ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಲ್ಲಾಧ್ಯಕ್ಷರ ಬೈಗುಳ; ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದ ಆಡಿಯೋ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 19; ಇನ್ನು ಚುನಾವಣೆಯೇ ಬಂದಿಲ್ಲ. ಆಗಲೇ ಹೊನ್ನಾಳಿಯಲ್ಲಿ ಮಾಜಿ ಶಾಸಕ ಶಾಂತನಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ನಡುವೆ ಟಿಕೆಟ್ ಪಡೆಯಲು ಪೈಪೋಟಿ ಶುರುವಾಗಿದೆಯಾ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಆ ಒಂದು ಆಡಿಯೋ. ಈ ಆಡಿಯೋದಲ್ಲಿ ಮಂಜಪ್ಪ ಮಾತನಾಡಿರುವುದು ಈಗ ತಾಲೂಕಿನಾದ್ಯಂತ ಮಾತ್ರವಲ್ಲ, ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಯಾವಾಗಲೂ ಸುದ್ದಿಯ ಕೇಂದ್ರ ಬಿಂದು. ಇದಕ್ಕೆ ಕಾರಣ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯರ ಓಡಾಟ, ಆಗಾಗ್ಗೆ ಮಾಡುವ ಯಡವಟ್ಟುಗಳು. ಆದರೆ ಈಗ ಮಂಜಪ್ಪ ಮಾತನಾಡಿರುವ ಆಡಿಯೋ ಹರಿಬಿಡಲಾಗಿದೆ. ಇದು ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದ್ದರೆ, ಬಿಜೆಪಿ ಇದನ್ನೇ ದಾಳವನ್ನಾಗಿಸುವ ಪ್ರಯತ್ನ ಮಾಡುತ್ತಿದೆ.

ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಮಹಿಳೆಯರ ಕ್ಷಮೆಯಾಚಿಸಿದ್ದು ಯಾಕೆ? ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಮಹಿಳೆಯರ ಕ್ಷಮೆಯಾಚಿಸಿದ್ದು ಯಾಕೆ?

ಸುಮಾರು 7 ನಿಮಿಷಗಳು ಇರುವ ಆಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಹೆಚ್ಚಾಗಿ ಚರ್ಚೆಯಾಗಿರುವುದು 2023ರ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ? ಎಂಬುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಜಪ್ಪ ಹಾಗೂ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನೋಡಿಕೊಳ್ಳುತ್ತಿದ್ದ ಶಿವರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ.

Honnali Congress ticket Davanagere Congress President Audio Viral

"ನಿಮ್ಮ ಶಾಂತನಗೌಡರಿಗೆ ಈ ಬಾರಿ ಟಿಕೆಟ್ ಕೊಡಿಸಿ ಕುರುಬರ ಮತ ಪಡೆಯಿರಿ ನೋಡೋಣ. ಅವನಿಗೆ (ಶಾಂತನಗೌಡ) ಲಿಂಗಾಯತರ ವೋಟ್ ಕೂಡ ಬೀಳೋದಿಲ್ಲ. ನನ್ನ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ನೋಡಿ ನಿಮಗೆ ಕುರುಬರು ವೋಟ್ ಕೊಡ್ತಾರೆ. ಟಿಕೆಟ್ ಬಗ್ಗೆ ನೀವ್ಯಾಕೆ ಮಾತನಾಡುತ್ತೀರಿ?" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಂತನಗೌಡ ಅಭಿಮಾನಿಗೆ ಮಂಜಪ್ಪ ಬಾಯಿಗೆ ಬಂದ ಹಾಗೆ ಬೈದಿದ್ದಾರೆ.

ವಿಡಿಯೋ; 'ಹೊನ್ನಾಳಿ ಹೊಡ್ತ' ನೆನಪಿಸಿಕೊಂಡ ಗೃಹ ಸಚಿವರು! ವಿಡಿಯೋ; 'ಹೊನ್ನಾಳಿ ಹೊಡ್ತ' ನೆನಪಿಸಿಕೊಂಡ ಗೃಹ ಸಚಿವರು!

