ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ನಿರ್ಧರಿಸಿದ್ರಾ ಪ್ರಮೋದ್ ಮುತಾಲಿಕ್...?

|
Google Oneindia Kannada News

ದಾವಣಗೆರೆ: "ನನಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಹಣ ಖರ್ಚು ಮಾಡಿ ಚುನಾವಣೆ ಮಾಡುವ ಶಕ್ತಿಯೂ ನನಗಿಲ್ಲ. ಲೂಟಿಕೋರರ ಮಧ್ಯೆ ನಾನು ಎಲೆಕ್ಷನ್ ನಲ್ಲಿ ನಿಲ್ಲಲು ಆಗದು. ಇನ್ನು ಮುಂದೆ ನನ್ನದೇನಿದ್ದರೂ ಹಿಂದುತ್ವ ಪರವಾದ ಹೋರಾಟ ಅಷ್ಟೇ " ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಈ ಮೂಲಕ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ನಿರ್ಧರಿಸಿದ್ದಾರಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಚುನಾವಣೆಗಳನ್ನು ಗಮನಿಸಿದರೆ ನಮ್ಮಂಥವರ ಕೈಯಲ್ಲಿ ಎದುರಿಸುವುದು ಆಗದು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಮತಾಂತರ ಪಿಡುಗು ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಯನ್ನು ಆದಷ್ಟು ಬೇಗ ಮಾಡಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕೇವಲ ಮತಾಂತರ ನಿಷೇಧ ಕಾನೂನು ಜಾರಿಯಾದರೆ ಸಾಲದು. ತುಂಬಾ ಬಿಗಿಯಾಗಿರಬೇಕು. ಮತಾಂತರ ಮಾಡುವುದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸುವಂಥ ಕಾನೂನು ಜಾರಿಗೆ ಬರಬೇಕು. ಆಗ ಮಾತ್ರ ಭಯ ಹುಟ್ಟಿಸಲು ಸಾಧ್ಯ. ಕೇವಲ ಪೇಪರ್ ಮೇಲೆ ಇದ್ದರೆ ಏನಕ್ಕೂ ಉಪಯೋಗವಾಗದು ಎಂದು ಅಭಿಪ್ರಾಯಪಟ್ಟರು.

Pramod Muthalik likely to take political retirement?

ಮತಾಂತರ ವಿರುದ್ಧ ನಾನು ಸೈಲೆಂಟ್ ಆಗಿಲ್ಲ. ಮತಾಂತರ ಎನ್ನುವುದು ಬ್ರಿಟೀಷರು ಬಂದಾಗಿನಿಂದಲೂ ಪ್ರಾರಂಭವಾಗಿದೆ. ನಿರಂತರವಾಗಿ ನಡೆಯುತ್ತಿದೆ. ವಿವೇಕಾನಂದರು ಮತಾಂತರ ಅಲ್ಲ, ದೇಶಾಂತರ ಎಂದು ಹೇಳಿದ್ದರು. ನಮ್ಮ ದೇಶದಲ್ಲಿ ಮತಾಂತರ ಆದ ತಕ್ಷಣ ನಾಗಭೂಮಿ ಎನ್ನುವುದನ್ನು ನಾಗಾಲ್ಯಾಂಡ್ ಮಾಡಲಾಯಿತು. ದೇಶದಲ್ಲಿ ಹೀಗೆ ಮುಂದುವರಿದರೆ ಲ್ಯಾಂಡ್ ಆಗುತ್ತದೆ ಅಷ್ಟೇ. ಎಂಎಲ್ಎ ಗೂಳಿಹಟ್ಟಿ ಶೇಖರ್ ಅವರು ವಿಧಾನಸಭೆಯಲ್ಲಿ ತನ್ನ ತಾಯಿ ಮತಾಂತರ ಮಾಡಿದ್ದಾರೆ ಎಂಬ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದು ದುರ್ದೈವದ ಸಂಗತಿ. ಶಾಸಕರ ತಾಯಿಯೇ ಮತಾಂತರ ಆಗಿದ್ದಾರೆ ಎಂಬ ಬಗ್ಗೆ ನಾಡಿನಲ್ಲಿ ಬಹುಚರ್ಚಿತ ವಿಷಯವಾಗಿತ್ತು ಎಂದು ತಿಳಿಸಿದರು.

