ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಬೊಮ್ಮಾಯಿ ಮೇಲಿನ ವಿಶ್ವಾಸದಿಂದ ಡೆಡ್‌ಲೈನ್ ಕೊಟ್ಟಿಲ್ಲ: ಜಯಮೃತ್ಯುಂಜಯ ಶ್ರೀ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ, 3: "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಶ್ವಾಸ ಇದೆ. ಯಡಿಯೂರಪ್ಪನವರು ಅಧಿವೇಶನದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವುದಾಗಿ ಸಿಎಂ ಅವರು ಹೇಳಿದ್ದು, ಈ ಕಾರಣದಿಂದಾಗಿ ನಾವು ಯಾವುದೇ ಡೆಡ್‌ಲೈನ್ ನೀಡಿಲ್ಲ," ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಇಪ್ಪತ್ತು ಲಕ್ಷ ಜನ ಸೇರಿಸಿ ಮತ್ತೆ ಹೋರಾಟ ನಡೆಸುತ್ತೇವೆ. ನಾವು ಇಟ್ಟಿರುವ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಸವರಾಜ ಬೊಮ್ಮಾಯಿ ಅವರು ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಸಿ.ಸಿ. ಪಾಟೀಲ್ ಸರ್ಕಾರದೊಟ್ಟಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ".

ಬಸವ ಜಯಂತಿಯೊಳಗೆ ಸಿಹಿ ಸುದ್ದಿ ಸಿಗುವ ವಿಶ್ವಾಸ

ಬಸವ ಜಯಂತಿಯೊಳಗೆ ಸಿಹಿ ಸುದ್ದಿ ಸಿಗುವ ವಿಶ್ವಾಸ

"ಶಿಗ್ಗಾಂವಿಯಲ್ಲಿ ಹೆಚ್ಚು ಪಂಚಮಸಾಲಿ ಸಮಾಜದ ಜನರಿದ್ದಾರೆ. ನಮಗೆ ಸಂಕ್ರಾಂತಿ, ಬಸವ ಜಯಂತಿಯೊಳಗೆ ಸಿಹಿ ಸುದ್ದಿ ಸಿಗುವ ವಿಶ್ವಾಸ ಇದೆ. ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು. ಮೂರು ತಿಂಗಳ ಕಾಲ ಕಾಲಾವಕಾಶ ಕೇಳಿರುವ ಸಿಎಂ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮದು ಶಾಂತಿಯುತ ಹೋರಾಟ ಮುಂದುವರಿದಿದೆ," ಎಂದು ತಿಳಿಸಿದರು.

"ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಪಾದಯಾತ್ರೆಯ ವರ್ಷಾಚರಣೆ ಹಾಗೂ ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ ಎಂಬ ಕಾರ್ಯಕ್ರಮವನ್ನು ಜನವರಿ 14ರಂದು ಹಮ್ಮಿಕೊಳ್ಳಲಾಗಿದೆ. ಈ ವೇಳೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಕೂಡ ನಡೆಯಲಿದೆ. ರಾಷ್ಟ್ರಮಟ್ಟದ ಪ್ರಶಸ್ತಿಯಾಗಿರುವ ಕಾರಣ ಸಮಿತಿ ರಚಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಯಾರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂಬುದನ್ನು ತಿಳಿಸಲಾಗುವುದು," ಎಂದು ಸ್ವಾಮೀಜಿ ಹೇಳಿದರು.

