ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿರ ಮಠ, ಪೀಠ ಮಾಡಿಕೊಳ್ಳಲಿ ನಾವೇನೂ ವಿಚಲಿತರಾಗಲ್ಲ; ಜಯಮೃತ್ಯುಂಜಯ ಸ್ವಾಮೀಜಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 31: ಜಮಖಂಡಿಯಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಮಾಡುತ್ತಿರುವುದರ ಹಿಂದೆ ಯಾರಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಸಾವಿರ ಮಠ ಮಾಡಿಕೊಳ್ಳಲಿ, ಸಾವಿರ ಪೀಠ ಮಾಡಿಕೊಳ್ಳಲಿ. ನನ್ನ ಉದ್ದೇಶ ಕೇವಲ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂಬುದು. ಬೇರೆ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಮೂರನೇ ಪೀಠ ಸ್ಥಾಪನೆ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಜನರಲ್ಲಿ ಗೊಂದಲ ಆಗಬಹುದು. ಜನರಿಗೆ ಸತ್ಯ ಗೊತ್ತಾಗಿಯೇ ಗೊತ್ತಾಗುತ್ತೆ. ಪಾದಯಾತ್ರೆ ಮಾಡಿದ ಬಳಿಕ ಸಮಾಜ ಮತ್ತಷ್ಟು ಗಟ್ಟಿಯಾಗಿದೆ ಎಂದು ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಸ್ವಾಮೀಜಿ, ಪದೇಪದೇ ಸಚಿವ ಮುರುಗೇಶ್ ನಿರಾಣಿ ಬಗ್ಗೆ ಮಾತನಾಡಲು ಹೋಗಲ್ಲ. ಎಲ್ಲವೂ ನಿಮಗೆ ಗೊತ್ತಿದೆ. ಒಮ್ಮೆ ಹೇಳಿದ ಮೇಲೆ ಮತ್ತೆ ಮತ್ತೆ ಹೇಳಲು ಹೋಗಲ್ಲ. ಯಾರು ಹಿಂದಿದ್ದಾರೆ, ಮುಂದಿದ್ದಾರೆ, ಒಳಗಿದ್ದಾರೆ ಎಂಬ ಬಗ್ಗೆ ನಮಗೆ ಅಗತ್ಯ ಇಲ್ಲ. ಒಂದು ಬಾರಿ ಹೆಸರು ತೆಗೆದು ಹೇಳಬೇಕಿತ್ತು, ಹೇಳಿದ್ದೇನೆ, ಮತ್ತೆ ಮತ್ತೆ ಹೇಳಲು ಹೋಗಲ್ಲ. ನೀವೇ ವಿಶ್ಲೇಷಣೆ ಮಾಡಿ. ನಿಮಗೆ ಅಧಿಕಾರ ಇದೆ ಎಂದು ಹೇಳಿದರು.