ಕಾರಣ ಏನು?; ಇದಕ್ಕೆಲ್ಲಾ ಕಾರಣವಾಗಿದ್ದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್ ಮುಂದಿನ ಕಾಂಗ್ರೆಸ್ ಟಿಕೆಟ್ ಹೆಚ್. ಬಿ. ಮಂಜಪ್ಪಗೆ ಅಂತಾ ಹಾಕಲಾಗಿತ್ತು. ಇದು ಮಾಜಿ ಶಾಸಕ ಶಾಂತನಗೌಡರ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು. ಇದಕ್ಕೆ ಕಮೆಂಟ್ ಮಾಡಿದ್ದ ಶಾಂತನಗೌಡರ ಅಭಿಮಾನಿಗಳು ಟಿಕೆಟ್ ಈ ಬಾರಿ ಶಾಂತನಗೌಡರಿಗೆ ಅಂತಾ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ಲಿಂಗಾಯತರಾದ ಶಾಂತನಗೌಡರಿಗೆ ಟಿಕೆಟ್ ಅಂತ ಕಾಮೆಂಟ್ ಹಾಕಿದ್ದರು.

Honnali Congress ticket Davanagere Congress President Audio Viral

ಕಳೆದ ತಿಂಗಳ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪರ ಮಗಳ ಮದುವೆಯಿತ್ತು. ಈ ವೇಳೆ ಮಗಳು ಮದುವೆಗೆ ಆಹ್ವಾನಿಸಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಈ ಫೋಟೋ ಹಾಕಿ ಕಾಂಗ್ರೆಸ್ ಟಿಕೆಟ್‌ಗೆ ಮಂಜಪ್ಪ ಮಗಳ ಮದುವೆ ನೆಪಮಾಡಿಕೊಂಡು ಅಲೆಯುತ್ತಿದ್ದಾರೆ. ಅವರಿಗೆ ಈ ಬಾರಿಯಾದರೂ ಒಳ್ಳೆಯದಾಗಲಿ ಅಂತ ಬಿಜೆಪಿಗರು ಪೋಸ್ಟ್ ಮಾಡಿದ್ದರು. ಇದು ಶಾಂತನಗೌಡ ಬೆಂಬಲಿಗರ ಕಣ್ಣು ಕೆಂಪಾಗಿಸುವಂತೆ ಮಾಡಿತ್ತು. ಇದರಿಂದ ಕೆರಳಿದ್ದ ಮಂಜಪ್ಪ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದು ಆರೋಪ.

ದಾವಣಗೆರೆ; ಬಹಿರಂಗವಾಗಿ ಕ್ಷಮೆಯಾಚಿದ ಶಾಸಕ ರೇಣುಕಾಚಾರ್ಯ ದಾವಣಗೆರೆ; ಬಹಿರಂಗವಾಗಿ ಕ್ಷಮೆಯಾಚಿದ ಶಾಸಕ ರೇಣುಕಾಚಾರ್ಯ

ಹೆಚ್. ಬಿ. ಮಂಜಪ್ಪ ಹೇಳೋದೇನು?; "ನಾನು ಯಾವುದೇ ಜಾತಿಯ ಬಗ್ಗೆಯಾಗಲೀ, ಸಮುದಾಯದ ಬಗ್ಗೆಯಾಗಲೀ ಮಾತನಾಡಿಲ್ಲ. ನಾನು ಶಾಂತನಗೌಡರು ಈಗಲೂ ಚೆನ್ನಾಗಿದ್ದೇವೆ. ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ದರೂ ಅವರನ್ನು ಆಹ್ವಾನಿಸುತ್ತೇನೆ. ಅವರು ಅಷ್ಟೇ ಚೆನ್ನಾಗಿ ಪ್ರತಿಕ್ರಿಯೆ ನೀಡುತ್ತಾರೆ. ಪ್ರತಿಭಟನೆ, ಹೋರಾಟ, ಪಕ್ಷ ಸಂಘಟನೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ" ಎಂದು ಹೆಚ್. ಬಿ. ಮಂಜಪ್ಪ ಹೇಳಿದ್ದಾರೆ.

