ದಾವಣಗೆರೆ; ವೀಕೆಂಡ್ ಕರ್ಫ್ಯೂ, ಬಿಜೆಪಿ ಶಾಸಕರ ಅದ್ದೂರಿ ಹುಟ್ಟುಹಬ್ಬ!
ದಾವಣಗೆರೆ, ಜನವರಿ 16; ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಇದು ಬಿಜೆಪಿ ಶಾಸಕರಿಗೆ ಅನ್ವಯಿಸುವಂತೆ ಕಾಣುತ್ತಿಲ್ಲ. ದಾವಣಗೆರೆಯ ಕೆ. ಬಿ. ಬಡಾವಣೆಯ ಗುಳ್ಳಮ್ಮ ದೇಗುಲದ ಪಕ್ಕದಲ್ಲಿ ಜಗಳೂರು ಶಾಸಕ ಎಸ್. ವಿ. ರಾಮಚಂದ್ರಪ್ಪ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿಯೂ ಕಳೆದ ವಾರದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈಗಾಗಲೇ ವೀಕೆಂಡ್ ಕರ್ಫ್ಯೂ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಭೆ, ಸಮಾರಂಭ, ಜಾತ್ರೆ ಸೇರಿದಂತೆ ಜನರು ಸೇರುವಂತ ಯಾವುದೇ ಕಾರ್ಯಕ್ರಮ ಮಾಡಬಾರದು ಎಂದು ಸ್ಪಷ್ಟ ಆದೇಶ ಹೊರಡಿಸಿದೆ. ಈ ಆದೇಶ ಕೇವಲ ಜನರಿಗೆ ಮಾತ್ರ ಮೀಸಲು. ಬಿಜೆಪಿ ಶಾಸಕರಿಗೆ ಅನ್ವಯಿಸುವಂತೆ ಕಾಣುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ನಾನು ತಪ್ಪು ಮಾಡಿದ್ದೇನೆ, ನನ್ನ ವಿರುದ್ಧ ಎಫ್ಐಆರ್ ಹಾಕಿ: ರೇಣುಕಾಚಾರ್ಯ
ಪ್ರತಿ ವರ್ಷ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಎಸ್. ವಿ. ರಾಮಚಂದ್ರಪ್ಪ ಈ ವರ್ಷವೂ ಅದೇ ಧಾಟಿಯಲ್ಲಿ ನಡೆಸುವ ಯತ್ನ ಮಾಡಿದ್ದಾರೆ. ಕೆ. ಬಿ. ಬಡಾವಣೆಯಲ್ಲಿನ ಗುಳ್ಳಮ್ಮ ದೇಗುಲದ ಎದುರು ಇರುವ ನಾಯ್ಡು ಹೊಟೇಲ್ ಪಕ್ಕದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರ ಆದೇಶಿಸಿದ್ದ ಯಾವ ಆದೇಶವೂ ಪಾಲನೆಯಾಗಿಲ್ಲ. ಜಗಳೂರು ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ರಾಮಚಂದ್ರಪ್ಪ ಅಭಿಮಾನಿಗಳು ಆಗಮಿಸಿದ್ದರು.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ರೇಣುಕಾಚಾರ್ಯ ವಿರುದ್ಧ ಕೇಸ್?
ಈ ವೇಳೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಾಸ್ಕ್ ಧರಿಸಿದ್ದರೆ, ಮತ್ತೆ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ನೋಡಿದರೆ ಕೊರೊನಾ ಹರಡದಂತೆ ಇರುತ್ತದೆಯೇ?, ವಾರಾಂತ್ಯದ ಕರ್ಫ್ಯೂ ಇದ್ದರೂ ಇಷ್ಟು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಅನುಮತಿ ಕೊಟ್ಟವರು ಯಾರು? ಎಂಬ ಪ್ರಶ್ನೆ ಈಗ ಕಾಡತೊಡಗಿದೆ.