 ವಚನಾನಂದ ಶ್ರೀಗಳ ಹೆಸರು ಪ್ರಸ್ತಾಪಿಸದೇ ಟೀಕಾಪ್ರಹಾರ

ವಚನಾನಂದ ಶ್ರೀಗಳ ಹೆಸರು ಪ್ರಸ್ತಾಪಿಸದೇ ಟೀಕಾಪ್ರಹಾರ

ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳ ಹೆಸರು ಪ್ರಸ್ತಾಪಿಸದೇ ಟೀಕಾಪ್ರಹಾರ ನಡೆಸಿದ ಅವರು, ಬರುವ ದಿನಗಳಲ್ಲಿ ಸಮಾಜ ಮತ್ತಷ್ಟು ಗಟ್ಟಿಯಾಗುತ್ತದೆ. ಯಾರು ಏನೇ ಮಾಡಿಕೊಳ್ಳಲಿ. ನಾನು ಯಾವುದಕ್ಕೂ ವಿಚಲಿತನಾಗುವುದಿಲ್ಲ. ನನ್ನದೇನಿದ್ದರೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವಂತಾಗಬೇಕು ಎಂಬುದು. ಇದಕ್ಕಾಗಿ 712 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇನೆ. ಈಗ ಮತ್ತಷ್ಟು ಶಕ್ತಿ ಬಂದಿದೆ. ಸಮಾಜ ನಮ್ಮ ಜೊತೆಗಿದೆ. ಮೀಸಲಾತಿ ಸಿಗುವವರೆಗೆ ವಿರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಶುರು ಮಾಡಿದಾಗಿನಿಂದಲೂ ಸಮಾಜದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸರ್ಕಾರದ ಮಟ್ಟದಲ್ಲಿಯೂ ಚರ್ಚೆಯಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಮಾಜದ ಜನರು ಇರುವ ಕಡೆಗಳಲ್ಲಿ ಹೋಗಿ ಸರ್ವೇ ಕಾರ್ಯ ಮಾಡಿದ್ದಾರೆ. ವಿಧಾನಸಭೆ ಉಪ ಚುನಾವಣೆ, ಲೋಕಸಭೆ ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಕೊರೊನಾ ಸೋಂಕು ಹೆಚ್ಚಳ ಆದ ಕಾರಣ ವೇಗವಾಗಿ ಸರ್ವೇ ಕಾರ್ಯ ನಡೆದಿಲ್ಲ. ಈ ಆಯೋಗ ಸರ್ಕಾರಕ್ಕೆ ವರದಿ ಕೊಟ್ಟ ಬಳಿಕ ಆದಷ್ಟು ಬೇಗ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಶ್ರೀಗಳು ಹೇಳಿದರು.

 ರಕ್ತ ಸುರಿಸಿ ಸಮಾಜ ಕಟ್ಟಿದ್ದೇವೆ

ರಕ್ತ ಸುರಿಸಿ ಸಮಾಜ ಕಟ್ಟಿದ್ದೇವೆ

ಹೊರಗಡೆ ಇಟ್ಟಿಗೆ ಸಿಮೆಂಟ್ ಹಾಕಿ ಅಥವಾ ಪ್ಲಾಸ್ಟರ್ ಆಫ್ ಪ್ಯಾರೀಸ್ ಮಾಡಿಸಿ ಟೈಲ್ಸ್ ಹಾಕಿ ಸಮಾಜ ಕಟ್ಟಿಲ್ಲ. ಜನರ ಹೃದಯದಲ್ಲಿ ಸಮಾಜ ಕಟ್ಟಿದ್ದೇನೆ. ಮನಸ್ಸು ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬುದಾಗಿ ಬಸವಣ್ಣನವರು ಹೇಳಿದ್ದಾರೆ. ಮನಸ್ಸು ಕಟ್ಟುವ ಕೆಲಸಕ್ಕಷ್ಟೇ ನಮ್ಮ ಗಮನ. ಸಮಾಜ ಒಡೆದು ಹೋಗುತ್ತದೆ ಎಂದು ಬಹಳ ಜನರು ತಿಳಿದುಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಕಾಲ ಬಹಳ ಕಷ್ಟಪಟ್ಟು ರಕ್ತ ಸುರಿಸಿ ಸಮಾಜ ಕಟ್ಟಿದ್ದೇವೆ. ನಮ್ಮ ಸಮಾಜ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಇರುವಂಥ ವಯಸ್ಸು, ಆಯಸ್ಸು, ಹುಮ್ಮಸ್ಸಿನಲ್ಲಿ ಸಮಾಜ ಕಟ್ಟಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಬೇರೆ ಯಾವುದೇ ವಿಚಾರ ಗೊತ್ತಿಲ್ಲ. ನನಗೆ ಗೊತ್ತಿರುವುದು ಕೇವಲ ಕೂಡಲಸಂಗಮ ಪೀಠ ಅಷ್ಟೇ. ಮೀಸಲಾತಿ ಯಾವಾಗ ಪಡೆಯುತ್ತೇವೆ ಎಂದು ಮನಸ್ಸು ಆಲೋಚಿಸುತ್ತಿದೆ. ಸಮಾಜದ ಅಭಿವೃದ್ಧಿ, ಸಂಘಟನೆ, ಒಳಿತು ಮಾಡಲು ಹೋರಾಟ ಮಾಡುತ್ತಿದ್ದೇನೆ. ಚಳವಳಿ ಒಂದು ಹಂತಕ್ಕೆ ಬರುವ ಸಂದರ್ಭದಲ್ಲಿ ಇಂಥ ಗೊಂದಲ ಆಗುವುದು ಸರ್ವೇ ಸಾಮಾನ್ಯ. ಬಸವಣ್ಣ, ಚನ್ನಮ್ಮ, ಗಾಂಧೀಜಿ, ಅಂಬೇಡ್ಕರ್ ಕಾಲದವರಿಗೂ ಆಗಿದೆ. ಇಂಥ ಫಲಪ್ರದವಾಗುವ ವೇಳೆಯಲ್ಲಿ ಸಹಜವಾಗಿಯೇ ಭಿನ್ನಾಭಿಪ್ರಾಯಗಳು ಬರುತ್ತವೆ. ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಸಮಾಜ ಕಟ್ಟುವ, ಕೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

