ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ನೀರಿಗಾಗಿ ನಡೆದ ಜಡೆ ಜಗಳ ನೋಡಿ ಹುಡುಗಿ ಕೊಡಲ್ಲವೆಂದು ಹೊರಟೇ ಹೋದರು!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 22: ಇದು ನಿಜಕ್ಕೂ ವಿಚಿತ್ರವೇ ಸರಿ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತೊಂದಿದೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂಬ ಹಳೆಯ ಮಾತು. ಆದರೆ, ನೀರಿನ ಗಲಾಟೆ ವಿಚಾರಕ್ಕೆ ಮದುವೆ ಮುರಿದು ಬಿದ್ದಿದೆ ಎಂದರೆ ನಂಬ್ತೀರಾ? ನಂಬಲೇಬೇಕು.

ಹೌದು. ಇಂಥದ್ದೊಂದು ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ. ಕಳೆದ ಹದಿನೈದು ದಿನಗಳಿಂದ ಮಲೇಬೆನ್ನೂರಿನ ಪುರಸಭೆಯ 2, 3 ಹಾಗೂ 5ನೇ ವಾರ್ಡ್‌ನಲ್ಲಿ ನೀರು ಸರಬರಾಜು ಆಗಿರಲಿಲ್ಲ. ಇದರಿಂದಾಗಿ ಜನರು ರೊಚ್ಚಿಗೆದ್ದಿದ್ದರು. ಮಾತ್ರವಲ್ಲ, ಪುರಸಭೆ ಎದುರು ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಆಡಳಿತ ಮಂಡಳಿಯಾಗಲಿ, ಅಧಿಕಾರಿಗಳಾಗಲೀ ಕ್ಯಾರೇ ಎಂದಿರಲಿಲ್ಲ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಜನರು ಪುರಸಭೆ ಎದುರು ಗಲಾಟೆ ಮಾಡಿದ್ದರು. ಮಹಿಳೆಯರು ನೀರು ಬಿಟ್ಟರೆ ಸಾಕು ಜಡೆ ಹಿಡಿದುಕೊಂಡು ಹೊಡೆದಾಡಿದ ಘಟನೆಗಳೂ ನಡೆದಿವೆ.

ರಸ್ತೆ ಅಗುವವರೆಗೂ ಮದುವೆಯಾಗಲ್ಲ ಎಂದಿದ್ದ ಯುವತಿ

ರಸ್ತೆ ಅಗುವವರೆಗೂ ಮದುವೆಯಾಗಲ್ಲ ಎಂದಿದ್ದ ಯುವತಿ

ಈ ಘಟನೆಯಿಂದ ಆಗಬೇಕಿದ್ದ ಮದುವೆಯೇ ರದ್ದುಗೊಂಡಿದೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ದಾವಣಗೆರೆ ಜಿಲ್ಲೆಯ ಮಾಯಕೊಂಡ ಸಮೀಪದ ರಾಂಪುರ ಗ್ರಾಮದಲ್ಲಿ ತನ್ನೂರಿನ ರಸ್ತೆ ಆಗಿ ಬಸ್ ಬರುವವರೆಗೆ ಮದುವೆಯಾಗಲ್ಲ ಎಂಬ ಪಟ್ಟು ಹಿಡಿದಿದ್ದ ಯುವತಿ ಕೊನೆಗೂ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಬಿಂದು ಎಂಬ ಯುವತಿ ಪತ್ರ ಬರೆದಿದ್ದಳು. ಆ ಬಳಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ನಂತರ ಎಚ್ಚೆತ್ತುಕೊಂಡ ದಾವಣಗೆರೆ ಜಿಲ್ಲಾಡಳಿತ ರಸ್ತೆ ನಿರ್ಮಾಣಕ್ಕೂ ಅನುವು ಮಾಡಿಕೊಟ್ಟಿತ್ತು. ಆದರೆ, ಈಗ ನೀರಿನ ಗಲಾಟೆ ನೋಡಿ ಹುಡುಗಿಯ ಮನೆಕಡೆಯವರು ವಿವಾಹವನ್ನೇ ಕ್ಯಾನ್ಸಲ್ ಮಾಡಿರುವುದು ಬೆಳಕಿಗೆ ಬಂದಿದೆ.

 ಮಲೇಬೆನ್ನೂರಿನಲ್ಲಿ ಕೆರೆ ಹಾಗೂ ಭದ್ರಾ ನಾಲೆ ಹರಿಯುತ್ತದೆ

ಮಲೇಬೆನ್ನೂರಿನಲ್ಲಿ ಕೆರೆ ಹಾಗೂ ಭದ್ರಾ ನಾಲೆ ಹರಿಯುತ್ತದೆ

ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಕೆರೆ ಹಾಗೂ ಭದ್ರಾ ನಾಲೆ ಹರಿಯುತ್ತದೆ. ಇಲ್ಲಿ ನೀರಿಗಾಗಿ ಪರದಾಟ ನಡೆಸುವ ಪ್ರಮೇಯ ಇಲ್ಲ. ನೀರುಗಂಟಿಗಳು ನೀರು ಬಿಟ್ಟರೂ ಕೆಲವರು ಆ ನೀರನ್ನು ಬೇರೆ ಕಡೆ ತಿರುಗಿಸುವ ಕಾರಣದಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ಕಳೆದ 15 ದಿನಗಳಿಂದ ಮಲೇಬೆನ್ನೂರಿನ ಪುರಸಭೆಯ 2, 3 ಹಾಗೂ 5ನೇ ವಾರ್ಡ್‌ನಲ್ಲಿ ನೀರು ಬರುತ್ತಿರಲಿಲ್ಲ. ಇದು ಸ್ಥಳೀಯರು ರೊಚ್ಚಿಗೇಳುವಂತೆ ಮಾಡಿತು. ಮಾತ್ರವಲ್ಲ, ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಏನೂ ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸುವ ದೃಶ್ಯ ಈ ಊರಿನ ಯುವಕನಿಗೆ ಹೆಣ್ಣು ಕೊಡಲು ಮುಂದಾಗಿದ್ದ ಭಾನುವಳ್ಳಿಯಿಂದ ಮಲೆಬೆನ್ನೂರಿಗೆ ಬಂದಿದ್ದವರ ಕಣ್ಣಿಗೆ ಬಿದ್ದಿದೆ.