"ಆದರೆ ನಾಲ್ಕೈದು ಮಂದಿ ಮಾತ್ರ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಕುಟುಂಬ ವಿಚಾರವನ್ನು ರಾಜಕಾರಣಕ್ಕೆ ಯಾಕೆ ಎಳೆದು ತರಬೇಕು?. ರಾಜಕಾರಣದ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ನನ್ನ ಮಗಳ ಮದುವೆ ವಿಚಾರ ಪ್ರಸ್ತಾಪಿಸಿ ಟಿಕೆಟ್ ಪಡೆಯುವ ಅವಶ್ಯಕತೆ ಏನಿಲ್ಲ. ಫ್ಯಾಮಿಲಿ ವಿಚಾರ ಬಂದ ಕಾರಣ ಸಿಟ್ಟು ಬಂತು. ಹಾಗಾಗಿ, ಬೈದಿದ್ದೇನೆ. ನೀವು ಜಾತಿ ರಾಜಕಾರಣ ಮಾಡಬೇಡಿ. ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂಬ ಸಲಹೆ ನೀಡಿದ್ದೆ. ಕುಟುಂಬದ ವಿಚಾರ ಬಂದಿದ್ದರಿಂದ ನನಗೂ ಸಿಟ್ಟು ಬಂತು. ಹಾಗಾಗಿ ಸ್ವಲ್ಪ ಒರಟಾಗಿ ಮಾತನಾಡಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"2013 ರಲ್ಲಿಯೂ ನಾನು ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ. ಅದೇ ರೀತಿಯಲ್ಲಿ 2018ರಲ್ಲಿಯೂ ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷದ ಹೈಕಮಾಂಡ್ ಶಾಂತನಗೌಡರಿಗೆ ಟಿಕೆಟ್ ನೀಡಿತು. ಆಗ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದೆವು. ಆದರೆ ಕೆಲ ಸಾವಿರ ಮತಗಳ ಅಂತರದಿಂದ ರೇಣುಕಾಚಾರ್ಯ ವಿರುದ್ಧ ದುರದೃಷ್ಟವಶಾತ್ ಶಾಂತನಗೌಡರು ಸೋಲು ಕಂಡರು. ಆ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಸಿಕ್ಕಿತ್ತು. ಕಣಕ್ಕಿಳಿದರೂ ಸೋಲು ಕಂಡೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳುವ ಮಾತಿಗೆ ಯಾವಾಗಲೂ ನಾನು ಬದ್ಧ. ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್" ಎಂದು ಹೇಳಿದ್ದಾರೆ.

"ನನ್ನ ಶಾಂತನಗೌಡರ ನಡುವೆ ಯಾವುದೇ ಭಿನ್ನಮತ ಇಲ್ಲ. ಬಿಜೆಪಿಯವರು ಒಳ್ಳೆಯದಾಗಲಿ ಎಂಬ ಕಮೆಂಟ್ ಮಾಡಿದ್ದಾರೆ. ಈ ಬಾರಿಯಾದರೂ ಮಂಜಪ್ಪರಿಗೆ ಅನ್ಯಾಯವಾಗದಿರಲಿ ಎಂದಿದ್ದಾರೆ. ಆದರೆ ನಮ್ಮ ಪಕ್ಷದವರೇ ವಿನಾಕಾರಣ ಕೆಟ್ಟದಾಗಿ ನಮ್ಮ ಬಗ್ಗೆಯೇ ಪೋಸ್ಟ್ ಹಾಕಿದರೆ, ಕುಟುಂಬವನ್ನು ಎಳೆದು ತಂದರೆ ಸುಮ್ಮನಿರಲು ಆಗುತ್ತಾ?. ನಾನು ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ" ಎಂದು ಮಂಜಪ್ಪ ಸ್ಪಷ್ಟಪಡಿಸಿದ್ದಾರೆ.

Recommended Video

ಮೋದಿ ಭಾಷಣ ಸಿಕ್ಕಾಪಟ್ಟೆ ಟ್ರೋಲ್:ತಡಬಡಾಯಿಸಿದ ಮೋದಿ ಮಾಡಿದ್ದೇನು? | Oneindia Kannada

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬ ಗಾದೆ ಮಾತಿನಂತೆ ಇನ್ನು ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಲೇ ಟಾಕ್ ವಾರ್ ಹೊನ್ನಾಳಿ ಕಾಂಗ್ರೆಸ್ ನಲ್ಲಿ ಶುರುವಾಗಿದೆ. ಆದರೆ ಇದು ತಣ್ಣಗಾಗುತ್ತಾ? ಇಲ್ಲವೇ ಯಾವ ಮಟ್ಟಕ್ಕೆ ಹೋಗುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

English summary
Davanagere Congress district president H. B. Manjappa audio viral on the issue of party ticket from Honnali seat for 2023 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X