ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ರೇಣುಕಾಚಾರ್ಯ ವಿರುದ್ಧ ಕೇಸ್?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 10: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಕಳೆದೊಂದು ವಾರದಲ್ಲಿ ಪಾಸಿಟಿವ್ ಕೂಡ ಜಾಸ್ತಿಯಾಗುತ್ತಿದೆ. ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂಬ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಮಾತ್ರ ಜನಪ್ರತಿನಿಧಿಗಳಿಗೆ ಅನ್ವಯಿಸಿದಂತೆ ಕಾಣುತ್ತಿಲ್ಲ. ಹೊನ್ನಾಳಿ ಶಾಸಕರೂ ಆದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮತ್ತೆ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ.

ಬಲಮುರಿ ಗ್ರಾಮದ ಜನರು ನನ್ನನ್ನು ಹೋರಿ ಬೆದರಿಸುವ ಹಬ್ಬಕ್ಕೆ ಪ್ರೀತಿಯಿಂದ ಆಹ್ವಾನಿಸಿದಾಗ ಅವರ ಪ್ರೀತಿಗೆ ಸೋತು ಹೋಗಿದ್ದೆ. ಆದರೆ ಅಲ್ಲಿ ಹೆಚ್ಚಿನ ಜನಸಂಖ್ಯೆ ಸೇರಿದ ಪರಿಣಾಮ ಕೋವಿಡ್ ಮಾರ್ಗಸೂಚಿಗಳನ್ನು ನಾವು ಪಾಲಿಸುವಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳುವೆ. ಈ ಅಚಾತುರ್ಯಕ್ಕೆ ವಿಷಾದಿಸುವೆ ಎಂದು ರೇಣುಕಾಚಾರ್ಯ ಟ್ವೀಟ್ ಮೂಲಕ ಕ್ಷಮೆಯಾಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ದುರ್ಗಾಂಬಿಕಾ ದೇವಿ ಮಹೋತ್ಸವದ ಹಿನ್ನೆಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹಾವೇರಿ ಜಿಲ್ಲೆ ಹಿರೇಕೆರೂರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಹೋರಿಗಳನ್ನು ಕರೆತರಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಹೋರಿ ಬೆದರಿಸುವ ಸ್ಪರ್ಧೆ ನೋಡಲು ಆಗಮಿಸಿದ್ದರು.

ಈ ಸ್ಪರ್ಧೆ ವೇಳೆ ಸಾವಿರಾರು ಮಂದಿ ಆಗಮಿಸಿದ್ದರೂ, ಯಾವುದೇ ರೀತಿಯ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಯುವಕರಂತೂ ಮಾಸ್ಕ್ ಕೂಡ ಧರಿಸಿರಲಿಲ್ಲ. ರೇಣುಕಾಚಾರ್ಯ ಅವರನ್ನು ಹೊತ್ತುಕೊಂಡು ಊರ ತುಂಬಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡುವ ಗೋಜಿಗೂ ಹೋಗಲಿಲ್ಲ. ದೊಡ್ಡ ದೊಡ್ಡ ಸಭೆ ಸಮಾರಂಭ, ಮೆರವಣಿಗೆ, ಹಬ್ಬ, ಜಾತ್ರೆ ಸೇರಿದಂತೆ ಹೆಚ್ಚಿನ ಜನರು ಸೇರಬಾರದು ಎಂಬ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಇಲ್ಲಿ ಕ್ಯಾರೇ ಎಂದಿಲ್ಲ. ಬದಲಾಗಿ ವಿಜಯೋತ್ಸವದ ರೀತಿಯಲ್ಲಿ ಆಚರಿಸಲಾಗಿದೆ.

