ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಮಳೆ ರಗಳೆ: ಕೊಚ್ಚಿ ಹೋಯ್ತು ರೈತರ ಬೆಳೆ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 6: ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಮೂರು ದಿ‌ನಗಳಿಂದ ಮಳೆ ರಗಳೆ ಶುರುವಾಗಿದೆ. ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದ್ದು, ರೈತರು ಬೆಳೆದಿದ್ದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೆ ಕೆಲವೆಡೆ ಮನೆಗಳು ಧರೆಗುರುಳಿವೆ.

ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾರೀ ಗಾಳಿ ಹಾಗೂ ಹಸ್ತ ಮಳೆಗೆ ಮೆಕ್ಕೆಜೋಳ, ಅಡಿಕೆ, ತೆಂಗು, ಬಾಳೆ ಮರಗಿಡಗಳು ಉರುಳಿಬಿದ್ದಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

 50 ರೈತರ 120 ಎಕರೆ ಪ್ರದೇಶದಲ್ಲಿ ಬೆಳೆ ನಾಶ

50 ರೈತರ 120 ಎಕರೆ ಪ್ರದೇಶದಲ್ಲಿ ಬೆಳೆ ನಾಶ

ಸಾಸ್ವೆಹಳ್ಳಿ, ಹುಣಸೇಹಳ್ಳಿಯಲ್ಲಿ ಮಳೆ ಹಾಗೂ ಗಾಳಿಗೆ 50 ರೈತರ 120 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೆಲಕಚ್ಚಿದೆ. ಜಗಳೂರು, ಚನ್ನಗಿರಿ, ಹೊನ್ನಾಳಿ ನ್ಯಾಮತಿ, ಮಾಯಕೊಂಡ ಸೇರಿದಂತೆ ಹಲವೆಡೆ ಬೆಳೆದಿದ್ದ ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದ ಬೆಳೆ ಹಾನಿಗೀಡಾಗಿದೆ. ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿನ ಕೆಲವೆಡೆ ಮನೆಗಳು ಕುಸಿದಿವೆ.

ಹೊನ್ನಾಳಿ ತಾಲೂಕಿನ ಮಲೇಬೆನ್ನೂರಿನಲ್ಲಿ ಐದಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 90 ಎಕರೆ ಭತ್ತದ ಗದ್ದೆ ನೀರಿನಿಂದ ಜಲಾವೃತವಾಗಿದೆ. ಚನ್ನಗಿರಿ ತಾಲೂಕಿನಲ್ಲಿಯೂ ಭಾರೀ ಮಳೆಯಾಗಿದ್ದು, ಅಡಿಕೆ ತೋಟಗಳಲ್ಲಿ ನೀರು ನಿಂತಿದ್ದು, ಫಸಲು ಕೊಯ್ಯುವ ಈ ಸಮಯದಲ್ಲಿ ಮಳೆಯಾಗಿರುವುದು ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ.

 ಭಾರೀ ಮಳೆ, ಗಾಳಿಗೆ ಧರೆಗುರುಳಿದ ಅಡಿಕೆ ಮರಗಳು

ಭಾರೀ ಮಳೆ, ಗಾಳಿಗೆ ಧರೆಗುರುಳಿದ ಅಡಿಕೆ ಮರಗಳು

ಕಳೆದ ರಾತ್ರಿ ಸುರಿದ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ಅಡಿಕೆ ತೋಟದ ಗಿಡಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ. ಕೈದಾಳೆ ಗ್ರಾಮದ ರೈತ ತೊಳಸವ್ವರ ಬಸವರಾಜಪ್ಪ ಎಂಬುವವರಿಗೆ ಸೇರಿದ ಸುಮಾರು ಹದಿನೈದು ಅಡಿಕೆ ಗಿಡಗಳು ಧರೆಶಾಯಿಯಾಗಿದ್ದು, ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು ಕಳೆದುಕೊಂಡ ರೈತ ಬಸವರಾಜಪ್ಪ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಅನಾಹುತ ಸಂಭವಿಸಿದ್ದರೂ ಇಲ್ಲಿಯವರೆಗೂ ಕೂಡ ಬಂದು ಸ್ಥಳ ಪರಿಶೀಲನೆ ಮಾಡಿಲ್ಲ. ಜೊತೆಗೆ ಸುಮಾರು ಹದಿನೈದು ಅಡಿಕೆ ಗಿಡಗಳಿಂದ ಅಂದಾಜು ಅರವತ್ತರಿಂದ ಎಪ್ಪತ್ತು ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತವಾದಂತಹ ಪರಿಹಾರ ಕಲ್ಪಿಸಿಕೊಡಿ ಎಂದು ರೈತ ಬಸವರಾಜಪ್ಪ ಒತ್ತಾಯಿಸಿದ್ದಾರೆ.

 ಜಿಲ್ಲೆಯಲ್ಲಿ 13.80 ಮಿ.ಮೀ ಸರಾಸರಿ ಉತ್ತಮ ಮಳೆ

ಜಿಲ್ಲೆಯಲ್ಲಿ 13.80 ಮಿ.ಮೀ ಸರಾಸರಿ ಉತ್ತಮ ಮಳೆ

ದಾವಣಗೆರೆ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 13.80 ಮಿ.ಮೀ ಸರಾಸರಿ ಉತ್ತಮ ಮಳೆಯಾಗಿದ್ದು, ಒಟ್ಟು 29.05 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 14.73, ದಾವಣಗೆರೆ 8.58, ಹರಿಹರ 14.05, ಹೊನ್ನಾಳಿ 19.60, ಜಗಳೂರು 12.08 ಮಿಲಿಮೀಟರ್ ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13.80 ಮಿ.ಮೀ. ಮಳೆ ಸುರಿದಿದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆಗೆ ತೀವ್ರ ಹಾನಿಯಾಗಿದ್ದು, 2 ಲಕ್ಷ ರೂ. ಮತ್ತು 3 ಪಕ್ಕಾ ಮನೆ ಭಾಗಶಃ ಹಾನಿಯಾಗೀಡಾಗಿದ್ದು 2 ಲಕ್ಷ ರೂ. ಹಾಗೂ 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು, 2 ಲಕ್ಷ ರೂ., 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 40 ಸಾವಿರ ರೂ. ಸೇರಿದಂತೆ ಒಟ್ಟು 6.40 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ‌. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು 1.50 ಲಕ್ಷ ರೂ. ಮತ್ತು 10 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 3 ಲಕ್ಷ ರೂ. ಹಾಗೂ 3 ಎಕರೆ ಜೋಳದ ಬೆಳೆ ಹಾನಿಯಾಗಿದ್ದು, 0.75 ಲಕ್ಷ ರೂ. ಸೇರಿದಂತೆ ಒಟ್ಟು ರೂ. 5.25 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

 ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ

ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, 80 ಸಾವಿರ ರೂ. ಮತ್ತು 1 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು 40 ಸಾವಿರ ರೂ. ಹಾಗೂ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 30 ಸಾವಿರ ರೂ. ಸೇರಿದಂತೆ ಒಟ್ಟು 1.50 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 15 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು, 15 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದ್ದು, ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, 1 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.

ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ತಿಳಿಸಿದ್ದಾರೆ.

Recommended Video

Virat Kohli SRH ವಿರುದ್ಧ ಪಂದ್ಯ ಸೋತ ನಂತರ ಹೇಳಿದ್ದೇನು | Oneindia Kannada

English summary
In the Davanagere district, the rain has been pouring in for the past three days and the farmers have been suffering as the crop has been destroyed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X