್ಕಾರ ಆಸ್ತಿ ತೆರಿಗೆ ಹೆಚ್ಚಿಸಲು ಪ್ರಸ್ತಾಪ ಸಲ್ಲಿಸಿತ್ತು. ಆಗ ಅತಿವೃಷ್ಟಿಯಿಂದ ಜನರ ಬದುಕು ಸಂಕಷ್ಟದಲ್ಲಿರುವುದನ್ನು ಮನವರಿಕೆ ಮಾಡಿಕೊಂಡು ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಿಸಬಾರದು ಎಂದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿದ ಪರಿಣಾಮ ಸರ್ಕಾರ ತೆರಿಗೆ ಹೆಚ್ಚಳ ಪ್ರಸ್ತಾಪವನ್ನು ಕೈ ಬಿಟ್ಟಿತ್ತು" ಎಂದು ಹೇಳಿದರು.

"ಈಗಿನ ಬಿಜೆಪಿ ಸರ್ಕಾರ ಸಾರ್ವಜನಿಕರ ಸಂಕಷ್ಟ ಅರಿಯದೇ ಕೊರೊನಾ ಸಂದರ್ಭದಲ್ಲೂ ಮನೆ ಕಂದಾಯವನ್ನು ಶೇ.20ಕ್ಕೆ ಮತ್ತು ವಾಣಿಜ್ಯ ತೆರಿಗೆಯನ್ನು ಶೇ.24 ರಷ್ಟು ಏರಿಕೆ ಮಾಡಿರುವುದು ಸರಿಯಲ್ಲ" ಎಂದು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, "ಮೇಯರ್ ಚುನಾವಣೆ ಮುಂಚೆಯೇ ಆಗಿನ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿಗಳು ತರಾತೂರಿಯಲ್ಲಿ ಮನೆ ಕಂದಾಯವನ್ನು ಶೇ.20 ರಷ್ಟು ಮತ್ತು ವಾಣಿಜ್ಯ ತೆರಿಗೆಯನ್ನು ಶೇ.24ರಷ್ಟು ಹೆಚ್ಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು" ಎಂದರು.

"ಅಂದಿನಿಂದ ಆಸ್ತಿ ಕಂದಾಯ ಹೆಚ್ಚಿಸಿರುವುದನ್ನು ರದ್ದು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಂದಾಯ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದೆ ರಾಜ್ಯ ಸರ್ಕಾರ ಆಸ್ತಿ ತೆರಿಗೆಯನ್ನು ಹೆಚ್ಚಿಸಿರುವ ಪರಿಣಾಮ ಮೊದಲು ಒಂದು ಸಾವಿರ ರೂ. ಇದ್ದ ಮನೆ ಕಂದಾಯವನ್ನು 1700ರಿಂದ 1800 ಮತ್ತು ಐದು ಸಾವಿರ ರೂ., ಇದ್ದ ವಾಣಿಜ್ಯ ತೆರಿಗೆಯನ್ನು 8-9 ಸಾವಿರ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಆರೋಪಿಸಿದರು.

ಹೆಚ್ಚಿಸಿರುವ ಆಸ್ತಿ ತೆರಿಗೆಯನ್ನು ತಕ್ಷಣ ಕಡಿತ ಗೊಳಿಸಿ, ಹಿಂದಿನ ತೆರಿಗೆಯನ್ನೇ ಮುಂದುವರೆಸಬೇಕು. ಇನ್ನೂ ಎರಡು ವರ್ಷ ಯಾವುದೇ ಕಂದಾಯ ಹೆಚ್ಚಿಸಬಾರದು ಎಂದು ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

English summary
Protest by Congress in-front of city corporation office Davanagere against hike in property tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X