• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ನಿರ್ಮಾಣವಾಗುತ್ತಿದೆ 3 ಕೋಟಿ ವೆಚ್ಚದ 'ಗಾಂಧಿ ಭವನ'

By ಅಣ್ಣಪ್ಪ ಬಿ.ಕುಂದುವಾಡ
|
Google Oneindia Kannada News

ದಾವಣಗೆರೆ, ಮಾರ್ಚ್ 19: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೋರಾಟ, ಜೀವನಾದರ್ಶಗಳು ಯುವ ಸಮೂಹದ ಭವಿಷ್ಯಕ್ಕೆ ಪ್ರೇರಕ ಮತ್ತು ಸ್ಪೂರ್ತಿದಾಯಕ. ಮಹಾತ್ಮನ ಬಗ್ಗೆ ಸಾರುವ "ಗಾಂಧಿ ಲೋಕ'ವೇ ದಾವಣಗೆರೆಯಲ್ಲಿ ಸೃಷ್ಟಿಯಾಗುತ್ತಿದೆ. ನಗರದ ಎಸ್.ಎಸ್ ಹೈಟೆಕ್ ಆಸ್ಪತ್ರೆಯ ಹಿಂಭಾಗದಲ್ಲಿರುವ ರಾಮನಗರದಲ್ಲಿ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವಾಗುತ್ತಿದ್ದು, ಈಗಾಗಲೇ ಅಂತಿಮ ಹಂತಕ್ಕೆ ತಲುಪಿದೆ.

ಆವರಗೆರೆ ಗ್ರಾಮದ ಸರ್ವೆ ನಂಬರ್ 213ರಲ್ಲಿ (ರಾಮನಗರ) ಒಂದು ಎಕರೆ ಪ್ರದೇಶವನ್ನು ಸರ್ಕಾರ ಇದಕ್ಕಾಗಿ ಮೀಸಲಿಟ್ಟಿದೆ. ಅದರಲ್ಲಿ 100/100 ಅಡಿ ವಿಸ್ತೀರ್ಣದಲ್ಲಿ ಕರಾವಳಿ ಶೈಲಿಯಲ್ಲಿ ಗಾಂಧಿಭವನ ತಲೆ ಎತ್ತಿದೆ. ಕರಾವಳಿಯ ಕೆಂಪುಕಲ್ಲು (ಮುರಕಲ್ಲು), ಹೆಂಚುಗಳನ್ನು ಬಳಸಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಹೊರಾಂಗಣದಲ್ಲಿ ಚರಕ ಜನರನ್ನು ಸ್ವಾಗತಿಸಿದರೆ, ಒಳಗೆ ಕಾಲಿಡುತ್ತಿದ್ದಂತೆ ಗಾಂಧಿ ಪ್ರತಿಮೆ ಎದುರುಗೊಳ್ಳುತ್ತಿದೆ. ಒಳಗೆ ಗ್ರಂಥಾಲಯ, 100 ಜನ ಕುಳಿತುಕೊಳ್ಳಬಲ್ಲ ಸಭಾಂಗಣ, ಶಾಶ್ವತ ವಸ್ತು ಪ್ರದರ್ಶನ ಕೊಠಡಿ, ಆಡಳಿತ ಕಚೇರಿ ಹೀಗೆ ವಿವಿಧ ಕೊಠಡಿಗಳು ಇವೆ.

ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ಸ್ಥಾಪನೆ

ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ಸ್ಥಾಪನೆ

ಸರ್ಕಾರದ ಮಾರ್ಗಸೂಚಿಯಂತೆ ಕಟ್ಟಡದಿಂದ ಹೊರಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣಗೊಂಡಿದೆ. ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ಸ್ಥಾಪಿಸಲು 2016-17ನೇ ಸಾಲಿನ ಬಜೆಟ್‍ನಲ್ಲಿ ಆಗಿನ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ ಇದು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿತ್ತು. ಗಾಂಧಿ ಭವನ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ ಮತ್ತು ಆಯಾ ಜಿಲ್ಲೆಗಳ ವಾರ್ತಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಇರುತ್ತಾರೆ.