 ಉಲ್ಲಂಘನೆ ಇದೇ ಮೊದಲಲ್ಲ

ಉಲ್ಲಂಘನೆ ಇದೇ ಮೊದಲಲ್ಲ

ಇನ್ನು ಶಾಸಕ ರೇಣುಕಾಚಾರ್ಯ ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ- ಹವನ ನಡೆಸಿದ್ದರು. ಅದೇ ರೀತಿಯಲ್ಲಿ ಮನರಂಜನಾ ಕಾರ್ಯಕ್ರಮ ನಡೆಸಿದ್ದರು. ಕೇರ್ ಸೆಂಟರ್‌ನಲ್ಲಿ ಉಳಿದುಕೊಂಡಿದ್ದರು. ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದ್ದರು. ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡಿದ್ದರು. ಈ ರೀತಿ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಮೇಲ್ನೋಟಕ್ಕೆ ವರದಿ ನೀಡುವಂತೆ ಜಿಲ್ಲಾಡಳಿತ ಸೂಚನೆ ಕೊಡುತ್ತದೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತದೆ. ಆದರೆ ಯಾವುದೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

 ರೇಣುಕಾಚಾರ್ಯ ವಿರುದ್ಧ ಕೇಸ್ ದಾಖಲಾಗುತ್ತಾ?

ರೇಣುಕಾಚಾರ್ಯ ವಿರುದ್ಧ ಕೇಸ್ ದಾಖಲಾಗುತ್ತಾ?

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಸರ್ಕಾರವು ಯಾವುದೇ ಕಾರಣಕ್ಕೂ ಪಾದಯಾತ್ರೆ ಮಾಡಬಾರದು. ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಜನರನ್ನು ಸೇರಿಸಿ ನಡೆಸುವ ಪಾದಯಾತ್ರೆ ಕೈ ಬಿಡಬೇಕು ಎಂಬ ಮನವಿ ಮಾಡಿದ್ದರೂ ತಲೆಕೆಡಿಸಿಕೊಳ್ಳದೇ ಪಾದಯಾತ್ರೆ ನಡೆಸುತ್ತಿದ್ದಾರೆ. ಇನ್ನು ಈಗ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರ ವಿರುದ್ಧ ರಾಮನಗರ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ.

ಈಗ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸ್ಪಷ್ಟವಾಗಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದೆ. ಮಾತ್ರವಲ್ಲ, ಸ್ಥಳೀಯ ಶಾಸಕರೇ ಯುವಕರ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಹೊತ್ತು ಮೆರವಣಿಗೆ ನಡೆಸಿದಾಗ ಖುಷಿಪಟ್ಟಿದ್ದಾರೆಯೇ ವಿನಃ ಜನರಲ್ಲಿ ಜಾಗೃತಿ ಮೂಡಿಸುವ ಮಾತನಾಡಿದರೂ ಅದು ಕೇವಲ ಬಾಯಿ ಮಾತು ಮಾತ್ರ.

ಈ ಬಾರಿಯಾದರೂ ಜಿಲ್ಲಾಡಳಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತದೆಯೋ ಅಥವಾ ಈ ಹಿಂದೆ ಮಾಡಿದ್ದ ರೀತಿಯಲ್ಲಿ ಸುಮ್ಮನಾಗಿಬಿಡುತ್ತಾ ಎಂಬ ಕುತೂಹಲ ಕೆರಳಿಸಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಆದೇಶ ಮಾಡಿದ್ದರೂ ಕ್ಯಾರೇ ಎನ್ನದೇ ಈ ರೀತಿಯಾಗಿ ರೇಣುಕಾಚಾರ್ಯ ವರ್ತಿಸಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರಿಗೊಂದು ಕಾನೂನು, ಶಾಸಕರಿಗೊಂದು ಕಾನೂನಿದೆಯಾ ಎಂಬ ಪ್ರಶ್ನೆ ಕೇಳತೊಡಗಿದ್ದಾರೆ.

 ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ಕೊಟ್ಟಿದ್ಯಾರು?

ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ಕೊಟ್ಟಿದ್ಯಾರು?

ಇನ್ನು ಜನರು ಸೇರಿಸುವಂಥ ಎಲ್ಲಾ ಕಾರ್ಯಕ್ರಮಗಳಿಗೂ ನಿಷೇಧ ಹೇರಲಾಗಿದೆ. ಮಾತ್ರವಲ್ಲ, ಕೋವಿಡ್ ಮಾರ್ಗಸೂಚಿಯನ್ವಯ ಸಭೆ, ಸಮಾರಂಭ, ಜಾತ್ರೆ, ಉತ್ಸವ ನಡೆಸುವಂತೆಯೇ ಇಲ್ಲ. ಆದರೆ, ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಸಲು ಆಯೋಜಕರಿಗೆ ಅನುಮತಿ ಕೊಟ್ಟವರ್ಯಾರು? ತಾಲೂಕು ಆಡಳಿತ ಇಲ್ಲವೇ ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದರಾ? ಇಲ್ಲವೇ ಯಾವುದನ್ನೂ ಪಡೆಯದೇ ಆಯೋಜಕರು ನಡೆಸಿದ್ದಾರಾ ಎಂಬ ಅನುಮಾನ ಕಾಡಲಾರಂಭಿಸಿದೆ.

