ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ಸಂಪುಟ ವಿಸ್ತರಣೆ ಬಳಿಕ ರೇಣುಕಾಚಾರ್ಯ ಹೊನ್ನಾಳಿಗೆ ಬಂದಿಲ್ಲ; ಯಾಕೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 11: ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರಕ್ಕೆ ಇನ್ನೂ ಬಾರದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಸಂಪುಟ ವಿಸ್ತರಣೆ ಆಗುವ ಮುನ್ನಾ ದಿನ ಬೆಂಗಳೂರಿಗೆ ತೆರಳಿದ್ದ ರೇಣುಕಾಚಾರ್ಯ, ಬಳಿಕ ತವರಿನತ್ತ ಮುಖ ಮಾಡಲಿಲ್ಲ. ಈಗ ದೆಹಲಿಗೆ ತೆರಳಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ಹೋದ ಕಡೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ರೇಣುಕಾಚಾರ್ಯ, ಈಗ ದಿಢೀರ್ ದೆಹಲಿಗೆ ತೆರಳಿದ್ದು, ಸಚಿವ ಸ್ಥಾನ ಗಿಟ್ಟಿಸಲು ತೆರೆಮರೆಯ ಕಸರತ್ತು ಹಾಗೂ ಲಾಬಿ ಮಾಡತೊಡಗಿದ್ದಾರೆ.

ವೈರಲ್ ವಿಡಿಯೋ: ಹಳದಮ್ಮ 'ಕಾರ್ಣಿಕ' ನಿಜವಾಯ್ತು; ರೇಣುಕಾಚಾರ್ಯಗೆ ಸಿಗಲಿಲ್ಲ ಸಚಿವ ಸ್ಥಾನ!ವೈರಲ್ ವಿಡಿಯೋ: ಹಳದಮ್ಮ 'ಕಾರ್ಣಿಕ' ನಿಜವಾಯ್ತು; ರೇಣುಕಾಚಾರ್ಯಗೆ ಸಿಗಲಿಲ್ಲ ಸಚಿವ ಸ್ಥಾನ!

ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪರ ಬಳಿ ದಾವಣಗೆರೆ ಜಿಲ್ಲೆಗೆ ಈ ಬಾರಿಯೂ ಮಂತ್ರಿ ಸ್ಥಾನ ನೀಡಿಲ್ಲ. ಸಂಪುಟದಲ್ಲಿ ಆದ್ಯತೆ ನೀಡುವುದಾಗಿ ಕೊಟ್ಟಿದ್ದ ಭರವಸೆಯೂ ಹುಸಿಯಾಗಿದೆ. ನೀವು ಸಿಎಂ ಆಗಿದ್ದಾಗಲೂ ಪ್ರಾತಿನಿಧ್ಯ ಸಿಗಲಿಲ್ಲ. ನನಗೂ ಸಚಿವ ಸ್ಥಾನ ಸಿಕ್ಕಿಲ್ಲ. ಸಿಕ್ಕೇಬಿಡ್ತು ಅನ್ನುವಷ್ಟರಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಿ ತಪ್ಪಿಸಲಾಗಿದೆ‌ ಎಂಬ ಅಳಲನ್ನು ಯಡಿಯೂರಪ್ಪ ಬಳಿ ರೇಣುಕಾಚಾರ್ಯ ತೊಡಿಕೊಂಡಿದ್ದಾರೆ.

 ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್‌ ಭೇಟಿ

ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್‌ ಭೇಟಿ

ಬಿಜೆಪಿಯ ಕೇಂದ್ರ ನಾಯಕರಾದ ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್‌ರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ರೇಣುಕಾಚಾರ್ಯ, ಸಚಿವ ಸ್ಥಾನ ಸಿಗದಿರುವ ಬಗ್ಗೆ ಸಮಾಲೋಚನೆ ನಡೆಸಿದ್ದರು. ದಾವಣಗೆರೆ ಜಿಲ್ಲೆಯ ಐವರು ಶಾಸಕರು ಬೇಡಿಕೆ ಸಲ್ಲಿಸಿದ್ದರೂ ಕ್ಯಾರೇ ಎನ್ನದಿರುವ ಹೈಕಮಾಂಡ್ ನಡೆಯಿಂದಾಗಿ ಬೇರೆಯವರು ಬಂದು ನಮ್ಮಲ್ಲಿ ಉಸ್ತುವಾರಿ ಮಂತ್ರಿಯಾಗಿದ್ದಾರೆ. ಇದಕ್ಕೆ ಇತಿಶ್ರೀ ಹಾಡಬೇಕು‌ ಎಂದು ರೇಣುಕಾಚಾರ್ಯ ಈಗ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.

 ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ

ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ

ದಾವಣಗೆರೆ ಜಿಲ್ಲೆಯು ಮಧ್ಯ ಕರ್ನಾಟಕದ ಹೆಬ್ಬಾಗಿಲು. ಪ್ರಾದೇಶಿಕವಾರು ಹಾಗೂ ಐವರು ಶಾಸಕರನ್ನು ಗೆಲ್ಲಿಸಿಕೊಟ್ಟ ಜನರ ಅಭಿಪ್ರಾಯವೂ ಇದೇ ಆಗಿದೆ. ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬಹುದು. ಈ ಕಾರ್ಯ ಆಗದಿದ್ದರೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ವಿಧಾನಸಭಾ ಚುನಾವಣೆಯಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದಕ್ಕೆಲ್ಲಾ ಆಸ್ಪದ ಕೊಡುವುದು ಬೇಡ. ಸಿಎಂ ಬಳಿ ಇರುವ ಖಾತೆಯಲ್ಲಿ ಒಂದು ಖಾತೆಯನ್ನಾದರೂ ನೀಡಿ ಎಂದು ಒತ್ತಾಯಿಸುವ ಸಲುವಾಗಿ ಮತ್ತೆ ದೆಹಲಿಗೆ ರೇಣುಕಾಚಾರ್ಯ ಹೋಗಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲೇ ಕೇಳಿ ಬರುತ್ತಿದೆ.

 ಉಸ್ತುವಾರಿ ಸಚಿವರು ಬಂದರೂ ಬಾರಲಿಲ್ಲ ಹೊನ್ನಾಳಿ ಶಾಸಕ

ಉಸ್ತುವಾರಿ ಸಚಿವರು ಬಂದರೂ ಬಾರಲಿಲ್ಲ ಹೊನ್ನಾಳಿ ಶಾಸಕ

ಇನ್ನು ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿಯೇ ಮಳೆ ಹಾಗೂ ಭಾರೀ ಪ್ರವಾಹದಿಂದ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಭೈರತಿ ಬಸವರಾಜ್ ಬಂದರೂ ಹೊನ್ನಾಳಿಗೆ ಹೋಗಲಿಲ್ಲ. ಇನ್ನು ರೇಣುಕಾಚಾರ್ಯ ಸಹ ಆಗಮಿಸಲಿಲ್ಲ. ಅನಾರೋಗ್ಯದ ನೆಪವೊಡ್ಡಿ ರೇಣುಕಾಚಾರ್ಯ ಬರಲಿಲ್ಲ‌. ಸಚಿವರು ಅತ್ತ ಸುಳಿಯದಿರುವುದು ಅನುಮಾನ ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ. ಈ ಹಿಂದೆ ಭೈರತಿ ಬಸವರಾಜ್ ಬಂದಾಗಲೆಲ್ಲಾ ಹೊನ್ನಾಳಿಯಲ್ಲೇ ಇರುತ್ತಿದ್ದ ಶಾಸಕ ರೇಣುಕಾಚಾರ್ಯ, ಈ ಬಾರಿ ಇಲ್ಲದಿರುವುದನ್ನು ಗಮನಿಸಿದರೆ ಅಸಮಾಧಾನಗೊಂಡಿರುವುದು ಸತ್ಯ. ರೇಣುಕಾಚಾರ್ಯ ಸಹ ಈಗಲೂ ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲೇ ಇದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

 ಸಚಿವ ಸ್ಥಾನ ಭರವಸೆ ಸಿಕ್ಕಿದೆಯಾ?