ಮತಾಂತರ ನಿಷೇಧ ಕಾನೂನು ಜಾರಿ ಕಟ್ಟುನಿಟ್ಟಾಗಿ ಆಗಬೇಕು. ಅದು ಹೇಗಿರಬೇಕೆಂದರೆ ಮತಾಂತರ ಮಾಡಿದವರನ್ನು ಕೂಡಲೇ ಬಂಧಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ಆಗುವ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದರಲ್ಲದೇ, ಕ್ರಿಶ್ಚಿಯನ್ ಪಾದ್ರಿಗಳನ್ನು ಹೊಡೆದೋಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೂಡಾ ಅಧ್ಯಕ್ಷರು ರಾಜೀನಾಮೆ ನೀಡದಿದ್ರೆ ಪ್ರೊಟೆಸ್ಟ್...!

ದಾವಣಗೆರೆ- ಹರಿಹರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್ ಹಾಗೂ ಅವರ ಸಹೋದರರು ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಅಕ್ರಮವಾಗಿ ಸೈಟ್ ಪಡೆದಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು. ಇಂಥ ಲೂಟಿ ಮಾಡಿದ ಶಿವಕುಮಾರ್ ಅವರನ್ನು ಬಿಜೆಪಿಯವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಕೂಡಲೇ ಬಿಜೆಪಿಯವರು ದೂಡಾ ಅಧ್ಯಕ್ಷರ ರಾಜೀನಾಮೆ ಪಡೆಯಬೇಕು. ಹತ್ತು ದಿನಗಳೊಳಗೆ ಕ್ರಮ ಆಗದಿದ್ದರೆ ಹತ್ತು ದಿನಗಳ ಬಳಿಕ ದೂಡಾ ಹಾಗೂ ಬಿಜೆಪಿ ಕಚೇರಿ ಎದುರು ಶ್ರೀರಾಮ ಸೇನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದೇವರಮನಿ ಶಿವಕುಮಾರ್ ಭ್ರಷ್ಟಾಚಾರ, ಲೂಟಿ ಮಾಡಿದ್ದು ಗೊತ್ತಿದ್ದರೂ ಬಿಜೆಪಿಯವರು ದೂಡಾ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಂದ ಎಷ್ಟು ಹಣ ಬಿಜೆಪಿಯವರು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಮನೆ ಇದ್ದವರಿಗೆ, ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದವರಿಗೆ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

2017 ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ರಾಜಕಾರಣಿಗಳು, ಅವರ ಆಪ್ತರು, ಸರ್ಕಾರಿ ನೌಕರರು ಸೇರಿದಂತೆ 103 ಮಂದಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರು, ಅವರ ಆಪ್ತರು, ಆಗ ಕಾಂಗ್ರೆಸ್ ನಲ್ಲಿದ್ದ ಈಗ ದೂಡಾ ಅಧ್ಯಕ್ಷರಾಗಿರುವ ದೇವರಮನಿ ಶಿವಕುಮಾರ್ ಸೇರಿದಂತೆ ಹಲವರಿಗೆ ನೀಡಲಾಗಿದೆ. ಕಾನೂನು ಗಾಳಿಗೆ ತೂರಿ ಈ ನಿರ್ಧಾರ ಮಾಡಲಾಗಿತ್ತು. ಬಡವರಿಗೆ ನಿವೇಶನ ಸಿಕ್ಕಿಲ್ಲ. 20 ಸಾವಿರ ಅರ್ಜಿಗಳು ಬಂದಿದ್ದರೂ ಇದರಲ್ಲಿ ಬಡವರಿಗೆ ಸಿಕ್ಕಿದ್ದು ಏನಿಲ್ಲ. ಅರ್ಜಿಯಿಂದಲೇ ನಾಲ್ಕೂವರೆ ಕೋಟಿ ರೂಪಾಯಿ ಬಂದಿದೆ. ಆ ಹಣ ಏನಾಯ್ತು? ರಾಜಕೀಯ ಪ್ರಭಾವಕ್ಕೆ ಮಣಿದು ಹಂಚಿಕೆ ಮಾಡಲಾಗಿದ್ದು, ಜನಪ್ರತಿನಿಧಿ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

Recommended Video

Priyanka Gandhi ತಾನು ಭಂದಿಯಾಗಿರುವ ಕೋಣೆ ಗೀಡಿಸಿದ್ದು ಹೀಗೆ | Oneindia Kannada

English summary
Sri Rama Sene Chief Pramod Muthalik likely to take political retirement. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X