 ಮೀಸಲಾತಿ ಬೇಕು ಎನ್ನುವವರು ಕಾರ್ಯಕ್ರಮಕ್ಕೆ ಬರುತ್ತಾರೆ

ಮೀಸಲಾತಿ ಬೇಕು ಎನ್ನುವವರು ಕಾರ್ಯಕ್ರಮಕ್ಕೆ ಬರುತ್ತಾರೆ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಕು ಎನ್ನುವವರು ಈ ಕಾರ್ಯಕ್ರಮಕ್ಕೆ ಬಂದೇ ಬರುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ನಮ್ಮ ಸಮಾಜದ ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಸಮಾಜದ ಮುಖಂಡರು, ಬಾಂಧವರು ಪಾಲ್ಗೊಳ್ಳಲಿದ್ದಾರೆ. ನಮ್ಮದು ಸಂಭ್ರಮ ಪಡುವ, ಎಂಜಾಯ್ ಮಾಡುವ, ಕುಣಿದು ಕುಪ್ಪಳಿಸುವ ಕಾರ್ಯಕ್ರಮವಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕೆಂಬ ನಿಟ್ಟಿನಲ್ಲಿ ನಾಡಿನ ದೊರೆಗಳ ಗಮನ ಸೆಳೆಯುವುದೇ ಇದರ ಮುಖ್ಯ ಉದ್ದೇಶ ಎಂದರು.

ಇನ್ನು ದಾವಣಗೆರೆಯ ಹರಿಹರದಲ್ಲಿ ಹರ ಜಾತ್ರೆ ಕಾರ್ಯಕ್ರಮವಿರುವುದು ನಮ್ಮ ಗಮನಕ್ಕೆ ಬಂದಿದೆ. ಎರಡೂ ಕಡೆಗಳಲ್ಲಿ ಪಾಲ್ಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಅಹವಾಲು ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ಇದೆ. ಅಂದೇ ಎಳ್ಳು ಬೆಲ್ಲ ಕೊಡುವ ವಿಶ್ವಾಸವೂ ಇದೆ ಎಂದು ಹೇಳಿದ್ದಾರೆ.

 ನಿರಂತರವಾಗಿ ಚಳವಳಿ ನಡೆಸಿದ ಇತಿಹಾಸ

ನಿರಂತರವಾಗಿ ಚಳವಳಿ ನಡೆಸಿದ ಇತಿಹಾಸ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆಗೆ ಒಂದು ವರ್ಷ ತುಂಬಿದೆ‌. ಸಮುದಾಯಕ್ಕೋಸ್ಕರ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದೇವೆ. ಕರ್ನಾಟಕದಲ್ಲಿ ಗೋಕಾಕ್, ರೈತ, ದಲಿತ, ಕನ್ನಡ ಚಳವಳಿ ನಡೆದಿವೆ. ಆದರೆ ಪಂಚಮಸಾಲಿ ಸಮಾಜಕ್ಕೋಸ್ಕರ ಇಷ್ಟು ನಿರಂತರವಾಗಿ ಚಳವಳಿ ನಡೆಸಿದ ಇತಿಹಾಸ ನಮ್ಮದು ಎಂದು ಸ್ವಾಮೀಜಿ ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಯಾವುದೇ ಕುಲಶಾಸ್ತ್ರದ ಅಧ್ಯಯನ ಅಗತ್ಯವಿಲ್ಲ, ಸಮಯ ಹಾಳು ಅಷ್ಟೇ. ಅಧಿಕಾರಕ್ಕೆ ಬಂದ ಸರ್ಕಾರಗಳು ಅಧ್ಯಯನ ಮಾಡಬೇಕು ಎಂದು ಹೇಳಿ ಕಾಲಹರಣ ಮಾಡುತ್ತಿವೆ. ಸಾಮಾಜಿಕ ಹಾಗೂ ಹಿಂದುಳಿದ ಆಧಾರದಲ್ಲಿ ನಾವು ಮೀಸಲಾತಿ ಕೇಳುತ್ತಿದ್ದೇವೆ. ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿಯೇ ಅಂತಿಮ. ಈ ಹಿನ್ನೆಲೆಯಲ್ಲಿ ಆಯೋಗ ನೀಡುವ ವರದಿಗೆ ನಾವು ಕಾಯುತ್ತಿದ್ದೇವೆ. ಬೇರೆ ಯಾವುದೇ ಸಮಿತಿಯಿಂದ ವರದಿ ಮಾಡಿಸುವ ಅಗತ್ಯ ಇಲ್ಲ. ಬಸವ ಜಯಂತಿಯೊಳಗೆ ಮೀಸಲಾತಿ ಜಾರಿಯಾಗುವ ನಂಬಿಕೆ ನಮ್ಮಲ್ಲಿದೆ. ಇದಾಗದಿದ್ದರೆ ಮತ್ತೆ ಹೋರಾಟ ಮುಂದುವರಿಸುತ್ತೇವೆ. ಅದರಲ್ಲಿ ಸಂದೇಹವೇ ಬೇಡ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

