ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ ಹಿನ್ನೆಲೆ ದಾವಣಗೆರೆಯಲ್ಲಿಯೂ ಹೈಅಲರ್ಟ್: ಏನಿರುತ್ತೆ? ಏನಿರಲ್ಲ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 5: ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ.

ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಈಗ ಜಾಸ್ತಿ ಇಲ್ಲ. ಎರಡು ದಿನಗಳಲ್ಲಿ ಇದು ಮತ್ತಷ್ಟು ಜಾಸ್ತಿಯಾಗಬಹುದು. ಯಾವುದೇ ಕಾರಣಕ್ಕೂ ಜನರು ಮೈ ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಓಮಿಕ್ರಾನ್ ಪ್ರಕರಣ ವರದಿಯಾಗಿಲ್ಲ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬೆಂಗಳೂರಿನಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಈಗ ಅವರು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.

 ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

ಈಗಾಗಲೇ ಕೊರೊನಾ ಮೊದಲನೇ ಹಾಗೂ 2ನೇ ಅಲೆ ಎದುರಿಸಿದ್ದೇವೆ. ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೂರು ಸಾವಿರ ಬೆಡ್ ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿಗೆ ಸರ್ಕಾರ ನಿಗದಿಪಡಿಸಿರುವ ಬೆಡ್‌ಗಳನ್ನು ನೀಡಬೇಕೆಂದು ಸೂಚನೆ ನೀಡಲಾಗಿದೆ.

ಆಕ್ಸಿಜನ್, ಆಕ್ಸಿಜನ್ ಪ್ಲಾಂಟ್, ವೈದ್ಯಕೀಯ ಪರಿಕರಗಳು ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಸಿದ್ಧತೆ ಮಾಡಿಕೊಂಡಿದ್ದೇವೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅದೇ ರೀತಿಯಲ್ಲಿ ಹೆಚ್ಚಾಗಿ ಗುಂಪುಗೂಡಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಮತ್ತು ಓಮಿಕ್ರಾನ್ ಜಾಸ್ತಿ ಇಲ್ಲ ಎಂಬ ಕಾರಣಕ್ಕೆ ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದರು.

 ನೈಟ್ ಕರ್ಫ್ಯೂ ಜಾರಿ

ನೈಟ್ ಕರ್ಫ್ಯೂ ಜಾರಿ

ಇನ್ನು ಜ.5ರ ರಾತ್ರಿ 10 ಗಂಟೆಯಿಂದ ಜನವರಿ 19ರ ಬೆಳಿಗ್ಗೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಹೋಟೆಲ್‌ಗಳು, ಮದ್ಯದಂಗಡಿ ಸೇರಿದಂತೆ ರಾತ್ರಿ ವೇಳೆಯಲ್ಲಿ ಜನರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ಮಾತ್ರವಲ್ಲ, ತುರ್ತು ಕೆಲಸ ಇಲ್ಲದೇ ವಿನಾಕಾರಣ ಓಡಾಡುವಂತಿಲ್ಲ ಎಂದು ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು.

 ವಾರಾಂತ್ಯ ಕರ್ಫ್ಯೂವಿನಲ್ಲಿ ಸಂಪೂರ್ಣ ಬಂದ್

ವಾರಾಂತ್ಯ ಕರ್ಫ್ಯೂವಿನಲ್ಲಿ ಸಂಪೂರ್ಣ ಬಂದ್

ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ತರಕಾರಿ, ಹಾಲು, ಊಟ, ಮೀನು, ಮಾಂಸ, ದಿನಸಿ ಅಂಗಡಿಗಳು, ವೈದ್ಯಕೀಯ ಸೌಲಭ್ಯಗಳು, ಮೇವು ಸೇರಿದಂತೆ ಕಾಳು ಖರೀದಿಗೆ ಯಾವುದೇ ತೊಂದರೆ ಇಲ್ಲ. ಈ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವವರು ಐಡಿ ಕಾರ್ಡ್ ತೋರಿಸಿ ಓಡಾಡಬಹುದು. ಸರ್ಕಾರ ಕಚೇರಿಗಳ ನೌಕರರು, ಸಿಬ್ಬಂದಿ, ಕೋವಿಡ್ ವಾರಿಯರ್ಸ್ ಸೇರಿದಂತೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೆಲಸ ಮಾಡುವವರಿಗೆ ಓಡಾಡಲು ಅನುಮತಿ ನೀಡಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಅವರ ಸಂಬಂಧಿಕರಿಗೆ ಓಡಾಡಲು ಅನುಮತಿ ಇದೆ. ಉಳಿದಂತೆ ಎಲ್ಲವೂ ಬಂದ್ ಮಾಡಲಾಗುವುದು. ಪಾರ್ಕ್ ಅನ್ನು ವಾರಾಂತ್ಯ ಕರ್ಫ್ಯೂವಿನಲ್ಲಿ ಸಂಪೂರ್ಣ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಊಟ ಪಾರ್ಸೆಲ್ ತೆಗೆದುಕೊಂಡು ಹೋಗಲು, ಹೋಂ ಡೆಲಿವರಿ ಮಾಡಲು ಮಾತ್ರ ಅನುಮತಿ ಕೊಡಲಾಗಿದೆ.