ದಾವಣಗೆರೆ; ಬಹಿರಂಗವಾಗಿ ಕ್ಷಮೆಯಾಚಿದ ಶಾಸಕ ರೇಣುಕಾಚಾರ್ಯ
ಸಾಮಾಜಿಕ ಅಂತರವೂ ಮಾಯ; ಇನ್ನು ಸಾಮಾಜಿಕ ಅಂತರವೂ ಮಾಯವಾಗಿತ್ತು. ಎಸ್. ವಿ. ರಾಮಚಂದ್ರಪ್ಪ ಹಾಗೂ ಅವರ ಪತ್ನಿ ವೇದಿಕೆಯ ಮೇಲೆ ನಿಂತು ಬಂದಿದ್ದವರಿಂದ ಅಭಿನಂದನೆ ಸ್ವೀಕರಿಸುತ್ತಿದ್ದರು. ಜನರು ನಾ ಮುಂದು ತಾ ಮುಂದು ಎಂದು ಶುಭಹಾರೈಸಲು ಮುಗಿ ಬೀಳುತ್ತಿದ್ದರು. ಕೊರೊನಾ ಹೆಚ್ಚಳವಾಗಿ ಜನರು ಭಯ ಭೀತಿಯಲ್ಲಿ ಬದುಕುತ್ತಿದ್ದಾರೆ. ತರಕಾರಿ ಖರೀದಿಸುವಾಗ ಕೋವಿಡ್ ನಿಯಮ ಪಾಲಿಸಿಲ್ಲ ಎಂದು ಹೇಳುವವರು ಇಂಥ ಕಾರ್ಯಕ್ರಮ ನಡೆಸಿದರೂ ಮೌನ ವಹಿಸಿರುವುದೇಕೆ?. ಸಾಮಾಜಿಕ ಅಂತರ ಇರಲಿ, ಜಿಲ್ಲಾಡಳಿತದ ಯಾವೊಂದು ಸೂಚನೆಯನ್ನು ಇಲ್ಲಿ ಪಾಲಿಸಿಲ್ಲ.
ಇನ್ನು ಶಾಸಕರಾಗಿ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ನೂರಾರು ಜನರ ಸಮ್ಮುಖದಲ್ಲಿ ವೀಕೆಂಡ್ ಇದ್ದಾಗಲೂ ಇದ್ದಾಗಲೂ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವಂಥ ಅವಶ್ಯಕತೆ ಏನಿತ್ತು? ಎಂಬ ಪ್ರಶ್ನೆ ಉದ್ಭವಿಸಿದೆ. ಜನಸಾಮಾನ್ಯರು ಸಣ್ಣ ಕಾರ್ಯಕ್ರಮ ಮಾಡಲು ಅನುಮತಿ ನೀಡದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಬಿಜೆಪಿ ಶಾಸಕರು ಎಂಬ ಕಾರಣಕ್ಕೆ ಸುಮ್ಮನಿದ್ದಾರೆಯೋ?. ಸರ್ಕಾರ ಅವರದ್ದು ಇದೆ ಎಂಬ ಕಾರಣಕ್ಕೆ ನೋಡಿಯೂ ನೋಡದ ರೀತಿಯಲ್ಲಿ ಇದ್ದಾರಾ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ.
