ಈಶ್ವರಪ್ಪನವರೇ ನಿಮ್ಮ ಯೋಗ್ಯತೆ ಎಲ್ಲಿಗೆ ಬಂದಿದೆ ನೋಡಿ; ಪಿ.ಟಿ. ಪರಮೇಶ್ವರ್ ನಾಯ್ಕ್
ದಾವಣಗೆರೆ, ಅಕ್ಟೋಬರ್ 25: ಈಶ್ವರಪ್ಪನವರೇ ನಿಮ್ಮ ಯೋಗ್ಯತೆ ಎಲ್ಲಿಗೆ ಬಂದು ನಿಂತಿದೆ ನೋಡಿಕೊಳ್ಳಿ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಸಚಿವ ಕೆ.ಎಸ್.ಈಶ್ವರಪ್ಪ ಬಗ್ಗೆ ಕಿಡಿ ಕಾರಿದ್ದಾರೆ.
"ಗಾಂಧಿಯನ್ನು ಗೋಡ್ಸೆ ಒಂದು ಬಾರಿ ಕೊಂದರೆ, ಕಾಂಗ್ರೆಸ್ ಪ್ರತಿದಿನ ಕೊಲ್ಲುತ್ತಿದೆ"
ನಿನ್ನೆ ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಅನ್ನು ಮುದುಕಿಯ ತುರುಬು ಎಂದು ಹೇಳಿ ವ್ಯಂಗ್ಯಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, "ಈಶ್ವರಪ್ಪನವರ ಈ ಹೇಳಿಕೆ ಮಹಿಳೆಯರಿಗೆ ಅವಮಾನ ಮಾಡಿದಂತೆ. ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು, ಕಟ್ಟುವುದು ಗೊತ್ತಿದೆ, ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಅವರಿಗೆ ಸ್ವಾಭಿಮಾನ ಇದ್ದರೆ ಅವರ ಬೆನ್ನು ಅವರು ನೋಡಿಕೊಳ್ಳಲಿ. ಉಪ ಮುಖ್ಯಮಂತ್ರಿಯಾದವರು ಈಗ ಕೇವಲ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರ ಯೋಗ್ಯತೆ ಎಲ್ಲಿಗೆ ಬಂತು ಎನ್ನುವುದು ಗೊತ್ತಾಗುತ್ತೆ" ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ದಾವಣಗೆರೆಯ ಪಾಲಿಕೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "45 ವಾರ್ಡ್ ಗಳಲ್ಲಿ 40ಕ್ಕಿಂತ ಹೆಚ್ಚು ವಾರ್ಡ್ ಗಳಲ್ಲಿ ಗೆಲುವು ಸಾಧಿಸುತ್ತೇವೆ. ಇಡೀ ರಾಜ್ಯದಲ್ಲೇ ದಾವಣಗೆರೆಯಷ್ಟು ಯಾರು ಕೂಡ ಅಭಿವೃದ್ಧಿ ಮಾಡಿಲ್ಲ. ಎಸ್ ಎಸ್ ಮಲ್ಲಿಕಾರ್ಜುನ್ ಸಚಿವರಿದ್ದಾಗ ಜಿಲ್ಲೆಗೆ ಸಾಕಷ್ಟು ಅನುದಾನ ತೆಗೆದುಕೊಂಡು ಬಂದು ಅಭಿವೃದ್ಧಿ ಕೆಲಸ ಮಾಡಿದ್ದರು. ಅವರು ಮಾಡಿದ ಅಭಿವೃದ್ಧಿ ಕೆಲಸಕ್ಕೆ ವಿರೋಧಿಗಳಿಗೆ ಠೇವಣೆ ಇಲ್ಲದಂತೆ ಮಾಡಿ ಮಲ್ಲಿಕಾರ್ಜುನ್ ರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಿತ್ತು, ಆದರೆ ಮತದಾರರು ಕೈ ಹಿಡಿಯಲಿಲ್ಲ" ಎಂದು ಹೇಳಿ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.