 ಎರಡು ದಿನ ಸಿಗಲ್ಲ ಮದ್ಯ

ಎರಡು ದಿನ ಸಿಗಲ್ಲ ಮದ್ಯ

ಇನ್ನು ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಮದ್ಯದಂಗಡಿಗಳು ಬಂದ್ ಆಗಲಿವೆ. ಪಾತ್ರೆ, ಬೆಳ್ಳಿ, ಬಟ್ಟೆ ಅಂಗಡಿಗಳು, ಬಂಗಾರದಂಗಡಿ ಸೇರಿದಂತೆ ಇತರೆ ಎಲ್ಲಾ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿಲ್ಲ. ಜನರ ವಿನಾಕಾರಣ ಓಡಾಟಕ್ಕೂ ಬ್ರೇಕ್ ಬೀಳಲಿದೆ. ಇನ್ನು ಬಸ್ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಇನ್ನು ಮದುವೆಗೆ ಒಳಾಂಗಣದಲ್ಲಿ ನಡೆದರೆ 100 ಜನಕ್ಕೆ ಹಾಗೂ ಹೊರಾಂಗಣದಲ್ಲಿ ನಡೆದರೆ 200 ಜನರಿಗೆ ಮಾತ್ರ ಅವಕಾಶ ಕೊಡಲಾಗಿದೆ. ಕೋವಿಡ್ ನಿಯಮಾವಳಿ ಪಾಲಿಸಬೇಕಾದದ್ದು ಕಡ್ಡಾಯ. ಇದನ್ನು ಮೀರಿದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದರು.

 ಪ್ರತಿಭಟನೆಗೆ ಅವಕಾಶ ಇಲ್ಲ

ಪ್ರತಿಭಟನೆಗೆ ಅವಕಾಶ ಇಲ್ಲ

ಇನ್ನು ಗುರುವಾರದಿಂದ ಜನವರಿ 19ರವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ, ಮೆರವಣಿಗೆ, ಜಾತ್ರೆ, ಧರಣಿ ನಡೆಸುವಂತಿಲ್ಲ. ಇನ್ನು ಜನವರಿ 14ರಂದು ಹರಿಹರದಲ್ಲಿ ಹರ ಜಾತ್ರೆ ಇದ್ದು, ಈ ಬಗ್ಗೆ ಕಾರ್ಯಕ್ರಮ ಸಂಘಟಕರ ಗಮನಕ್ಕೆ ತರಲಾಗುವುದು. ಕೋವಿಡ್ ನಿಯಮಾವಳಿ ಪಾಲಿಸಿ ಕಾರ್ಯಕ್ರಮ ನಡೆಸಬೇಕು. ರಾಜ್ಯ ಸರ್ಕಾರವು ಈ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದು, ಇದನ್ನು ಪಾಲಿಸಲಾಗುವುದು. ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕೊಡಲಾಗಿದ್ದು, ಯಾವುದೇ ಹೋಮ, ಹವನ, ಪೂಜೆ ಪುನಸ್ಕಾರ ನಡೆಸಲು ಅನುಮತಿ ಇಲ್ಲ. ಜನರು ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಎಚ್ಚರಿಕೆ ನೀಡಿದರು.

Recommended Video

ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಸಲ್ಲಾ - ಸಿದ್ದು | Oneindia Kannada

English summary
High Alert in Davanagere district, in the Wake of the Covid-19 Panic. Whats Open And Whats remain closed. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X