 ರುದ್ರಾಕ್ಷಿ, ವಿಭೂತಿ ಹಾಗೂ ಲಿಂಗ ವಿಚಾರ ಮಾತ್ರ ಗೊತ್ತು

ರುದ್ರಾಕ್ಷಿ, ವಿಭೂತಿ ಹಾಗೂ ಲಿಂಗ ವಿಚಾರ ಮಾತ್ರ ಗೊತ್ತು

ನಮಗೆ ರುದ್ರಾಕ್ಷಿ, ವಿಭೂತಿ ಹಾಗೂ ಲಿಂಗ ವಿಚಾರ ಮಾತ್ರ ಗೊತ್ತು. ಬೇರೆ ವಿಚಾರಗಳ ಬಗ್ಗೆ ಗೊತ್ತಿಲ್ಲ. ಆಯಾ ಮಠಕ್ಕೆ ಸಂಬಂಧಿಸಿದಂತೆ ಸಂಪ್ರದಾಯ ಇರುತ್ತದೆ. ಅವರು ಅದನ್ನು ಪಾಲಿಸುತ್ತಾರೆ. ಇದರ ಬಗ್ಗೆ ಯಾವುದೇ ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಹರಿಹರದ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿರುವ ಹರಜಾತ್ರೆ ಕುರಿತಂತೆ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.

ನಮ್ಮದು ಶಕ್ತಿ, ಯುಕ್ತಿ ಮತ್ತು ಭಕ್ತಿ. ಈ ವಿಚಾರವನ್ನು ಬೊಮ್ಮಾಯಿಯವರಿಗೆ ಈಗಾಗಲೇ ತಿಳಿಸಿದ್ದೇವೆ. ನಮ್ಮ ಜೊತೆ ಸಮಾಜದ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ. ಸಮಯ ಕೊಡಿ ಎಂದು ಕೇಳಿದ್ದಾರೆ. ನಮ್ಮ ಹೋರಾಟದ ವಿಚಾರದಲ್ಲಿ ಸಕಾರಾತ್ಮಕವಾಗಿ ಹೆಚ್ಚು ಸ್ಪಂದಿಸಿರುವವರು ಬೊಮ್ಮಾಯಿ ಅವರು. ಅವರ ಬಗ್ಗೆ ನಮಗೆ ಅಪಾರ ವಿಶ್ವಾಸ ಇದೆ. ಅದನ್ನು ಕಳೆದುಕೊಳ್ಳುವುದಿಲ್ಲ ಎಂಬ ಪ್ರಬಲವಾದ ನಂಬಿಕೆ ಇದೆ. ಇನ್ನು ಸಿಎಂ ಬದಲಾವಣೆ ಮಾಡುತ್ತಾರೆ ಎಂಬುದು ಆ ಪಕ್ಷದ ಆಂತರಿಕ ವಿಚಾರ. ನಾನು ಮಾತನಾಡಲು ಬರುವುದಿಲ್ಲ. ಈಗ ಸಿಎಂ ಆಗಿರುವುದು ಬೊಮ್ಮಾಯಿಯವರು, ಹಾಗಾಗಿ ಅವರನ್ನೇ ಕೇಳುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.

English summary
There is no deadline for making a 2A reservation for the Panchamasali Lingayat Community, Jayamrityunjaya Swamiji said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X