 ಯುವಕನ ಪೋಷಕರ ಜೊತೆ ಒಂದು ಸುತ್ತಿನ ಮಾತುಕತೆ ಆಗಿತ್ತು

ಯುವಕನ ಪೋಷಕರ ಜೊತೆ ಒಂದು ಸುತ್ತಿನ ಮಾತುಕತೆ ಆಗಿತ್ತು

ಯುವಕನ ಪೋಷಕರ ಜೊತೆ ಒಂದು ಸುತ್ತಿನ ಮಾತುಕತೆಯೂ ಬಹುತೇಕ ಮುಗಿದಿತ್ತು. ಹುಡುಗಿಯ ಮನೆಯ ಕಡೆಯವರು ಈ ಗ್ರಾಮಕ್ಕೆ ಹುಡುಗನ ಮನೆ ನೋಡಿಕೊಂಡು ಹೋಗಲು ಬಂದಿದ್ದರು. ಆಗ ನೀರು ಬರುತಿತ್ತು. ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರ ನಡುವೆ ಜೋರು ಗಲಾಟೆಯಾಗಿದೆ. ಇದನ್ನು ನೋಡಿದ ಹುಡುಗಿಯ ಪೋಷಕರು ಹಾಗೂ ಸಂಬಂಧಿಕರು ಮದುವೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕೊನೆಗೆ ಯುವಕನ ಮನೆ ಕಡೆಯವರು ಹೇಗೋ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಂದು ಎಲ್ಲಾ ಮಾತುಕತೆ ನಡೆಸಿ ಹೋದ ಹುಡುಗಿಯ ಕಡೆಯವರು ಆಮೇಲೆ ಏನನ್ನೂ ಹೇಳಿಲ್ಲ. ಮದುವೆ ಮಾಡಿಸುವ ಬ್ರೋಕರ್‌ಗೆ ಈ ವಿಚಾರ ಕೇಳಿದರೆ, ಅವರೇನೂ ಹೇಳುತ್ತಿಲ್ಲ ಎಂದಷ್ಟೇ ಹೇಳಿದ್ದಾರೆ. ಆ ನಂತರ ಹುಡುಗನ ಕಡೆಯವರು ಹುಡುಗಿ ಕಡೆಯವರಿಗೆ ಫೋನ್ ಮಾಡಿ ವಿಚಾರಿಸಿದಾಗ ನೀರಿಗಾಗಿ ಆ ಪರಿ ಗಲಾಟೆ ನೋಡಿದ್ದೇವೆ. ಯಾವುದೇ ಕಾರಣಕ್ಕೂ ಮಲೇಬೆನ್ನೂರಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.

 ಮಾಜಿ ಹಾಗೂ ಹಾಲಿ ಶಾಸಕರ ಗಮನಕ್ಕೆ ತರಲಾಗಿತ್ತು

ಮಾಜಿ ಹಾಗೂ ಹಾಲಿ ಶಾಸಕರ ಗಮನಕ್ಕೆ ತರಲಾಗಿತ್ತು

ಹದಿನೈದು ವರ್ಷಗಳಿಂದ ಇರುವ ಸಮಸ್ಯೆ ಬಗೆಹರಿಸುವಂತೆ ಈ ಹಿಂದೆ ಶಾಸಕರಾಗಿದ್ದ ಎಚ್.ಎಸ್. ಶಿವಶಂಕರ್, ಹಾಲಿ ಶಾಸಕ ರಾಂಪ್ಪರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇವರು ಮಾಡಿದ ತಪ್ಪಿಗೆ ಯುವಕನಿಗೆ ಮದುವೆಯೇ ಮುರಿದು ಬಿದ್ದಿದೆ. ಇನ್ನು ಮಲೇಬೆನ್ನೂರಿಗೆ ತಮ್ಮೂರಿನ ಹುಡುಗಿಯರನ್ನು ಕೊಡಲ್ಲ ಎಂದು ಹೇಳಿದ್ದಾರೆ.

ಮೂರ್ನಾಲ್ಕು ವಾರ್ಡ್‌ಗಳಲ್ಲಿ ಮಾತ್ರ ಈ ಸಮಸ್ಯೆ ಇದೆ. ಯಾಕೆ ಪರಿಹರಿಸುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಈಗಲಾದರೂ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ನೆಂಟಸ್ತಿಕೆ ಬೆಳೆಸಲು ನೀರು ಬಾರದಿದ್ದಕ್ಕೆ ಹಾಗೂ ಗಲಾಟೆ ನಡೆದಿದ್ದಕ್ಕೆ ಮದುವೆಯೇ ಮುರಿದು ಬಿದ್ದಿದ್ದು ವಿಪರ್ಯಾಸವೇ ಸರಿ.

Recommended Video

Deepika Padukone ಹೊಸ IPL ತಂಡವನ್ನು ಖರೀದಿಸಿದ್ದಾರೆ | Oneindia Kannada

English summary
Marriage cancelled over water problem at Malebennur In Harihara taluk of Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X