 ಸಿಎಂ ಬೊಮ್ಮಾಯಿಗೆ ಮೀಸಲಾತಿ ನೀಡುವ ಮನಸ್ಸಿದೆ

ಸಿಎಂ ಬೊಮ್ಮಾಯಿಗೆ ಮೀಸಲಾತಿ ನೀಡುವ ಮನಸ್ಸಿದೆ

ಸಿಎಂ ಬಸವರಾಜ ಬೊಮ್ಮಾಯಿ ಮನಸ್ಸಿನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬುದು ಇದೆ. ಬೇರೆ ಸಮುದಾಯಗಳಿಗೆ ಗುಡ್ ನ್ಯೂಸ್ ಕೊಟ್ಟಿರುವ ಬಸವರಾಜ ಬೊಮ್ಮಾಯಿ, ನಮ್ಮ ಸಮಾಜಕ್ಕೆ ಯಾವ ಒಳ್ಳೆಯ ಸುದ್ದಿ ನೀಡುತ್ತಾರೆ ಎಂಬುದನ್ನು ಕಾಯುತ್ತಿದ್ದೇವೆ. ಅವರ ಅವಧಿಯಲ್ಲಿ ಆಗಬೇಕು. ಮುಂದೆ ಹೀಗೆ ಹೋದರೆ ಬೇಡಿಕೆ ಈಡೇರುವುದು ಕಷ್ಟವಾಗುತ್ತದೆ ಎಂಬುದು ನಮ್ಮ ಭಾವನೆ ಎಂದು ಹೇಳಿದರು.

ಕೂಡಲಸಂಗಮದಲ್ಲಿ ಏರ್ಪಡಿಸಿದ್ದ 2ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆಯ ಒಂದು ವರ್ಷದ ತುಂಬಿದ ಕಾರ್ಯಕ್ರಮ ನಡೆದು, ಸಿಎಂ ಅವರು ಬಂದಿದ್ದರೆ ಎಲ್ಲವೂ ಒಳ್ಳೆಯದಾಗುತಿತ್ತು. ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮಕ್ಕೆ ಬರಲು ಬೊಮ್ಮಾಯಿ ಒಪ್ಪಿಕೊಂಡಿದ್ದರು. ಕರ್ನಾಟಕ ಕುತೂಹಲದಿಂದ ಕಾಯುತಿತ್ತು. ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಸುತ್ತೋಲೆ ಬಂತು. ದೊಡ್ಡ ಕಾರ್ಯಕ್ರಮ ನಡೆಸಬಾರದು ಎಂದು. ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆಗೆ ಒಂದು ವರ್ಷದ ತುಂಬಿದ ಕಾರ್ಯಕ್ರಮವನ್ನು ಮುಂದೂಡಲಾಯಿತು. ಪಂಚಮಸಾಲಿಗಳು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು.