ಶಾಸಕ ರೇಣುಕಾಚಾರ್ಯ ಅವರೇ ಪಾಲ್ಗೊಂಡ ಕಾರಣಕ್ಕೆ ಸ್ಥಳೀಯಾಡಳಿತ ಬಿಗಿ ಕ್ರಮ ತೆಗೆದುಕೊಳ್ಳುವುದಿಲ್ಲ. ಇದು ಈ ಹಿಂದೆಯೇ ಸಾಬೀತಾಗಿದೆ. ಈ ಬಾರಿಯೂ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಬಿಡಿ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಎಂದು ಹೇಳುತ್ತದೆ. ಆದರೆ ಕಾರ್ಯರೂಪಕ್ಕೆ ಬರೋದಿಲ್ಲ. ಈಗ ರೇಣುಕಾಚಾರ್ಯರ ತಲೆ ಮೇಲೆ ಹೊತ್ತು ಕುಣಿಯಲಾಗಿದೆ. ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಇಲ್ಲಿ ಯಾಕೆ ಆದೇಶ ಪಾಲನೆಯಾಗಿಲ್ಲ ಎಂದು ಹೊನ್ನಾಳಿ ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡಿದ್ದಾರೆ.

Recommended Video

UP ಯೋಧ ಮುಂದೆ ಮಂಡಿಯುರಿದ ಪವನ್ | Oneindia Kannada
 ಇಲ್ಲಿ ಕೊರೊನಾ ಹರಡುವುದಿಲ್ಲವಾ?

ಇಲ್ಲಿ ಕೊರೊನಾ ಹರಡುವುದಿಲ್ಲವಾ?

ಇನ್ನು ದುರ್ಗಾಂಬಿಕೆ ದೇವಿ ಹಬ್ಬದ ಹಿನ್ನೆಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಬರುತ್ತಾರೆ. ಹೋರಿ ಓಡುವ ವೇಳೆ ಹಿಡಿಯಲು ಯುವಕರು ಮುಗಿ ಬೀಳುತ್ತಾರೆ. ಹೋರಿ ಬೆದರಿಸಿದಾಗ ಎಲ್ಲೆಂದರಲ್ಲಿ ನುಗ್ಗುತ್ತಾ ಓಡುತ್ತದೆ. ಈ ಹಿಂದೆ ನಡೆದ ಸ್ಪರ್ಧೆಯ ವೇಳೆ ಹಲವು ಯುವಕರು ಗಾಯಗೊಂಡ ಘಟನೆಗಳೂ ನಡೆದಿದ್ದವು. ಇನ್ನು ಹೋರಿಯೇ ರೇಣುಕಾಚಾರ್ಯರಿಗೆ ತಿವಿದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದರೆ ಕೊರೊನಾ ಹರಡುತ್ತದೆ.

ಕೇವಲ ದಾವಣಗೆರೆ ಜಿಲ್ಲೆಯವರು ಮಾತ್ರವಲ್ಲ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದಲೂ ಇಲ್ಲಿಗೆ ಜನರು ಬಂದಿರುತ್ತಾರೆ. ಇಂಥ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಿದಾಗ ಹೆಚ್ಚಾಗಿ ಕೊರೊನಾ ಸೋಂಕು ಹರಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ದಾವಣಗೆರೆ ಜಿಲ್ಲಾಡಳಿತ ಕೇವಲ ಬಾಯಿ ಮಾತಿನಲ್ಲಿ ಹೇಳುವುದನ್ನು ಬಿಟ್ಟು ಕಟ್ಟುನಿಟ್ಟಾಗಿ ಆದೇಶಿಸಬೇಕು. ಈಗ ಹೋರಿ ನಡೆಸಿದವರು ಮತ್ತು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

English summary
Davanagere district Honnali MLA MP Renukacharya violates covid-19 guidelines in Bull Bullying competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X