• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ತಡರಾತ್ರಿವರೆಗೂ ಅಬ್ಬರಿಸಿದ ಮಳೆ: ಜನಜೀವನ ಅಸ್ತವ್ಯಸ್ತ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜನವರಿ 9: ದಾವಣಗೆರೆ ನಗರ ಸೇರಿ ಜಿಲ್ಲೆಯಾದ್ಯಂತ ಶುಕ್ರವಾರ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ದಾವಣಗೆರೆ ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯಾರ್ಥಿ ಭವನ ಸರ್ಕಲ್‌ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರು ದಾಟಿಕೊಂಡು ಬಸ್‌ ಏರಲು ಮಹಿಳೆ ಪ್ರಯಾಸಪಟ್ಟಳು. ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣ ಕೆರೆಯಂತಾಗಿದ್ದು, ಪ್ರಯಾಣಿಕರು ಪರಸ್ಪರ ಕೈಹಿಡಿದು ಸಾಗಿದರು. ಚಾಮರಾಜಪೇಟೆಯ ಮಳಿಗೆಗಳಿಗೆ ನೀರು ನುಗ್ಗಿದ್ದು, ಮಾಲೀಕರು ಹೊರಹಾಕುತ್ತಿರುವುದು ದೃಶ್ಯ ಕಂಡುಬಂತು. ಅಕಾಲಿಕ ಮಳೆಯಿಂದಾಗಿ ರಾಜಕಾಲುವೆ ಉಕ್ಕಿ ಹರಿದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು.

30 ವರ್ಷಗಳಲ್ಲೇ ಕಾಣದಂಥ ಮಳೆ ಸುರಿಯಲು ಕಾರಣವೇನು?

ಬಸ್‌ನಿಲ್ದಾಣಕ್ಕೆ ನೀರು ನುಗ್ಗಿದೆ

ಬಸ್‌ನಿಲ್ದಾಣಕ್ಕೆ ನೀರು ನುಗ್ಗಿದೆ

ಸಿಡಿಲು ಬಡಿದು ಶಾಮನೂರಿನ ಅಂಜಪ್ಪ ಅವರ ಮನೆಗೆ ಹಾನಿಯಾಗಿದೆ. ಚಾಮರಾಜಪೇಟೆಯ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ನಗರದ ಬನಶಂಕರಿ ಬಡಾವಣೆಯ ಕೆಳಸೇತುವೆ ಬಳಿ ಸ್ಕಾರ್ಪಿಯೋ ವಾಹನ ನೀರಿನಲ್ಲಿ ಸಿಲುಕಿಕೊಂಡಿತ್ತು. ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣಕ್ಕೆ ನೀರು ನುಗ್ಗಿದ್ದು, ಕೆರೆಯಂತಾಗಿತ್ತು. ಬಸ್‌ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಮೊಳಕಾಲು ಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಶುಕ್ರವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆ, ರಾತ್ರಿ 7ರವರೆಗೂ ಬಿರುಸಾಗಿ ಸುರಿಯಿತು. ಬಳಿಕ ಕೆಲ ಕಾಲ ತುಂತುರು ಮಳೆಯಾಗುತ್ತಿತ್ತು. ರಾತ್ರಿ 9ರಿಂದ ಮತ್ತೆ ಬಿರುಸುಗೊಂಡು 12ರ ನಂತರವೂ ಸುರಿಯುತ್ತಲೇ ಇತ್ತು.

ಬೇಸಿಗೆ ಬೆಳೆಗೆ ಸಹಕಾರಿ

ಬೇಸಿಗೆ ಬೆಳೆಗೆ ಸಹಕಾರಿ

ಜಿಲ್ಲೆಯಲ್ಲಿ ಸುರಿದ ಮಳೆ ಬೇಸಿಗೆ ಭತ್ತಕ್ಕೆ ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು. ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು, ಮಳೆ ಬಿದ್ದಿರುವುದರಿಂದ ಭತ್ತದ ಗದ್ದೆಗಳಲ್ಲಿ ಸಸಿಮಡಿ ಮಾಡಿಕೊಳ್ಳಲು ಅನುಕೂಲವಾಗಿದೆ. ಹಿಂಗಾರು ಬೆಳೆ ಕಡಲೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತರೆ ಬೆಳೆ ಕೊಳೆಯುವುದರಿಂದ ನೀರನ್ನು ಹೊರಹಾಕಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರದ ಪ್ರಕಾರ ಚನ್ನಗಿರಿ ತಾಲ್ಲೂಕಿನಲ್ಲಿ 21.8 ಮಿ.ಮೀ, ದಾವಣಗೆರೆಯಲ್ಲಿ 22.6 ಮಿ.ಮೀ, ಹರಿಹರದಲ್ಲಿ 24.6 ಮಿ.ಮೀ ಹಾಗೂ ಜಗಳೂರು ತಾಲ್ಲೂಕಿನಲ್ಲಿ 3.6 ಮಿ.ಮೀ ಮಳೆಯಾಗಬಹುದು ಎಂದು ಅಂದಾಜಿಸಿತ್ತು. ದಾವಣಗೆರೆ ನಗರದಲ್ಲಿ ಹೆಚ್ಚಿನ ಮಳೆಯಾಗಿದೆ.

25ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿದೆ

25ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿದೆ

ಸಮೀಪದ ಕೊಕ್ಕನೂರು, ಗೋವಿನಹಾಳು, ಹಿಂಡಸಗಟ್ಟೆ, ಬೂದಿಹಾಳ್, ಹರಳಹಳ್ಳಿ, ಮಲ್ಲನಾಯಕನಹಳ್ಳಿ ಭಾಗದಲ್ಲಿ ಜಡಿಮಳೆ ಬಂದಿದೆ.

ಪಟ್ಟಣದಲ್ಲಿ ಗುಡುಗು ಸಿಡಿಲಿನ ಆರ್ಭಟ ಇತ್ತು. ತುಂತುರು ಮಳೆ ಬಂದಿದೆ. ರಾಮನಕಟ್ಟೆ ಹೊರವಲಯದ ಕೊಪ್ಪ, ಹೊನ್ನಾಳಿ ತಾಲ್ಲೂಕಿನ ಕುಂದೂರು ತಿಮ್ಲಾಪುರ ರಸ್ತೆಯಲ್ಲಿ ಶುಕ್ರವಾರ ರಭಸವಾಗಿ ಬಿರು ಮಳೆ ಬಂದ ಕಾರಣ ರಸ್ತೆಯ ಮೇಲೆ ಮಳೆ ನೀರು ನಿಂತು, ಹೊಲ ತೋಟಗಳಿಗೆ ಹರಿಯಿತು. ಅಕಾಲಿಕ ಮಳೆ ತೋಟದ ಬೆಳೆಗೆ ಅನುಕೂಲವಾಗಿದೆ.

ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದಾಗಿ ದಾವಣಗೆರೆಯ ಚಾಮರಾಜಪೇಟೆ ಮುಖ್ಯ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ಸಮರ್ಪಕವಾಗಿ ಇಲ್ಲದೇ ಇರುವುದರಿಂದ 25ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ.

ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ

ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ

ಅಂಗಡಿಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ವ್ಯಾಪಾರಿಗಳು ಹರಸಾಹಸ ಪಡಬೇಕಾಯಿತು. ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಮಳೆ ನೀರು ಅಂಗಡಿಯಳಗೆ ನುಗ್ಗಿದೆ. 2 ಲಕ್ಷ ರೂ. ಮೌಲ್ಯದ ಸರಕುಗಳು ನಷ್ಟವಾಗಿವೆ. ಈ ನಷ್ಟವನ್ನು ಯಾರು ಭರಿಸಿಕೊಡುತ್ತಾರೆ ಎಂದು ವರ್ತಕ ಅಮರೇಶ್ ಅಸಮಾಧಾನ ಹೊರಹಾಕಿದರು. ಇನ್ನು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ 3,608 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲೇ 2,200 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಅಕಾಲಿಕ ಮಳೆಯಿಂದ ಮಾವಿನ ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟಿದ್ದಾರೆ.

ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ

ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ

ಜನವರಿ ಮೊದಲ ವಾರ ಜಿಲ್ಲೆಯಾದ್ಯಂತ ಶೇ.70ರಷ್ಟು ಮಾವಿನ ತೋಪುಗಳಲ್ಲಿ ಹೂವು ಬಿಟ್ಟಿದೆ. ಕಳೆದ ವಾರ ಇಬ್ಬನಿ ಹೆಚ್ಚಾಗಿದ್ದರಿಂದ ಬೂದಿ ರೋಗದ ಹಾವಳಿ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಈಗ ಮಳೆ ಬಂದಿರುವುದರಿಂದ ಇಬ್ಬನಿಯು ತೊಳೆದು ಹೋಗಿ ಬೂದಿ ರೋಗ ಹತೋಟಿಗೆ ಬರುತ್ತದೆ. ಆದರೆ, ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಹೂವು ಉದುರುವುದನ್ನು ನಿಯಂತ್ರಿಸಲು ರೈತರು ಮಾವು ಸ್ಪೆಷಲ್ ಲಘು ಪೋಷಕಾಂಶವನ್ನು 5 ಗ್ರಾಂ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ರಸ ಹೀರುವ ಕೀಟಬಾಧೆ ಹೆಚ್ಚಾಗಿದ್ದರೆ, ಪಿಪ್ರೋನಲ್ ಶೇ.5 SC ಕೀಟನಾಶಕವನ್ನು 1.5 ಮಿಲಿ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರ ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

English summary
Heavy rains accompanied by thunder and thunderstorms across the district combined with Davanagere city. Rain water was pouring in the city and life was in disarray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X