ವರ್ಷ ಪೂರ್ತಿ ಕಾರ್ಯಕ್ರಮಗಳಾಗಬೇಕು

ವರ್ಷ ಪೂರ್ತಿ ಕಾರ್ಯಕ್ರಮಗಳಾಗಬೇಕು

ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಿತ ಜಿಲ್ಲೆಯ ಪ್ರಮುಖ ಇಲಾಖೆಗಳ ಅಧಿಕಾರಿಗಳು ಕಾರ್ಯ ಅನುಷ್ಠಾನ ಸಮಿತಿಯಲ್ಲಿರಬೇಕು. ಗಾಂಧಿವಾದದಲ್ಲಿ ಮತ್ತು ಗಾಂಧೀಜಿ ಪ್ರಣೀತ ಕಾರ್ಯ ಚಟುವಟಿಕೆಯಲ್ಲಿ ನಂಬಿಕೆಯುಳ್ಳ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಏಳು ಮಂದಿಯನ್ನು ಒಳಗೊಂಡ ಗೌರವ ಸಲಹಾ ಸಮಿತಿಯನ್ನು ರಚಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಗಾಂಧಿ ಜಯಂತಿ ಮತ್ತು ಗಾಂಧಿ ಪುಣ್ಯಸ್ಮರಣೆಗೆ ಸೀಮಿತವಾಗದೇ ವರ್ಷ ಪೂರ್ತಿ ಕಾರ್ಯಕ್ರಮಗಳಾಗಬೇಕು ಎಂಬ ಕಾರಣಕ್ಕಾಗಿ ಭವನ ನಿರ್ಮಾಣಗೊಳ್ಳುತ್ತಿದೆ. ಗಾಂಧೀಜಿಯ ಬಗ್ಗೆ ಮುಂದಿನ ಪೀಳಿಗೆ ತಿಳಿಯುವುದು ಅವಶ್ಯಕ. ಅದಕ್ಕೊಂದು ಫೋರಂ ಬೇಕು. ಅದು ಈ ಗಾಂಧಿ ಭವನದ ಮೂಲಕ ನೆರವೇರಲಿದೆ ಎನ್ನುತ್ತಾರೆ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.

ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ

ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ

ಗಾಂಧಿ ಭವನ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ, ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಸಿ ಉದ್ಘಾಟನೆ ಕಾರ್ಯ ನೆರವೇರಿಸಬೇಕು ಎಂಬ ಸಲಹೆಗಳಿವೆ. ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಉದ್ಘಾಟನೆಗೆ ದಿನ ನಿಗದಿಗೊಳಿಸಲು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

"ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆಸುತ್ತಿದೆ. ಈ ಕಟ್ಟಡದ ಹಿಂಭಾಗದಲ್ಲಿ ಆಕರ್ಷಕ ಪಾರ್ಕ್ ನಿರ್ಮಾಣಗೊಳ್ಳಲಿದೆ. ಅಂಗವಿಕಲರಿಗೆ ರ್‍ಯಾಂಪ್ ವ್ಯವಸ್ಥೆ ಇರಲಿದೆ' ಎಂದು ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ ಆಗಿರುವ ವಾರ್ತಾಧಿಕಾರಿ ಡಿ.ಅಶೋಕ್ ಕುಮಾರ್ ಮಾಹಿತಿ ನೀಡಿದರು.

ಗಾಂಧೀಜಿ ಅವರ ಕುರಿತು ಜ್ಞಾನ ಭಂಡಾರ

ಗಾಂಧೀಜಿ ಅವರ ಕುರಿತು ಜ್ಞಾನ ಭಂಡಾರ

ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳದೆ ಇರುವುದರಿಂದ, ಯುವಕರಿಗೆ ಗಾಂಧೀಜಿ ಅವರ ಕುರಿತು ಜ್ಞಾನ ಭಂಡಾರ ವೃದ್ಧಿಸುವ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಗಾಂಧೀಜಿಯವರ ಜೀವನ ಚರಿತ್ರೆ ತಿಳಿದುಕೊಳ್ಳ ಬಯಸುವವರು ಅವರ ಪುಸ್ತಕಗಳ ಸಹಾಯದಿಂದ ತಿಳಿದುಕೊಳ್ಳಲು ಸುಂದರ ಗ್ರಂಥಾಲಯ, ಮ್ಯೂಸಿಯಂ, ಸುಂದರ ಸಭಾಂಗಣ, ಕೆಂಪು ಹೆಂಚಿನಿದ ನಿರ್ಮಾಣ ಮಾಡಿರುವ ಮೇಲ್ಛಾವಣಿ ಆಕರ್ಷಿಸುತ್ತಿದೆ.