 ಹಲವರಿಗೆ ಮೀಸಲಾತಿ ಹೋರಾಟ ಫಲ

ಹಲವರಿಗೆ ಮೀಸಲಾತಿ ಹೋರಾಟ ಫಲ

ನೂರಾರು ಕಿಲೋಮೀಟರ್ ಪಾದಯಾತ್ರೆ, ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮವಾಗಿ ಈಗ ಸಮುದಾಯಕ್ಕೆ ಮೀಸಲಾತಿ ಸಿಗುವ ಸಮಯ ಹತ್ತಿರವಾಗುತ್ತಿದೆ. ಇಂಥ ಸಮಯದಲ್ಲಿ ಸಂಪೂರ್ಣವಾಗಿ ಮೀಸಲಾತಿ ಹೋರಾಟ ಯಶಸ್ವಿಯಾದರೆ ಇದರ ಪ್ರತಿಫಲ ಬಸನಗೌಡ ಪಾಟೀಲ್ ಯತ್ನಾಳ್, ಎಚ್.ಎಸ್. ಶಿವಶಂಕರ್, ಅರವಿಂದ್ ಬೆಲ್ಲದ್, ಸಿ.ಸಿ. ಪಾಟೀಲ್, ವಿಜಯಾನಂದ ಕಾಶೆಪ್ಪನವರ್ ಅವರಿಗೆ ಸಿಗುತ್ತದೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಆಗಿದೆ. ಇದರಿಂದ ಶ್ರೀಗಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ. ನನ್ನ ಉದ್ದೇಶ ಕೇವಲ 2ಎ ಮೀಸಲಾತಿ ಗುರಿ ಮುಟ್ಟುವಂಥದ್ದು. ನಮ್ಮದು ಸಮಾಜ ಕಟ್ಟುವ ಕೆಲಸ. ಸಮಾಜದಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡಲ್ಲ. ಉಳಿದವರು ಯಾರಿಗಾದರೂ ಬೆಂಬಲ ನೀಡಲಿ, ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ ಎಂದು ಮೂರನೇ ಪೀಠದ ಸ್ಥಾಪನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 ಫೆಬ್ರವರಿ 2ರಂದು ಬೆಳಗಾವಿಯಲ್ಲಿ ಮಹತ್ವದ ಸಭೆ

ಫೆಬ್ರವರಿ 2ರಂದು ಬೆಳಗಾವಿಯಲ್ಲಿ ಮಹತ್ವದ ಸಭೆ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಫೆಬ್ರವರಿ 2ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಮೀಸಲಾತಿ ಚಳವಳಿಗಾರರ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಮಹತ್ವದ ರಾಜ್ಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.

ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಪ್ರವರ್ತಕ, ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಈ ಸಭೆಯಲ್ಲಿ ಸಮಾಜದ ಹಾಲಿ, ಮಾಜಿ ಶಾಸಕರು, ಚುನಾಯಿತ ಜನಪ್ರತಿನಿಧಿಗಳು, ಅಖಿಲ ಭಾರತ ಲಿಂಗಾಯತ, ಪಂಚಮಸಾಲಿ ಟ್ರಸ್ಟ್, ಯುವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮನ ಬಳಗ, ರೈತ ಘಟಕ, ಎಲ್‌ಪಿವಿಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ, ಐಟಿ ಬಿಟಿ ಘಟಕ, ಸಾಹಿತ್ಯ ಘಟಕ, ಕಾನೂನು ಘಟಕ, ದಾಸೋಹ ಘಟಕ ಸೇರಿದಂತೆ ವಿವಿಧ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ತಾಲೂಕು, ನಗರ ಘಟಕಗಳ ಪದಾಧಿಕಾರಿಗಳು ತಪ್ಪದೇ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

English summary
Davanagere: Koodalasangama's Jaya Mrityunjaya Swamiji Reacted about To Establish 3rd Panchamasali Lingayat Mutt in Jamakhandi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X