ರೇಣುಕಾಚಾರ್ಯ ಉಲ್ಲಂಘಿಸಿದ್ದರು; ಇನ್ನು ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿರುವ ಎರಡನೇ ಬಿಜೆಪಿ ಶಾಸಕ ರಾಮಚಂದ್ರಪ್ಪ ಆಗಿದ್ದಾರೆ. ಹೊನ್ನಾಳಿ ತಾಲೂಕಿನ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಾವಿರಾರು ಯುವಕರ ಜೊತೆ ಪಾಲ್ಗೊಂಡಿದ್ದ ಶಾಸಕ ಎಂ. ಪಿ. ರೇಣುಕಾಚಾರ್ಯ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಸ್ವಪಕ್ಷೀಯದವರೇ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೊರೊನಾ ನಿಯಮಾವಳಿ ಗಾಳಿಗೆ ತೂರಿ ಭಾಗವಹಿಸಿದ್ದರಿಂದ ಸರ್ಕಾರಕ್ಕೂ ಮುಜುಗರ ಉಂಟಾಗಿತ್ತು. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜನಸಾಮಾನ್ಯರಿಗೊಂದು ಕಾನೂನು, ಬಿಜೆಪಿ ಶಾಸಕರೊಂದು ಕಾನೂನಾ? ಎಂಬ ಪ್ರಶ್ನೆ ಹಾಕಿದ್ದರು.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆ ಬಳಿಕ ತಪ್ಪಿನ ಅರಿವಾಗಿ ರೇಣುಕಾಚಾರ್ಯ ಕ್ಷಮೆಯಾಚಿಸಿದ್ದರು. ಈ ಘಟನೆ ನಡೆದು ಇನ್ನು ವಾರವೂ ಕಳೆದಿಲ್ಲ. ಅಷ್ಟರೊಳಗೆ ಜಗಳೂರು ಶಾಸಕರ ಈ ವರ್ತನೆ ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.
ಇನ್ನು ಒಂದೆಡೆ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ, ಮತ್ತೊಂದೆಡೆ ಜಗಳೂರು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಭಿಮಾನಿಗಳಿಗೆ ರಾಮಚಂದ್ರಪ್ಪ ಊಟದ ವ್ಯವಸ್ಥೆ ಮಾಡಿದ್ದರು. ಇನ್ನು ಶಾಸಕರು ವೀಕೆಂಡ್ ಕರ್ಫ್ಯೂ ಇದೆ ಎಂಬುದನ್ನೇ ಮರೆತು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ದಂಡ ಹಾಕ್ತಾರೆ; ಇನ್ನು ರಸ್ತೆಯಲ್ಲಿ ಬರುವ ಬೈಕ್ ಸವಾರರು, ಜನರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸುವ ಪೊಲೀಸರು ಅಲ್ಲೇ ಹುಟ್ಟು ಹಬ್ಬದ ಕಾರ್ಯಕ್ರಮದ ಬಳಿ ಇದ್ದರೂ ಮಾಸ್ಕ್ ಧರಿಸದವರಿಗೆ ದಂಡ ಹಾಕಲಿಲ್ಲ. ಅದೇ ರೀತಿಯಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ. ಇದರಿಂದಾಗಿ ಕೊರೊನಾ ಸಂಖ್ಯೆ ಹೆಚ್ಚಳವಾಗುವುದಿಲ್ಲವೇ?, ಇಂತ ಜನಪ್ರತಿನಿಧಿಗಳಿಂದ ಜನರು ನಿರೀಕ್ಷೆ ಮಾಡುವುದಾದರೂ ಏನು? ಎಂಬ ಪ್ರಶ್ನೆ ಜನರದ್ದು.
ಜಗಳೂರು ತಾಲೂಕಿನಲ್ಲಿ ಶಾಲಾ ಮಕ್ಕಳು ಸೇರಿದಂತೆ ಹಲವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಇಂತ ಸನ್ನಿವೇಶದಲ್ಲಿ ಗ್ರಾಮ ಗ್ರಾಮಗಳಿಂದ ಜನರು ಇಲ್ಲಿಗೆ ಬಂದು ಕೊರೊನಾ ಮಾರ್ಗಸೂಚಿ ಪಾಲಿಸದೇ ಓಡಾಡಿದರೆ ಕೊರೊನಾ ಹೆಚ್ಚಾಗಿ ಹರಡುವುದರಲ್ಲಿ ಸಂಶಯವೇ ಇಲ್ಲ. ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ರಾಮಚಂದ್ರಪ್ಪರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.