ಹಸಿರು ಹೊದಿಕೆಯ ಭವ್ಯ ಉದ್ಯಾನವನ

ಹಸಿರು ಹೊದಿಕೆಯ ಭವ್ಯ ಉದ್ಯಾನವನ

ಇನ್ನು ಕೆಂಪು ಹೆಂಚಿನ ಭವನದ ಸುತ್ತಲು ಹಸಿರು ಹೊದಿಕೆಯ ಭವ್ಯ ಉದ್ಯಾನವನ ಇದ್ದು, ಇದರ ಮಧ್ಯೆ ಗಾಂಧೀಜಿ ಧ್ಯಾನದಲ್ಲಿ ಮಗ್ನರಾಗಿರುವ ಕಲಾಕೃತಿ ಕಾಣಬಹುದಾಗಿದೆ. ಗಾಂಧಿ ಭವನದಲ್ಲಿ ಬಾಪು ನಡೆಸಿದ ದಂಡಿಯಾತ್ರೆಯ ಕಲಾಕೃತಿ, ಮಕ್ಕಳನ್ನು ಓದಿಸುತ್ತಿರುವುದು, ರಾಷ್ಟ್ರದ ನೇತಾರರನ್ನು ಪುಟಾಣಿಯೋರ್ವ ಮುನ್ನಡೆಸುವುದು, ಸಹಾಯಕಿಯರೊಂದಿಗೆ ಗಾಂಧೀಜಿಯವರು ನಡೆದು ಸಾಗುತ್ತಿರುವುದು, ಗಾಂಧೀಜಿ ಹಾಗು ಮಡದಿ ಕಸ್ತೂರಿ ಬಾ ರವರು ಜೊತೆಯಲ್ಲಿ ಕೂತಿರುವುದು, ಗಾಂಧೀಜಿ ಚರಕ ತಿರುಗಿಸುತ್ತಿರುವ ಕಲಾಕೃತಿಗಳಿವೆ.

  ಮಹಾರಾಷ್ಟ್ರದಿಂದ ಜಿಲ್ಲೆ ಸಂಪರ್ಕಿಸುವ ಎಲ್ಲಾ ಮಾರ್ಗದಲ್ಲಿ ಚೆಕ್‌ ಪೋಸ್ಟ್‌ ನಿರ್ಮಾಣ- ಜಿಲ್ಲಾಧಿಕಾರಿ ಪಿ ಸುನೀಲ್‌ ಕುಮಾರ್ ಮಾಹಿತಿ | Oneindia Kannada
  ಸತ್ಯ ಮೇವ ಜಯತೆ ಎಂಬ ಬರಹ

  ಸತ್ಯ ಮೇವ ಜಯತೆ ಎಂಬ ಬರಹ

  ಇನ್ನು ಭವನದ ಒಳಭಾಗದಲ್ಲಿರುವ ಗ್ರಾನೈಟ್ ಕಲ್ಲಿನಿಂದ ಭವ್ಯ ಪ್ರತಿಮೆ ಸೇರಿದಂತೆ ಒಟ್ಟು 22 ಲಕ್ಷ ಮೌಲ್ಯದ ಪ್ರತಿಮೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ "ಸತ್ಯ ಮೇವ ಜಯತೆ' ಎಂಬ ಬರಹಗಳು ಪ್ರತಿಯೊಬ್ಬರನ್ನು ಸ್ವಾಗತಿಸುತ್ತಿದ್ದು, ಈ ಕಲಾಕೃತಿಗಳನ್ನು ಶಿವಮೊಗ್ಗ ಮೂಲದ ಕಲಾವಿದರಾದ ಪರಶುರಾಮ ಹಾಗು ಹೊನ್ನಮ್ಮನವರ್ ಸೇರಿದಂತೆ ಅವರ ಸಹಾಯಕರು ನಿರ್ಮಿಸಿದ್ದಾರೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ರವಿ ತಿಳಿಸಿದ್ದಾರೆ.
  ಒಟ್ಟಾರೆ ಗಾಂಧೀಜಿಯವರ ತತ್ವಾದರ್ಶಗಳನ್ನು ಸಾರುವ ಉದ್ದೇಶದಿಂದ ಈ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಯುವಕರು ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಸಾಕು ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳಲಿ ಸಾಧ್ಯ ಎಂದು ನಿರ್ಮಾಣ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರರಾದ ಶಿವಕುಮಾರ್ ಹೇಳಿದರು.

  English summary
  Well equipped Gandhi Bhavan Constructing in Davanagere with the Budget of Rs 3 Cr.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X