ಸಚಿವ ಸ್ಥಾನ ಭರವಸೆ ಸಿಕ್ಕಿದೆಯಾ?

ಮತ್ತೊಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರು ರೇಣುಕಾಚಾರ್ಯರಿಗೆ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ನೆಲೆಸಿ, ಸಿಎಂ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ರೇಣುಕಾಚಾರ್ಯ ಮಾಧ್ಯಮದವರ ಜೊತೆ ಮಾತನಾಡುತ್ತಾ, ಈಗಲೂ ಸಚಿವ ಸ್ಥಾನ ಸಿಗುವ ವಿಶ್ವಾಸದ ಮಾತು ಆಡಿದ್ದಾರೆ. ದಾವಣಗೆರೆಗೆ ಮಿನಿಸ್ಟರ್ ನೀಡಿ ಎಂಬ ಬೇಡಿಕೆಯಿಂದ ಹಿಂದೆ ಸರಿದಿಲ್ಲ. ಇದಕ್ಕೆ ಪೂರಕ ಎಂಬಂತೆ ದಾವಣಗೆರೆಗೆ ಅನ್ಯಾಯ ಆಗಿರುವುದು ನಿಜ. ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.

Recommended Video

BJPಯಲ್ಲಿ ಖಾತೆಗಾಗಿ ಶುರುವಾಯ್ತು ಮಂತ್ರಿಗಳ ರಾಜೀನಾಮೆಯ ಬ್ಲಾಕ್ ಮೇಲ್ | oneindia kannada
 ದೆಹಲಿಯಲ್ಲಿ ರೇಣುಕಾಚಾರ್ಯ ಲಾಬಿ?

ದೆಹಲಿಯಲ್ಲಿ ರೇಣುಕಾಚಾರ್ಯ ಲಾಬಿ?

ಕೊರೊನಾದಂತ ವಿಷಮ ಪರಿಸ್ಥಿತಿಯಲ್ಲಿ ಮಾಡಿದ ಕೆಲಸದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮಾಜಿ ಸಿಎಂ ಯಡಿಯೂರಪ್ಪ, ಹಾಲಿ ಸಿಎಂ ಬೊಮ್ಮಾಯಿ ಅವರಿಂದಲೂ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರಿ ಸಚಿವಗಿರಿ ಪಡೆಯಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ದಾವಣಗೆರೆ ಲೋಕಸಭಾ ಸದಸ್ಯ ಜಿ‌.ಎಂ. ಸಿದ್ದೇಶ್ವರ್ ದಾವಣಗೆರೆಗೆ ಒಂದು ಸಚಿವ ಸ್ಥಾನ ಸಿಗುತ್ತದೆ ಎಂಬ ಹೇಳಿಕೆ ನೀಡಿರುವುದು, ರೇಣುಕಾಚಾರ್ಯ ದೆಹಲಿಗೆ ತೆರಳಿರುವುದು ಇದಕ್ಕೆ ಪೂರಕವಾಗಿದೆ ಎಂದರೆ ತಪ್ಪಾಗಲಾರದು.

ಒಟ್ಟಿನಲ್ಲಿ ಸಚಿವ ಸ್ಥಾನ ಕೈತಪ್ಪಿದ ಕಾರಣ ಅಸಮಾಧಾನಗೊಂಡಿದ್ದ ರೇಣುಕಾಚಾರ್ಯ ಶತಾಯಗತಾಯ ಪ್ರಯತ್ನ ಮುಂದುವರಿಸಿರುವುದಂತೂ ಸತ್ಯ. ಬಿಜೆಪಿ ಕೇಂದ್ರದ ನಾಯಕರು ಮನ್ನಣೆ ನೀಡುತ್ತಾರೋ, ಇಲ್ಲವೋ ಅಥವಾ ರೇಣುಕಾಚಾರ್ಯರ ಒತ್ತಡದ ಲಾಬಿಗೆ ಬೆಣ್ಣೆ ಸವರುತ್ತಾರೋ ಕಾದು ನೋಡಬೇಕಿದೆ.

English summary
After cabinet expansion MLA M.P. Renukacharya didn't visit Honnali constituency, he has moved to Delhi to Discuss with BJP High Command on Minister Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X